ರಾಜಕೀಯವಾಗಿ ಸಂಸದರನ್ನು ವಿರೋಧಿಸುವವರು ಆಂತರಿಕವಾಗಿ ನಳಿನ್ ಮಾಡಿದ್ದು ಸರಿ ಎನ್ನುತ್ತಿದ್ದಾರೆ!
ರಾಜಕಾರಣದಲ್ಲಿ ಅನೇಕ ವರ್ಷಗಳಿಂದ ಇರುವವರಿಗೆ, ಆಡಳಿತದಲ್ಲಿ ಇದ್ದು ಅನುಭವ ಹೊಂದಿದವರಿಗೆ, ಹೋರಾಟ, ಪ್ರತಿಭಟನೆಯಲ್ಲಿ ಭಾಗವಹಿಸುವವರಿಗೆ, ವಿಪಕ್ಷದಲ್ಲಿ ಇರುವವರಿಗೆ ಮತ್ತು ಪೊಲೀಸ್ ಇಲಾಖೆ ಆಡಳಿತ ಪಕ್ಷದ ಕೈಗೊಂಬೆಯಾಗಿ ಇರುತ್ತೆ ಎಂದು ಗೊತ್ತಿದ್ದವರಿಗೆ ದಕ್ಷಿಣ ಕನ್ನಡದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕದ್ರಿ ಠಾಣೆಯ ವೃತ್ತ ನಿರೀಕ್ಷಕ ಮಾರುತಿ ನಾಯ್ಕ್ ಅವರೊಂದಿಗೆ ಮಾತನಾಡಿದ ಶೈಲಿಯ ಬಗ್ಗೆ ಅರಿವಿರುತ್ತದೆ. ಒಂದು ಪಕ್ಷದ ಸಂಸದ ತನ್ನ ಪಕ್ಷದ ಕಾರ್ಯಕರ್ಥರಿಗೆ ತನ್ನ ರಾಜ್ಯದಲ್ಲಿ ಆಡಳಿತದಲ್ಲಿರುವ ಬೇರೆ ಪಕ್ಷದ ರಾಜಕಾರಣಿಗಳಿಂದ ಅನ್ಯಾಯವಾದಾಗ ಹೇಗೆ ವರ್ತಿಸುತ್ತಾರೆ ಎನ್ನುವ ಅರಿವು ಪೊಲೀಸ್ ಅಧಿಕಾರಿಗಳಿಗೂ ಇರುತ್ತದೆ. ವಿಧಾನ ಸಭಾ ಚುನಾವಣೆ ಆರೇಳು ತಿಂಗಳು ಇರುವಾಗ ಆಯಾ ಪಕ್ಷದ ರಾಜಕಾರಣಿಗಳ ಒತ್ತಡ ಹೇಗೆ ಇರುತ್ತದೆ ಎನ್ನುವ ತಿಳುವಳಿಕೆ ಇಲ್ಲದವರು ಪೊಲೀಸ್ ಇಲಾಖೆಯಲ್ಲಿ ಇರಲು ಸಾಧ್ಯವಿಲ್ಲ. ಅದರಲ್ಲಿಯೂ ತಮ್ಮ ಪ್ರತಿಭಟನೆಯನ್ನು ದಮನಿಸಲು ಆಡಳಿತ ಪಕ್ಷ ಎಲ್ಲಾ ರೀತಿಯಿಂದಲೂ ಪ್ರಯತ್ನಪಡುತ್ತಿರುವಾಗ ಅದನ್ನು ಹೇಗೆ ಎದುರಿಸಬೇಕು ಎನ್ನುವುದು ಒಂದು ಕಲೆ. ಆ ಕಲೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಪ್ರದರ್ಶಿಸಿದ್ದಾರೆ.
ಮೇಲ್ನೋಟಕ್ಕೆ ಅವರು ಕದ್ರಿ ಠಾಣೆಯ ಇನ್ಸಪೆಕ್ಟರ್ ಮಾರುತಿ ನಾಯ್ಕ್ ಅವರ ಮೇಲೆ ರೇಗಿದ್ದಾರೆ ಎಂದು ಅನಿಸಬಹುದು. ಆದರೆ ಅವರ ಕೋಪ ಇದ್ದದ್ದು ಒಬ್ಬ ವ್ಯಕ್ತಿಯ ಮೇಲೆ ಅಲ್ಲ. ಅದು ಇಡೀ ವ್ಯವಸ್ಥೆಯ ಮೇಲೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಪ್ರತಿಭಟನೆಗೆ ಬರುತ್ತಿದ್ದ ಕಾರ್ಯಕರ್ತರನ್ನು ಪೊಲೀಸರು ಅಲ್ಲಲ್ಲಿಯೇ ತಡೆ ನಿಲ್ಲಿಸಿದ್ದು, ಕೊನೆಗೆ ಎಲ್ಲಿಯ ತನಕ ಎಂದರೆ ಮಹಿಳಾ ಕಾರ್ಯಕತ್ತರನ್ನು ಸಭಾಂಗಣದೊಳಗೆ ತಡೆದು ನಿಲ್ಲಿಸಿ ಹೊರಗಿನಿಂದ ಲಾಕ್ ಮಾಡಿದ್ದು ಎಲ್ಲವೂ ಅವರನ್ನು ಆಕ್ರೋಶಿತರನ್ನಾಗಿಸಿದೆ. ಯಾವುದನ್ನು ಪೊಲೀಸರ ದಬ್ಬಾಳಿಕೆ ಎಂದು ಕರೆಯಲಾಗುತ್ತದೆ ಎಂದು ಕೇಳಿದರೆ ಪ್ರತಿಭಟನೆಗೆ ಬಂದ ಮಹಿಳೆಯರನ್ನು ಕೋಣೆಯೊಳಗೆ ಹಾಕಿ ಲಾಕ್ ಮಾಡುವುದು ಎಂದರೆ ಅದಕ್ಕಿಂತ ಬೇರೆ ಉತ್ತರವಿಲ್ಲ. ಎಲ್ಲ ಕಾನೂನು ಪ್ರಕ್ರಿಯೆಯನ್ನು ಪೊಲೀಸರು ಮುಗಿಸಿದ ಬಳಿಕವೂ ಬಿಡುಗಡೆ ಮಾಡಲು ತಡ ಮಾಡುತ್ತಾರೆ ಎಂದರೆ ಪೊಲೀಸರು ಯಾವುದೋ ಕಾಣದ “ಕೈ”ಗಳ ಒತ್ತಡಕ್ಕೆ ಮಣಿದು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಅರ್ಥವಲ್ಲವೇ. ನಾವೇನು ಕಾನೂನಿಗೆ ಅಗೌರವ ತೋರಿಸಿಲ್ಲ. ಎಲ್ಲಿ ಸಹಿ ಹಾಕಬೇಕೊ ಅಲ್ಲಿ ಹಾಕಿದ್ದೇವೆ, ಮತ್ತೆ ಕೂಡ ಬಿಡಲ್ಲ ಎಂದರೆ ಲಕ್ಷಾಂತರ ಬಿಜೆಪಿ ಕಾರ್ಯಕತ್ತರ ಪ್ರತಿನಿಧಿಯಾದ ಸಂಸದರೊಬ್ಬರು ಇನ್ನೇನೂ ಪೊಲೀಸ್ ಅಧಿಕಾರಿಯ ಕಾಲಿಗೆ ಬಿದ್ದು ದಮ್ಮಯ್ಯ ಹಾಕಿ ನಮ್ಮ ಮಹಿಳಾ ಕಾರ್ಯಕತ್ತರಿಗೆ ಹಿಂಸಿಸಬೇಡಿ ಎಂದು ಗೋಳಾಡಬೇಕಿತ್ತಾ?
ಇವತ್ತು ನಳಿನ್ ಕುಮಾರ್ ಕಟೀಲ್ ಅವರನ್ನು ಬಹಿರಂಗವಾಗಿ ವಿರೋಧಿಸುತ್ತಿರುವ ಕಮ್ಯೂನಿಸ್ಟರು, ಜೆಡಿಎಸ್ ನವರು, ಎಸ್ ಡಿಪಿಐ, ಪಿಎಫ್ ಐನವರಿಗೆ ತಾವು ಈ ಜನ್ಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಸಕರೋ, ಸಂಸದರೋ ಆಗಲ್ಲ ಎನ್ನವುದು ಗೊತ್ತಿದೆ. ಅದಕ್ಕಾಗಿ ಸಿಕ್ಕಿದ್ದೆ ಚಾನ್ಸ್ ಎಂದು ಕಲ್ಲು ಬಿಸಾಡುತ್ತಿದ್ದಾರೆ. ಇನ್ನು ಕಾಂಗ್ರೆಸ್ಸಿನ ಶಾಸಕರಿಗೆ, ಸಚಿವರಿಗೆ ಇವತ್ತಲ್ಲ ನಾಳೆ ತಾವು ವಿಪಕ್ಷಕ್ಕೆ ಹೋದರೆ ತಮಗೂ ಹೀಗೆ ಪೊಲೀಸರು ಆಡಿಸುತ್ತಾರೆ ಎಂದು ಗೊತ್ತಿರುವುದರಿಂದ ಅವರು ಕೂಡ ಭವಿಷ್ಯದಲ್ಲಿ ಹಾಗೆ ಕಾರ್ಯಕತ್ತರ ರಕ್ಷಣೆಗೆ ಧಾವಿಸಬೇಕು ಎಂದು ಅರಿತಿರುವುದರಿಂದ ಅವರು ಬಹಿರಂಗವಾಗಿ ಏನೂ ಹೇಳಲು ಹೋಗುತ್ತಿಲ್ಲ. ಅದರ ಬದಲು ಹಿಂದಿನಿಂದ ಒಂದಿಷ್ಟು ಕಾಟ ಕೊಟ್ಟು ಮಜಾ ತೆಗೆದುಕೊಳ್ಳೋಣ ಎಂದು ಪೊಲೀಸ್ ಅಧಿಕಾರಿಯ ಮೂಲಕ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮೇಲೆ ಪ್ರಕರಣ ದಾಖಲಿಸಿ ಎಫ್ ಐ ಆರ್ ಮಾಡಿದ್ದಾರೆ. ಒಟ್ಟಿನಲ್ಲಿ ಸಂಸದರ ಹೆಸರು ಹಾಳು ಮಾಡಲು ತೆರೆಮರೆಯಲ್ಲಿ ಪೊಲೀಸ್ ಇಲಾಖೆಯನ್ನು ಬಳಸಿಕೊಳ್ಳಲಾಗಿದೆ. ಆರು ತಿಂಗಳ ಬಳಿಕ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎನ್ನುವ ಧೈರ್ಯದಲ್ಲಿ ನಾವಿದ್ದೇವೆ ಹೆದರಬೇಡಿ ಎಂದು ಪೊಲೀಸ್ ಇನ್ಸಪೆಕ್ಟರ್ ಮಾರುತಿ ನಾಯ್ಕ್ ಮೇಲೆ ಒತ್ತಡ ತಂದು ಕಾಂಗ್ರೆಸ್ಸಿಗರು ಕೇಸು ದಾಖಲಿಸಿದ್ದಾರೆ. ರಾಜಕಾರಣದ ಪಡಸಾಲೆಯಲ್ಲಿ ಇರುವವರಿಗೆ ನಳಿನ್ ಅವರು ವರ್ತಿಸಿದ ರೀತಿಯ ಅನಿವಾರ್ಯತೆ ಮತ್ತು ಆಡಳಿತ ಪಕ್ಷದ ನಾಟಕ ಗೊತ್ತಿದೆ.
ಆದರೆ ಇದು ಗೊತ್ತಿಲ್ಲದ, ಕೇವಲ ವಿಡಿಯೋದಲ್ಲಿ ಮೂರ್ನಾಕು ನಿಮಿಷದ ಆ ಕ್ಲಿಂಪಿಂಗ್ ನೋಡಿದ, ಅದರ ಮೊದಲು ಮತ್ತು ನಂತರದ ಕಥೆ ತಿಳಿಯದ ಸಾಮಾನ್ಯ ನಾಗರಿಕ ಮಾತ್ರ ವಾಸ್ತವ ಗೊತ್ತಿಲ್ಲದೆ ತನ್ನ ಮನಸ್ಸಿಗೆ ಬಂದದ್ದು ಅಂದುಕೊಂಡಿರುತ್ತಾನೆ. ಆದರೆ ಸತ್ಯ ಅದಲ್ಲ ಎಂದು ಅವನಿಗೂ ಗೊತ್ತಾದರೆ ಸಂಸದರ ಮೇಲೆ ಅವನಿಗೂ ಹೆಮ್ಮೆ ಮೂಡುತ್ತದೆ!
Leave A Reply