ವಂಶಾಡಳಿತ: ಭಾರತ ಸಾಗುವುದೇ ಹೀಗೆ..
>> ಸ್ಟಾಲಿನ್, ಅಖಿಲೇಶ್, ಅಭಿಷೇಕ್ ಬಚ್ಚನ್, ಅಂಬಾನಿಯರದ್ದು ವಂಶಾಡಳಿತ, ನನ್ನನ್ನೇ ಏಕೆ ಟೀಕಿಸುತ್ತೀರಿ? : ರಾಗಾ ಪ್ರಶ್ನೆ
>> ಬರ್ಕಲಿ ವಿವಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಭಾಷಣದಲ್ಲಿ ಭಾರತದ ಮರ್ಯಾದೆ ಹರಾಜು ಹಾಕಿದ ಕಾಂಗ್ರೆಸ್ ಯುವರಾಜ
ದೆಹಲಿ : ಹೋದಲ್ಲೆಲ್ಲಾ ಒಂದಾದರೂ ವಿವಾದ ಹುಟ್ಟುಹಾಕದೇ ಮರಳದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಇಂದು ಕ್ಯಾಲಿಫೋರ್ನಿಯಾ ವಿವಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಭಾಷಣ ಮಾಡುತ್ತಾ ಪ್ರಸಕ್ತ ಭಾರತದ ಚಿತ್ರಣ ನೀಡುತ್ತೇನೆಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿ ಜಾಗತಿಕವಾಗಿ ಭಾರತೀಯರ ಮಾನ ಹರಾಜು ಹಾಕಿದ್ದಾರೆ. ಕಳೆದ 70 ವರ್ಷದಲ್ಲಿ ನನ್ನ ಅಜ್ಜ, ಅಜ್ಜಿ, ತಂದೆ ಹೀಗೆ ಮಾಡಿದರೂ, ಹಾಗೆ ಕೊಡುಗೆ ನೀಡಿದರೂ ಎಂದು ಭಾಷಣದ ಆರಂಭದಲ್ಲಿ ಉದ್ಘರಿಸಿದ ರಾಹುಲ್, ನಂತರ ಪ್ರಸ್ತುತ ಸರ್ಕಾರ ಎಂದು ಹೇಳುತ್ತಲೇ ನೋಟು ನಿಷೇಧ, ಜಿಡಿಪಿ ವಿಚಾರಗಳಲ್ಲಿ ವ್ಯಂಗ್ಯದ ಸುರಿಮಳೆ ಸುರಿಸಿದರು. ವಿದ್ಯಾರ್ಥಿಗಳ ಎದುರು ಹೋಗುತ್ತಿರುವುದು ಭಾರತದ ಮಾನ ಎಂದು ಅರಿಯದೆ ಪ್ರಧಾನಿ ನಡೆಯನ್ನು ಟೀಕಿಸುತ್ತಾ ಹೋದರು.
….ರಾಹುಲ್ ರೀಲ್…..
– ಸರ್ಕಾರದಿಂದ ಪ್ರತಿದಿನ ಕೇವಲ 500 ಉದ್ಯೋಗ ಸೃಷ್ಟಿ. ಬೇಕಿರುವುದು 30 ಸಾವಿರ.
– ನೋಟು ನಿಷೇಧದಿಂದ ದೇಶದಲ್ಲಿ ಚಲಾವಣೆಯಲ್ಲಿದ್ದ 80% ಹಣ ಮಾಯ. ಆರ್ಥಿಕ ಸಲಹೆಗಾರ, ಸಂಸತ್ ಮತ್ತು ಸಚಿವರ ಮಾತಿಗೆ ಕಿವಿಗೊಡದೆ ತೆಗದುಕೊಳ್ಳಲಾದ ಆತುರದ ನಿರ್ಧಾರ.
– ಕೃಷಿ ನೆಲಕಚ್ಚಿದೆ. ರೈತರ ಆತ್ಮಹತ್ಯೆ ಪ್ರಮಾಣ ಮುಗಿಲುಮುಟ್ಟಿದೆ.
– ನೋಟು ನಿಷೇಧದಿಂದ ಭಾರತದ ಜಿಡಿಪಿಗೆ 2% ನಷ್ಟ.
– ಯುವಕರು, ಸಾರ್ವಜನಿಕರ ಆಕ್ರೋಶ ದಿನದಿಂದ ದಿನಕ್ಕೆ ಏರಿಕೆಯಾಗಿ 70 ವರ್ಷ ಕಟ್ಟಿದ ಭಾರತವನ್ನು ಅಲುಗಾಡಿಸುತ್ತದೆ.
ಇಷ್ಟು ಮುತ್ತುಗಳನ್ನು ಉದುರಿಸಿದ ಬಳಿಕ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿಗೆ ಎದುರಾಗಿದ್ದು ‘ವಂಶಾಡಳಿತದ’ ಖಡಕ್ ಪ್ರಶ್ನೆ.
ಇದಕ್ಕೆ ಉತ್ತರಿಸುತ್ತಾ ” ಭಾರತದ ರಾಜಕೀಯ, ಸಿನಿಮಾ ಸೇರಿದಂತೆ ಎಲ್ಲ ರಂಗದಲ್ಲಿಯೂ ವಂಶಾಡಳಿತವಿದೆ. ಅಖಿಲೇಶ್ ಯಾದವ್, ಸ್ಟಾಲಿನ್ ಹಾಗು ಅನುರಾಗ್ ಠಾಕೂರ್ ವಂಶಾಡಳಿತದ ಉದಾಹರಣೆಗಳು. ನನ್ನನ್ನು ಮಾತ್ರ ಕೇಂದ್ರೀಕರಿಸುತ್ತೀರಿ ಯಾಕೆ? ಎಂದು ಮರುಪ್ರಶ್ನಿಸಿದರು.
ಭಾರತದ ನಡೆಯುವುದೇ ಹೀಗೆ….ಇದರಲ್ಲಿ ಆಶ್ಚರ್ಯವಿಲ್ಲ. ಆದರೆ ವಂಶಾಡಳಿತದ ವಾರಸುದಾರ ಸಮರ್ಥನೇ, ಸೂಕ್ಷ್ಮ ಸ್ವಭಾವದವನೇ ? “ ಎಂದು ರಾಹುಲ್ ಹೇಳಿದರು.
ನಾನೇ ಪ್ರಧಾನಿ ಅಭ್ಯರ್ಥಿ, ಏನೀಗ?
ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ” ನನ್ನು ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿಕೊಳ್ಳಲು ನಾನು ಈಗಲೇ ಸಿದ್ಧ. ಆದರೆ ದೇಶದಲ್ಲಿ ಸಾಂಸ್ಥಿಕ ವ್ಯವಸ್ಥೆ ಇದೆ, ಚುನಾವಣೆ ನಡೆಯುತ್ತದೆ. ಇದನ್ನು ಕಾಂಗ್ರೆಸ್ ನಿರ್ಧರಿಸಬೇಕಿದೆ’ ಎಂದು ತಮ್ಮ ಹೆಬ್ಬಯಕೆ ಬಿಚ್ಚಿಟ್ಟಿದ್ದಾರೆ.
ತಾಯಿ ಸೋನಿಯಾ ಗಾಂಧಿ ತಮ್ಮ ಗಾದಿ ಬಿಟ್ಟುಕೊಟ್ಟರೆ ವಹಿಸಿಕೊಳ್ಳಲು ಸಿದ್ಧ ಎನ್ನುವಂತಿತ್ತು ಈ ಹೇಳಿಕೆ.
ಮೋದಿಯೇ ಉತ್ತಮ ವಾಗ್ಮಿ
ಇದೇ ಮೊದಲ ಬಾರಿಗೆ ರಾಹುಲ್ ಅವರಿಗೆ ಪ್ರಧಾನಿ ತಮಗಿಂತ ಯಾವುದಾದರೂ ವಿಷಯದಲ್ಲಿ ಹೆಚ್ಚು ಎನಿಸಿದ್ದಾರೆ. ಮತ್ತು ಅದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಅವರು ನನಗಿಂತ ಉತ್ತಮ ಸಂವಹನಕಾರರು. ಗುಂಪಿನಲ್ಲಿ ಎಲ್ಲ ಥರದ ಜನರೊಂದಿಗೆ ಹೇಗೆ ವ್ಯವಹರಿಸಬೇಕು ಎಂದು ಅವರಿಗೆ ನನಗಿಂತ ಚೆನ್ನಾಗಿ ಗೊತ್ತು ಎಂದು ಹೊಗಳಿದ್ದಾರೆ.
ಕಳೆದ ತಿಂಗಳು ನಾರ್ವೆ ಪ್ರವಾಸ ಮುಗಿಸಿ, ಸೆಪ್ಟೆಂಬರ್‍ನಲ್ಲಿ 10 ದಿನ ಅಮೆರಿಕ ಪ್ರವಾಸಕ್ಕೆ ತೆರಳಿದ್ದ ರಾಹುಲ್‍ಗೆ ಈ ತಿಂಗಳ ಎರಡನೇ ವಿದೇಶ ಪ್ರವಾಸವಿದು.
” ಕಾಶ್ಮೀರದಲ್ಲಿ ಹಿಂದಿನ ಸರ್ಕಾರಗಳಿಂದ ದ್ವೇಷ ಬಿತ್ತನೆ ಕಾರ್ಯವಾಗಿದೆ ಎಂದು ಮೋದಿ ಶೃಂಗಸಭೆಗಳಲ್ಲಿ ದೇಶದ ಮಾನ ಕಳೆದಿಲ್ಲವೇ.? ನಮ್ಮ ಉಪಾಧ್ಯಕ್ಷ ಹೇಳಿದ್ದರಲ್ಲಿ ವಾಸ್ತವೆತೆಯಿದೆ.” – ಆನಂದ ಶರ್ಮಾ, ಕಾಂಗ್ರೆಸ್ ಮುಖಂಡ
” ವಿದೇಶದಲ್ಲಿ ಭಾರತದ ಮಾನ ಹರಾಜು ಹಾಕಿ ತಾವೊಬ್ಬ ವಿಫಲ ವಂಶಾಡಳಿತಗಾರ ಎಂದು ರಾಹುಲ್ ತೋರಿಸಿದ್ದಾರೆ. ಈ ಮುಂಚೆ ಅವರೊಬ್ಬ ವಿಫಲ ರಾಜಕಾರಣಿ ಎಂದು ಸಾಬೀತಾಗಿತ್ತು.” – ಸ್ಮøತಿ ಇರಾನಿ, ಕೇಂದ್ರ ಸಚಿವೆ
Leave A Reply