ದಸರಾ ರಜೆಯನ್ನು ದಸರಾ ಇರುವಾಗಲೇ ಕೊಡಿ, ಮಕ್ಕಳ ಕಣ್ಣೀರಿನ ಶಾಪ ಬೇಡಾ ಸಚಿವರೇ!
ಕರ್ನಾಟಕ ರಾಜ್ಯ ಸರಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರಿಗೆ ಚಿಕ್ಕದೊಂದು ಪ್ರಶ್ನೆ. ನೀವು ಪ್ರಾಥಮಿಕ, ಪ್ರೌಢ ಶಾಲೆಯನ್ನು ದಾಟಿಯೇ ಬಂದಿರುವುದಲ್ವಾ? ನಿಮಗೆ ಮಕ್ಕಳ ಫೀಲಿಂಗ್ಸ್ ಅರ್ಥವಾಗುತ್ತದೆಯಲ್ವಾ? ನೀವು ಯಾವುದೇ ಧರ್ಮದಲ್ಲಿ ಹುಟ್ಟಿರಲಿ, ಆದರೆ ಮಕ್ಕಳ ಮನಸ್ಸು ಎನ್ನುವುದು ಒಂದೇ ರೀತಿಯಲ್ಲಿ ಧರ್ಮಾತೀತವಾಗಿ ಇರುತ್ತದೆಯಲ್ವಾ? ಮೊನ್ನೆ ಭಕ್ರೀದ್ ಕರಾವಳಿಯಲ್ಲಿ ಒಂದನೇ ತಾರೀಕಿಗೆ ಆಚರಿಸುವುದರಿಂದ ಆವತ್ತೆ ಸರಕಾರಿ ರಜೆ ಕೊಡಿ ಎಂದು ಮುಸ್ಲಿಂ ನಿಯೋಗ ಬೇಡಿಕೆ ಇಟ್ಟಾಗ ಕೂಡಲೇ ಸ್ಪಂದಿಸಿದ್ದಿರಿ ತಾನೆ. ಹೋಗಲಿ, ನಿಮಗೆ ಯಾರಾದರೂ ಮನವಿ ಮಾಡಿದರೆ ಮಾತ್ರ ನೀವು ಸ್ಪಂದಿಸುವುದು ಆಗಿದ್ದಲ್ಲಿ ನಿಮ್ಮದೇ ಮೈಸೂರಿನಲ್ಲಿ ಪೋಷಕರು ಪ್ರತಿಭಟನೆ ಮಾಡಿ ಮನವಿ ಕೊಟ್ಟಿದ್ದಾರೆ ತಾನೆ. ಇನ್ನು ಕೂಡ ನೀವು ಮಲಗಿದ್ದಂತೆ ನಾಟಕವಾಡಿದರೆ ನವರಾತ್ರಿ ಕಳೆದು ಹೋಗುತ್ತದೆ. ಅದರ ನಂತರ ನೀವು ಸ್ಪಂದಿಸಿದರೆ ಎಷ್ಟು, ಬಿಟ್ಟರೆಷ್ಟು?
ಇನ್ನು ಕಾಲ ಮಿಂಚಿಲ್ಲ ಸಚಿವರೆ, ಇವತ್ತು, ನಾಳೆಯೊಳಗೆ ಏನಾದರೂ ಕ್ರಮ ತೆಗೆದುಕೊಳ್ಳಿ, ಆ ಮೂಲಕ ಮಕ್ಕಳ ಮುಖದಲ್ಲಿ ನಗು ಹೊರಡಿಸಿ. ಯಾವ ಮಗು ಕೂಡ ಪರೀಕ್ಷೆ ಬರೆಯುವುದಿಲ್ಲ ಎಂದು ಹೇಳುತ್ತಿಲ್ಲ. ಕೇಳಿಕೊಳ್ಳುತ್ತಿರುವುದು ಕೇವಲ 15 ದಿನ ಮುಂದೂಡಿ ಎನ್ನುವ ಬೇಡಿಕೆ ಮಾತ್ರ. ನನಗೆ ಗೊತ್ತು, ನಿಮಗೆ ಮಕ್ಕಳು ವೋಟ್ ಬ್ಯಾಂಕ್ ಅಲ್ಲ. ಒಂಭತ್ತನೇ ತರಗತಿಯ ಒಳಗಿನ ಮಕ್ಕಳು ನಿಮಗೆ ವೋಟ್ ಹಾಕಲು ಸಾಧ್ಯವಿಲ್ಲ. ಅದಕ್ಕಾಗಿ ನೀವು ಕಿವಿಗೆ ಹತ್ತಿ ಇಟ್ಟು ಮಲಗಿದ್ದಿರಿ ಎಂದು ಕಾಣಿಸುತ್ತದೆ. ಅದೇ ಯಾವುದಾದರೂ ಜಾತಿ, ಧರ್ಮದ ವಿಷಯ ಬಂದಿದ್ದಲ್ಲಿ ನೀವು ನಿಮ್ಮ ಮೊಬೈಲಿನಲ್ಲಿ ಯಾವ ಭಕ್ತಿಪ್ರಧಾನ ಚಿತ್ರ ವೀಕ್ಷಿಸುತ್ತಿದ್ದರೂ ತಕ್ಷಣ ಅದನ್ನು ಪಕ್ಕಕ್ಕೆ ಇಟ್ಟು ವಿಧಾನಸೌಧಕ್ಕೆ ಓಡೋಡಿ ಬರುತ್ತಿದ್ದಿರಿ. ಆದರೆ ಈಗ ನಿಮಗೆ ಇದು ಕಾಣಿಸುವುದಿಲ್ಲ.
ವರ್ಷದಲ್ಲಿ ಮಕ್ಕಳಿಗೆ ಎರಡು ರೀತಿಯ ರಜೆಗಳಿರುತ್ತವೆ. ಅದರಲ್ಲಿ ಒಂದು ಬೇಸಿಗೆ ರಜೆ. ಮತ್ತೊಂದು ದಸರಾ ರಜೆ. ಸಾಮಾನ್ಯವಾಗಿ ದಸರಾ ಧಾರ್ಮಿಕ ಹಬ್ಬ, ಉತ್ಸವ ಬರುವುದು ಅಕ್ಟೋಬರ್ ತಿಂಗಳಲ್ಲಿ. ಆದರೆ ಈ ಸಲ ಅದು ಸಪ್ಟೆಂಬರ್ 21 ರಿಂದ ಶುರುವಾಗುತ್ತಿದೆ. ಸೆಪ್ಟೆಂಬರ್ 30ರ ತನಕ ಇರುತ್ತದೆ. ನಿಮ್ಮ ಪರೀಕ್ಷೆಗಳು ಕೂಡ ಅದಕ್ಕೆ ಸರಿಯಾಗಿ ಹೊಂದಿಕೊಳ್ಳುವಂತೆ ನೀವು ಇಟ್ಟಿದ್ದಿರಿ. ಸರಕಾರಿ ಶಾಲೆಗಳಿಗೆ ಪರೀಕ್ಷೆಗಳು ಪ್ರಾರಂಭವಾಗುವುದೇ ಸರಿಯಾಗಿ ಸೆಪ್ಟೆಂಬರ್ 26 ಕ್ಕೆ. ಅದು ಮುಗಿಯುವುದು ಅಕ್ಟೋಬರ್ 9 ಕ್ಕೆ. ಎಂತಹ ಟೈಮಿಂಗ್ ಮಾರ್ರೆ ನಿಮ್ಮದು. ಹಾಗೆ ಸ್ಟೇಟ್ ಸಿಲೆಬಸ್ ಪ್ರಕಾರ ನಡೆಯುವ ಶಾಲೆಗಳಲ್ಲಿ ಪರೀಕ್ಷೆ ಪ್ರಾರಂಭವಾಗಿದೆ. ಅವರಿಗೆ ನೀವು ಪರೀಕ್ಷೆ ಇಟ್ಟಿರುವುದು ಸೆಪ್ಟೆಂಬರ್ 15 ರಿಂದ 28 ರ ತನಕ. ಅಂದರೆ ಪರೀಕ್ಷೆ ಮುಗಿಯುವಷ್ಟರಲ್ಲಿ ನವರಾತ್ರಿ ಕೂಡ ಮುಗಿಯುವ ಹಂತಕ್ಕೆ ಬಂದಿರುತ್ತದೆ. ಇನ್ನು ಸಿಬಿಎಸ್ ಇ ಗೆ ಸೆಪ್ಟೆಂಬರ್ 11 ರಿಂದ 23 ರ ತನಕ ಪರೀಕ್ಷೆ ನಡೆಯುತ್ತಿದೆ. ಕೊನೆಗೆ ಮೂರ್ನಾಕು ಪರೀಕ್ಷೆಗಳನ್ನು ಮುಂದೂಡದಿದ್ದರೆ ಆ ಮಕ್ಕಳು ಗೋವಿಂದ.
ತನ್ವೀರ್ ಸೇಠ್ ಅವರೇ ನೀವು ಹಿಂದೂ ಧರ್ಮದಲ್ಲಿ ಹುಟ್ಟಿದ್ದರೆ, ಆಗ ನಿಮ್ಮ ಮಕ್ಕಳು “ಪಪ್ಪಾ, ನಿಮಗೆ ತಲೆ ಸರಿ ಇಲ್ವಾ, ದಸರೆಗೆ ಸರಿಯಾಗಿ ಪರೀಕ್ಷೆ ಇಟ್ಟಿದ್ದಿರಲ್ಲ, ಈಗ ನಮಗೆ ರಜೆ ಬೇಕು” ಎಂದು ಹೇಳಿದ್ದರೆ ನಿಮಗೆ ಈ ಲಾಜಿಕ್ ಅರ್ಥವಾಗುತ್ತಿತ್ತು ಎಂದು ನಾನು ಕಠಿಣ ಶಬ್ದ ಬಳಸಿ ಹೇಳಿದರೆ ನೀವು ನನ್ನನ್ನು ಕೋಮುವಾದಿ ಎನ್ನಬಹುದು. ಆದ್ದರಿಂದ ನಾನು ಹಾಗೆ ಹೇಳಲು ಹೋಗುವುದಿಲ್ಲ. ಇದೆಲ್ಲ ಸೂಕ್ಷ್ಮ ಮನಸ್ಸಿನವರಾಗಿದ್ದರೆ ನಿಮಗೆ ಅರ್ಥವಾಗುತ್ತಿತ್ತು.
ಹಿಂದೂ ಧರ್ಮದಲ್ಲಿ ಹಬ್ಬಗಳು ಅಕ್ಟೋಬರ್ 15, ಡಿಸೆಂಬರ್ 25 ಎಂದು ಫಿಕ್ಸ್ ಆಗಿ ಬರುವುದಿಲ್ಲ. ನಮ್ಮಲ್ಲಿ ಪಂಚಾಂಗದ ಪ್ರಕಾರ ನಿರ್ಧಾರವಾಗುತ್ತದೆ. ನೀವು ನೂರಕ್ಕೆ ನೂರು ನಮ್ಮ ಪಂಚಾಂಗಗಳನ್ನು ನೋಡಿಯೇ ಪರೀಕ್ಷೆ ಇಡಬೇಕು ಎಂದು ಹೇಳುತ್ತಿಲ್ಲ. ಈಗ ಮಹಾಲಯ ಅಮವಾಸ್ಯೆಯ ರಜೆ ಕೂಡ ಒಂದು ದಿನ ಆಚೀಚೆ ಆಗಿದೆ. ಅದು ಬೇರೆ ವಿಷಯ. ಆದರೆ ಈ ದಸರಾ ಹಾಗಲ್ಲ. ಹೊರಗೆ ಹುಲಿ ವೇಷ, ಕರಡಿ ಕುಣಿತ, ಊರಿನಲ್ಲಿ ಜಾತ್ರೆ, ಮರವಣಿಗೆ ಹೊರಡುವಾಗ ಎಕ್ಸಾಂ ಎಂದು ಬಾಗಿಲು ಮುಚ್ಚಿ ಕುಳಿತುಕೊಳ್ಳುವ ಮಗುವಿನ ಮನಸ್ಸಿನಲ್ಲಿ ಸಿಲೆಬಸ್ ಹತ್ತುತ್ತಾ? ಇದರಿಂದ ಒಂದು ವೇಳೆ ಪರೀಕ್ಷೆಯಲ್ಲಿ ಏಕಾಗ್ರತೆ ಸಾಧಿಸದೇ ಹೋಗಿ ಅಂಕಗಳು ಕಡಿಮೆ ಬಂದರೆ ಆಗ ಪೋಷಕರು ನಾಲ್ಕು ಬಾರಿಸಿದರೆ ಆಗ ಆ ಕಣ್ಣೀರು ನಿಮಗೆ ಖುಷಿ ತರುತ್ತದಾ?
ನನ್ನ ಬೇಡಿಕೆ ಇಷ್ಟೇ. ಮೈಸೂರಿನಲ್ಲಿ ಪ್ರತಿಭಟನೆ ಆಗಿರುವುದಕ್ಕೆ ಅಲ್ಲಿ ಮಾತ್ರ ಪರೀಕ್ಷೆ ಮುಂದೂಡಲು ಹೋಗಬೇಡಿ. ಇದು ಇಡೀ ರಾಜ್ಯದ ವಿಷಯ. ಎಲ್ಲಾ ಕಡೆ ನಿಮ್ಮ ಆದೇಶ ಅನುಷ್ಟಾನಕ್ಕೆ ಬರುವ ಹಾಗೆ ಸೂಚನೆ ನೀಡಿ. ಈ ಮೂಲಕ ಕನಿಷ್ಟ 4 ಕೋಟಿ ಜನರ ಮನಸ್ಸಿನಲ್ಲಿ ಸಮಾಧಾನ ಮೂಡಿಸಿ. ಇನ್ನೊಮ್ಮೆ ಹೇಳುತ್ತಿದ್ದೇನೆ. ಕಾಲ ಮಿಂಚಿಲ್ಲ. ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆಯ ಹೆಸರಿಗೆ ಮೂರ್ನಾಕು ಗಂಟೆಗಳೊಳಗೆ ಸ್ಟೇ ತರುವ ಸಾಮರ್ಥ್ಯ ಇರುವ ನಿಮ್ಮ ಸರಕಾರಕ್ಕೆ ಈ ಪರೀಕ್ಷೆ ಮುಂದೂಡುವುದು ಕಷ್ಟವಲ್ಲ!
Leave A Reply