ರೋಹಿಂಗ್ಯಾಗಳಿಗೆ ಮಿಡಿಯುವ ಮನ ಕಾಶ್ಮೀರಿ ಪಂಡಿತರಿಗೇಕೆ ಮರಗುವುದಿಲ್ಲ?

ಒಂದೆಡೆ, “ತಮಿಳಿಗರು, ತಸ್ಲೀಮಾ ನಸ್ರೀನ್ ನರೇಂದ್ರ ಮೋದಿ ಅವರ ಸಹೋದರರಾಗಿರಬೇಕಾದರೆ, ರೋಹಿಂಗ್ಯಾ ಮುಸ್ಲಿಮರೇಕೆ ಅವರ ಸಹೋದರರಾಗಬಾರದು?” ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸ್ ಸಹೋದರತ್ವದ ಪಾಠ ಮಾಡುತ್ತಾರೆ…
ಇನ್ನೊಂದೆಡೆ, ವಕೀಲಿಕೆಗಿಂತ ಕಾಂಗ್ರೆಸ್ ಪರ ವಕಾಲತ್ತೇ ವಹಿಸಿದ ಕಪಿಲ್ ಸಿಬಲ್, ಫಾಲಿ ಎಸ್. ನಾರಿಮನ್, ಕಾಲಿನ್ ಗೊನ್ಸಾಲ್ವಸ್, ಪ್ರಶಾಂತ್ ಭೂಷಣ್, ಅಶ್ವನಿಕುಮಾರ್, ರಾಜೀವ್ ಧವನ್ ಎಂಬ ದೇಶದ ಮಹೋನ್ನತ ವಕೀಲರು “ರೋಹಿಂಗ್ಯಾಗಳಿಗೆ ಭದ್ರತೆ ನೀಡಬೇಕು” ಎಂದು ಸುಪ್ರೀಂ ಕೋರ್ಟಿನಲ್ಲಿ ದೊಡ್ಡದಾಗಿ ವಾದ ಮಂಡಿಸಿದ್ದಾರೆ.
ಇದೆಲ್ಲದರ ಮಧ್ಯೆ, ಕೇಂದ್ರ ಸರಕಾರ ರೋಹಿಂಗ್ಯಾಗಳಿಂದ ದೇಶದ ಭದ್ರತೆಗೆ ಧಕ್ಕೆಯಿದೆ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದೆ. ಅಲ್ಲದೆ, ಈ ರೋಹಿಂಗ್ಯಾ ಮುಸ್ಲಿಮರು “ಜಿಹಾದಿ ಪ್ರತಿನಿಧಿಗಳು” ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಆದಾಗ್ಯೂ, ಮುಸ್ಲಿಂ ಪ್ರಾಬಲ್ಯದ ರಾಷ್ಟ್ರವೇ ಆಗಿರುವ ಬಾಂಗ್ಲಾದೇಶ ಸಹ ರೋಹಿಂಗ್ಯಾಗಳಿಂದ ಭಯಭೀತವಾಗಿದೆ. ಅವರ ರಕ್ಷಣೆಗೆ ಮುಂದಾಗಲು ಹಿಂದೇಟು ಹಾಕುತ್ತಿದೆ. ಅಷ್ಟೇ ಏಕೆ, 10 ಲಕ್ಷಕ್ಕೂ ಅಧಿಕ ರೋಹಿಂಗ್ಯಾಗಳು ದೇಶದಲ್ಲಿರುವ ಮ್ಯಾನ್ಮಾರೇ ಅವರನ್ನು ಹೊರದೂಡುತ್ತಿದೆ. ಈಗಾಗಲೇ ಮ್ಯಾನ್ಮಾರ್ನಲ್ಲಿ ರೋಹಿಂಗ್ಯಾ ಮುಸ್ಲಿಮರ ಜಿಹಾದಿ ಕೃತ್ಯಕ್ಕೆ 86 ಹಿಂದೂಗಳು ಬಲಿಯಾಗಿದ್ದಾರೆ, ಇವರಿಂದ ಬೇಸತ್ತು 200ಕ್ಕೂ ಅಧಿಕ ಹಿಂದೂ ಕುಟುಂಬಗಳು ರೋಹಿಂಗ್ಯಾಗಳ ಸಹವಾಸವೇ ಬೇಡ ಎಂದು ಕಾಡು ಸೇರಿದ್ದಾರೆ…
ಪರಿಸ್ಥಿತಿ ಹೀಗಿರುವಾಗ…
ಈ ಆರು ಜನ ವಕೀಲರು, ಅಸಾದುದ್ದೀನ್ ಓವೈಸಿ, ಮಾನವ ಹಕ್ಕುಗಳ ಆಯೋಗ, ಪ್ರಗತಿಪರರು, ಬುದ್ಧಿಜೀವಿಗಳು, ಲೂಥರ್ ಕಿಂಗ್ ಹಾಗೆಯೇ ಪೋಸು ಕೊಡುವ ಮಾನವತಾವಾದಿಗಳೇಕೆ ರೋಹಿಂಗ್ಯಾ ಮುಸ್ಲಿಮರ ಪರ ಮಾತನಾಡುತ್ತಾರೆ? ದೇಶಕ್ಕೇ ತಲೆನೋವಾಗುವ ಸಂಭವವಿದ್ದರೂ ಅವರನ್ನು ರಕ್ಷಿಸಬೇಕು ಎಂದು ಬೊಬ್ಬೆ ಹಾಕುತ್ತಾರೆ? ದೇಶದ ಭದ್ರತೆಗಿಂತಲೂ ಮಿಗಿಲಾದವರೇ ಈ ರೋಹಿಂಗ್ಯಾಗಳು? ಅಷ್ಟಕ್ಕೂ ಮುಸ್ಲಿಮರು ಎಂಬ ಕಾರಣಕ್ಕಾಗಿ, ಅವರು ಕೆಟ್ಟವರಾಗಿದ್ದರೂ, ಅಪಾಯ ಎನಿಸಿದರೂ ರಕ್ಷಣೆ ನೀಡಬೇಕೆ? ತಲೆಯಲ್ಲಿ ಮಿದುಳು ಇರುವವರು ಯಾರೂ ಹೀಗೆ ಹೇಳಿಕೆ ನೀಡಲ್ಲ.
ಇಷ್ಟೆಲ್ಲ ಮಾನವೀಯತೆಯ ಪಾಠ ಮಾಡುವ ಇವರು ಕಾಶ್ಮೀರದಿಂದ ಹೊರದಬ್ಬಿಸಿಕೊಂಡಿರುವ, ನಮ್ಮ ನೆಲದಲ್ಲೇ ನಿರಾಶ್ರಿತರಾಗಿರುವ ಕಾಶ್ಮೀರದ ಲಕ್ಷಾಂತರ ಹಿಂದೂ ಪಂಡಿತರ ಬಗ್ಗೆ ಮಾತನಾಡಿದ್ದಾರೆಯೇ? ಅಸ್ಸಾಂನಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ತಾರತಮ್ಯದ ಬಗ್ಗೆ ಸೊಲ್ಲೆತ್ತಿದ್ದಾರೆಯೇ? ಪಶ್ಚಿಮ ಬಂಗಾಳದಲ್ಲಿ ಆಗುತ್ತಿರುವ ಹಿಂದೂ ಶೋಷಣೆ, ಕೇರಳದಲ್ಲಿನ ಹಿಂಸೆ ಹಾಗೂ ದೇಶಾದ್ಯಂತ ನಡೆಯುತ್ತಿರುವ ಅನಾಚಾರದ ಬಗ್ಗೆ ಇವರೆಂದಾದರೂ ಉಸಿರು ಬಿಟ್ಟಿದ್ದಾರೆಯೇ? ಹಿಂದೂಗಳಾದರೆ ಸತ್ತರೆ ಸಾಯಿಲಿ, ಮುಸ್ಲಿಮರಾದರೆ ದೇಶಕ್ಕೆ ಕೆಡುಕಾದರೂ ಬಂದು ಒಡಲು ಸೇರಿ ಎನ್ನುವ ಇವರಿಗೆ ಏನು ಮಾಡಬೇಕು ಹೇಳಿ?
ಶುಲ್ಕಕ್ಕಾಗಿ ಯಾರ ಪರ ಬೇಕಾದರೂ ವಾದ ಮಾಡುವ ವಕೀಲರು, ಮತಕ್ಕಾಗಿ, ಅಲ್ಪಸಂಖ್ಯಾತರ ಓಲೈಸುವ ಓವೈಸಿಯಂಥ ರಾಜಕಾರಣಿಗಳು, ಬುದ್ಧಿಯೇ ಇಲ್ಲದ ಬುದ್ಧಿಜೀವಿಗಳು, ಎಡಬಿಡಂಗಿ ಮಾನವತಾವಾದಿಗಳೇ ಈ ದೇಶಕ್ಕೆ ರೋಹಿಂಗ್ಯಾಗಳಿಗಿಂತ ಅಪಾಯಕಾರಿ. ದುರದೃಷ್ಟವಶಾತ್, ರೋಹಿಂಗ್ಯಾಗಳ ವಿಷಯದಲ್ಲೇ ಇದು ಸಾಬೀತಾಗಿದೆ.
-ನಾಗೇಶ್ ಪೊನ್ನಪ್ಪ, ಮಡಿಕೇರಿ
Leave A Reply