ಕಾಣೆಯಾಗಿದ್ದ ಐಟಿ ಅಧಿಕಾರಿ ಪುತ್ರ ಶರತ್ ಶವವಾಗಿ ಪತ್ತೆ
ಬೆಂಗಳೂರು: ನಾಪತ್ತೆಯಾಗಿದ್ದ ಐಟಿ ಇಲಾಖೆ ಅಧಿಕಾರಿ ಪುತ್ರ ಶರತ್ ಶುಕ್ರವಾರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಈಡುಮಾಡಿದೆ. ಅಲ್ಲದೆ ಹಣಕ್ಕಾಗಿ ಶರತ್ ಸ್ನೇಹಿತರೇ ಅವರನ್ನು ಅಪಹರಿಸಿದ್ದಾರೆ ಎಂಬ ಸ್ಫೋಟಕ ಮಾಹಿತಿ ಲಭಿಸಿದೆ.
ಕೆಲ ದಿನಗಳ ಹಿಂದೆ ಮನೆಯಿಂದ ಹೊರಗೆ ಹೋಗಿದ್ದ ಶರತ್ ಮನೆಗೆ ಬಂದಿರಲಿಲ್ಲ. ಈಗ ಕೆಂಗೇರಿ ಬಳಿಯ ದೊಡ್ಡ ಆಲದ ಮರ ಸಮೀಪದ ರಾಮೋಹಳ್ಳಿ ಕರೆಯಲ್ಲಿ ಶರತ್ ಶವ ಸಿಕ್ಕಿದೆ.
ಕೆರೆಯಲ್ಲಿ ಮೃತದೇಹ ತೇಲುತ್ತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಣಕ್ಕಾಗಿ ಅಪಹರಿಸಿ, ಕೊಲೆ ಮಾಡಿ ಕೆರೆಯಲ್ಲಿ ಎಸೆದು ಹೋದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿಶಾಲ್, ವಿನಯ್, ವಿಕ್ಕಿ, ಕರ್ಣ ಹಾಗೂ ಕಿರಣ್ ಬಂಧಿತರು ಎಂದು ಮೂಲಗಳು ತಿಳಿಸಿವೆ..
ಹೆಬ್ಬಾಳದ ಆದಾಯ ತೆರಿಗೆ ಕಚೇರಿಯಲ್ಲಿ ನಿರಂಜನ್ ಎಂಬವರು ಕೆಲಸ ನಿರ್ವಹಿಸುತ್ತಿದ್ದು ಉಳ್ಳಾಲದಲ್ಲಿ ವಾಸಿಸುತ್ತಿದ್ದಾರೆ. ಅವರ ಪುತ್ರ ಶರತ್ ಹೊಸ ಬೈಕ್ ಖರೀದಿಸಿದ ಕಾರಣ ಸೆ.12ರಂದು ಸಂಜೆ ಗೆಳೆಯರಿಗೆ ಸಿಹಿ ಹಂಚಿ ಬರುವೆ ಎಂದು ಹೋಗಿದ್ದ. ಬಳಿಕ ತಡರಾತ್ರಿಯಾದರೂ ಮನೆಗೆ ಬಂದಿರಲಿಲ್ಲ.
ನಂತರ ಶರತ್ ಮಾತನಾಡುತ್ತಿದ್ದ ವಿಡಿಯೋ ಒಂದು ಕುಟುಂಬಸ್ಥರಿಗೆ ರವಾನೆಯಾಗಿದ್ದು, ಅದರಲ್ಲಿ ಶರತ್, ತನ್ನನ್ನು ಯಾರೋ ಅಪಹರಣ ಮಾಡಿದ್ದು, 50 ಲಕ್ಷ ರು. ಬೇಡಿಕೆ ಇಟ್ಟಿದ್ದಾರೆ. ಪೊಲೀಸರಿಗೆ ದೂರು ನೀಡದೆ, ಹಣ ಕೊಟ್ಟು ಬಿಡಿಸಿಕೊಳ್ಳಿ ಎಂದು ತಿಳಿಸಿದ್ದರು.
ಆದರೂ ಅವರ ತಂದೆ ಸೆ.14ರಂದು ಪೊಲೀಸರಿಗೆ ದೂರು ನೀಡಿದ್ದರು. ದೂರು ನೀಡಿದ ಹಿನ್ನೆಲೆಯಲ್ಲಿ ಶರತ್ ಅವರನ್ನು ಕೊಲೆ ಮಾಡಿ ಕೆರೆಗೆ ಎಸೆದಿದ್ದಾರೆ ಎಂದು ತಿಳಿದುಬಂದಿದೆ.
Leave A Reply