ನಿರಂಜನ ಭಟ್ಟ, ನವನೀತ್ ಶೆಟ್ಟಿ ಜೈಲೊಳಗೆ ಪೆಟ್ಟು ತಿಂದದ್ದಾಕೆ?
ಮಂಗಳೂರು ಸಬ್ ಜೈಲಿನಲ್ಲಿ ಈ ವಾರ ಮತ್ತೆ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ ಕೆಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ದಾಳಿ, ಒಳಗೆ ಹೊಡೆದಾಟ ಎಲ್ಲವೂ ಹೊಸತಲ್ಲ. ಪರಸ್ಪರ ಎರಡು ಗುಂಪಿನ ಯುವಕರು ಒಂದೇ ಬ್ಯಾರಕ್ ನಲ್ಲಿ ಇದ್ದರೆ ಆಗಾಗ ಕೈಗೆ ಸಿಕ್ಕಿದ ವಸ್ತುಗಳಿಂದ ಹೊಡೆದಾಡಿಕೊಳ್ಳುವುದು ಇದ್ದೇ ಇದೆ. ಅದು ಬಾಲ್ದಿ ಇರಬಹುದು ಅಥವಾ ಯಾವುದಾದರೂ ಪಾತ್ರೆ ಇರಬಹುದು. ಕೆಲವೊಮ್ಮೆ ಜೈಲ್ ಬದಲಾಯಿಸಬೇಕೆನ್ನುವ ಈಗಿರುವ ಜೈಲು ಸರಿಯಾಗುವುದಿಲ್ಲ, ಬೇರೆ ಜೈಲಿಗೆ ವಗರ್ಾಯಿಸಿ ಎಂದು ಕೈದಿಗಳು ಕೇಳಿದಾಗ ವಾರ್ಡನ್ ಒಪ್ಪದೆ ಇದ್ದರೆ ಆಗ ಹೀಗೆ ಬೇಕಂತಲೇ ಹೊಡೆದಾಡಿಕೊಳ್ಳುವುದು ಇದೆ. ಇನ್ನೂ ಈ ಜೈಲಿನ ವಿಷಯ ಗೊತ್ತಿದ್ದವರಿಗೆ ಹಿಂದೂ ಮತ್ತು ಮುಸ್ಲಿಂ ಕೈದಿಗಳನ್ನು ಒಂದೇ ಬ್ಲಾಕ್ ನಲ್ಲಿ ಇಡುವುದಿಲ್ಲ ಎನ್ನುವುದು ಕೂಡ ತಿಳಿದೇ ಇದೆ. ಒಂದೇ ಬ್ಲಾಕಿನಲ್ಲಿ ಇಟ್ಟರೆ ದಿನಕ್ಕೆ ನಾಲ್ಕು ಹಲ್ಲೆ, ಹೊಡೆದಾಟಗಳು ನಡೆಯುತ್ತಿದ್ದವು ಎನ್ನುವುದರಲ್ಲಿ ಸಂಶಯವಿಲ್ಲ. ಈ ಜೈಲಿನಲ್ಲಿ ಹೊಡೆದಾಟ ಎನ್ನುವ ವಿಷಯಗಳು ಆಗಾಗ ಚಿಕ್ಕದಾಗಿ ಮಾಧ್ಯಮಗಳಲ್ಲಿ ನ್ಯೂಸ್ ಆಗಿ ಕಾಣಿಸುವುದು ಬಿಟ್ಟರೆ ಅವೀಗ ಹೆಡ್ಡಿಂಗ್ ಆಗಿ ಕಾಣುವುದು ನಿಂತಿದೆ. ಯಾಕೆಂದರೆ ನಿತ್ಯ ಸಾಯುವವರಿಗೆ ಅಳುವವರ್ಯಾರು?
ಆದರೆ ಯಾವಾಗ ನಿರಂಜನ ಭಟ್ಟ ಹಾಗೂ ನವನೀತ್ ಶೆಟ್ಟಿ ಮೇಲೆ ಹಲ್ಲೆಯಾಯಿತೋ ಆಗ ಅದು ಒಂದು ರೀತಿಯ ಸಂಚಲನವನ್ನು ಜಿಲ್ಲೆಯಲ್ಲಿ ಸೃಷ್ಟಿಸಿತ್ತು. ಯಾಕೆಂದರೆ ನವನೀತ್ ಆಗಲಿ, ನಿರಂಜನ ಆಗಲಿ ಯಾವುದೇ ಹೆಬಿಚುವಲ್ ಕ್ರಿಮಿನಲ್ ಗಳಲ್ಲ. ಇವರಿಬ್ಬರು ಮಾಡಿದ್ದು ಭಯಾನಕ ಕೊಲೆಯಾಗಿದ್ದರೂ ಮತ್ತು ಸಾಕ್ಷ್ಯ ನಾಶ ಮಾಡಿದ್ದು ಪಕ್ಕಾ ಬಾಲಿವುಡ್ ಶೈಲಿಯಲ್ಲಿ ಇದ್ದರೂ ಇವರಿಬ್ಬರಿಗೆ ಇದೇ ಮೊದಲ ಕೊಲೆ. ಅದು ಇನ್ನು ಸಾಬೀತಾಗಬೇಕು, ಅದು ಬೇರೆ ಪ್ರಶ್ನೆ. ಆದರೆ ಸದ್ಯಕ್ಕೆ ಇವರಿಬ್ಬರ ಮೇಲೆ ಇರುವ ಗುರುತರ ಆರೋಪ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ ಆಗಿರುವುದರಿಂದ ಮತ್ತು ಎಲ್ಲಾ ನ್ಯಾಯಾಲಯಗಳು ಜಾಮೀನು ನಿರಾಕರಿಸಿರುವುದರಿಂದ ಒಂದು ವರ್ಷವಾದರೂ ಇವರಿಬ್ಬರನ್ನು ಸೇರಿ ಭಾಸ್ಕರ್ ಶೆಟ್ಟಿಯವರ ಧರ್ಮದ ಪತ್ನಿ ರಾಜೇಶ್ವರಿ ಶೆಟ್ಟಿ ಮೂವರು ಮಂಗಳೂರು ಜೈಲಿನಲ್ಲಿ ಆರಾಮವಾಗಿದ್ದರು. ಉಡುಪಿ ನ್ಯಾಯಾಲಯದಲ್ಲಿ ವಿಚಾರಣೆ ಇದ್ದಾಗ ಒಳ್ಳೆಯ ವಾಹನದಲ್ಲಿಯೇ ಇವರನ್ನು ಕರೆದುಕೊಂಡು ಹೋಗಿ ಒಳ್ಳೆಯ ಹೋಟೇಲಿನಲ್ಲಿ ಊಟ ಮಾಡಿಸಿ ಪೊಲೀಸರು ಮತ್ತೆ ಜೈಲಿಗೆ ತಂದು ಬಿಡುತ್ತಿದ್ದರು. ಆದ್ದರಿಂದ ಇವರೆಲ್ಲರಿಗೆ ನ್ಯಾಯಾಲಯದಲ್ಲಿ ಹಿಯರಿಂಗ್ ಇದ್ದರೆ ಅದು ಪಿಕ್ ನಿಕ್ ಅನುಭವ ಕೊಡುತ್ತಿತ್ತು.
ಹಾಗೆ ಕಳೆದ ಬಾರಿ ಉಡುಪಿಯಲ್ಲಿ ಹಿಯರಿಂಗ್ ಮುಗಿಸಿ ಇವರು ಮೂವರು ಮಂಗಳೂರು ಜೈಲಿಗೆ ಹಿಂತಿರುಗಿದ್ದಾರೆ. ಮೊದಲ ಮಹಡಿಯಲ್ಲಿ ಬೇರೆ ಕೈದಿಗಳೊಂದಿಗೆ ನವನೀತ್ ಶೆಟ್ಟಿ ಹಾಗೂ ನಿರಂಜನ್ ಇದ್ದರೆ, ರಾಜೇಶ್ವರಿಯನ್ನು ಮಹಿಳಾ ಸೆಲ್ಲಿಗೆ ಹಾಕಲಾಗಿತ್ತು. ಸೆಪ್ಟೆಂಬರ್ 11 ರಂದು ಬೆಳಿಗ್ಗೆ ನಿರಂಜನ ಹಾಗೂ ನವನೀತ್ ಶೆಟ್ಟಿ ಮೆಟ್ಟಿಲು ಇಳಿದು ಬರುತ್ತಿದ್ದ ಹಾಗೆ ಎದುರಿಗೆ ಬಜಿಲ್ ಕೇರಿ ಧನರಾಜ್ ಸಿಕ್ಕಿದ್ದಾನೆ. ಧನರಾಜ್ ಏನೂ ದೊಡ್ಡ ಪೆಟ್ಟಿಸ್ಟ್ ಅಲ್ಲ. ಇವನಿಗೂ ಕ್ರಿಮಿನಲ್ ಹಿನ್ನಲೆಯ ದೊಡ್ಡ ಟ್ರಾಕ್ ರೆಕಾಡ್ಸ್ ಗಳಿಲ್ಲ. ಒಂದು ಕಳವು ಪ್ರಕರಣದಲ್ಲಿ ಆರೋಪಿಯಾಗಿ ಕೆಲವು ದಿನಗಳಲ್ಲಿ ಜೈಲಿನಲ್ಲಿದ್ದಾನೆ. ಎದುರಿಗೆ ನವನೀತ್ ಹಾಗೂ ನಿರಂಜನ್ ಸಿಕ್ಕಾಗ ಯಾರೋ ಹಿಂದಿನಿಂದ “ಮುಕುಲ್ನಾ ಶೋಕಿ ತೂಲೆ, ಪೊಯೆರೆ ಬರ್ರೆ ಪೋಶ್ ಕಾರು, ಕಾಸ್ ಎಡ್ಡೆ ಇತ್ತಂಡಾ ನಮ್ಮಡ್ ಎಡ್ಡೆ ಟ್ರಿಟ್ ಮೆಂಟ್ ಕೊರ್ಪೆರ್ ಮಾರ್ರೆ, ಕಾಸ್ ಇಜ್ಜಾಂಡಾ ಮೂಸು ನಕುಲ್ ಇಜ್ಜಿ ಮೂಲು” ( ಇವರ ಶೋಕಿ ನೋಡಿ, ಹೋಗಿ ಬರಲು ಒಳ್ಳೆಯ ಕಾರು, ಹಣ ತುಂಬಾ ಇದ್ರೆ ನಮ್ಮ ಜೈಲಲ್ಲಿ ಒಳ್ಳೆಯ ವ್ಯವಸ್ಥೆ ಇರುತ್ತದೆ. ಹಣ ಇಲ್ಲದಿದ್ದರೆ ಕೇಳುವವರು ಇಲ್ಲಾ ಇಲ್ಲಿ) ಎಂದಿದ್ದಾರೆ. ಅದನ್ನು ಕೇಳಿ ಧನರಾಜ್ ಗೆ ಮೈಯೆಲ್ಲ ಉರಿದಿದೆ. ಈ ನವನೀತನಿಗೂ, ನಿರಂಜನ್ ಗೂ ಹೊಡೆದರೆ ಜೈಲಲ್ಲಿ ಯಾರೂ ಕೇಳುವವರು ಇಲ್ಲ ಎಂದು ಗೊತ್ತಿದೆ. ಇವರನ್ನು ಹೊಡೆದು ತಾನು ದೊಡ್ಡ ಜನ ಆಗುವ ಎನ್ನುವ ಐಡಿಯಾಗೆ ಬಂದಿದ್ದಾನೆ.
ಅವರಿಬ್ಬರು ಅಡ್ಡಗಟ್ಟಿದ್ದಾನೆ. ಏನು ನಿಮ್ಮತ್ರ ತುಂಬಾ ದುಡ್ಡು ಇದೆಯಾ, ಹೋಗಿ ಹೋಗಿ ಹಣಕೋಸ್ಕರ ಹುಟ್ಟಿಸಿದ ತಂದೆಯನ್ನೇ ಕೊಲ್ತಿಯಲ್ಲ, ನಾಚಿಕೆ ಆಗಲ್ವಾ ಎಂದು ಸಮ ಟಾಂಗ್ ಕೊಟ್ಟಿದ್ದಾನೆ. ಅದನ್ನು ಕೇಳಿದರೂ ಕೇಳಿಸದ ಹಾಗೆ ನಿರಂಜನ್ ನವನೀತನ ಕೈ ಹಿಡಿದು ಪಕ್ಕದಿಂದ ಸರಿದು ಹೋಗಲು ನೋಡಿದ್ದಾನೆ. ಏನೋ ಭಟ್ಟ, ನಾನು ಅವನ ಹತ್ತಿರ ಮಾತನಾಡಿದರೆ ಕೈ ಹಿಡಿದುಕೊಂಡು ಓಡಲು ನೋಡ್ತಿಯಾ, ನೀನು ಈಗ ಇವನಿಗೆ ಅಪ್ಪನಾ, ಇವನ ತಾಯಿಯೊಂದಿಗೆ ನಿನಗೆ ಏನೋ ಸಂಬಂಧ ಎಂದು ಕೇಳಿದ್ದಾನೆ. ಅದಕ್ಕೆ ನಿರಂಜನ ಭಟ್ಟ ” ಅದೆಲ್ಲ ವಿಷಯ ಈಗ ಯಾಕೆ, ನಮ್ಮನ್ನು ಸುಮ್ಮನೆ ಬಿಡಿ” ಎಂದಿದ್ದಾನೆ. ಅದಕ್ಕೆ ಬಜಿಲ್ ಕೇರಿ ಧನರಾಜ್ ” ಇಲ್ಲ ಬಿಡಲ್ಲ, ಇವನ ತಾಯಿಯೊಂದಿಗೆ ನಿನಗೆ ಏನು ಸಂಬಂಧ ಇತ್ತು, ಈಗಲೇ ಹೇಳು, ಒಬ್ಬ ಭಟ್ಟನಾಗಿ ಬೇರೆಯವರ ಹೆಂಡತಿಯೊಂದಿಗೆ ಗಮ್ಮತ್ ಮಾಡಲು ನಾಚಿಕೆಯಾಗಲ್ವಾ, ಅವಳು ನಿನಗೆ ಮನೆ, ಕಾರು ಕೊಡಿಸಿದ್ದಾಳಂತೆ, ಅಲ್ಲಿಯೇ ಸೆಟಪ್ ಮಾಡಿಕೊಳ್ಳುತ್ತಿದ್ದದಾ? ಚಾನ್ಸ್ ಮಾರಾಯ ನಿಂದು, ಮನೆ, ಕಾರು, ಹಣ, ಮಲಗಲಿಕ್ಕೆ ಆಂಟಿ” ಎಂದು ಮತ್ತಷ್ಟು ಕಿಚಾಯಿಸಿದ್ದಾನೆ. ತನ್ನ ಎದುರೇ ತಾಯಿಯ ಬಗ್ಗೆ ಅಸಹ್ಯವಾಗಿ ಮಾತನಾಡಿದ್ದಕ್ಕೆ ನವನೀತ್ ಶೆಟ್ಟಿಗೆ ಮೈಯೆಲ್ಲಾ ಉರಿದಿದೆ. ಅವನು ಧನರಾಜ್ ನನ್ನು ಗುರಾಯಿಸಿದ್ದಾನೆ. ಬೇರೆ ಕಡೆಯಾದರೆ ಧನರಾಜ್ ನಿಗೆ ಸರಿಯಾಗಿ ಬಾರಿಸುತ್ತಿದ್ದನೋ ಏನೋ. ಆದರೆ ಅದು ಜೈಲು. ಇಲ್ಲಿ ತಮಗಿಂತ ಅವನಿಗೆ ಹೆಚ್ಚು ಬೆಂಬಲ ಇರುವುದು ಗೊತ್ತಿರುವುದರಿಂದ ಮೌನವಾಗಿದ್ದಾನೆ.
ಅವರಿಬ್ಬರು ಮೌನವಾಗಿ ತನ್ನ ಮಾತುಗಳನ್ನು ಕೇಳುತ್ತಿದ್ದದ್ದು ನೋಡಿ ಧನರಾಜ್ ಗೆ ಇನ್ನಷ್ಟು ಉತ್ತೇಜನ ಸಿಕ್ಕಿದೆ. ಏನೋ ಗುರಾಯಿಸುತ್ತಿದ್ದಿಯಾ, ಹೊಡಿತ್ತಿಯಾ, ಬಾ ಹೊಡಿ ಎಂದು ಧನರಾಜ್ ನವನೀತನಿಗೆ ಮೊದಲು ಹೊಡೆದಿದ್ದಾನೆ. ಅದನ್ನು ತಡೆಯಲು ಬಂದ ನಿರಂಜನ್ ಗೂ ಹೋ ಬಂದಾ ನೋಡಿ ಇವನ ತಂದೆ ಎಂದು ಇವನಿಗೂ ನಾಲ್ಕು ಬಾರಿಸಿದ್ದಾನೆ. ಅಲ್ಲಿಗೆ ನಿರಂಜನ್ ಮೂಗಿನಿಂದ ರಕ್ತ ಬಂದಿದೆ. ನಂತರ ಜೈಲು ಸಿಬ್ಬಂದಿಗಳು ಇಬ್ಬರನ್ನು ವೆನ್ ಲಾಕ್ ಆಸ್ಪತ್ರೆಗೆ ಹೊರರೋಗಿಯಾಗಿ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಜೈಲಿನಲ್ಲಿ ನವನೀತ್ ಶೆಟ್ಟಿ, ನಿರಂಜನ್ ಭಟ್ಟನಿಂದ ಯಾರೋ ಹಫ್ತಾ ಕೇಳಿದರಂತೆ, ಕೊಡದೇ ಇದ್ದದ್ದಕ್ಕೆ ಹೊಡೆದರಂತೆ ಎಂದು ಸುದ್ದಿಯಾಗಿದೆ. ಆದರೆ ಜೈಲಿನ ಒಳಗಿನ ಮಾಹಿತಿಯಂತೆ ಧನರಾಜ್ ಹಣ ಏನೂ ಕೇಳಿಲ್ಲ ಎಂದು ಹೇಳಲಾಗುತ್ತಿದೆ. ಅದೇನೆ ಇದ್ದರೂ ಇವರಿಬ್ಬರ ಲೈಫ್ ಸ್ಟೈಲ್ ಜೈಲಿನ ಒಳಗಿರುವ ಕಣ್ಣು ಕುಕ್ಕಿದೆ. ಅದು ಈ ಹೊಡೆದಾಟಕ್ಕೆ ಕಾರಣವಾಗಿರಬಹುದು. ಸದ್ಯ ರಾಜೇಶ್ವರಿ, ನಿರಂಜನ ಭಟ್ಟ, ನವನೀತ್ ಶೆಟ್ಟಿಯನ್ನು ಮಂಗಳೂರಿನಿಂದ ಶಿವಮೊಗ್ಗ ಜೈಲಿಗೆ ಸ್ಥಳಾಂತರಿಸಲಾಗಿದೆ!
Leave A Reply