ನರೇಂದ್ರ ಮೋದಿ ಏನು ಅಭಿವೃದ್ಧಿ ಮಾಡಿದ್ದಾರೆ ಎನ್ನುವವರು ಇದಕ್ಕೇನೆನ್ನುತ್ತಾರೆ?
ಎಡಪಂಥೀಯರು, ಎಡಬಿಡಂಗಿಗಳು, ಢೋಂಗಿ ಬುದ್ಧಿಜೀವಿಗಳು, ಕಾಂಗ್ರೆಸ್ ಕೃಪಾಪೋಷಿತರು, ಕಾಂಗ್ರೆಸ್ಸಿಗರು, ಎಡಪಕ್ಷಗಳು, ಕಮ್ಯುನಿಸ್ಟರು, ಸಾಮಾಜಿಕ ಜಾಲತಾಣಗಳ ಪುಡಿ ಬರಹಗಾರರು, ನರೇಂದ್ರ ಮೋದಿಯವರನ್ನು ಕಂಡರೆ ಆಗದವರು…
ಹೀಗೆ, ಇವರೆಲ್ಲರೆಂದರೆ ಎಲ್ಲರದ್ದೂ ಒಂದೇ ಬೊಬ್ಬೆ…
ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಏನು ಅಭಿವೃದ್ಧಿ ಮಾಡಿದ್ದಾರೆ?
ಸೋಮವಾರವಷ್ಟೇ, ಪ್ರಧಾನಿ ಮೋದಿ ಅವರು 16,320 ಕೋಟಿ ರು.ವೆಚ್ಚದ ಸೌಭಾಗ್ಯ ಯೋಜನೆಗೆ ಚಾಲನೆ ನೀಡಿದ್ದಾರೆ. ಆ ಮೂಲಕ ಪ್ರತಿಯೊಂದು ಮನೆಗೆ ಬೆಳಕು ತರುವ ಭರವಸೆ ಮೂಡಿಸಿದ್ದಾರೆ. ಅಲ್ಲದೆ ದಶಕಗಳವರೆಗೆ ದೇಶವನ್ನಾಳಿದ್ದ ಕಾಂಗ್ರೆಸ್ ದೇಶದಲ್ಲ ಎಲ್ಲ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರಲಿಲ್ಲ. ಆದರೆ ಮೋದಿ ಬಂದ ಮೇಲೆ ಇದುವರೆಗೆ 18 ಸಾವಿರ ಗ್ರಾಮಗಳು ವಿದ್ಯುತ್ ಕಂಡಿವೆ. ಇನ್ನೂ ಮೂರೇ ಸಾವಿರ ಗ್ರಾಮಗಳು ಕತ್ತಲಿನಲ್ಲಿದ್ದು, ಅವುಗಳಿಗೆ ವಿದ್ಯುತ್ ಸಂಪರ್ಕ ನೀಡಿದರೆ, ಭಾರತ ಕತ್ತಲುಮುಕ್ತ ರಾಷ್ಟ್ರವಾಗುತ್ತದೆ. ಇದು ಅಭಿವೃದ್ಧಿಯ ಸಂಕೇತ ಅಲ್ಲವೇ?
ಇನ್ನು, ಮೋದಿ ಬರುವುದಕ್ಕಿಂತ ಮೊದಲು ದೇಶದ ರೈಲು ನಿಲ್ದಾಣ, ರೈಲ್ವೆಗಳಿಗೂ, ಶೌಚಾಲಯಕ್ಕೂ ಯಾವುದೇ ವ್ಯತ್ಯಾಸ ಇರುತ್ತಿರಲಿಲ್ಲ. ಇದನ್ನು ಮನಗಂಡ ಮೋದಿ ರೈಲು ನಿಲ್ದಾಣಗಳ ಪುನರುಜ್ಜೀವನಕ್ಕೆ ಮುಂದಾದರು. ನವೀಕರಣ ಮಾಡಲು ಅಣಿಯಾದರು. ಅದಕ್ಕಾಗಿ ಬಜೆಟ್ಟಿನಲ್ಲಿ ಸಾವಿರಾರು ಕೋಟಿ ರು. ಹಣ ಮೀಸಲಿಟ್ಟರು. ಕಳೆದ ಹತ್ತು ದಿನಗಳ ಹಿಂದಷ್ಟೇ ಬುಲೆಟ್ ಟ್ರೇನಿಗೆ ಜಪಾನ್ ಪ್ರಧಾನಿ ಶಿಂಝೋ ಅಬೆ ಬಂದು ಚಾಲನೆ ನೀಡಿ ಹೋಗಲಿಲ್ಲವೇ? ಇದನ್ನು ಅಭಿವೃದ್ಧಿ ಎನ್ನುವುದಿಲ್ಲವಾ?
ಇನ್ನು ಮೋದಿ ಬಂಡವಾಳ ಶಾಹಿಗಳ ಪರ, ಉದ್ಯಮಿಗಳ ಪರ, ಬಡವರಿಗಾಗಿ ಏನು ಮಾಡಿದ್ದಾರೆ ಎಂದು ಬೊಬ್ಬೆ ಹಾಕುತ್ತಾರೆ. ಆದರೆ, ಜನಧನ ಯೋಜನೆ ಮೂಲಕ 29 ಕೋಟಿ ಜನ ಬ್ಯಾಂಕ್ ಖಾತೆ ಮಾಡಿಸಿಕೊಂಡಿದ್ದಾರೆ. ಯೋಜನೆಯ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಬಂದು ಜಮೆ ಆಗುತ್ತದೆ. ಪಂಚಾಯಿತಿ ಅಧಿಕಾರಿಗಳ ಎದುರೋ, ಬ್ಯಾಂಕ್ ಮ್ಯಾನೇಜರ್ ಎದುರೋ ಕೈಕಟ್ಟಿ ನಿಲ್ಲುವ ರೈತರ ಪಾಡು ತಪ್ಪಿತಲ್ಲವೇ? ಇದು ಮುನ್ನಡೆ ಅಲ್ಲವೇ?
ಇನ್ನು ಗ್ರಾಮಗಳ ಮಹಿಳೆಯರ ಪರಿಸ್ಥಿತಿ ಹೇಗಿತ್ತು? ಕಟ್ಟಿಗೆ ಒಲೆಯಲ್ಲಿ ತುರುಕಿದರೆ, ಊದುವ ಹಾಗೂ ಕೆಮ್ಮಿನ ಶಬ್ದವೇ ಕೇಳುತ್ತಿತ್ತು. ಅಮ್ಮ ಅಡುಗೆ ಮಾಡುವಷ್ಟರಲ್ಲಿ ಬಸವಳಿಯುತ್ತಿದ್ದಳು. ಇದನ್ನು ಮನಗಂಡ ಪ್ರಧಾನಿ ಅವರು, ದೇಶದ 2.8 ಕೋಟಿ ಮನೆಗಳಿಗೆ ಎಲ್ ಪಿಜಿ ಅಡುಗೆ ಅನಿಲ ಸಿಲಿಂಡರ್ ಸಂಪರ್ಕ ಕಲ್ಪಿಸಿದ್ದಾರೆ. ಆ ಮೂಲಕ ಇಷ್ಟು ಕೋಟಿ ಮಹಿಳೆಯರ ಕಷ್ಟ ನೀಗಿಸಿದ್ದಾರೆ. ಆರೋಗ್ಯ ಕಾಪಾಡಿಕೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ. ನಿಮ್ಮ ಕಡೆ ಇದನ್ನು ಅಭಿವೃದ್ಧಿ ಅನ್ನುವುದಿಲ್ಲವಾ?
ರೈತನ ಪಾಡು ಏನಾಗಿತ್ತು? ಒಂದೋ ಬರದಿಂದ ಬೆಳೆ ಒಣಗಿ ಬದುಕು ಸಹ ಒಣಗುತ್ತಿತ್ತು. ಇಲ್ಲವೇ, ಅತಿವೃಷ್ಟಿಯಿಂದ ಬೆಳೆಯಲ್ಲ ನೀರುಪಾಲಾಗುತ್ತಿತ್ತು. ಈಗಲೂ ಆಗುತ್ತಿದೆ. ಇದನ್ನು ಪರಿಗಣನೆಗೆ ತೆಗೆದುಕೊಂಡ ಮೋದಿ, ಫಸಲ್ ಬಿಮಾ ಯೋಜನೆ ಜಾರಿಗೆ ತಂದರು. ಬೆಳೆಗೂ ವಿಮೆ ಮಾಡಿಸಬಹುದು, ನಷ್ಟವಾದರೆ ಸರಕಾರದಿಂದ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ಪ್ರಧಾನಿ ತೋರಿಸಿಕೊಟ್ಟರು. ಕೃಷಿ ಸಿಂಚಾಯಿ ಯೋಜನೆ ಜಾರಿಗೆ ತಂದು ನೀರಾವರಿ ಸೌಲಭ್ಯ ಕಲ್ಪಿಸಲು ಮುಂದಾಗಿರುವುದು ಏಳಿಗೆ ಸಂಕೇತವಲ್ಲವೇ? ರೈತ ದೇಶದ ಬೆನ್ನೆಲುಬು ಎನ್ನುತ್ತೇವೆ, ಆ ಬೆನ್ನೆಲುಬನ್ನೇ ಈ ಯೋಜನೆಗಳನ್ನು ಗಟ್ಟಿಗೊಳಿಸುವುದಿಲ್ಲವೇ?
ಇದರ ಜತೆಗೆ, ಮುದ್ರಾ ಬ್ಯಾಂಕ್ ಯೋಜನೆ ಜಾರಿ ಮೂಲಕ, 7.64 ಕೋಟಿ ರೈತರಿಗೆ ಸಾಲ ನೀಡಲಾಗಿದೆ. 300 ರೂ.ವರೆಗೆ ಜೀವನಪರ್ಯಂತ ರೈತರಿಗೆ ಪಿಂಚಣಿ ನೀಡಲಾಗುತ್ತಿದೆ. ಇದೆಲ್ಲ ಅಭಿವೃದ್ಧಿಯಲ್ಲವೇ ಮೋದಿ ವಿರೋಧಿಗಳೇ?
ಇನ್ನು ನೋಟು ನಿಷೇಧದಿಂದ ಜಿಡಿಪಿ ದರ ಕುಸಿಯಿತು ಎಂದು ಘೀಳಿಡುತ್ತಾರೆ. ಆದರೆ ಇದೇ ನಿರ್ಧಾರದ ಬಳಿಕ 5.4 ಲಕ್ಷ ಜನ ನೂತನ ತೆರಿಗೆದಾರರು ನೋಂದಣಿ ಮಾಡಿಕೊಂಡಿದ್ದಾರೆ. 2.1 ಲಕ್ಷ ನಕಲಿ ಕಂಪನಿಗಳ ನೋಂದಣಿ ರದ್ದುಗೊಳಿಸಾಗಿದೆ. ಕಾಳಧನಿಕರು ನೀರಿನಿಂದ ಹೊರಬಂದ ಮೀನಿನಂತಾಗಿದ್ದಾರೆ. ಇನ್ನು, 2014ರಲ್ಲಿ ಐದರ ಆಸುಪಾಸಿನಲ್ಲಿದ್ದ ಜಿಡಿಪಿ ದರ ಏಳಂಕಿ ದಾಟಿದ್ದೇ ಮೋದಿ ಪ್ರಧಾನಿಯಾದ ಬಳಿಕ ಎಂಬುದು ನೆನಪಿರಲಿ. 9.3ರಷ್ಟಿದ್ದ ಹಣದುಬ್ಬರ 4.5ಕ್ಕೆ ಬಂದಿದ್ದು, ದಿನಬಳಕೆ ವಸ್ತುಗಳ ಬೆಲೆ ಕಡಿಮೆಯಾಗಿದ್ದು ಇದೇ ಮೋದಿ ಅವಧಿಯಲ್ಲಿ. ಇದನ್ನು ಸಹ ಅಭಿವೃದ್ಧಿ ಎನ್ನದಿದ್ದರೆ, ನಿಮ್ಮಲ್ಲೇ ಏನೋ ಸಮಸ್ಯೆ ಇದೆ ಎಂದರ್ಥ.
ಇನ್ನು ಪ್ರಧಾನಿಯವರು ಜಾರಿಗೆ ತಂದ ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ ಸೇರಿ ಅಸಂಖ್ಯ ಯೋಜನೆಗಳು, ನದಿ ಸ್ವಚ್ಛಗೊಳಿಸುವ ಕೈಂಕರ್ಯ, ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ), ವಿದೇಶಗಳು ಮೋದಿ ಅವರಿಗೆ ಮಣೆ ಹಾಕಿದ್ದು, ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಅಪಾರ ಪ್ರಮಾಣದ ಏರಿಕೆಯಾಗಿದ್ದು, ಭಾರತದ ಘನತೆ ಹೆಚ್ಚುತ್ತಿರುವುದು, ನಿರ್ದಿಷ್ಟ ದಾಳಿ ಮೂಲಕ ಪಾಕಿಸ್ತಾನದ ಬಾಲ ಕತ್ತರಿಸಿದ್ದು ಎಲ್ಲವೂ 56 ಇಂಚಿನ ಎದೆಯೊಳಗಿನ ಗುಂಡಿಗೆಯಿಂದಲೇ ಸಾಧ್ಯವಾಗಿದ್ದು.
ಇನ್ನಾದರೂ ಮೋದಿ ಏನು ಮಾಡಿದರು ಎಂದು ಪೆಕರರಂತೆ ಪ್ರಶ್ನೆ ಕೇಳುವುದು ಬಿಡಿ. ಕೇಳುವ ಮೊದಲು ಇದನ್ನೆಲ್ಲ ನೆನಪಿಸಿಕೊಳ್ಳಿ.
-ರವಿಶಂಕರ್ ಬೆಳ್ತಂಗಡಿ
Leave A Reply