ಶಾಬಾಜ್ ಖಾನ್ ನಂತವರು ಮಾನವ ಕಳ್ಳಸಾಗಾಣಿಕೆ ಮಾಡುತ್ತಲೇ ಇರುತ್ತಾರೆ, ಪೊಲೀಸರು ಬಂಧಿಸಿಲ್ಲ!
ದೇಶಕ್ಕೆ ಹೋಗಿ ದುಡಿದು ಹೆಚ್ಚು ಹಣವನ್ನು ಸಂಪಾದಿಸುವ ಆಸೆ ಏನೂ ತಪ್ಪಲ್ಲ. ಆದರೆ ನೀವು ಯಾವ ದೇಶಕ್ಕೆ ಹೋಗುತ್ತೀರಿ ಮತ್ತು ಯಾರ ಮೂಲಕ ಹೋಗುತ್ತೀರಿ ಎನ್ನುವುದು ಕೂಡ ಮುಖ್ಯ. ಇಲ್ಲದೇ ಹೋದರೆ ಹಣ ಮಾಡಬೇಕು ಎನ್ನುವ ಆಸೆ ಹೆಣವಾಗಿ ಬದಲಾಗಬಹುದು. ಅದೃಷ್ಟ ಚೆನ್ನಾಗಿದ್ದ ಕಾರಣ ಜೆಸಿಂತಾ ತನ್ನ ತಾಯ್ನಾಡಿಗೆ ಸುರಕ್ಷಿತವಾಗಿ ಹಿಂತಿರುಗಿದ್ದಾರೆ. ಇಲ್ಲದೆ ಹೋದಲ್ಲಿ ಆಕೆ ಅನುಭವಿಸಿದ ಚಿತ್ರಹಿಂಸೆ ಅಲ್ಲಿಯೇ ಅವಳ ಪ್ರಾಣಕ್ಕೆ ಕುತ್ತು ತರುವ ಸಾಧ್ಯತೆ ಇತ್ತು.
ಜೆಸಿಂತಾ ತನ್ನ ಪತಿಯನ್ನು ಕಳೆದುಕೊಂಡ ನಂತರ ತನ್ನ ಇಬ್ಬರು ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ದುಡಿಯಲು ಹೊರಟಾಗ ತನ್ನ ಚಿಕ್ಕ ಊರಾದ ಕಾರ್ಕಳದ ಮುದರಂಗಡಿಯಲ್ಲಿ ಅವರಿಗೆ ಸಿಗುವ ಸಂಬಳದ ಅರಿವಿತ್ತು. ಹೆಚ್ಚು ದುಡಿಯಬೇಕಾದರೆ ತಾನು ವಿದೇಶಕ್ಕೆ ಹೋಗಬೇಕಾಗಬಹುದು ಎನ್ನುವುದು ಕೂಡ ಆಕೆಗೆ ಗೊತ್ತಿತ್ತು. ಆಗ ಜೆಸಿಂತಾ ಸಂಪರ್ಕಕ್ಕೆ ಬಂದ ಮನುಷ್ಯ ಜೇಮ್ಸ್ ಡಿಮೇಲ್ಲೋ. ಹೇಗೂ ಒಂದೇ ಜಾತಿ, ಧರ್ಮ. ಜೆಸಿಂತಾ ಜೇಮ್ಸ್ ಹೇಳಿದಂತೆ ಕೇಳಿ ದೆಹಲಿ, ಗೋವಾ, ಬೆಂಗಳೂರು ಹೋಗಿ ಕೊನೆಗೆ ಲ್ಯಾಂಡ್ ಆದದ್ದು ಸೌದಿ ಅರೇಬಿಯಾದಲ್ಲಿ. ಕತಾರ್ ನಲ್ಲಿ ಕೆಲಸ ಕೊಡಿಸುತ್ತೇನೆ ಎಂದು ಹೇಳಿದ್ದ ಜೇಮ್ಸ್ ಆಕೆಗೆ ಕೆಲಸ ಕೊಡಿಸಿದ್ದು ಸೌದಿಯಲ್ಲಿ. ಅಷ್ಟಕ್ಕೂ ಜೇಮ್ಸ್ ಕೇವಲ ಒಬ್ಬ ಸಬ್ ಏಜೆಂಟ್. ಆತನಿಗೂ ಸೌದಿಯಲ್ಲಿ ಜೆಸಿಂತಾ ಕೆಲಸಕ್ಕೆ ನಿಂತ ಅರಬ್ಬಿ ಅಬ್ದುಲ್ಲಾನಿಗೂ ನೇರ ಸಂಪರ್ಕ ಇಲ್ಲ. ಯಾಕೆಂದರೆ ಶಾಬಾಜ್ ಖಾನ್, ಅಮೀರ್ ಭಾಯ್ ಎನ್ನುವ ಇಬ್ಬರು ಸ್ಮಗ್ಲರ್ಸ್ ಗಳು ಭಾರತೀಯರನ್ನು ಇಲ್ಲಿಂದ ವಿದೇಶದಲ್ಲಿ ಕೆಲಸ ಕೊಡಿಸುವ ಆಮಿಷ ಒಡ್ಡಿ ಕರೆದುಕೊಂಡು ಹೋಗುತ್ತಾರೆ. ಶಾಬಾಜ್ ಖಾನ್ ಈ ಮಾನವ ಕಳ್ಳಸಾಗಾಣಿಕೆಯ ದೊಡ್ಡ ಕಿಂಗ್ ಪಿನ್. ಅವನು ಮುಂಬೈಯಲ್ಲಿ ಕುಳಿತುಕೊಂಡೇ ಗಲ್ಫ್ ರಾಷ್ಟ್ರಗಳಲ್ಲಿರುವ ಅರಬ್ಬಿಗಳ ಜೊತೆ ಸಂಪರ್ಕ ಇಟ್ಟುಕೊಂಡಿರುತ್ತಾನೆ. ಅಲ್ಲಿ ಯಾರ್ಯಾರಿಗೆ ಹೆಣ್ಣುಮಕ್ಕಳು ಬೇಕು ಎಂದು ಇವನಿಗೆ ತನ್ನ ನೆಟ್ ವರ್ಕಗಳಿಂದ ತಿಳಿಯುತ್ತದೆ. ಇವನು ಜೇಮ್ಸ್ ನಂತಹ ಸಬ್ ಏಜೆಂಟ್ ಮೂಲಕ ಈ ಗ್ರಾಮೀಣ ಭಾಗದಲ್ಲಿ ಕೆಲಸ ಹುಡುಕುತ್ತಿರುವ ಮಹಿಳೆಯರಿಗೆ ಗಾಳ ಹಾಕುತ್ತಾನೆ. ಅವರಿಗೆ ಒಳ್ಳೆಯ ಸಂಬಳ ಕೆಲಸ ದೊರಕಿಸುವ ಭರವಸೆ ಕೊಡಲಾಗುತ್ತದೆ. ಅದರ ನಂತರ ಅವರ ಫೋಟೋ ತೆಗೆದುಕೊಂಡು ಸುಳ್ಳು ವೀಸಾ ಮಾಡಿ ಭಾರತದ ಯಾವುದಾದರೂ ವಿಮಾನ ನಿಲ್ದಾಣದಿಂದ ವಿದೇಶಕ್ಕೆ ಕರೆದುಕೊಂಡು ಹೋಗಲಾಗುತ್ತದೆ. ಇವರಿಗೆ ಪ್ರಾರಂಭದಲ್ಲಿ ಯಾವ ದೇಶದಲ್ಲಿ ಕೆಲಸ ಕೊಡುತ್ತೇವೆ ಎಂದು ಭರವಸೆ ಕೊಟ್ಟಿದ್ದರೋ ಆ ದೇಶದಲ್ಲಿ ಕೆಲಸ ಸಿಗುತ್ತೆ ಎನ್ನುವ ಗ್ಯಾರಂಟಿ ಇರುವುದಿಲ್ಲ. ಹಾಗೆ ಜೆಸಿಂತಾ ಸೌದಿ ಅರೇಬಿಯಾದಲ್ಲಿ ಇಳಿದಾಗ ಅವಳಿಗೆ ಕೆಲಸ ಸಿಕ್ಕಿದ್ದು ಮೂರು ಜನ ಹೆಂಡ್ತಿಯರು, 29 ಮಕ್ಕಳನ್ನು ಹೊಂದಿರುವ ಸೌದಿಯ ಶ್ರೀಮಂತ ಸರಕಾರಿ ಉದ್ಯೋಗಿ ಅಬ್ದುಲ್ಲಾ ಮನೆಯಲ್ಲಿ.
ಬೆಳಿಗ್ಗೆ 6 ಗಂಟೆಯಿಂದ 11 ಗಂಟೆಯ ತನಕ ದುಡಿದರೂ ಮುಗಿಯದ ಕೆಲಸ. ಸರಿಯಾಗಿ ಊಟ, ತಿಂಡಿ ಕೊಡುತ್ತಿರಲಿಲ್ಲ. ಅಬ್ದುಲ್ಲನ ಮಕ್ಕಳು ತಿಂದು ತಟ್ಟೆಯಲ್ಲಿ ಬಿಟ್ಟ ಆಹಾರವನ್ನು ತಿನ್ನಬೇಕಿತ್ತು. ಅದು ಬೇಡಾ ಎಂದರೆ ಬಿಸ್ಕಿಟ್ ಮತ್ತು ನೀರೇ ಗತಿ. ಜೆಸಿಂತಾ ಎಂಜಿಲು ತಿನ್ನಲು ಮನಸ್ಸು ಒಪ್ಪದೆ ಎಷ್ಟೋ ಸಲ ಖಾಲಿ ಹೊಟ್ಟೆಯಲ್ಲಿ ಮಲಗುತ್ತಿದ್ದಳು. ಇದರಿಂದ ಆರೋಗ್ಯ ಹಾಳಾಗುತ್ತಾ ಬಂದಿತ್ತು. ಟಿಬಿ ಕಾಯಿಲೆ ಶುರುವಾಗಿತ್ತು. ಕೊನೆಗೆ ಒಂದು ದಿನ ಆ ಮನೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುವಾಗ ರಾಯಭಾರಿ ಕಚೇರಿ ಎಂದು ದಾರಿ ತಪ್ಪಿ ಪೊಲೀಸ್ ಸ್ಟೇಶನ್ ತಲುಪಿ ಮತ್ತೆ ಅದೇ ನರಕಕ್ಕೆ ವಾಪಾಸಾಗಿದ್ದಳು. ಅದರಿಂದ ಕೋಪಗೊಂಡ ಅಬ್ದಲ್ಲಾಳ ಮನೆಯವರು ಇವಳ ಮುಖ ಮೂತಿ ನೋಡದೆ ಹೊಡೆದ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದಳು. ಕೊನೆಗೆ ಅಲ್ಲಿ ಒಬ್ಬ ನರ್ಸ್ ಸಹಾಯದಿಂದ ಮುದರಂಗಡಿಯಲ್ಲಿರುವ ಮಗಳನ್ನು ಸಂಪರ್ಕಿಸಿ ತನ್ನ ಪಾಡು ಹೇಳಿ ಆದಷ್ಟು ಬೇಗ ಭಾರತಕ್ಕೆ ಮರಳಲು ಪ್ರಯತ್ನ ಮಾಡಲು ಕೇಳಿಕೊಂಡಿದ್ದರು.
ಬಳಿಕ ಮಗಳು ಉಡುಪಿಯ ಮಾನವ ಹಕ್ಕು ಹೋರಾಟಗಾರ ರವೀಂದ್ರನಾಥ ಶಾನುಭೋಗ್ ಅವರನ್ನು ಸಂಪರ್ಕಿಸಿ ಸಹಾಯ ಕೇಳಿದ ನಂತರ ಅವರು ತಮ್ಮ ಸೌದಿ ಅರೇಬಿಯಾದ ಗೆಳೆಯರನ್ನು ಸಂಪರ್ಕಿಸಿ ಕೊನೆಗೂ ಸುಮಾರು ಐದು ಲಕ್ಷ ರೂಪಾಯಿ ವ್ಯಯಿಸಿ ಜೆಸಿಂತಾ ಅವರನ್ನು ಭಾರತಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಆಶ್ಚರ್ಯ ಎಂದರೆ ಜೆಸಿಂತಾಳನ್ನು ಕಳುಹಿಸಿದ್ದು ಟೂರಿಸ್ಟ್ ವೀಸಾದ ಮೇಲೆ. 90 ದಿನಗಳ ವೀಸಾ 2016 ಜೂನ್ ನಲ್ಲಿ ಜೆಸಿಂತಾ ಅಲ್ಲಿಗೆ ಹೋದ ಮೂರು ತಿಂಗಳೊಳಗೆ ಮುಗಿದಿತ್ತು. ಏನೋ ಅದೃಷ್ಟ ಆಕೆಯನ್ನು ಅಲ್ಲಿನ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿರಲಿಲ್ಲ. ಆದರೆ ಅಬ್ದುಲ್ಲಾ ತಾನು ಶಾಬಾಜ್ ಖಾನ್ ನೊಂದಿಗೆ ಎರಡು ವರ್ಷಕ್ಕೆ ಅಗ್ರಿಮೆಂಟ್ ಮಾಡಿರುವುದಾಗಿ ಅದಕ್ಕೆ ಐದು ಲಕ್ಷ ಪಾವತಿಸಿರುವುದಾಗಿ ಹೇಳಿದ್ದ. ಅದು ಕೊಟ್ಟರೆ ಮಾತ್ರ ಜೆಸಿಂತಾಳನ್ನು ಕಳುಹಿಸಿಕೊಡುವುದಾಗಿ ಹಟ ಹಿಡಿದಿದ್ದ. ಕೊನೆಗೂ ಎಲ್ಲ ಕಾನೂನು ಪ್ರಕ್ರಿಯೆ ಮುಗಿದ ನಂತರ ಶಾಬಾಜ್ ಖಾನ್ ನ ಅಕ್ರಮ ಕೃತ್ಯದಿಂದ ಸೌದಿ ಸೇರಿದ್ದ ಜೆಸಿಂತಾ, ರವೀಂದ್ರನಾಥ ಶಾನುಭೋಗ್, ವಕೀಲೆ ವಿಜಯಲಕ್ಷ್ಮಿ ಹಾಗೂ ಇನ್ನಿತರ ಸಹೃದಯಿಗಳ ನೆರವಿನಿಂದ ಭಾರತಕ್ಕೆ ಮರಳಿದ್ದಾಳೆ. ತಿಂಗಳಿಗೆ 25 ಸಾವಿರ ಸಂಬಳ ಕೊಡಿಸುವುದಾಗಿ ಹೇಳಿದ್ದ ಶಾಬಾಜ್ ಖಾನ್ ಕೊನೆಗೆ ಕೊಟ್ಟಿದ್ದು ತಿಂಗಳಿಗೆ 17 ಸಾವಿರ ಮಾತ್ರ. ಅವನು ತೆಗೆದುಕೊಂಡ 5 ಲಕ್ಷದಲ್ಲಿ ಜೆಸಿಂತಾಳಿಗೆ ಚಿಕ್ಕಾಸು ಕೂಡ ಸಿಕ್ಕಿಲ್ಲ.
ಈಗ ವಿಷಯ ಉಳಿದಿರುವುದು ನಮ್ಮ ದೇಶದಲ್ಲಿ ಒಂದಿಷ್ಟು ಕಡಿಮೆ ಸಂಬಳವಾದರೂ ಪರವಾಗಿಲ್ಲ, ವಿದೇಶದಲ್ಲಿ ಗೊತ್ತು ಗುರಿಯಿಲ್ಲದ ಕಡೆ ಕೆಲಸ ಮಾಡಲು ಹೊರಟಾಗ ಮೋಸ, ಅನ್ಯಾಯ ಕೊನೆಗೆ ಪ್ರಾಣಕ್ಕೆ ಕುತ್ತು ಬರುವುದು ಕೂಡ ಇದೆ. ಆದ್ದರಿಂದ ವಿದೇಶದಲ್ಲಿ ಉದ್ಯೋಗಕ್ಕೆ ಹೊರಡುವ ಮೊದಲು ಒಂದು ಸಲ ತಮ್ಮನ್ನು ಕರೆದುಕೊಂಡು ಹೋಗುವ ಏಜೆಂಟ್ ನ ಮೇಲೆ ವಿಶ್ವಾಸ ಇಡಬಹುದಾ ಎನ್ನುವುದನ್ನು ಸರಿಯಾಗಿ ಪರಿಶೀಲಿಸಬೇಕು. ಇಲ್ಲದೆ ಹೋದರೆ ರಿಸ್ಕ್ ಕಟ್ಟಿಟ್ಟ ಬುತ್ತಿ. ಇಷ್ಟಾದರೂ ಶಾಬಾಜ್ ಖಾನ್ ಮತ್ತು ಆತನ ಸಂಗಡಿಗರನ್ನು ಪೊಲೀಸರು ಬಂಧಿಸಿಲ್ಲ ಎನ್ನುವುದು ನಮ್ಮ ಪೊಲೀಸ್ ಇಲಾಖೆಯ ಕಾರ್ಯತತ್ಪರತೆಯನ್ನು ತೋರಿಸುತ್ತದೆ!
Leave A Reply