ಅನಧಿಕೃತ ಗೂಡಂಗಡಿಗಳಿಗೆ ಮತ್ತೆ ಕೈ ಹಾಕಿ, ಮೊದಲಿಗೆ “ಮೋರ್”ಗೆ ಹೋಗಿ!
ಅಕ್ಟೋಬರ್ 1 ರಿಂದ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಅನಧಿಕೃತ ಗೂಡಂಗಡಿಗಳನ್ನು ತೆರವುಗೊಳಿಸಲು ಮೇಯರ್ ಅವರು ಕಂದಾಯ ಮತ್ತು ಆರೋಗ್ಯ ವಿಭಾಗಕ್ಕೆ ಸೂಚನೆ ಕೊಟ್ಟಿದ್ದಾರೆ. ಇದು ತಪ್ಪಲ್ಲ. ಅನಧಿಕೃತ ಎನ್ನುವುದನ್ನು ಯಾವಾಗಲೂ ತೆಗೆಯಲೇಬೇಕು. ಆದರೆ ಅನಧಿಕೃತ ಶಬ್ದದೊಂದಿಗೆ ಗೂಡಂಗಡಿ ಇದ್ರೆ ಮಾತ್ರ ಪಾಲಿಕೆಯ ಸದಸ್ಯರು ಧ್ವನಿ ಎತ್ತುತ್ತಾರೆ. ಅದೇ ಅನಧಿಕೃತ ಶಬ್ದದೊಂದಿಗೆ ಯಾವುದಾದರೂ ಕಾಂಪ್ಲೆಕ್, ಫ್ಲಾಟ್, ಮಾಲ್, ಕಟ್ಟಡ ಇದ್ರೆ ಈ ಸದಸ್ಯರ ಬಾಯಿಯಲ್ಲಿ ಪರಿಷತ್ ಸಭೆಯಲ್ಲಿ ಕೊಟ್ಟ ಅಂಬಡೆ ಸಿಕ್ಕಿ ಹಾಕಿಕೊಳ್ಳುತ್ತದೆ. ಇವರಿಗೆ ಎದ್ದು ನಿಂತು ಅನಧಿಕೃತ ಕ….. ಎಂದು ಹೇಳುವಷ್ಟರಲ್ಲಿ ಆ ಕಟ್ಟಡದ ಮಾಲೀಕನ ಮುಖ ಎದುರಿಗೆ ಬರುತ್ತದೆ. ಆಗ ಕ…. ಎಂದು ಪ್ರಾರಂಭಿಸಿದವರು ಕಾ, ಕಾ ಎಂದು ಹೇಳಿ ಕುಳಿತುಕೊಳ್ಳುತ್ತಾರೆ.
ಹಾಗಾದರೆ ಪಾಲಿಕೆಯ ವ್ಯಾಪ್ತಿಯ ಕೆಲವು ಗೂಡಂಗಡಿಗಳನ್ನು ತೆಗೆದು ಹಾಕಲು ರೂಲಿಂಗ್ ಕೊಡಿ ಎಂದು ಹೇಳಲು ಮಾಜಿ ಮೇಯರ್ ಗಳೇ ಎದ್ದು ನಿಲ್ಲಬೇಕೆನಿಲ್ಲ. ಅಷ್ಟು ಗಂಡಸುತನ ಇದ್ರೆ “ನನ್ನ ವಾರ್ಡಿನಲ್ಲಿ ಬಿಲ್ಡರ್ ಒಬ್ಬ ಕಟ್ಟಡದ ಕೆಳಗೆ ಪಾರ್ಕಿಂಗ್ ಜಾಗದಲ್ಲಿ ಮನೆ ಕಟ್ಟಿಸಿಕೊಟ್ಟು ಮಾರಿದ್ದಾನೆ, ಅದನ್ನು ಪೂಜ್ಯ ಮೇಯರ್ ಅವರು ತೆರವುಗೊಳಿಸಲು ಸೂಚನೆ ಕೊಡಬೇಕು” ಎಂದು ಹೇಳುವ ಗುಂಡಿಗೆ ಪಾಲಿಕೆಯ ಯಾವ ಸದಸ್ಯ/ಸ್ಯೆಗಾದರೂ ಇದೆಯಾ? ಮಂಗಳೂರಿನಲ್ಲಿ ಅಬ್ಬಬ್ಬಾ ಎಷ್ಟು ಅನಧಿಕೃತ ಗೂಡಂಗಡಿಗಳು ಇರಬಹುದು, ಅದನ್ನು ತೆರವು ಮಾಡಲು ಇವತ್ತಿನಿಂದ ಉತ್ತರಕುಮಾರರು ಹೊರಡುತ್ತಾರೆ. ಅನಧಿಕೃತ ಗೂಡಂಗಡಿಗಳು ಸ್ಟೇಟ್ ಬ್ಯಾಂಕ್, ಮಾರ್ಕೆಟ್ ರೋಡ್ ನಲ್ಲಿ ಹೋದರೆ ಒಂದಿಷ್ಟು ಹೆಚ್ಚು ಇರಬಹುದು. ಆದರೆ ಅನಧಿಕೃತ ಕಟ್ಟಡಗಳನ್ನು ಹೆಚ್ಚು ಹುಡುಕಿ ಹೋಗಬೇಕಿಲ್ಲ. ಮಂಗಳೂರಿನ ಅತ್ಯಂತ ಎತ್ತರದ ಯಾವುದಾದರೂ ವಸತಿ ಸಮುಚ್ಚಯದ ಮೇಲೆ ಮೇಯರ್ ಮತ್ತು ಪಾಲಿಕೆಯ 60 ಸದಸ್ಯರು ನಿಂತು ಕೆಳಗೆ ನೋಡಿದರೆ ನೂರಕ್ಕೆ 95 ಕಟ್ಟಡಗಳು ಪಕ್ಕಾ ಇಲ್ಲಿಗಲ್.
ಬೇಕಾದರೆ ನೇರವಾಗಿ ಒಂದು ಉದಾಹರಣೆ ಕೊಡುತ್ತೇನೆ. ಈ ಚಿಲಿಂಬಿಯಲ್ಲಿ ಮೋರ್ ಎನ್ನುವ ಸರ್ವ ಸರಕಿನ ಮಳಿಗೆ ಇದೆಯಲ್ಲ, ಅದರ ಕಥೆಗೆ ಬರೋಣ. ಆ ವಾರ್ಡಿನ ಕಾರ್ಪೋರೇಟರ್ ಯಾರು ಎಂದು ಗೊತ್ತಿಲ್ಲ. ನಿಮಗೆ ಗೊತ್ತಿದ್ದರೆ ಕಮೆಂಟ್ ಮಾಡಿ. ಆ ಮೋರ್ ನವರು ಅಲ್ಲಿನ ಕಾರ್ಪೋರೇಟರ್ ಅವರನ್ನು ಎಷ್ಟು ಚೆನ್ನಾಗಿ ಇಟ್ಟುಕೊಂಡಿದ್ದಾರೆ ಎನ್ನುವ ವಿಷಯ ತಿಳಿಸಬೇಕು.
ಚಿಲಿಂಬಿಯಲ್ಲಿರುವ ಮೋರ್ ಇದೆಯಲ್ಲ, ಅದರ ಹೊರಗೆ ಅವರು ಮಾಡನ್ನು ಇಳಿಯಬಿಟ್ಟಿದ್ದಾರೆ. ಅಲ್ಲಿ ಅವರು ತರಕಾರಿ ವ್ಯಾಪಾರ ಮಾಡುತ್ತಾರೆ. ವಿವಿಧ ಬಗೆಯ ತರಕಾರಿಗಳನ್ನು ಪ್ಲಾಸ್ಟಿಕ್ ಬಾಕ್ಸ್ ನಲ್ಲಿ ತುಂಬಿ ಅಲ್ಲಿ ಸಾಲಾಗಿ ಜೋಡಿಸಿಟ್ಟಿದ್ದಾರೆ. ಮೋರ್ ನವರು ತರಕಾರಿ, ಹಣ್ಣು ಹಂಪಲು ವ್ಯಾಪಾರ ಮಾಡಲು ಅನಧಿಕೃತವಾಗಿ ಜಾಗವನ್ನು ಅತಿಕ್ರಮಣ ಮಾಡಿ ವ್ಯಾಪಾರ ಮಾಡುತ್ತಾರೆ. ಇದನ್ನು ತೆಗೆಸಲು ಪಾಲಿಕೆಗೆ ಕ್ಯಾಪೆಸಿಟಿ ಇದೆಯಾ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಇಲ್ಲ, ಇವರು ಅಂತಹುದಕ್ಕೆ ಕೈ ಹಾಕಲು ಹೋಗುವುದಿಲ್ಲ. ಇವರದ್ದೇನಿದ್ದರೂ ಗೂಡಂಗಡಿ ತೆಗೆಯೋಣ ಎನ್ನುವ ಸಿದ್ಧಾಂತ ಮಾತ್ರ.
ಮೇಯರ್ ಕವಿತಾ ಸನಿಲ್ ಅವರೇ, ಪಾಲಿಕೆಯಲ್ಲಿ ಗಂಡಸರಿಗಿಂತ ಹೆಚ್ಚು ಕ್ಯಾಪೆಸಿಟಿ ಇರುವುದು ನಿಮಗೆ ಎಂದು ಹೇಳಲಾಗುತ್ತದೆ. ಈ ಗೂಡಂಗಡಿ, ಬುಟ್ಟಿಯಲ್ಲಿ ವ್ಯಾಪಾರ ಮಾಡುವವರು, ತಳ್ಳು ಗಾಡಿಯಲ್ಲಿ ವ್ಯಾಪಾರ ಮಾಡುವವರನ್ನು ಓಡಿಸುವುದು ನಿಮ್ಮ ಲೆವೆಲ್ ಅಲ್ಲ. ನೀವು ಅಂತರಾಷ್ಟ್ರೀಯ ಕ್ರೀಡಾಪಟು. ಗೂಡಂಗಡಿಗಳನ್ನು ಎಬ್ಬಿಸುವುದು ನಿಮ್ಮ ಹಿಂದಿನವರು ಮಾಡಿ ಬಿಟ್ಟಿದ್ದು. ನಿಮ್ಮ ನಂತರ ಮುಂದೆ ಬರುವವರು ಕೂಡ ಅದನ್ನೇ ಮಾಡುತ್ತಾರೆ. ಅದಕ್ಕಿಂತ ಮೇಲೆ ಅವರ್ಯಾರು ಹೋಗುವುದಿಲ್ಲ. ಆದರೆ ಕವಿತಾ ಸನಿಲ್ ಇದ್ದಾಗ ಕನಿಷ್ಟ ನಾಲ್ಕೈದು ಅನಧಿಕೃತ ಬಿಲ್ಡಿಂಗ್ ಗಳನ್ನು ತೆರವುಗೊಳಿಸಿದ್ದರು, ಆ ಹೆಂಗಸಿನ ಕ್ಯಾಪೆಸಿಟಿ ಏನು ಮಾರಾಯ್ರೆ ಎಂದು ಜನ ಆಡಿಕೊಳ್ಳುವಂತಾಗಬೇಕು. ಅದನ್ನು ನೀವು ಮಾಡುತ್ತಿರಾ ಮೇಯರ್ ಅವರೇ.
ಹಿಂದೆ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ಕೇಂದ್ರದ ಕ್ಯಾಬಿನೆಟ್ ನಲ್ಲಿದ್ದ ಏಕೈಕ ಗಂಡಸು ಎಂದರೆ ಇಂದಿರಾ ಗಾಂಧಿ ಎಂದು ಹೇಳಲಾಗುತ್ತಿತ್ತು. ಅವರನ್ನು ಅಟಲ್ ಬಿಹಾರಿ ವಾಜಪೇಯಿ ಅವರು ದುರ್ಗೆ ಎಂದಿದ್ದರು. ನವರಾತ್ರಿಯಲ್ಲಿ ರಂಗು ರಂಗಿನ ಸೀರೆ ಉಟ್ಟ ನಿಮ್ಮ ಫೋಟೋ ವಿಜಯ ಕರ್ನಾಟಕದಲ್ಲಿ ಬಂದಿದ್ದನ್ನು ಜನ ನೋಡಿದ್ದಾರೆ, ಈಗ ಅದಕ್ಕೆ ಸರಿಯಾಗಿ ವಾರಕ್ಕೊಂದರಂತೆ ಒಂಭತ್ತು ಅನಧಿಕೃತ ಕಟ್ಟಡಗಳಿಗೆ ಮೋಕ್ಷ ತೋರಿಸಿ. ಅಷ್ಟಕ್ಕೂ ನೀವು ಮಾಡುವುದು ತಪ್ಪಲ್ಲ. ಯಾಕೆಂದರೆ ಹರೀಶ್ ಕುಮಾರ್ ಅವರು ಪಾಲಿಕೆಯ ಕಮೀಷನರ್ ಆಗಿದ್ದಾಗಲೇ ಮಾಡಿದ ಅನಧಿಕೃತ ಕಟ್ಟಡಗಳ ಪಟ್ಟಿ ಇದೆ. ಅದರಲ್ಲಿ ಐವತ್ತಕ್ಕೂ ಹೆಚ್ಚು ಜನ ನ್ಯಾಯಾಲಯಕ್ಕೂ ಹೋಗಿಲ್ಲ, ಅದರತ್ಥ ಅವು ಅನಧಿಕೃತಗಳು ಅವರೇ ಒಪ್ಪಿಕೊಂಡಿದ್ದಾರೆ. ಹಾಗಿದ್ದರೆ ಇನ್ಯಾಕೆ ತಡ!
Leave A Reply