ಆರ್ಥಿಕತೆಗೆ ಚೇತರಿಕೆ ಬೂಸ್ಟರ್ ನೀಡಲು ಬದ್ಧ: ಪ್ರಧಾನಿ
>> ಯುಪಿಎ ಅವಧಿಯಲ್ಲಿ ಎಂಟು ಬಾರಿ ಜಿಡಿಪಿ ಹಳ್ಳ ಹಿಡಿದಿತ್ತು!
>> ಕೊನೆಯ ತ್ರೈಮಾಸಿಕದಲ್ಲಿ ಜಿಡಿಪಿ 7.7% ದಾಖಲಾಗುವ ವಿಶ್ವಾಸ ಆರ್‍ಬಿಐ ಹೊಂದಿದೆ
>> ಮೂರು ವರ್ಷದಲ್ಲಿ 21 ಕ್ಷೇತ್ರದಲ್ಲಿ 87 ಕ್ರಾಂತಿಕಾರಿ ಸುಧಾರಣೆಗಳು
>> 125 ಕೋಟಿ ಜನರಿಗೆ ನೋಟು ನಿಷೇಧ, ಜಿಎಸ್‍ಟಿಯ ಲಾಭಗಳು ಭವಿಷ್ಯದಲ್ಲಿ ಅರಿವಾಗಲಿದೆ
ನವದೆಹಲಿ : ಮೊದಲ ತ್ರೈಮಾಸಿಕದಲ್ಲಿ 5.7%ಗೆ ಜಿಡಿಪಿ ಕುಸಿಯಲು ಪ್ರಧಾನಿ ಮೋದಿ ಅವರ ರಾಷ್ಟ್ರೀಯ ನೀತಿಗಳ ದುರ್ಬಲತೆಯೇ ಕಾರಣ ಎಂದು ತಿಂಗಳಿನಿಂದ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯಲು ಅಸ್ತ್ರವಾಗಿಸಿಕೊಂಡಿರುವ ಕಾಂಗ್ರೆಸ್ ಮುಖಂಡರಿಗೆ ಬುಧವಾರ ಮೋದಿ ತಕ್ಕ ಪ್ರತ್ಯುತ್ತರ ಕೊಟ್ಟಿದ್ದಾರೆ.
ಯಾರ 10 ವರ್ಷಗಳ ಅವಧಿಯಲ್ಲಿ ಎಂಟು ಬಾರಿ ಹೀನಾಯ ಅವಸ್ಥೆಗೆ ಜಿಡಿಪಿ ಕುಸಿದರೂ ಗೌಪ್ಯವಾಗಿಟ್ಟು ದೇಶದ ಜನರನ್ನು ದಡ್ಡರನ್ನಾಗಿಸಿದರೋ ಅಂಥವರು ಟೀಕೆಗೆ ಮುಂದಾಗಿದ್ದಾರೆ. ಕೆಲವರಿಗೆ ಅತೃಪ್ತ ವಾತಾವರಣ ನಿರ್ಮಾಣ ಮಾಡದ ಹೊರತು ನಿದ್ದೆ ಬರುವುದಿಲ್ಲ ಎಂದು ಮೋದಿ ಕಾಂಗ್ರೆಸ್ ಟೀಕಾಕಾರರಿಗೆ ತಪರಾಕಿ ಹಾಕಿದ್ದಾರೆ.
ದೇಶದ ಆರ್ಥಿಕತೆ ಸದೃಢವಾಗಿದೆ. ತಾತ್ಕಾಲಿಕ ಕುಸಿತದ ಚೇತರಿಕೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಪ್ರಸ್ತುತ ಎದುರಾಗುವ ಯಾವುದೇ ಸವಾಲಿಗೆ ಆರ್ಥಿಕತೆ ದುರ್ಬಲವಾಗಲು ಬಿಡಲ್ಲ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ.
ಭಾರತೀಯ ಕಂಪನಿ ಸೆಕ್ರೆಟರೀಸ್ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡುತ್ತಿದ್ದರು.
ಯುಪಿಎ ಅವಧಿಯ 10% ಹಣದುಬ್ಬರವನ್ನು 2.5%ಗೆ ಇಳಿಸಿದ್ದೇವೆ. ಚಾಲ್ತಿ ಖಾತೆ ವಿತ್ತೀಯ ಕೊರತೆ 4% ಇದ್ದದ್ದನ್ನು 1%ಗೆ ಕಡಿಮೆ ಮಾಡಿದ್ದೇವೆ. ಎಲ್ಲಕ್ಕಿಂತ ಹೆಚ್ಚಾಗಿ ವಿತ್ತೀಯ ಕೊರತೆ 1% ಇಳಿಕೆ ಕಂಡಿರುವುದು ಗಮನಾರ್ಹ. ಇದನ್ನು ಜನರಿಗೆ ತಿಳಿಸಿವುದು ಬಿಟ್ಟು ಇವುಗಳನ್ನು ಕೆಲವರು ಮರೆಮಾಚಲು ಜಿಡಿಪಿ ಹಿಂದೆ ಬಿದ್ದಿದ್ದಾರೆ ಎಂದು ಮೋದಿ ಕಾಂಗ್ರೆಸ್ ಕಾಲೆಳೆದಿದ್ದಾರೆ.
ಪ್ರಾಮಾಣಿಕ ಜನರ ಹಣ ಸುರಕ್ಷಿತವಾಗಿದೆ. ಅದರ ಜವಾಬ್ದಾರಿಯನ್ನು ನಾವು ಅರಿತಿದ್ದೇವೆ. ಕಪ್ಪು ಹಣದ ಕುಳಗಳು ಮತ್ತು ಭ್ರಷ್ಟರಿಗೆ ಖಂಡಿತ ಮುಂದಿನ ದಿನಗಳು ನರಕವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ. ಶತಾಯಗತಾಯ 2022ರೊಳಗೆ ಶೆಲ್ ಕಂಪನಿ(ಬೇನಾಮಿ ಕಂಪನಿಗಳು)ಗಳಿಗೆಲ್ಲಾ ಬೀಗ ಜಡಿದೇ ಜಡಿಯುತ್ತೇವೆ ಎಂದು ಅವರು ಗುಡುಗಿದ್ದಾರೆ.
Leave A Reply