ವಿಶ್ವದ ದೊಡ್ಡಣ್ಣ ಅಮೆರಿಕಕ್ಕೆ ಸೆಡ್ಡು ಹೊಡೆದ ಭಾರತ: ರಷ್ಯಾದಿಂದ ಎಸ್ -400 ಕ್ಷಿಪಣಿ ಕೊಳಲು ಮುಂದಾದ ಭಾರತ
ದೆಹಲಿ: ವಿಶ್ವದ ಎದುರು ಭಾರತದ ದಿಟ್ಟ ನಿಲುವು ಮತ್ತೊಮ್ಮೆ ಸಾಬೀತಾಗಿದ್ದು, ವಿಶ್ವದ ದೊಡ್ಡಣ್ಣ ಅಮೆರಿಕಕ್ಕೆ ಭಾರತ ಸೆಡ್ಡು ಹೊಡೆದಿದೆ. ಅಮೆರಿಕದ ವಿರೋಧ ಹಾಗೂ ನಿರ್ಬಂಧ ವಿಧಿಸುವ ಎಚ್ಚರಿಕೆಯನ್ನು ಧಿಕ್ಕರಿಸಿ ಭಾರತ ರಷ್ಯಾದಿಂದ ಉನ್ನತ ತಂತ್ರಜ್ಞಾನ ಹೊಂದಿರುವ ಐದು ಎಸ್ -400 ವಾಯು ರಕ್ಷಣಾ ಕ್ಷಿಪಣಿಗಳನ್ನು ಖರೀದಿಸಲು ಮುಂದಾಗಿದೆ. 39 ಸಾವಿರ ಕೋಟಿ ಮೌಲ್ಯದ ಬೃಹತ್ ಒಪ್ಪಂದಕ್ಕೆ ರಕ್ಷಣಾ ಸಚಿವಾಲಯ ಒಪ್ಪಿಗೆ ಸೂಚಿಸಿದೆ. ಈ ಮೂಲಕ ಅಮೆರಿಕದ ವಿರೋಧಕ್ಕೆ ಭಾರತ ಸೊಪ್ಪು ಹಾಕದೇ ದಿಟ್ಟ ನಿಲುವು ವ್ಯಕ್ತಪಡಿಸಿದೆ.
ಇತ್ತೀಚೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆದ ರಕ್ಷಣಾ ಸ್ವಾಧೀನ ಮಂಡಳಿ ಸಭೆಯಲ್ಲಿ ಈ ನಿರ್ಧಾರಕ್ಕೆ ಒಪ್ಪಿಗೆ ನೀಡಲಾಗಿದೆ. ರಷ್ಯಾದೊಂದಿಗಿನ ಮಾತುಕತೆ ವೇಳೆ ಒಪ್ಪಂದಂತೆ ಸಣ್ಣ ವ್ಯತ್ಯಾಸಗಳಿಗೂ ಒಪ್ಪಿಗೆ ದೊರೆತಿದೆ. ಇದೀಗ ಹಣಕಾಸು ಸಚಿವಾಲಯ ಮತ್ತು ಪ್ರಧಾನಿ ನೇತೃತ್ವದ ಭದ್ರತಾ ಕ್ಯಾಬಿನೆಟ್ ಸಮಿತಿಯಲ್ಲಿ ಒಪ್ಪಿಗೆ ದೊರೆಯಬೇಕಿದೆ.
ಗೋವಾದಲ್ಲಿ 2016ರ ಅಕ್ಟೋಬರ್ ನಲ್ಲಿ ನಡೆದ ಶೃಂಗಸಭೆಯಲ್ಲಿ ಮೋದಿ – ಪುಟಿನ್ ಮಧ್ಯೆ ನಡೆದ ಮಾತುಕತೆ ವೇಳೆ ಎಸ್ – 400 ಕ್ಷಿಪಣಿ ವ್ಯವಸ್ಥೆಗೆ ಎರಡು ದೇಶಗಳ ಒಪ್ಪಿಗೆ ಸಿಕ್ಕಿತ್ತು. 2018ರ ಅಕ್ಟೋಬರ್ ನಲ್ಲಿ ಮೋದಿ ಪುಟಿನ್ ಮಧ್ಯೆ ಶೃಂಗಸಭೆ ನಡೆಯಲಿದ್ದು, ಈ ವೇಳೆ ಇದಕ್ಕೆ ಅಂತಿಮ ಸ್ಪರ್ಷ ದೊರೆಯಲಿದೆ. ಈ ಒಪ್ಪಂದಕ್ಕೆ ಅಮೆರಿಕ ಖ್ಯಾತೆ ತೆಗೆದಿತ್ತು. ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿಸುವ ರಾಷ್ಟ್ರಗಳ ವಿರುದ್ಧ ಅಮೆರಿಕ ಹಲವು ನಿರ್ಬಂಧ ವಿಧಿಸುವ ಕಾನೂನಿಗೆ ತಿದ್ದುಪಡಿ ಮಾಡಿದೆ. ಎಸ್ – 400 ವಾಯು ರಕ್ಷಣಾ ಕ್ಷಿಪಣಿಯಿಂದ ಭಾರತೀಯ ವಾಯು ಸೇನೆಗೆ ಭಾರಿ ಬಲ ಬರಲಿದೆ.
ಅಮೆರಿಕ, ಭಾರತ ಮಧ್ಯೆ ಮಾತುಕತೆ ರದ್ದು: ಅಮೆರಿಕ ಹಾಗೂ ಭಾರತದ ಮಧ್ಯೆ ಜುಲೈ 6ರಂದು ವಾಷಿಂಗ್ಟನ್‌ನಲ್ಲಿ ನಡೆಯಬೇಕಿದ್ದ ಮಾತುಕತೆ ಮತ್ತೆ ರದ್ದಾದ ಬಳಿಕ ನಡೆದ ರಕ್ಷಣಾ ಸ್ವಾಧೀನ ಮಂಡಳಿ ಸಭೆಯಲ್ಲಿ ಒಪ್ಪಂದಕ್ಕೆ ಅಂಕಿತ ಬಿದ್ದಿದೆ. ವಾಷಿಂಗ್ಟನ್‌ನಲ್ಲಿ ನಡೆಯಬೇಕಿದ್ದ 2 + 2 ಸಭೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭಾಗಿಯಾಗಬೇಕಿತ್ತು.
Leave A Reply