ಖಾದರ್ ವಿರುದ್ಧ ಚಿನ್ಮಯ್ ರೈ ಕಾನೂನು ಗೆಲುವು
ಪುತ್ತೂರು ಪ್ರತಿ ಆರು ತಿಂಗಳಿಗೊಮ್ಮೆ ಸುದ್ದಿ ಮಾಡದೇ ಹೋದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏನೂ ಆಗುತ್ತಿಲ್ಲ ಎನ್ನುವ ಅನುಭವ ಹೊರಗಿನ ಪ್ರಪಂಚಕ್ಕೆ ಹೋಗುತ್ತದೆ ಎನ್ನುವುದು ಅಲ್ಲಿನ ಮಣ್ಣಿಗೆ ಗೊತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಲ್ಲಡ್ಕದ ನಂತರ ಅತೀ ಹೆಚ್ಚು ಸುದ್ದಿಯಲ್ಲಿರುವ ಊರು ಪುತ್ತೂರು. ಇತ್ತೀಚೆಗೆ ಪುತ್ತೂರು ಹೆಚ್ಚು ಸುದ್ದಿಯಲ್ಲಿದ್ದದ್ದು ಹಿಂದೂ ಜಾಗರಣ ವೇದಿಕೆಯ ಮುಖಂಡ ಜಗದೀಶ್ ಕಾರಂತರ ಭಾಷಣದ ವಿಷಯದಲ್ಲಿ. ಅವರು ಪುತ್ತೂರಿನ ಸಂಪ್ಯ ಠಾಣೆಯ ಪೊಲೀಸ್ ಸಬ್ ಇನ್ಸಪೆಕ್ಟರ್ ಖಾದರ್ ಮತ್ತು ಇತರ ಸಿಬ್ಬಂದಿಗಳ ವಿರುದ್ಧ ಅತ್ಯುಗ್ರ ಭಾಷಣ ಮಾಡಿದ ನಂತರ ಸಂಪ್ಯ ಎಸ್ ಐ ಖಾದರ್ ಅವರ ಹೆಸರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿಧ್ವನಿಸಿತ್ತು.
ಅದೇ ಎಸ್ ಐ ಖಾದರ್ ಅವರು ಪುತ್ತೂರಿನ ವಕೀಲ ಮತ್ತು ಹಿಂದೂಪರ ನಿಲುವುಗಳನ್ನು ಹೊಂದಿರುವ ಮತ್ತು ಅಕ್ರಮ ಗೋಸಾಗಾಟದ ವಿಷಯದಲ್ಲಿ ಸಕ್ರಿಯವಾಗಿ ಗೋಕಳ್ಳರ ವಿರುದ್ಧ ಧ್ವನಿ ಎತ್ತುತ್ತಿದ್ದ ಚಿನ್ಮಯ್ ರೈ ವಿರುದ್ಧ ಐಪಿಸಿ 307 ಪ್ರಕರಣ ದಾಖಲಿಸಿದ್ದರು. ಅದನ್ನು ಚಿನ್ಮಯ್ ರೈ ಅವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ತನ್ನ ವಿರುದ್ಧ ದುರುದ್ದೇಶಪೂರಿತವಾಗಿ ಕೇಸ್ ದಾಖಲಿಸಲಾಗಿದೆ. ತಾನು ಅಕ್ರಮ ಗೋಸಾಗಾಟದ ವ್ಯಕ್ತಿಗಳ ವಿರುದ್ಧ ಹೋರಾಡುವುದನ್ನು ತಡೆಯುವ ಉದ್ದೇಶದಿಂದ ಹೀಗೆ ತನ್ನನ್ನು ಸುಳ್ಳು ಕೇಸಿ ಸಿಕ್ಕಿಸುವ ಪ್ರಯತ್ನ ನಡೆಸಲಾಗಿದೆ ಎಂದು ಅವರ ಪರ ವಕೀಲರಾದ ಅರುಣ್ ಶ್ಯಾಮ್ ವಾದಿಸಿದ್ದರು.
ಅರುಣ್ ಶ್ಯಾಮ್ ಅವರ ವಾದವನ್ನು ಪುರಸ್ಕರಿಸಿದ ಹೈಕೋರ್ಟ್ ದುರುದ್ದೇಶದಿಂದ ದಾಖಲಿಸಿದ್ದ ಐಪಿಸಿ 307 ಪ್ರಕರಣಕ್ಕೆ ತಡೆ ನೀಡಿದೆ. ಈ ಮೂಲಕ ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಅರುಣ್ ಶ್ಯಾಮ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಹೈಕೋರ್ಟ್ ಗೋಹತ್ಯಾ ನಿಷೇಧ, ಜಾನುವಾರು ಹತ್ಯಾ ನಿಷೇಧ ಕಾನೂನುಗಳನ್ನು ಸರಿಯಾಗಿ ಪಾಲಿಸುವಂತೆ ಪ್ರತಿವಾದಿಗಳಿಗೆ ಆದೇಶ ಕೊಡಬೇಕೆಂದು ಚಿನ್ಮಯ್ ರೈ ನ್ಯಾಯಾಲಯವನ್ನು ವಿನಂತಿಸಿದ್ದಾರೆ. ಚಿನ್ಮಯ್ ರೈ ಹಿಂದೂ ಜಾಗರಣ ವೇದಿಕೆಯ ಮುಖಂಡರೂ ಆಗಿದ್ದಾರೆ.
Leave A Reply