ನಾವು ಬಟಾಟೆ, ನೀರುಳ್ಳಿ ರಾಜಕೀಯದಿಂದ ಮೇಲೆ ಬರುವುದು ಯಾವಾಗ!
ಒಂದು ವಸ್ತು ಉಚಿತವಾಗಿ ಸಿಗುತ್ತದೆ ಎನ್ನುವಾಗ ನಮ್ಮ ಕಿವಿಗಳು ಅಗಲವಾಗುತ್ತದೆ. ಅದು ಏನೇ ಇರಲಿ, ಅದರ ಗುಣಮಟ್ಟ ಹೇಗೆ ಇರಲಿ, ನಮಗೆ ಅಗತ್ಯ ಇದೆಯೋ, ಇಲ್ಲವೋ ನಮ್ಮ ಕಿವಿಗಳು ಅದನ್ನು ಪಡೆದುಕೊಳ್ಳುವ ತನಕ ವಿರಮಿಸುವುದಿಲ್ಲ. ಅದನ್ನೇ ಬಂಡವಾಳವಾಗಿಟ್ಟುಕೊಂಡು ಕೆಲವು ರಾಜಕೀಯ ಪಕ್ಷಗಳು ತಮ್ಮ ಬೇಳೆಯನ್ನು ದಶಗಳಿಂದ ಬೇಯಿಸಿಕೊಳ್ಳುತ್ತಿವೆ. ಅದನ್ನೇ ಈಗ ಮತ್ತೆ ಶುರು ಇಟ್ಟುಕೊಂಡಿವೆ. ರಾಹುಲ್ ಗಾಂಧಿ ಉಚಿತವಾಗಿ ಊಟ ಕೊಡುತ್ತೇನೆ, ನಮ್ಮ ಪಕ್ಷಕ್ಕೆ ಮತ ಕೊಟ್ಟರೆ ಎನ್ನುವುದನ್ನು ಹೇಳಲು ಶುರು ಮಾಡಲಿದ್ದಾರೆ. ಈಗಾಗಲೇ ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ಹೆಸರಿನಲ್ಲಿ ಅಗ್ಗದ ಗಿಮಿಕ್ಸ್ ಮಾಡಿ ಜನರಲ್ಲಿ ಸೆಳೆಯಲು ಶುರುವಾಗಿದೆ. ಈ ಎರಡು ಯೋಜನೆಗಳಲ್ಲಿ ಗೋಲ್ ಮಾಲ್ ಎಷ್ಟಿದೆ ಎನ್ನುವುದನ್ನು ವಿವರಿಸಿದರೆ ಅದೇ ಒಂದು ಅಧ್ಯಾಯ. ಅದರೊಂದಿಗೆ ಅನ್ನಭಾಗ್ಯಕ್ಕೆ ತಗಲುವ 32 ರೂಪಾಯಿಗಳಲ್ಲಿ 29 ರೂಪಾಯಿ ಕೊಡುವುದು ಕೇಂದ್ರ ಸರಕಾರ. ಮಾತನಾಡಿದರೆ ಇಲ್ಲಿನ ಕಾಂಗ್ರೆಸ್ಸಿಗರು ಬೇರೆ ಬಿಜೆಪಿ ಆಡಳಿತ ಇರುವ ರಾಜ್ಯಗಳು ಕೂಡ ಮಾಡಬಹುದಲ್ಲ ಎನ್ನುತ್ತಾರೆ. ಬೇರೆ ರಾಜ್ಯಗಳು ಈ ಪರಿ ಉಚಿತವಾಗಿ ಕೊಟ್ಟು ಮತ ತೆಗೆದುಕೊಳ್ಳುವ ಪರಿಸ್ಥಿತಿಗೆ ಬಂದು ಮುಟ್ಟಿಲ್ಲ. ಇನ್ನು ಇಂದಿರಾ ಕ್ಯಾಂಟೀನ್ ಹೆಸರಿನಲ್ಲಿ ಸರಕಾರದ ಬೊಕ್ಕಸಕ್ಕೆ ಆಗುತ್ತಿರುವ ಖರ್ಚು ಮತ್ತು ಇವರು ಗುತ್ತಿಗೆ ಕೊಟ್ಟಿರುವವರಿಂದ ಸಿಗುವ ಕಮೀಷನ್ ನೋಡಿದರೆ ನಿಮಗೆ ಇಂದಿರಾ ಕ್ಯಾಂಟೀನ್ ಅವಸ್ಥೆ ಗೊತ್ತಾಗುತ್ತದೆ. ಇಲ್ಲಿಯ ತನಕ ಬಂದ ಮುಖ್ಯಮಂತ್ರಿಗಳಲ್ಲಿ ಅತೀ ಹೆಚ್ಚು ಸಾಲದ ಹೊರೆಯನ್ನು ಬಿಟ್ಟು ಹೋಗುತ್ತಿರುವ ಮುಖ್ಯಮಂತ್ರಿ ಎಂದರೆ ಅದು ಸಿದ್ಧರಾಮಯ್ಯ. ಜನರಿಗೆ ಇದೆಲ್ಲಾ ಅರ್ಥವಾಗಲ್ಲ.
ನಮ್ಮದು ಏನಿದ್ದರೂ ಬಟಾಟೆ, ನೀರುಳ್ಳಿಗೆ ಇಪ್ಪತ್ತು ಇತ್ತು, ಈ ವಾರ ಮೂವತ್ತು ಆಗಿದೆ ಎನ್ನುವ ಕೊರಗು ಮಾತ್ರ. ಸಕ್ಕರೆಗೆ ಕಿಲೋಗೆ 30 ರಿಂದ 32 ಕ್ಕೆ ಹೋಯಿತು. ರೈಲಿನಲ್ಲಿ ಹಿಂದೆ 10 ರೂಪಾಯಿ ಇದ್ದ ಟಿಕೇಟ್ 12 ರೂಪಾಯಿ ಆಯಿತು ಎನ್ನುವ ಟೆನ್ಷನ್. ಅದೇ ವ್ಯಕ್ತಿ ರೈಲಿಗೆ 2 ರೂಪಾಯಿ ಹೆಚ್ಚಾಯಿತು ಎಂದು ಬೈಯುತ್ತಾ ರೈಲಿನಲ್ಲಿ ಮಾರಲು ಬಂದ ಚಿಪ್ಸ್ ಗೆ ಮೂವತ್ತು ರೂಪಾಯಿ ಮತ್ತು ಪೆಪ್ಸಿಗೆ 40 ಕೊಟ್ಟು ಕುಡಿಯುತ್ತಾನೆ. ಅದೇ ಚಿಪ್ಸಿಗೆ ವರ್ಷದ ಹಿಂದೆ 25 ಇತ್ತು. ಪೆಪ್ಸಿಗೆ ತಗಲುವ ವೆಚ್ಚ ಒಂದು ರೂಪಾಯಿ, ನಾನ್ಯಾಕೆ ನಲ್ವತ್ತು ಕೊಡಬೇಕು ಎಂದು ಅವನು ಕೇಳುವುದಿಲ್ಲ. ಹಿಂದೆ ಬಾರಿನಲ್ಲಿ ಐದು ರೂಪಾಯಿ ಇದ್ದ ಬೀರ್ ಬಾಟಲಿಗೆ ಈಗ 80 ರೂಪಾಯಿ ಆಗಿದ್ದರೂ ನಾವು ಚರ್ಚೆ ಮಾಡುವುದಿಲ್ಲ. ಅದೇ ಹೊರಗೆ ಬೈಕಿಗೆ ಪೆಟ್ರೋಲ್ ಹಾಕುವಾಗ ಗೊಣಗಾಡುತ್ತೇವೆ. 300 ರೂಪಾಯಿ ಟಿಕೇಟ್ ಕೊಟ್ಟು ಇವರ ತೆರಿಗೆ ಹೆಚ್ಚಾಯಿತು ಎಂದು ಬೈದು ಒಳಗೆ ಹೋಗುವ ನಮ್ಮವರು ಒಳಗೆ ಪಾಪ್ ಕಾರನ್ ಗೆ 120 ಕೊಟ್ಟು ತಿನ್ನುವಾಗ ರೇಟ್ ಗೊಣಗುವುದಿಲ್ಲ. ಹಾಲಿಗೆ 50 ಪೈಸೆ ಜಾಸ್ತಿ ಆದರೆ ಪಿರಿಪಿರಿ ಮಾಡುವ ನಾವು ಅದೇ ಹಾಲನ್ನು ಚಾ ಮಾಡಿ ಕುಡಿಯುವಾಗ ಮತ್ತೊಂದು ಕೈಯಲ್ಲಿ 5 ರೂಪಾಯಿ ಇದ್ದ ಬರ್ಗರ್ ಗೆ 45 ರೂಪಾಯಿ ಕೊಟ್ಟಿರುತ್ತೇವೆ. ನಮ್ಮ ಈ ಮನಸ್ಥಿತಿಯನ್ನೇ ಕೆಲವು ರಾಜಕೀಯ ಪಕ್ಷಗಳು ದುರುಪಯೋಗಪಡಿಸಿಕೊಳ್ಳುತ್ತವೆ.
ಚೀನಾದಿಂದ ಹಿಡಿದು ಐಎಸ್ ಐ, ಪಾಕಿಸ್ತಾನ ಮೋದಿಯವರ ವಿರುದ್ಧ ಇರುವುದು ಯಾರಿಗಾದರೂ ಅರ್ಥವಾಗುತ್ತದೆ. ಅದೇ ಕಾರಣವಿಲ್ಲದೆ ಎಸ್ ಪಿ, ಬಿಎಸ್ ಪಿ, ಲಾಲೂ ಎನ್ನುವ ಈಗ ಕೆಲಸವಿಲ್ಲದ ರಾಜಕಾರಣಿಗಳು ಕೂಡ ಬೆಳಗೆದ್ದು ಮೋದಿಯನ್ನು ಬೈಯಲು ಶುರು ಮಾಡುತ್ತಾರೆ. ಅದರೊಂದಿಗೆ ಕಾಂಗ್ರೆಸ್, ಜೆಡಿಯು, ಆಪ್ ಬಿಡಿ ಅವರಿಗೆ ಎಲ್ಲಿಯಾದರೂ ಬೈದದ್ದು ವರ್ಕೌಟ್ ಆಗುತ್ತೆನೊ ಎನ್ನುವ ಖುಷಿ. ಅಂತವರ ಮಾತುಗಳನ್ನು ಕೇಳಿ ನಾವು ಅವರೆಡೆಗೆ ವಾಲಿದರೆ ಚೀನಾ ಮತ್ತೆ ನಮ್ಮನ್ನು ಕಾಲಕಸದಂತೆ ಮಾಡಿಬಿಡುತ್ತದೆ. ಪಾಕಿಸ್ತಾನ ಗಡಿಯಲ್ಲಿ ಕಾಲು ಕೆರೆಯುತ್ತದೆ. ಅದಕ್ಕಾಗಿ ದೇಶಕ್ಕೆ ಒಂದು ಸದೃಢ ನಾಯಕತ್ವ ಸಿಗಬೇಕು. ಮೋದಿಯವರಿಂದ ಉದ್ಧಾರವಾಗುವುದು ಬಡವ, ಮಧ್ಯಮ ವರ್ಗದ ಜನಸಾಮಾನ್ಯ. ಅದಕ್ಕೆ ಇನ್ನೊಂದಿಷ್ಟು ದಿನ ಕಾಯಬೇಕು. ಯಾಕೆಂದರೆ ಕಳೆ ಕಿತ್ತು ಬಿಸಾಡಿದ ಮೇಲೆ ತಾನೇ ಅದೇ ಗದ್ದೆಯಲ್ಲಿ ಹೊಸ ಫಸಲನ್ನು ತೆಗೆಯಲು ಸಾಧ್ಯ. ಈಗ ಏನಿದ್ದರೂ 65 ವರ್ಷಗಳ ಕಳೆ ಕೀಳುವ ಕಾರ್ಯ!
Leave A Reply