ಮೋದಿ ಈ ಬಾರಿ ದೇಶದ ಆರೋಗ್ಯ ಸುಧಾರಿಸುವ ಡಾಕ್ಟರ್ ಆಗಿದ್ದಾರೆ!!
ಇಷ್ಟು ದಿನ ನರೇಂದ್ರ ಮೋದಿಯವರು ಭಾರತವನ್ನು ಹೊರಗಿನಿಂದ ಶಕ್ತಿಯುತವನ್ನಾಗಿ ಮಾಡಲು ಶ್ರಮಿಸಿ ಆಯಿತು. ಅದಕ್ಕಾಗಿ ಬೇರೆ ಬೇರೆ ರಾಷ್ಟ್ರಗಳ ಅಧ್ಯಕ್ಷ, ಪ್ರಧಾನಿಗಳನ್ನು ಭೇಟಿ ಮಾಡಿ ಭಾರತದ ಸೌಹಾರ್ಧತೆಯನ್ನು, ಗೆಳೆತನದ ಪರಿಚಯ ಮಾಡಿಕೊಟ್ಟರು. ಈಗ ಹೊರಗಿನ ದೇಶದವರ ಕಣ್ಣಿನಲ್ಲಿ ನಮ್ಮ ಬಲ ಗೊತ್ತಾಗಿದೆ. ಈಗ ದೇಶವನ್ನು ಒಳಗಿನಿಂದ ಮಜಬೂತ್ ಮಾಡಲು ಮೋದಿಯವರು ಹೊರಟಿದ್ದಾರೆ. ಅದಕ್ಕಾಗಿ ಈ ಬಾರಿಯ ಬಜೆಟಿನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಅದಕ್ಕೆ ಅನೇಕ ಅಂಶಗಳು ಈ ಬಜೆಟಿನಲ್ಲಿ ಅಡಕವಾಗಿದೆ.
ಐವತ್ತು ಕೋಟಿ ಭಾರತೀಯರ ಆರೋಗ್ಯ ಮೋದಿ ಕೈಯಲ್ಲಿ ಸೇಫ್….
ಬೇಕಾದರೆ ಒಂದು ಉದಾಹರಣೆ ತೆಗೆದುಕೊಳ್ಳೋಣ. ಭಾರತದ ಹತ್ತು ಕೋಟಿ ಕುಟುಂಬಗಳಿಗೆ ವರ್ಷಕ್ಕೆ ಐದು ಲಕ್ಷದ ತನಕ ಯಾವುದೇ ಅನಾರೋಗ್ಯಕ್ಕೆ ಸಂಬಂಧದ ಖರ್ಚುಗಳು ಬಂದರೂ ಅದನ್ನು ಕೇಂದ್ರ ಸರಕಾರ ಭರಿಸಲಿದೆ. ಅದಕ್ಕೆ ಆಯುಷ್ಯಮಾನ್ ಯೋಜನೆ ಎಂದು ಹೆಸರಿಡಲಾಗಿದೆ. ನೀವು ಲೆಕ್ಕ ಹಾಕಿ. ಮೇಲ್ನೋಟಕ್ಕೆ ಹತ್ತು ಕೋಟಿ ಕುಟುಂಬ ಅಂತ ಅನಿಸಬಹುದು. ಆದರೆ ಒಂದೊಂದು ಕುಟುಂಬದಲ್ಲಿ ಮನೆಯ ಯಜಮಾನ, ಅವನ ಹೆಂಡತಿ, ಇಬ್ಬರು ಮಕ್ಕಳು, ಅವನ ಅಪ್ಪ, ಅಮ್ಮ ಎಂದು ಏನಿಲ್ಲವೆಂದರೂ ಕನಿಷ್ಟ ಐದು ಜನರಾದರೂ ಇದ್ದೇ ಇರುತ್ತಾರೆ. ಅಂದರೆ ಈ ಯೋಜನೆಯಿಂದ ಕನಿಷ್ಟ 50 ಕೋಟಿ ಭಾರತೀಯರು ಪ್ರಯೋಜನ ಪಡೆಯಲಿದ್ದಾರೆ. ಇದೇನು ಹುಡುಗಾಟದ ಮಾತಲ್ಲ. ಮೋದಿ ಏನು ಮಾಡಿದರೂ ಅದು ಇಡೀ ದೇಶದ ಅರ್ಧದಷ್ಟು ಜನರ ಮೇಲೆ ಪರಿಣಾಮ ಬೀರುತ್ತೆ ಎಂದು ಏನು ಅಂದುಕೊಳ್ಳಲಾಗುತ್ತದೆಯೋ ಅದು ಮತ್ತೆ ನಿಜವಾಗಿದೆ. 50 ಕೋಟಿ ಜನರು ಇನ್ನು ಮುಂದೆ ತಮ್ಮ ಆರೋಗ್ಯದ ದೃಷ್ಟಿಯಿಂದ ನೆಮ್ಮದಿಯನ್ನು ಹೊಂದಲಿದ್ದಾರೆ. ನಾಳೆ ಆರೋಗ್ಯ ಹಾಳಾದರೆ ಹಣ ಎಲ್ಲಿಂದ ತರುವುದು ಎನ್ನುವುದಕ್ಕೆ ಈ ಒಂದು ಯೋಜನೆಯೇ ಉತ್ತರ ಕೊಡಲಿದೆ. ಆಯುಷ್ಯಮಾನ್ ಯೋಜನೆಯ ಆಯುಷ್ಯ ಮೋದಿ ಅಧಿಕಾರದಲ್ಲಿ ಇರುವ ತನಕ ಗಟ್ಟಿಯಾಗಿರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.
ಇನ್ನು ಟಿಬಿ ಎನ್ನುವ ಕಾಯಿಲೆಯ ಬಗ್ಗೆ ಗೊತ್ತಿದೆಯಲ್ಲ, ಧೂಳು, ಮಣ್ಣು, ಹೊಗೆ ಹೆಚ್ಚಿರುವ ಕಡೆ ಕೆಲಸ ಮಾಡುವ ಜನರಿಗೆ ಸುಲಭವಾಗಿ ಬರುವ ರೋಗ. ಆ ಕಾಯಿಲೆ ಪೀಡಿತರಾದವರಿಗೆ ತಿಂಗಳಿಗೆ ಕನಿಷ್ಟ ನೂರಾರು ರೂಪಾಯಿಗಳ ಔಷಧಿಯ ಅಗತ್ಯ ಇರುತ್ತದೆ. ಮೋದಿ ಅದಕ್ಕೆ ಪರಿಹಾರ ಕೊಟ್ಟಿದ್ದಾರೆ. ಇನ್ನು ಪ್ರತಿ ತಿಂಗಳು ಐನೂರು ರೂಪಾಯಿಗಳು ಅಂತವರಿಗೆ ಸಿಗಲಿದೆ. ಆರೋಗ್ಯಕ್ಕೆ ಈ ಬಾರಿ ಮೋದಿ ಕೊಟ್ಟಷ್ಟು ಇಷ್ಟು ವರ್ಷ ಯಾರೂ ಕೊಟ್ಟಿಲ್ಲ ಎನ್ನುವುದಕ್ಕೆ ಇನ್ನು ಕೆಲವು ಯೋಜನೆಗಳು ಸಾಕ್ಷಿಯಾಗಿವೆ. ಉದಾಹರಣೆಗೆ ಹಿರಿಯ ನಾಗರಿಕರು ಆಸ್ಪತ್ರೆಗೆ ದಾಖಲಾದಾಗ ಬಿಲ್ ಒಂದು ಲಕ್ಷ ಆದರೆ ಅದರಲ್ಲಿ ಐವತ್ತು ಸಾವಿರದ ತನಕದ ಮೊತ್ತಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. ಎಂತಹ ಕಲ್ಪನೆ. ಈ ಯೋಜನೆಯಿಂದ ಎಷ್ಟೋ ಹಣ ಹಿರಿಯ ನಾಗರಿಕರಿಗೆ ಉಳಿಯಲಿದೆ. ಅದು ಅವರ ಮುಂದಿನ ಬೇರೆ ಖರ್ಚಿಗೆ ಮೀಸಲಿಡಬಹುದು.
ಮಂಗಳೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಬರಲಿ…
ಮೋದಿಯವರು ಆರೋಗ್ಯ ಕ್ಷೇತ್ರದ ಬಗ್ಗೆ ಇನ್ನು ಕೂಡ ಚಿಂತಿಸಿದ್ದಾರೆ ಎನ್ನುವುದಕ್ಕೆ ಉದಾಹರಣೆ ರಾಷ್ಟ್ರದಲ್ಲಿ 24 ಹೊಸ ಮೆಡಿಕಲ್ ಕಾಲೇಜುಗಳ ಸ್ಥಾಪನೆಗೆ ಫಂಡ್ ಇಟ್ಟಿರುವುದು. ನೆನಪಿಡಿ, ಒಂದೊಂದು ಮೆಡಿಕಲ್ ಕಾಲೇಜು ಸ್ಥಾಪನೆಯಾಗುವಾಗ ಅದರೊಂದಿಗೆ ಒಂದು ಸುಸಜ್ಜಿತ ಆಸ್ಪತ್ರೆ ಕೂಡ ಪ್ರಾರಂಭವಾಗಬೇಕು. ಇದು ಭಾರತೀಯ ವೈದ್ಯಕೀಯ ಕೌನ್ಸಿಲ್ ನಿಯಮ. 24 ಮೆಡಿಕಲ್ ಕಾಲೇಜು ಎಂದರೆ ಅದರೊಂದಿಗೆ 24 ಆಸ್ಪತ್ರೆಗಳು. ಆಯಾ ಭಾಗದ ಜನರಿಗೆ ಇದರಿಂದ ಅನುಕೂಲಕರವಾಗುತ್ತದೆ. 24 ರಲ್ಲಿ ಒಂದು ಮೆಡಿಕಲ್ ಕಾಲೇಜು ಕರ್ನಾಟಕಕ್ಕೆ ದಕ್ಕಿದೆ. ಈಗ ನಮ್ಮ ಜನಪ್ರತಿನಿಧಿಗಳ ನಿಜವಾದ ಜವಾಬ್ದಾರಿ ಪ್ರಾರಂಭವಾಗಿರುವುದು.
ಮಂಗಳೂರನ್ನು ಶಿಕ್ಷಣ ಕಾಶಿ ಎನ್ನಲಾಗುತ್ತದೆ. ಇಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳಿವೆ. ಬಸ್ಸು, ರೈಲು, ವಿಮಾನ ನಿಲ್ದಾಣವಿದೆ. ಇಲ್ಲ ಎಂದರೆ ಒಂದು ಸರಕಾರಿ ಮೆಡಿಕಲ್ ಕಾಲೇಜು. ಕೇಂದ್ರ ಸರಕಾರ ಅನುದಾನಿಸಿರುವ ಮೆಡಿಕಲ್ ಕಾಲೇಜನ್ನು ಮಂಗಳೂರಿಗೆ ತಂದರೆ ಇದು ಈ ಭಾಗದ ಜನರಿಗೆ ಅನುಕೂಲಕರವಾಗಲಿದೆ. ಅದರೊಂದಿಗೆ ಒಂದು ಸರಕಾರಿ ಆಸ್ಪತ್ರೆ ಕೂಡ ನಮ್ಮ ಭಾಗದ ಜನರಿಗೆ ದಕ್ಕಲಿದೆ. ನೆಮ್ಮದಿಯ ವಿಚಾರ ಎಂದರೆ 24 ಮೆಡಿಕಲ್ ಕಾಲೇಜುಗಳಿಂದ ಸುಮಾರು 35 ಲಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಮಂಗಳೂರಿನಲ್ಲಿ ಒಂದು ಮೆಡಿಕಲ್ ಕಾಲೇಜು ಮತ್ತು ಅದರೊಂದಿಗೆ ಸರಕಾರಿ ಆಸ್ಪತ್ರೆ ಪ್ರಾರಂಭವಾದರೆ ಲೆಕ್ಕ ಹಾಕಿ ಎಷ್ಟು ಉದ್ಯೋಗಾವಕಾಶ ನಮ್ಮವರಿಗೆ ಸಿಗಲಿವೆ?
ಇನ್ನು ಬೇರೆ ವಿಷಯಗಳ ಬಗ್ಗೆ ಮಾತನಾಡುವುದಾದರೆ ಸುಮಾರು 37 ಲಕ್ಷ ಮನೆಗಳು ಬಡವರಿಗಾಗಿಯೇ ನಿರ್ಮಾಣವಾಗಲಿವೆ. ಇನ್ನು ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡಿಸೀಲ್ ಮೇಲಿನ ತನ್ನ ಭಾಗದ ಒಂದು ತೆರಿಗೆಯನ್ನು ಇಳಿಸಿದೆ. ಈ ಮೂಲಕ ಪ್ರತಿ ಲೀಟರ್ ಮೇಲೆ ಎರಡು ರೂಪಾಯಿ ಇಳಿಕೆಯಾಗಲಿದೆ. ಇನ್ನು ಬೆಂಗಳೂರಿನಲ್ಲಿ ಸಬ್ ಅರ್ಬನ್ ರೈಲ್ವೆ ವಿಭಾಗಕ್ಕೆ 17 ಸಾವಿರ ಕೋಟಿ ರೂಪಾಯಿ ಹಣ ಮೀಸಲಿಡುವ ಮೂಲಕ ಬೆಂಗಳೂರು ಅನ್ನು ನಿಜವಾದ ಅರ್ಥದಲ್ಲಿ ಸಿಂಗಾಪುರ ಮಾಡಲು ಹೊರಟಿದ್ದಾರೆ. ಹೀಗೆ ಮೋದಿ ಹಾಗೂ ಜೇಟ್ಲಿ ಮಾಡಿದ ಹಲವು ಯೋಜನೆಗಳು ದೇಶದ ಅರ್ಥವ್ಯವಸ್ಥೆಯಲ್ಲಿ ಹೊಸ ಬದಲಾವಣೆ ಉಂಟು ಮಾಡಲಿವೆ. ಎಲ್ಲವನ್ನು ಒಂದೇ ಅಂಕಣದಲ್ಲಿ ಹೇಳಲು ಸಾಧ್ಯವಿಲ್ಲ ಮತ್ತೇ ಒಂದಿಷ್ಟು ನಾನು ಕೂಡ ಸ್ಟಡಿ ಮಾಡಬೇಕು.
ಇವತ್ತು ನಿನ್ನೆಯ ವಿಷಯದ ಬಾಕಿ ಉಳಿದ ಭಾಗವನ್ನು ಬರೆಯಬೇಕಿತ್ತು. ಅದನ್ನು ನಾಳೆ ಬರೆಯುತ್ತೇನೆ. ಇವತ್ತು ಮೋದಿಯವರ ಬಜೆಟ್ ನಲ್ಲಿ ಇಷ್ಟು ಒಳ್ಳೆಯ ಚಿಂತನೆಗಳು ಇದ್ದಾಗ ನಿಜಕ್ಕೂ ಖುಷಿಯಾಗಿದೆ. ಮೋದಿ ದೇಶದ ಆರೋಗ್ಯ ಸುಧಾರಿಸುವ ಡಾಕ್ಟರ್ ಗೆಟ್ಟಪ್ ನಲ್ಲಿ ನಿಂತಿದ್ದಾರೆ, ಜೈ ಡಾ|ಮೋದಿ!!
Leave A Reply