ಮೋದಿಯ ಬಗ್ಗೆ ಸಣ್ಣ ಟೀಕೆಯನ್ನೂ ಸಹಿಸಲಾರಿರಾ?
ಫೇಸ್‌ಬುಕ್ ತುಂಬ ಪ್ರಕಾಶ್ ರೈ ಕುರಿತು ಟೀಕೆ. ಹಾಗೆಯೇ ಅವರ ಪರವಾದ ವಾದ. ಎರಡೂ ಇದೆ. ಕೆಲವರು ಟೀಕಿಸುವವರನ್ನು ಪ್ರಶ್ನಿಸಿದ್ದಾರೆ. ಗೌರಿ ಲಂಕೇಶ್ ಅವರು ಪ್ರಕಾಶ್ ರೈಗೆ ಆಪ್ತರಾಗಿದ್ದರು. ಅದನ್ನು ಅವರೇ ಹೇಳಿಕೊಂಡಿದ್ದಾರೆ. ಆ ಕೋಪದಲ್ಲಿ, ಬೇಸರದಲ್ಲಿ ಮಾತನಾಡಿದ್ದಾರೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಮೋದಿಯ ಬಗ್ಗೆ ಅವರ ಸಣ್ಣ ಮಾತನ್ನು ನಿಮಗೆ ಯಾಕೆ ಸಹಿಸಲಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಖಂಡಿತ. ಮೋದಿ ಪ್ರಶ್ನಾತೀತರು ಎಂದು ಯಾರೂ ಹೇಳಿಲ್ಲ. ಮೋದಿಯನ್ನು ಟೀಕಿಸಲೇಬಾರದು ಎಂದು ಯಾರೂ ಹೇಳುವುದಿಲ್ಲ. ಸರಿಯಾದ ಕಾರಣಕ್ಕೆ ಟೀಕೆ ಮಾಡಿದರೆ ಅದು ಖಂಡಿತ ಸ್ವಾಗತಾರ್ಹ. ಕಾನೂನು ಸುವ್ಯವಸ್ಥೆ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿದೆ. ಎಡಪಂಥೀಯರಿಗೆ ಅತ್ಯಂತ ಆಪ್ತವಾಗಿರುವ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಅವರೇ ಅತ್ಯಂತ ಆಸಕ್ತಿಯಿಂದ ತನಿಖೆಗೆ ಎಸ್‌ಐಟಿ ರಚಿಸಿದ್ದಾರೆ. ಆರೋಪಿಗಳನ್ನು ಪತ್ತೆ ಮಾಡುವ ಜವಾಬ್ದಾರಿ ರಾಜ್ಯ ಪೊಲೀಸರದ್ದು. ಇದೆಲ್ಲ ಇರುವಾಗ ಗೌರಿ ಲಂಕೇಶ್ ಕೊಲೆಗೆ ಮೋದಿಯನ್ನು ಟೀಕಿಸುವುದು ಎಷ್ಟು ಸರಿ ಎಂಬುದಷ್ಟೇ ಪ್ರಶ್ನೆ. ಯಾವ ರೀತಿಯಲ್ಲೂ ಇದು ಮೋದಿಗೆ ಸಂಬಂಧಿಸದ ವಿಷಯ. ಹಾಗಾದರೆ ರಾಜ್ಯದಲ್ಲಿ ನಡೆದ ಆರೆಸ್ಸೆಸ್ ಕಾರ್ಯರ್ತರ ಕೊಲೆಗೆ ಸೋನಿಯಾ ಗಾಂಧಿಯನ್ನೊ, ಸೀತಾರಾಂ ಯಚೂರಿಯನ್ನೋ ದೂರಲಾಗುತ್ತದೆಯೇ?
ನಿಜವಾಗಿ ಗಮನಿಸಿ ನೋಡಿದರೆ ದೇಶದಲ್ಲಿ ಮೋದಿಯಷ್ಟು ಟೀಕೆಗೊಳಗಾದ ರಾಜಕಾರಣಿ ಇನ್ನೊಬ್ಬರಿಲ್ಲ. ೨೦೦೨ರಿಂದ ೨೦೧೪ರವರೆಗೆ ಅವರನ್ನು ಹಿಗ್ಗಾಮುಗ್ಗಾ ಟೀಕಿಸಲಾಗಿದೆ. ಯುಪಿಎ ಸರಕಾರ ಗುಜರಾತ್ ಗಲಭೆಗಳ ನೆಪದಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯನ್ನೇ ವಿಚಾರಣೆಗೊಳಪಡಿಸಲು ಸಿದ್ಧತೆ ನಡೆಸಿತ್ತು. ಕೇಂದ್ರದ ಗುಪ್ತಚರ ಇಲಾಖೆ ಹಾಗೂ ಎರಡು ಮೂರು ರಾಜ್ಯದ ಪೊಲೀಸರು ಸೇರಿ ನಡೆಸಿದ ಸೊಹರಾಬುದ್ದೀನ್ ಎನ್‌ಕೌಂಟರ್, ಇಶ್ರತ್ ಜಹಾನ್ ಎನ್‌ಕೌಂಟರ್‌ಗಳನ್ನು ಬಳಸಿಕೊಂಡು, ಹೇಗಾದರೂ ಮಾಡಿ ನರೇಂದ್ರ ಮೋದಿ ಮತ್ತು ಗುಜರಾತ್ ಗೃಹ ಸಚಿವರಾಗಿದ್ದ ಅಮಿತ್ ಶಾರನ್ನು ಮಟ್ಟಹಾಕಲು ಕಾಂಗ್ರೆಸ್ ನೇತೃತ್ವದ ಯುಪಿಎ ಏನೆಲ್ಲ ಪ್ರಯತ್ನ ನಡೆಸಿತು. ಈ ಪ್ರಕರಣಗಳಲ್ಲಿ ಅವರಿಬ್ಬರನ್ನು ಎಳೆದು ತಂದು, ಬಂಧಿಸಿಬಿಡಬೇಕು ಎಂದೂ ಮಸಲತ್ತು ನಡೆಸಿತ್ತು. ಇಶ್ರತ್ ಜಹಾನ್ ಎನ್‌ಕೌಂಟರ್ ಪ್ರಕರಣದಲ್ಲಿ ರಾಜಸ್ಥಾನ ಗೃಹ ಸಚಿವ ಹಾಗೂ ಗುಜರಾತ್ ಗೃಹ ಸಚಿವರನ್ನು ಬಂಧಿಸಲಾಗಿತ್ತು. ಬಹುತೇಕ ಎಲ್ಲ ರಾಜ್ಯದಲ್ಲೂ ಎನ್‌ಕೌಂಟರ್‌ಗಳು ನಡೆದಿವೆ. ಆದರೆ ಯಾವುದೇ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ಒಬ್ಬ ಗೃಹ ಸಚಿವರನ್ನು ಬಂಧಿಸಿದ ಉದಾಹರಣೆ ಇದ್ದರೆ ತೋರಿಸಿಬಿಡಿ ನೋಡೋಣ. ಇದೇ ವಿಷಯ ಮುಂದಿಟ್ಟುಕೊಂಡ ರಾಷ್ಟ್ರೀಯ ಸುದ್ದಿ ವಾಹಿನಿಗಳು ನಡೆಸಿದ ಟೀಕೆ, ಚರ್ಚೆ ಕಡಿಮೆಯೇ? ಹಾಗೆಯೇ ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳಲ್ಲಿ ಕೋಮುಗಲಭೆ ನಡೆದೇ ಇಲ್ಲವೆ? ಅಲ್ಲೆಲ್ಲ ಗೃಹ ಸಚಿವರನ್ನ, ಮುಖ್ಯಮಂತ್ರಿಯನ್ನು ಹೊಣೆಯಾಗಿಸಲಾಗಿದೆಯೇ? ನಮ್ಮ ರಾಜ್ಯದಲ್ಲೇ ಸಾಕಷ್ಟು ಕೋಮುಗಲಭೆಗಳು ನಡೆದಿವೆ. ಅದರ, ಅದರಲ್ಲಿ ಸತ್ತವರ ಹೊಣೆಯನ್ನು ಮುಖ್ಯಮಂತ್ರಿಗಳು ಹೊತ್ತಿದ್ದಾರಾ? ಹಾಗಾದರೆ ಬೇರೆ ರಾಜ್ಯಗಳಿಗೂ ಗುಜರಾತ್‌ಗೂ ಬೇರೆ ಬೇರೆ ಮಾನದಂಡ ಬಳಸಿದ್ಯಾಕೆ ಎಂದು ಪ್ರಶ್ನಿಸುವುದು ತಪ್ಪಾ?
ಹಾಗಾದರೆ ಕಾಂಗ್ರೆಸ್ ಆಡಳಿತದಲ್ಲಿರುವ ಯಾವ ರಾಜ್ಯದಲ್ಲೂ ಎನ್‌ಕೌಂಟರ್‌ಗಳು ನಡೆದೇ ಇರಲಿಲ್ಲವೇ? ಅಲ್ಲಿ ನಡೆದ ಎನ್‌ಕೌಂಟರ್‌ಗಳೂ ಅತ್ಯಂತ ಕಾನೂನುಬದ್ಧವಾಗಿದ್ದವೇ? ಆದರೆ ಗುಜರಾರಾತ್‌ನಲ್ಲಿ ನಡೆದ ಎನ್‌ಕೌಂಟರ್‌ಗಳನ್ನು ಮಾತ್ರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ವಿಶೇಷವಾಗಿ ಪರಿಗಣಿಸಿತು. ದೇಶದಲ್ಲಿ ಎಲ್ಲೂ ನಡೆಯದ ಎನ್‌ಕೌಂಟರ್ ಗುಜರಾತ್‌ನಲ್ಲಿ ನಡೆದುಬಿಟ್ಟಿದೆ ಎಂಬಂತೆ ಬಿಂಬಿಸಲಾಯಿತು. ದಿನಕ್ಕೊಂದು ಹೊಸ ಹೊಸ ವಿಷಯಗಳನ್ನು ಮಾಧ್ಯಮಗಳಿಗೆ ನೀಡುವ ಮೂಲಕ, ಸ್ಫೋಟಕ ಮಾಹಿತಿ ಬಹಿರಂಗ ಎಂದು ಪ್ರಸಾರ ಮಾಡಲಾಯಿತು. ಹೇಗಾದರೂ, ಏನಾದರೂ ಮಾಡಿ ಮೋದಿ ಬಂಧಿಸಬೇಕು ಅಥವಾ ಎನ್‌ಕೌಂಟರ್ ನೆಪದಲ್ಲಿ ಅವರ ರಾಜೀನಾಮೆ ಕೊಡಿಸಬೇಕು ಎಂದು ಹೆಣಗಾಡಿತು. ಯಾಕೆಂದರೆ ಮೋದಿ ಇರುವ ತನಕ ಅಲ್ಲಿ ಗೆಲ್ಲುವುದು ಅಸಾಧ್ಯ ಎಂಬುದು ಕಾಂಗ್ರೆಸ್‌ಗೂ ಗೊತ್ತಿತ್ತು. ಮುಂದೊಂದು ದಿನ ಮೋದಿ ದೊಡ್ಡ ಪ್ರತಿಸ್ಪರ್ಧಿಯಾಗುತ್ತಾರೆ ಎಂಬುದನ್ನು ಕಾಂಗ್ರೆಸ್ ಮೊದಲೇ ಗುರುತಿಸಿತ್ತು. ಹಾಗೆ ನೋಡಿದರೆ ಬೇರೆ ಯಾವ ಬಿಜೆಪಿ ಮುಖ್ಯಮಂತ್ರಿಗಳನ್ನೂ ಕಾಂಗ್ರೆಸ್ ಇಷ್ಟು ಗೋಳುಹೊಯ್ದುಕೊಂಡಿಲ್ಲ.
ಮೋದಿಯನ್ನು “ಸಾವಿನ ಸರದಾರ’ ಎಂದು ಸೋನಿಯಾ ಗಾಂಧಿ ಕರೆದಿದ್ದರು. ೨೦೧೪ರ ಲೋಕಸಭೆ ಚುನಾವಣೆಗೂ ಸ್ವಲ್ಪ ಮೊದಲು ಹುಡುಗಿಯೊಬ್ಬಳನ್ನು ಮೋದಿ ಆಣತಿಯಂತೆ ಗುಪ್ತಚರ ಇಲಾಖೆಯವರು ಹಿಂಬಾಲಿಸಿದ್ದರು ಎಂದು “ಸ್ನೂಪ್‌ಗೇಟ್’ ಒಂದನ್ನು ಸೃಷ್ಟಿಸಲಾಗಿತ್ತು. ಯಾವಾಗ ಹುಡುಗಿಯ ತಂದೆ, ಖುದ್ದು ಹುಡುಗಿಯೇ ಹೇಳಿಕೆ ನೀಡಿದಳು ಅಲ್ಲಿಗೆ ಎಲ್ಲವೂ ತಣ್ಣಗಾಯಿತು.
ಈಗ ಹೇಳಿ ಮೋದಿಗಿಂತ ಹೆಚ್ಚು ಟೀಕೆಗೊಳಗಾದ ರಾಜಕಾರಣಿ ಇದ್ದಾರಾ? ಮೋದಿಗೆ ಹೋಲಿಸಿದರೆ ಪ್ರಕಾಶ್ ರೈಗೆ ಬಂದಿರುವ ಟೀಕೆ ತುಂಬ ಚಿಕ್ಕದು.
ಇನ್ನು ಪ್ರಕಾಶ್ ರೈ ಟೀಕೆಗಿಂತ ಹೆಚ್ಚಾಗಿ, ಪ್ರಕಾಶ್ ರೈ ಅವರಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಹೀಗೆ ಬೇಜವಾಬ್ದಾರಿಯುತ ಟೀಕೆ ಮಾಡಬಹುದು ಎಂದು ಪ್ರಮುಖ ಪ್ರಶ್ನೆ. ಅವರಿಗೆ ಟೀಕೆ ಮಾಡುವ ಅಧಿಕಾರ ಇದೆ, ಮಾಡಿದ್ದಾರೆ ಎಂಬುದು ವಾದವಾದರೆ, ಪ್ರಕಾಶ್ ರೈ ಅವರನ್ನು ಟೀಕೆ ಮಾಡುವ ಅಧಿಕಾರ ಉಳಿದವರಿಗೂ ಇದೆ ಎಂದು ಪ್ರತಿವಾದ ಮಂಡಿಸಬಹುದು. ಆದರೆ ಆ ರೀತಿಯ ವಾದ ಕೇವಲ ಮೊಂಡುವಾದವಾಗುತ್ತದಷ್ಟೇ. ಟೀಕೆ ಮಾಡುವ ಅಧಿಕಾರವಿದೆ, ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂಬ ಕಾರಣಕ್ಕೆ ಏನು ಬೇಕಾದರೂ ಮಾತನಾಡಿದರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ದುರ್ಬಳಕೆಯಾಗುತ್ತದೆ. ಟೀಕೆ ಸತ್ವಯುತವಾಗಿದ್ದಾಗ ಅದಕ್ಕೆ ಖಂಡಿತ ಮನ್ನಣೆ ದೊರೆಯುತ್ತದೆ.
ಇಷ್ಟಕ್ಕೂ ನನಗಾಗಲಿ, ಮೋದಿಯನ್ನು ಬೆಂಬಲಿಸುವ ಸಾಕಷ್ಟು ಜನರಿಗಾಗಲಿ ಅವರು ಸಂಬಂಧಿಕರೂ ಅಲ್ಲ. ನಯ್ಯಾಪೈಸೆ ಉಪಕಾರವನ್ನೂ ಮಾಡಿಲ್ಲ. ಆದರೆ ಮೋದಿ ದೇಶಕ್ಕೆ ಉತ್ತಮ ಆಡಳಿತ ನೀಡುತ್ತಿದ್ದಾರೆ. ದೇಶದ ಒಳಿತಿಗಾಗಿ ಕೆಲಸ ಮಾಡುವವರನ್ನು ಬೆಂಬಲಿಸುವುದು ಪ್ರತಿಯೊಬ್ಬರ ಕರ್ತವ್ಯ. ನಾವು ದೇಶಕ್ಕೆ ಒಳಿತು ಮಾಡಲಾಗುತ್ತದೊ ಇಲ್ಲವೊ, ಆದರೆ ಒಳಿತು ಮಾಡುವವರನ್ನು ಬೆಂಬಲಿಸುವ ಕೆಲಸವನ್ನಾದರೂ ನಾವು ಮಾಡಬಹುದು. ಆ ಕಾರಣಕ್ಕೆ ಮೋದಿಯನ್ನು ಬೆಂಬಲಿಸುತ್ತೇವೆ ಹೊರತು, ಕುರುಡು ನಂಬಿಕೆಯಿಂದಲ್ಲ. ಮುಸ್ಲಿಮರನ್ನು, ರಾಹುಲ್ ಗಾಂಧಿಯನ್ನು, ಕಾಂಗ್ರೆಸ್ಸನ್ನು ವಿರೋಧಿಸಲು ಮೋದಿಯನ್ನು ಬೆಂಬಲಿಸುತ್ತಿಲ್ಲ. ಅವರ ಕೆಲಗಳು ದೇಶಕ್ಕೆ ಒಳಿತು ಮಾಡುತ್ತವೆ, ದೂರದೃಷ್ಟಿಯ ನಾಯಕ ಎಂಬುದಷ್ಟೇ ಅವರನ್ನು ಬೆಂಬಲಿಸಲು ಕಾರಣ.
ಇಷ್ಟೆಲ್ಲ ಹೇಳಿದ ಮೇಲೂ ಮೋದಿಯನ್ನು ಟೀಕಿಸುವವರಿಗೆ ಖಂಡಿತ ಸ್ವಾಗತವಿದೆ. ಅಂತಹ ಟೀಕೆ ಇರಲೂ ಬೇಕು. ಆಗಲೇ ಯಾವುದೇ ಹೊಸ ನೀತಿ, ಯೋಜನೆಯ ಋಣಾತ್ಮಕ ಅಂಶಗಳು ಗಮನಕ್ಕೆ ಬರುತ್ತವೆ. ಬರೀ ಹೊಗಳುವುದೇ ಆದರೆ ಋಣಾತ್ಮಕ ಅಂಶಗಳು ಕಾಣುವುದೇ ಇಲ್ಲ. ಆದರೆ ಟೀಕೆ ಸತ್ವಯುತವಾಗಿರಲಿ, ರಚನಾತ್ಮಕವಾಗಿರಲಿ, ವಿಷಯಾಧಾರಿತವಾಗಿರಲಿ, ಸತ್ಯವಾಗಿರಲಿ. ಆಗ ಅದು ಖಂಡಿತ ಒಪ್ಪಿತವಾಗುತ್ತದೆ. ಇಲ್ಲವಾದಲ್ಲಿ ಅದಕ್ಕೆ ಪ್ರತಿವಾದ ಮಂಡಿಸಲೇಬೇಕಾಗುತ್ತದೆ. ಯಾಕೆಂದರೆ ನಮಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆಯಲ್ಲ.
Leave A Reply