ಪಾಲಿಕೆ ಸದಸ್ಯರು ಬಿಲ್ಡರ್ ಗಳ ಪಾದ ನೆಕ್ಕುವುದು ಬಿಟ್ಟರೆ ಟ್ರಾಫಿಕ್ ಜಾಮ್ ಸ್ಟಾಪ್!
ಮಸಾಜ್ ಪಾರ್ಲರ್ ಮೇಲೆ ರೇಡ್ ಆಯಿತು. ಅದಕ್ಕೆ ಕೋರ್ಟ್ ಛೀಮಾರಿ ಹಾಕಿತು. ಅದರ ನಂತರ ಅಕ್ರಮ ನೀರು ಪೂರೈಕೆಯಾಗುತ್ತಿದ್ದ ಕಂಪ್ಲಿಷನ್ ಪತ್ರ ಇಲ್ಲದ ಕಟ್ಟಡದ ಮೇಲೆ ರೇಡ್ ಆಯಿತು. ಆ ಮನೆಯವರಿಗೆ ಅಕ್ರಮವಾಗಿ ನೀರು ಪೂರೈಸುತ್ತಿದ್ದ ಅಧಿಕಾರಿಗಳ ಗುಟ್ಟು ಬಯಲಾಯಿತು. ಅಲ್ಲಿ ಮತ್ತೆ ಪುನ: ಹೋದದ್ದು ಪಾಲಿಕೆಯ ಮರ್ಯಾದೆ. ಅದರ ನಂತರ ಮ್ಯಾನ್ ಹೋಲ್ ನ ಮರು ನಿರ್ಮಾಣದ ಸಂದರ್ಭದಲ್ಲಿ ಕಾಲಿಗೆ ಬೂಟು ಮತ್ತು ಕೈಗೆ ಗ್ಲೌಸ್ ಧರಿಸದ ಕಾರ್ಮಿಕರನ್ನು ಇಳಿಸಿ ವಿವಾದವಾಯಿತು. ಪಾಲಿಕೆ ಮತ್ತೆ ಕಟಕಟೆಯಲ್ಲಿ ನಿಂತಿತು. ಮೇಯರ್ ರೇಡ್ ಮಾಡುತ್ತಿದ್ದಾರೆ. ಒಟ್ಟಿಗೆ ಹತ್ತಾರು ಕ್ಯಾಮೆರಾಗಳು ಇರುತ್ತವೆ. ಎಲ್ಲಾ ಕಡೆ ವೆಬ್ ಸೈಟ್ ಮೂಲಕ ಹತ್ತಾರು ಫೋಟೋಗಳೊಂದಿಗೆ ಸುದ್ದಿಯಾಗುತ್ತದೆ. ಆದರೆ ಹೆಚ್ಚಿನ ಬಾರಿ ರೇಡ್ ನಿಂದ ಏನು ಲಾಭವಾಗಿದೆ ಎಂದು ನೋಡಿದರೆ ಪ್ರಚಾರ ಜಾಸ್ತಿಯಾಯಿತು ಬಿಟ್ಟರೆ ಏನೂ ಆಗಿಲ್ಲ ಎನ್ನುವುದು ಸ್ವತ: ಕಾಂಗ್ರೆಸ್ಸಿಗರ ಮಾತು.
ಈ ಮೇಲಿನ ಮೂರು ಸುದ್ದಿಗಳು ಪ್ರಚಾರ ಪಡೆದುಕೊಂಡವು. ಆದರೊಂದಿಗೆ ಪಾಲಿಕೆಯ ಒಳಗಿನ ಸತ್ಯ ಬಹಿರಂಗವಾಯಿತು ಬಿಟ್ಟರೆ ಬೇರೆ ಏನೂ ಆಗಿಲ್ಲ. ಅದರ ಬದಲಿಗೆ ನಾನು ಕೊಡುವ ವಿಷಯವನ್ನು ಮೇಯರ್ ಕವಿತಾ ಸನಿಲ್ ಬೆನ್ನತ್ತಿ ಅನುಷ್ಟಾನ ಮಾಡಿದರೆ ಜನ ಅವರನ್ನು ಹಲವು ಸಮಯ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಇಲ್ಲಿ ಯಾವುದೇ ವಿವಾದವಾಗುವುದಿಲ್ಲ. ಜನರಿಗೆ ಉಪಕಾರವಾಗುತ್ತದೆ. ಕವಿತಾ ಸನಿಲ್ ರಾಜಕೀಯದಲ್ಲಿ ಮುಂದಿನ ಬಾರಿ ಪ್ರಮೋಶನ್ ತೆಗೆದುಕೊಳ್ಳಬೇಕು ಎಂದು ಏನು ನಿರ್ಧರಿಸಿದ್ದಾರೋ ಅದು ಈಡೇರುತ್ತದೆ.
ಮಂಗಳೂರನ್ನು ಕಾಡುತ್ತಿರುವುದು ಏನು? ಟ್ರಾಫಿಕ್ ಜಾಮ್. ಅದಕ್ಕೆ ಕಾರಣ ಏನು? ಅನಧಿಕೃತ ಪಾರ್ಕಿಂಗ್. ನೂರಕ್ಕೆ ಎಪ್ಪತ್ತೈದು ಕಟ್ಟಡಗಳ ಪಾರ್ಕಿಂಗ್ ಜಾಗದಲ್ಲಿ ಅಕ್ರಮ ಮನೆ, ಮಳಿಗೆಗಳು ಎದ್ದು ನಿಂತಿವೆ. ಅವುಗಳಿಗೆ ಡೋರ್ ನಂಬರ್ ಕೂಡ ಸಿಕ್ಕಿದೆ. ಅಂತಹ ಅಕ್ರಮ ಕಟ್ಟಡಗಳನ್ನು ಕೆಡವಲು ಎಷ್ಟು ಪ್ರಯತ್ನವಾಗಿದೆ. ಬೆಂಗಳೂರಿಗೆ ಹೋಲಿಸಿದರೆ ಅಲ್ಲಿರುವಷ್ಟು ವಾಹನಗಳ 25% ಕೂಡ ಮಂಗಳೂರಿನಲ್ಲಿಲ್ಲ. ಆದರೂ ಈಗ ನೀವು ಮಧ್ಯಾಹ್ನ 12.35 ಲಗ್ನ ಎಂದು ಮನೆಯಿಂದ 12 ಗಂಟೆಗೆ ಹೊರಟು 12.15 ಕ್ಕೆ ಗ್ಯಾರಂಟಿ ಮುಟ್ಟುತ್ತೇನೆ ಎಂದು ಅಂದುಕೊಂಡರೆ ನೀವು ಹಾಲ್ ತಲುಪುವಾಗ ಲಗ್ನ ಕಳೆದು ಪುರೋಹಿತರು ಗಂಟು ಮೂಟೆ ಕಟ್ಟಿರುತ್ತಾರೆ. ಸಂಜೆ ಯಾರದ್ದಾದರೂ birth ಡೇ ಪಂಕ್ಷನ್ ಎಂದು ಹತ್ತು ನಿಮಿಷ ಗ್ಯಾಪ್ ಇಟ್ಟು ಹೊರಟರೆ ನೀವು ಅಲ್ಲಿ ಮುಟ್ಟುವಾಗ ಬೇರೆಯವರು ತಿಂದು ಕೆಳಗಿಟ್ಟ ಗ್ಲಾಸು, ಪ್ಲೇಟುಗಳನ್ನು ತೊಳೆಯಬೇಕಾದಿತು. ಇದಕ್ಕೆ ಕಾರಣವೇನು? ಅಲ್ಲಲ್ಲಿ ಅನಧಿಕೃತ ಪಾರ್ಕಿಂಗ್. ಮಂಗಳೂರು ಈಗ ಹಿಂದಿನಂತಿಲ್ಲ. ಹೆಚ್ಚಿನ ಕಡೆ four way ಆಗಿದೆ. ಆದರೆ ಹಿಂದಿನಕ್ಕಿಂತ ಹೆಚ್ಚು ಟ್ರಾಫಿಕ್ ಜಾಮ್ ಆಗುತ್ತಿದೆ. ಒಂದು ಮಳಿಗೆ ಅಥವಾ ವಸತಿ ಸಮುಚ್ಚಯದಲ್ಲಿ ಅಕ್ರಮವಾಗಿ ಪಾರ್ಕಿಂಗ್ ಜಾಗದಲ್ಲಿ ಮನೆ, ಅಂಗಡಿ ಕಟ್ಟಿದರೆ ಅಲ್ಲಿನ ಮಾಲೀಕರ ವಾಹನಗಳೊಂದಿಗೆ ಅತಿಥಿಗಳ, ಗ್ರಾಹಕರ ವಾಹನಗಳು ಸೇರಿ ರಸ್ತೆ ಹಿಂದಿನಕ್ಕಿಂತ ಹೆಚ್ಚು ಕಿಷ್ಕಿಂದೆಯಾಗುತ್ತಿದೆ. ಕೇಳಿದರೆ ನಂತೂರಿನಲ್ಲಿ , ಕೆಪಿಟಿ ಬಳಿ ಓವರ್ ಬ್ರಿಡ್ಜ್, ಅಂಡರ್ ಬ್ರಿಡ್ಜ್ ಆಗಬೇಕು ಎನ್ನುತ್ತಾರೆ. ಅವು ಆಗಲಿ, ಯಾವುದೇ ಬ್ರಿಡ್ಜ್ ಗೂ ನಾನು ವಿರೋಧಿಯಲ್ಲ. ಆದರೆ ಗಂಡ ಹೊಸ ಸೀರೆ ತರುತ್ತಾನೆ ಎಂದು ಹಳೆ ಸೀರೆಯೆಲ್ಲ ಬೆಂಕಿಗೆ ಹಾಕಿದ್ಲು ಹೆಂಡತಿ ಎನ್ನುವಂತಹ ವಾತಾವರಣ ಆಗಬಾರದು. ಮೊದಲಿಗೆ ಅಕ್ರಮ ಪಾರ್ಕಿಂಗ್ ತೆಗೆಯಬೇಕು. ಅದನ್ನು ಎಲ್ಲಿಂದ ಪ್ರಾರಂಭಿಸಬೇಕು ಎಂದು ನಾನು ಸಲಹೆ ಕೊಡುತ್ತೇನೆ.
ಮೇಯರ್, ಜಿಲ್ಲಾಧಿಕಾರಿ, ಪಾಲಿಕೆ ವ್ಯಾಪ್ತಿಯ ಇಬ್ಬರು ಶಾಸಕರು ಮಾತ್ರ ಕುಳಿತು ಒಂದು ಸಭೆ ನಡೆಸಬೇಕು. ಎಲ್ಲೆಲ್ಲಿ ಅಕ್ರಮ ಕಟ್ಟಡ ಇದೆ, ಅದನ್ನು ತೆರವುಗೊಳಿಸಬೇಕು ಎಂದು ಆಗಿನ ಕಮೀಷನರ್ ಹರೀಶ್ ಕುಮಾರ್ ಪಟ್ಟಿ ಮಾಡಿದ್ದರೋ ಅದರಲ್ಲಿ ಐವತ್ತರಷ್ಟು ಕಟ್ಟಡಗಳ ಮಾಲೀಕರು ನ್ಯಾಯಾಲಯದಿಂದ ಯಾವುದೇ ಸ್ಟೇ ತಂದಿಲ್ಲ. ಅದನ್ನು ಕೆಡವಲು ಹೊರಡಬೇಕು. ಆಗ ಮಂಗಳೂರಿನ ಜನರ ಕಣ್ಣಲ್ಲಿ ಇವರುಗಳು ಹೀರೋ ಆಗುತ್ತಾರೆ. ಅದು ಬಿಟ್ಟು ಚುನಾವಣೆ ಹತ್ತಿರ ಬರುವಾಗ ಅಲ್ಲಿ ಶಿಲಾನ್ಯಾಸ, ಇಲ್ಲಿ ಗುದ್ದಲಿ ಪೂಜೆ ಎಂದು ಮಾಡುತ್ತಾ ಆ ಫೋಟೋ ತೆಗೆದು ಸಾಮಾಜಿಕ ತಾಣಗಳಲ್ಲಿ ಹಾಕಿ, ವಿಡಿಯೋ ಮಾಡಿ ಸ್ಥಳೀಯ ಚಾನೆಲ್ ಗಳಲ್ಲಿ ನ್ಯೂಸ್ ಆಗಿ ಬರುವಂತೆ ಶೋ ಕೊಟ್ಟರೆ ಅದು ನಾಟಕ ಎಂದು ಗೊತ್ತಾಗುವುದಿಲ್ಲವೇ. ಅದರ ಬದಲಿಗೆ “ನಾವು ಅಕ್ರಮ ಕಟ್ಟಡಗಳನ್ನು ಕೆಡವಿ ಅಕ್ರಮ ಪಾರ್ಕಿಂಗ್ ವಿರುದ್ಧ ಯುದ್ಧ ಸಾರುತ್ತೇವೆ” ಎಂದು ಹೇಳಿ ಹೊರಡುವುದಿದೆಯಲ್ಲ ಅದು ಕೈಗೆ ಅಧಿಕಾರ ಸಿಕ್ಕಿದ್ದಾಗ ಮಾಡಬಹುದಾದ ಶ್ರೇಷ್ಟ ಕಾರ್ಯ.
ಪರಿಸ್ಥಿತಿ ಎಲ್ಲಿ ತನಕ ಹೋಗಿದೆ ಎಂದರೆ ಚಿಲಿಂಬಿಯಲ್ಲಿ ಬಲಕ್ಕೆ ತಿರುಗಿ ನೋಡಿದರೆ ಗುಡ್ಡದ ಮೇಲೊಂದು ಬೃಹತ್ ವಸತಿ ಸಮುಚ್ಚಯ ಕಾಣುತ್ತದೆ. ಆದರೆ ಅದಕ್ಕೆ ಹೋಗುವ ದಾರಿ ಇದೆಯಲ್ಲ ಅದು ಯಾವುದೋ ಓಣಿಗೆ ಹೋಗುವ ಹಾಗೆ ಕಾಣುತ್ತದೆ. ಇವರು ರಸ್ತೆ ಅಗಲ ಮಾಡುತ್ತಾರೆ ಎಂದು ನಂಬಿ ಇವರಿಗೆ ಕಟ್ಟಡ ಕಟ್ಟಲು ಅನುಮತಿ ಪತ್ರ ಕೊಡಲಾಗಿತ್ತು. ಆದರೆ ಈಗ ಇವರು ಎಲ್ಲವನ್ನು ಮರೆತಂತೆ ಆಡುತ್ತಿದ್ದಾರೆ. ಕಟ್ಟಡ ನಿರ್ಮಾಣಕಾರರ ಮತ್ತು ಪಾಲಿಕೆ ಸದಸ್ಯರ, ಅಧಿಕಾರಿಗಳ ಅಪವಿತ್ರ ಮೈತ್ರಿಯಿಂದ ವಿಷಯ ಈಗ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಸುಪ್ರೀಂ ಕೋರ್ಟ್ ಏನು ಹೇಳಿದೆ, ವಿವಾದ ಏನು? ಆ ಬಗ್ಗೆ ಸೋಮವಾರದಿಂದ ಹೇಳಲು ಪ್ರಾರಂಭಿಸುತ್ತೇನೆ. ಪಾಲಿಕೆಯ ಸದಸ್ಯರು ಎಲ್ಲಿಯ ತನಕ ಬಿಲ್ಡರ್ ಗಳ ಪಾದ ನೆಕ್ಕಿ ಹಣ ಮಾಡುವುದನ್ನು ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೆ ದೇವರು ಬಂದರೂ ನಮ್ಮ ಟ್ರಾಫಿಕ್ ಜಾಮ್ ನಿಲ್ಲಲ್ಲ!
Leave A Reply