ದೇಶಭಕ್ತಿ ಸಾಬೀತಿಗೆ ಸಿನಿಮಾ ಮಂದಿರದಲ್ಲಿ ಎದ್ದು ನಿಲ್ಲುವುದು ಕಡ್ಡಾಯವಲ್ಲ : ಸುಪ್ರೀಂ
>> ರಾಷ್ಟ್ರಭಕ್ತ ಎಂದು ತೋಳಿನ ಮೇಲೆ ಮುದ್ರಿಸಿಕೊಂಡು ತಿರುಗಲು ಸಾಧ್ಯವಿಲ್ಲ
ನ್ಯೂಡೆಲ್ಲಿ : ಪ್ರಸ್ತುತ ಮುಖ್ಯ ನ್ಯಾಯಮೂರ್ತಿಯಾಗಿರುವ ದೀಪಕ್ ಮಿಶ್ರಾ ಸಿನಿಮಾ ಮಂದಿರಗಳಲ್ಲಿ ಚಿತ್ರ ಪ್ರಸಾರಕ್ಕೂ ಮುನ್ನ ರಾಷ್ಟ್ರಗೀತೆ ಮೊಳಗುವುದು ಕಡ್ಡಾಯ ಎಂದು 2016ರಲ್ಲಿ ನೀಡಿದ್ದ ತೀರ್ಪಿಗೆ ವ್ಯತಿರಿಕ್ತವಾಗಿ ತ್ರಿಸದಸ್ಯ ಪೀಠದಲ್ಲಿ ಮಿಶ್ರಾ ಪಕ್ಕದಲ್ಲಿ ಕೂತು ನ್ಯಾ.ಚಂದ್ರಚೂಡ್ ಹೇಳಿಕೆ ನೀಡಿದ್ದಾರೆ. ಸ್ವತಃ ಮುಖ್ಯ ನ್ಯಾ. ದೀಪ್ ಮಿಶ್ರಾ ವ್ಯತಿರಿಕ್ತ ಹೇಳಿಕೆ ದಾಖಲಿಸಿದ್ದಾರೆ. ನ.30, 2016ರಂದು ಸುಪ್ರೀಂಕೋರ್ಟ್‍ನ ತ್ರಿಸದಸ್ಯ ಪೀಠದಲ್ಲಿದ್ದ ನ್ಯಾ. ಮಿಶ್ರಾ “ಒಂದು ಬದ್ಧತೆಯ ದೇಶಭಕ್ತಿ ಮತ್ತು ರಾಷ್ಟ್ರೀಯತೆಯನ್ನು ಪ್ರಜೆಯಲ್ಲಿ ಜಾಗೃತವಾಗಿಡಲು ಪ್ರತಿ ಶೋ ಮುನ್ನ ರಾಷ್ಟ್ರಗೀತೆ ಪ್ರಸಾರ ಕಡ್ಡಾಯ. ಎಲ್ಲ ವೀಕ್ಷಕರು ಎದ್ದು ನಿಂತು ಗೌರವ ಸೂಚಿಸಲೇಬೇಕು ” ಎಂದಿದ್ದರು.
ಸೋಮವಾರ ಕೇರಳದ ಕೊಡುಂಗಲ್ಲೂರು ಫಿಲ್ಮ್ ಸೊಸೈಟಿ ನ.2016ರ ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸಂದರ್ಭ ಚಂದ್ರಚೂಡ್ ಅದಕ್ಕೆ ಉಲ್ಟಾ ಅಭಿಪ್ರಾಯಪಟ್ಟಿದ್ದಾರೆ.
” ಒಂದು ಹೆಜ್ಜೆ ಮುಂದುವರಿದು ಸಿನಿಮಾ ಮಂದಿರದಲ್ಲಿ ಚಡ್ಡಿ ಮತ್ತು ಟಿ-ಶರ್ಟ್ ತೊಟ್ಟು ಬರಬಾರದು, ಇದರಿಂದ ರಾಷ್ಟ್ರಗೀತೆಗೆ ಅಗೌರವ ಎನ್ನುತ್ತೀರಿ. ಇಂಥ ನೈತಿಕ ಪೊಲೀಸ್‍ಗಿರಿ ನಿಲ್ಲುವುದಿಲ್ಲ’ ಎಂದು ನ್ಯಾ. ಚಂದ್ರಚೂಡ್ ಅಭಿಪ್ರಾಯಪಟ್ಟಿದ್ದಾರೆ.
ದೇಶದ ಪ್ರಜೆ ತನ್ನ ತೋಳುಗಳ ಮೇಲೆ ಭಾರತದ ಪರವಾಗಿ ದೇಶಭಕ್ತಿಯನ್ನು ಮುದ್ರಿಸಿಕೊಂಡು ತಿರುಗುವುದು ಅಸಾಧ್ಯ ಎಂದು ಚಂದ್ರಚೂಡ್ ರಾಷ್ಠ್ರಭಕ್ತಿ ಚಿಂತಕರಿಗೆ ಟಾಂಗ್ ಕೊಟ್ಟಿದ್ದಾರೆ. ಅಟಾರ್ನಿ ಜೆನರಲ್ ಕೆ.ಕೆ.ವೇಣುಗೋಪಾಲ್ 2016ರ ತೀರ್ಪು ಪರವಾಗಿ ಸಲ್ಲಿಸಿದ ವರದಿ ಆಧರಿಸಿ ಮಾತನಾಡುತ್ತಾ ” ದೇಶಭಕ್ತರೆಂದು ಸಾರುವುದಕ್ಕೆ ಸಿನಿಮಾ ಮಂದಿರದಲ್ಲಿ ರಾಷ್ಟ್ರಗೀತೆ ಮೊಳಗುವಾಗ ಎದ್ದು ನಿಲ್ಲುವುದು ಕಡ್ಡಾಯವಲ್ಲ’ ಎಂದಿದ್ದಾರೆ.
ಹಲವು ವಾದಗಳ ನಂತರ ಕೇಂದ್ರ ಸರ್ಕಾರದ ಮೈದಾನಕ್ಕೆ ಸುಪ್ರೀಂಕೋರ್ಟ್ ಚೆಂಡನ್ನು ತಳ್ಳಿದೆ. ಜ.9, 2018ರೊಳಗೆ ನಿರ್ದಿಷ್ಟ ನಿಯಮಗಳ ಅಧಿಸೂಚನೆ ಪ್ರಕಟಿಸಿ ಸಿನಿಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಪ್ರಸಾರಕ್ಕೆ ಕಡ್ಡಾಯವಾಗಿ ಎದ್ದು ನಿಲ್ಲಬೇಕೊ, ಬೇಡವೊ ಎಂದು ಸ್ಪಷ್ಟಪಡಿಸಿ ಎಂದು ಸುಪ್ರೀಂ ಸೂಚಿಸಿದೆ.
Leave A Reply