ಮೋದಿ ಪ್ರಧಾನಿಯಾಗಲು ರಾಹುಲ್ ಗಾಂಧಿಗೆ ಅರ್ಧ ಕ್ರೆಡಿಟ್ ಅಲ್ಲ, ಕಾಂಗ್ರೆಸ್ ಸೋಲಿನ ಪೂರ್ತಿ ಕ್ರೆಡಿಟ್ ಸಲ್ಲಬೇಕು
2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿ ನರೇಂದ್ರ ಮೋದಿ ಪ್ರಧಾನಿಯಾಗುವಲ್ಲಿ ರಾಹುಲ್ ಗಾಂಧಿ ಅವರ ಪಾಲು ತುಂಬ ಇದೆ. ಹಾಗಾಗಿ ನರೇಂದ್ರ ಮೋದಿ ಪ್ರಧಾನಿಯಾಗಲು ರಾಹುಲ್ ಗಾಂಧಿಗೆ ಶೇ.50ರಷ್ಟು ಕ್ರೆಡಿಟ್ ಸಲ್ಲಬೇಖು ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಅಧ್ಯಕ್ಷ ರಾಜ್ ಠಾಕ್ರೆ ಹೇಳಿದ್ದಾರೆ.
ಚುನಾವಣೆ ಪ್ರಚಾರದ ವೇಳೆ ರಾಹುಲ್ ಗಾಂಧಿ ಮೋದಿ ಅವರನ್ನು ಅಣಕ, ಅಪಹಾಸ್ಯ ಮಾಡಿದ್ದು ಮೋದಿ ಅವರ ಗೆಲುವಿಗೆ ಸಹಕಾರಿಯಾಯಿತು ಎಂದಿದ್ದಾರೆ ಠಾಕ್ರೆ.
ಆದರೆ, ನರೇಂದ್ರ ಮೋದಿ ಗೆಲುವಿನ ಕುರಿತು ಇಷ್ಟೆಲ್ಲ ಹೇಳಿರುವ ರಾಜ್ ಠಾಕ್ರೆ, ಕಾಂಗ್ರೆಸ್ ಸೋಲಿಗೆ ಯಾರು ಕಾರಣ ಎಂದು ಹೇಳೇ ಇಲ್ಲ. 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮಕಾಡೆ ಮಲಗಲು, ಪ್ರತಿಪಕ್ಷ ಸ್ಥಾನಕ್ಕೂ ಅರ್ಹತೆಯಿಲ್ಲದಂತೆ ಜನ ತಿರಸ್ಕರಿಸಿದಕ್ಕೆ ಕಾರಣ ರಾಹುಲ್ ಗಾಂಧಿ ಎಂದು ಎಲ್ಲೂ ಹೇಳಿಲ್ಲ.
ಖಂಡಿತವಾಗಿಯೂ 2014ರಲ್ಲಿ ದೇಶಾದ್ಯಂತ ನರೇಂದ್ರ ಮೋದಿ ಅಲೆಯಿತ್ತು. ಅವರು ಗುಜರಾತ್ ಅಭಿವೃದ್ಧಿಪಡಿಸಿದ ಪರಿ, ವ್ಯಕ್ತಿತ್ವ, ಕಾಂಗ್ರೆಸ್ಸಿನ ಭ್ರಷ್ಟಾಚಾರ, ದೇಶಕ್ಕೊಬ್ಬ ಸಮರ್ಥ ನಾಯಕ ಬೇಕು ಎಂಬ ಜನರ ಆಕಾಂಕ್ಷೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಿತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.
ಠಾಕ್ರೆಯವರ ಈ ರಾಜಕೀಯ ಪ್ರೇರಿತ ಹೇಳಿಕೆ ಗಮನಿಸುವುದಾದರೆ, ಕಾಂಗ್ರೆಸ್ ಸೋಲಿಗೆ ರಾಹುಲ್ ಗಾಂಧಿಯೇ ಕಾರಣ. ಏಕೆಂದರೆ, 2014ರಲ್ಲಿ ರಾಹುಲ್ ಗಾಂಧಿಯವರಿಗೆ ಪ್ರಧಾನಿಯಾಗುವ ಉತ್ಕಟ ಬಯಕೆ ಶುರುವಾಗಿತ್ತು. ಹೀಗಾಗಿಯೇ ಕಾಂಗ್ರೆಸ್ ಪರೋಕ್ಷವಾಗಿ ರಾಹುಲ್ ಗಾಂಧಿ ನಾಯಕತ್ವದಲ್ಲೇ ಚುನಾವಣೆ ಎದುರಿಸಿತು.
ಆದರೆ ಅಷ್ಟೊತ್ತಿಗೆ ರಾಹುಲ್ ಗಾಂಧಿ “ಪಪ್ಪು” ಎಂದೇ ಖ್ಯಾತರಾಗಿದ್ದರು. ಪತ್ರಕರ್ತ ಆರ್ನಬ್ ಗೋಸ್ವಾಮಿಗೆ ನೀಡಿದ ಸಂದರ್ಶನದಲ್ಲಿ ರಾಹುಲ್ ಗಾಂಧಿ ಎಂಥ ಮಹತ್ವಾಕಾಂಕ್ಷೆ ಹಾಗೂ ದೂರದೃಷ್ಟಿ ಹೊಂದಿದ ನಾಯಕ ಎಂಬುದು ಎಲ್ಲರಿಗೂ ಗೊತ್ತಾಗಿತ್ತು. ಮೇಲಾಗಿ ಈತ ದೇಶವಾಳಲು ಅನರ್ಹ ಎಂದು ತೀರ್ಮಾನಿಸಿದ್ದರು. ಇದೇ ಕಾರಣಕ್ಕೆ ಕಾಂಗ್ರೆಸ್ ಧೂಳೀಪಟವಾಯಿತು.
ರಾಜ್ ಠಾಕ್ರೆ ಮೋದಿಗೆ ಗೆಲುವಿನ ಕ್ರೆಡಿಟ್ ರಾಹುಲ್ ಗಾಂಧಿಗೆ ಕೊಡುವುದಕ್ಕಿಂತ, ಕಾಂಗ್ರೆಸ್ ಸೋಲಿನ ಸಂಪೂರ್ಣ ಕ್ರೆಡಿಟ್ ರಾಹುಲ್ ಗೆ ಕೊಟ್ಟರೆ ಒಳ್ಳೆಯದು ಹಾಗೂ ಅದು ಅಷ್ಟೇ ಸಮಂಜಸ.
Leave A Reply