ರಾಹುಲ್ ಗಾಂಧಿಗೆ ಗುಜರಾತ್ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ, ಕನಿಷ್ಠ ಇದನ್ನಾದರೂ ಸಾಬೀತುಪಡಿಸುವರೆ?
ಮುಂಬರುವ ಡಿಸೆಂಬರ್ ಪ್ರಧಾನಿ ನರೇಂದ್ರ ಮೋದಿ ನಾಡಾದ ಗುಜರಾತಿನಲ್ಲಿ ಚುನಾವಣೆಗೆ ಸಾಕ್ಷಿಯಾಗಲಿದೆ. ಒಂದೂವರೆ ದಶಕದ ನಂತರ ಮೋದಿ ಹೊರತಾಗಿ ಗುಜರಾತಿನಲ್ಲಿ ಬೇರೊಬ್ಬರು ಮುಖ್ಯಮಂತ್ರಿಯಾಗಲು ಚುನಾವಣೆ ನಡೆಯಲಿದೆ.
ಈ ವಿಧಾನಸಭೆ ಚುನಾವಣೆ ಕೇವಲ ವಿಧಾನಸಭೆಗೆ ಮಾತ್ರವಲ್ಲ, ಮುಂದಿನ ಲೋಕಸಭೆ ಚುನಾವಣೆ ಮುನ್ನಡೆಗೆ ಮುನ್ನುಡು ಬರೆಯಲಿದೆ. ಹಾಗಾಗಿಯೇ ಚುನಾವಣೆ ಕಣ ರಂಗೇರಿದೆ. ಒಂದೆಡೆ ಇದು ರಾಹುಲ್ ಗಾಂಧಿ ಹಾಗೂ ನರೇಂದ್ರ ಮೋದಿ ನಡುವಿನ ಕಾಳಗ ಎಂದೇ ಬಿಂಬಿಸಲಾಗುತ್ತಿದೆ…
ಆದರೆ…
ರಾಹುಲ್ ಗಾಂಧಿ ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಮುನ್ನಡೆಗೆ ಕಾರಣವಾಗುತ್ತಾರಾ? ಮೋದಿ ಭಾರಿ ಮುಖಭಂಗ ಅನುಭವಿಸುವಂತೆ ಮಾಡುತ್ತಾರಾ? ಲೋಕಸಭೆ ಚುನಾವಣೆ ವೇಳೆಗೆ ರಾಹುಲ್ ಗಾಂಧಿ ಈಗಿರುವ ಹಾಸ್ಯಾಸ್ಪದ ವ್ಯಕ್ತಿತ್ವ ಕಳಚಿಕೊಂಡು ರಾಷ್ಟ್ರೀಯ ನಾಯಕನಾಗಿ ಹೊರಹೊಮ್ಮುತ್ತಾರಾ?
ಖಂಡಿತ ಸಾಧ್ಯವಿಲ್ಲ…
ಅದಕ್ಕೆ ಕಾರಣಗಳೂ ಇವೆ. ಇದುವರೆಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಜೋಡಿ ಉತ್ತರ ಪ್ರದೇಶ, ಗೋವಾ, ರಾಜಸ್ತಾನ, ಉತ್ತರಾಖಂಡ, ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆ ಬೇಟೆಯಾಡಿದ್ದಾರೆ. ಯಾವ ರಾಜ್ಯವಾದರೂ ಸರಿ, ಒಂದು ಕೈ ನೋಡೇಬಿಡುತ್ತೇವೆ ಎಂಬ ಛಾತಿ ಹೊಂದಿದ್ದಾರೆ.
ಅಂದಹಾಗೆ ಇದು ಗುಜರಾತ್. ಇಬ್ಬರಿಗೂ ಇದು ಗೊತ್ತಿರುವ ಊರು. ನರೇಂದ್ರ ಮೋದಿಗೆ ತವರೂರು, ಅಮಿತ್ ಶಾಗೆ ಉಂಡು ಆಡಿದ ಗಲ್ಲಿಯ ಹಾಗಿದೆ ಗುಜರಾತ್. ಇನ್ನು ದೆಹಲಿಯ ರಾಜಕೀಯ ಮೊಗಸಾಲೆಯಲ್ಲೇ ಹೊರಳಾಡಿದ ರಾಹುಲ್ ಇಲ್ಲಿ ಗೆಲ್ಲಲು ಸಾಧ್ಯವಾ?
ಇದಿಷ್ಟೇ ಅಲ್ಲ, ನೋಟು ನಿಷೇಧದಿಂದ ನರೇಂದ್ರ ಮೋದಿ ಕೀರ್ತಿ ಉತ್ತುಂಗಕ್ಕೇರಿದೆ. ಜಿಎಸ್ ಟಿಯೂ ಉತ್ತಮ ಹೆಸರು ತಂದು ಕೊಟ್ಟಿದೆ. ಆದಾಗ್ಯೂ, ಮೋದಿ ವರ್ಚಸ್ಸು, ಗುಜರಾತಿನ ಅಭಿವೃದ್ಧಿಗೊಳಿಸಿದ್ದು ಎಲ್ಲವೂ ಗುಜರಾತಿಗರಿಗೆ ನೆನಪಿದೆ. ಅವರು ಬಿಜೆಪಿಯಿಂದ ಉಪಕೃತರಾದ ಭಾವ ಹೊಂದಿದ್ದಾರೆ.
ಇದರ ಜತೆಗೆ ಕೋಟ್ಯಂತರ ರೂಪಾಯಿಗೆ ಗುಜರಾತ್ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನೀಡಿದ ಹಣ, ನರೇಂದ್ರ ಮೋದಿ ಗುಜರಾತಿಗೆ ನೀಡುತ್ತಿರುವ ಸಾಲು ಸಾಲು ಭೇಟಿಗಳು ಗುಜರಾತಿನ ಜನರನ್ನು ಸೆಳೆಯುವುದರಲ್ಲಿ ಎರಡು ಮಾತಿಲ್ಲ.
ಇವುಗಳ ಜತೆಗೇ, ವಿರೋಧ ಪಕ್ಷಗಳ, ರಾಹುಲ್ ಗಾಂಧಿಗಳ ಟೀಕೆಗಳನ್ನೇ ಮೋದಿ ತಮ್ಮ ಅನುಕೂಲಕ್ಕಾಗಿ, ಸಕಾರಾತ್ಮಕವಾಗಿ ಬಳಸಿಕೊಳ್ಳುವ ಚಾಣಾಕ್ಷತನ ತೋರುತ್ತಿದ್ದಾರೆ. “ಜನಸಂಘದ ಜನ್ಮದ ಕಾಲದಿಂದಲೂ ನಮ್ಮನ್ನು ಕೀಳಾಗಿ ನೋಡಲಾಗುತ್ತಿದೆ, ಬೈಗುಳಗಳು ಬರುತ್ತಿವೆ” ಎಂದು ಸಿಂಪತಿ ಪಡೆಯುತ್ತಿದ್ದಾರೆ. “ನನ್ನನ್ನು ಅವರು ಸಾವಿನ ವ್ಯಾಪಾರಿ ಎಂದು ಜರಿದರು. ನಾನೇನು ಮಾಡಿದ್ದೇನೆ?” ಎಂಬಂಥ ಮಾತುಗಳು ಮೋದಿ ಪರ ಅಲೆ ಸೃಷ್ಟಿಸಿವೆ. ಇದು ನಿಜವೂ ಆಗಿರುವುದರಿಂದ ಜನರನ್ನು ಸೆಳೆಯುತ್ತಿರುವುದರಲ್ಲಿ ಎರಡು ಮಾತಿಲ್ಲ.
ಮೋದಿ-ಶಾರ ಈ ತಂತ್ರದ ನಡುವೆಯೇ ಕಾಂಗ್ರೆಸ್ ಪ್ರತಿತಂತ್ರ ಹೆಣೆಯುತ್ತಿದೆ. ಅತ್ತ ಕಾಂಗ್ರೆಸ್ ಸಹ ಬುದ್ಧಿ ಉಪಯೋಗಿಸಿ, ಈ ಚುನಾವಣೆಯನ್ನು ರಾಹುಲ್ ಗಾಂಧಿಯನ್ನು ನಾಯಕನನ್ನಾಗಿ ಬಿಂಬಿಸಲು ಬಳಸುತ್ತಿದೆ. ರಾಹುಲ್ ಗಾಂಧಿ ಸಹ ಅತ್ಯುತ್ಸಾಹದಿಂದಲೇ ಗುಜರಾತಿಗೆ ತೆರಳುತ್ತಿದ್ದಾರೆ. ದೇವಾಲಯಗಳಿಗೆ ಭೇಟಿ ನೀಡಿ ಹಿಂದುತ್ವ ಜಪ ಪಠಿಸುತ್ತಿದ್ದಾರೆ. ಜನರನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ.
ಸಭೆಯಲ್ಲಿ “ಜನರಿಗೆ ಉದ್ಯೋಗ ಇಲ್ಲ, ಗುಡಿ ಕೈಗಾರಿಕೆಗೆ ಪ್ರೋತ್ಸಾಹ ಇಲ್ಲ, ಮೂಲ ಸೌಕರ್ಯ ಇಲ್ಲ, ಮೋದಿ ಅದು ಮಾಡಿಲ್ಲ, ಇದು ಮಾಡಿಲ್ಲ” ಎನ್ನುತ್ತಾರೆ. ಜಿಎಸ್ಟಿ ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಅಬ್ಬರಿಸುತ್ತಾರೆ. ಪ್ರತಿ ಚುನಾವಣೆಯಲ್ಲೂ ಇದು ಸಾಮಾನ್ಯವೆನಿಸಿದರೂ, ಈ ಬಾರಿ ರಾಹುಲ್ ಗಾಂಧಿ ಪ್ರಯತ್ನ ಜೋರಾಗಿದೆ.
ಆದರೂ, ಕಾಂಗ್ರೆಸ್ ಏನು ಎಂಬುದು ಗುಜರಾತಿಗರಿಗೆ ಗೊತ್ತು. ರಾಹುಲ್ ಗಾಂಧಿ ವ್ಯಕ್ತಿತ್ವ ಹಾಗೂ ನಾಯಕತ್ವದ ಅರಿವಿದೆ. ಮೋದಿ ಹಾಗೂ ಬಿಜೆಪಿ ಮಾಡಿದ ಅಭಿವೃದ್ಧಿಯೂ ಗೊತ್ತಿದೆ. ಹಾಗಾಗಿ ಕಾಂಗ್ರೆಸ್ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಗುಜರಾತ್ ಗೆಲ್ಲುತ್ತೇವೆ ಎಂದು ಹೊರಟರೆ ಮಕಾಡೆ ಮಲಗುವುದರಲ್ಲಿ ಎರಡು ಮಾತಿಲ್ಲ. ರಾಹುಲ್ ಗಾಂಧಿ ಕನಿಷ್ಠಪಕ್ಷ ಬಿಜೆಪಿಯ ಗೆಲುವಿನ ಸ್ಥಾನಗಳನ್ನು ಸ್ವಲ್ಪವಾದರೂ ಕುಗ್ಗಿಸಬೇಕು. ಆದರೆ ಅದಾದರೂ ರಾಹುಲ್ ಗಾಂಧಿಯಿಂದ ಸಾಧ್ಯವಾ? ಚುನಾವಣೆ ಫಲಿತಾಂಶವೇ ಹೇಳಬೇಕು…
ಸ್ನೇಹಸೇತು-ಎನ್ ಡಿಟಿವಿ
Leave A Reply