ಪ್ರೇಮ್ ಕುಮಾರ್ ಧುಮಾಲ್ ಏಕೆ ಹಿಮಾಚಲ ಪ್ರದೇಶ ಸಿಎಂ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದು ಗೊತ್ತಾ?
- ಜೆ.ಪಿ.ನಡ್ಡಾ ಎಂಬ ಅನುಭವಿ ರಾಜಕಾರಣಿ.
- ಕಾಂಗ್ರಾ ಪ್ರದೇಶದ ಪ್ರಬಲ ಹಾಗೂ ಅನುಭವಿ ರಾಜಕಾರಣಿ ಶಾಂತಕುಮಾರ್.
- ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್…
ಹಿಮಾಚಲ ಪ್ರದೇಶದಲ್ಲಿ ಚುನಾವಣೆ ಘೋಷಣೆಯಾಗುತ್ತಲೇ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗಳಿಗೆ ಮೇಲಿನ ಘಟಾನುಘಟಿಗಳ ಹೆಸರುಗಳು ಕೇಳಿಬಂದಿದ್ದವು. ಚುನಾವಣೆ ಹತ್ತಿರ ಬರುತ್ತಲೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಉತ್ತರ ಪ್ರದೇಶ ಚುನಾವಣೆಯಂತೆಯೇ ಬಿಜೆಪಿ ಗೆಲುವು ಸಾಧಿಸಿದ ಬಳಿಕ ಯಾರನ್ನೋ ಒಬ್ಬರನ್ನು ಮುಖ್ಯಮಂತ್ರಿ ಗಾದಿಗೆ ಕೂರಿಸುತ್ತಾರೆ ಎಂಬ ಮಾತುಗಳೂ ಚಾಲ್ತಿಯಲ್ಲಿದ್ದವು.
ಆದರೆ ನೂತನ ತಂತ್ರ ಹೊಸೆದಿರುವ ಬಿಜೆಪಿ ಪ್ರೇಮ್ ಕುಮಾರ್ ಧುಮಾಲ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದೆ? ಅಷ್ಟಕ್ಕೂ ಪ್ರೇಮ್ ಕುಮಾರ್ ಧುಮಾಲ್ ಅವರನ್ನೇ ಸಿಎಂ ಅಭ್ಯರ್ಥಿ ಎಂದು ಘೋಷಿಸಿದ್ದೇಕೆ? ಇದರ ಹಿಂದೆ ಯಾವ ತಂತ್ರವಿದೆ? ಬೇರೆ ಘಟಾನುಘಟಿಗಳಿಗಿಂತ ಧುಮಾಲ್ ಹೇಗೆ ಪ್ರಬಲ?
ಖಂಡಿತವಾಗಿಯೂ ಜೆ.ಪಿ.ನಡ್ಡಾ ಎಂಬ ಬ್ರಾಹ್ಮಣ ರಾಜಕಾರಣಿ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಎಲ್ಲ ಅರ್ಹತೆಯಿದ್ದವು. ಅಜಯ್ ಜಮ್ವಾಲ್ ಸಹ ರೇಸಿನಲ್ಲಿದ್ದರು. ಆದರೆ ಕಾಂಗ್ರೆಸ್ ವೀರಭದ್ರ ಸಿಂಗ್ ಎಂಬ ಠಾಕೂರ್ ನಾಯಕರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಹಿಮಾಚಲ ಪ್ರದೇಶದಲ್ಲಿ ಠಾಕೂರರು ಶೇ.28ರಷ್ಟಿದ್ದಾರೆ. ಈ ಕಾರಣಕ್ಕೇ ಠಾಕೂರರಾದ ಬಿಜೆಪಿ ಪ್ರೇಮ್ ಕುಮಾರ್ ಧುಮಾಲ್ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿ ಆರಂಭದಲ್ಲೇ ಕಾಂಗ್ರೆಸ್ಸಿಗೆ ಟಾಂಗ್ ನೀಡಿದೆ.
ಬರೀ ಜಾತಿಯೊಂದೇ ಅಲ್ಲ, ಪ್ರೇಮ್ ಕುಮಾರ್ ಧುಮಾಲ್ ಎರಡು ಬಾರಿ (1998-2003, 2008-12) ರಾಜ್ಯದ ಮುಖ್ಯಮಂತ್ರಿಯಾಗಿ ಅನುಭವವೂ ಇದೆ. ಧುಮಾಲ್ ಆಡಳಿತ ಹೇಗೆ ಎಂಬುದು ಜನರಿಗೆ ಗೊತ್ತು, ಅದಕ್ಕಾಗಿಯೇ ಬಿಜೆಪಿ ಧುಮಾಲ್ ಅವರನ್ನು ಆಯ್ಕೆ ಮಾಡಿದೆ.
ಅಷ್ಟೇ ಅಲ್ಲ, ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲು ಈ ಬಾರಿ ಬಿಜೆಪಿ ಹೊಸ ತಂತ್ರ ಮಾಡಿತ್ತು. ರಾಜ್ಯದಲ್ಲಿ ಯಾರ ಪ್ರಭಾವ ಹಾಗೂ ಖ್ಯಾತಿ ಇದೆ ಎಂದು ರಾಜ್ಯ ಬಿಜೆಪಿ ಘಟಕದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದೆ. ಸಮೀಕ್ಷೆ ನಡೆಸಿದೆ. ರಾಜ್ಯ ಬಿಜೆಪಿ ನಾಯಕರ ಅಭಿಪ್ರಾಯ ಸಂಗ್ರಹಿಸಿದೆ. ಇದರಲ್ಲಿ ಜೆ.ಪಿ.ನಡ್ಡಾ ಅವರಿಗಿಂತಲೂ ಧುಮಾಲ್ ಅವರ ವ್ಯಕ್ತಿತ್ವವೇ ಸೆಳೆದ ಹಿನ್ನೆಲೆಯಲ್ಲೇ ಧುಮಾಲರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ.
ಆದಾಗ್ಯೂ, ಉತ್ತರ ಪ್ರದೇಶ ಚುನಾವಣೆಯಂತೆಯೇ ಬಿಜೆಪಿ ಗೆಲುವು ಸಾಧಿಸಿದ ಬಳಿಕ ಸಿಎಂ ಅಭ್ಯರ್ಥಿಯನ್ನು ಘೋಷಿಸಬೇಕಿತ್ತು. ಮೋದಿ ಅಲೆಯೂ ಇತ್ತು. ಆದರೆ ಕಾಂಗ್ರೆಸ್ ಠಾಕೂರ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಹಿನ್ನೆಲೆಯಲ್ಲಿ ಹಾಗೂ ಪ್ರಬಲ ಸ್ಪರ್ಧೆ ಇರುವ ಕಾರಣ ಮತ್ತು ಬಿಜೆಪಿ ಸಿಎಂ ಅಭ್ಯರ್ಥಿ ಘೋಷಿಸದೆ ಜನರನ್ನು ಗೊಂದಲಕ್ಕೀಡುಮಾಡುತ್ತದೆ ಎಂಬ ಮಾತು ಕೇಳಿಬಂದ ಕಾರಣ ಧುಮಾಲ್ ಅವರನ್ನು ನೇಮಿಸಿದೆ.
ಈ ಎಲ್ಲ ಕಾರಣಗಳಿಂದ ಪ್ರೇಮ್ ಧುಮಾಲ್ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದು, ರಾಜ್ಯದಲ್ಲಿ ಬಿಜೆಪಿ ಗೆಲುವಿಗೆ ಇದು ಸಹಕಾರಿಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಠಾಕೂರರ ಆಯ್ಕೆಯಿಂದ ಕಾಂಗ್ರೆಸ್ಗೆ ನಡುಕ ಸಹ ಹುಟ್ಟಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
Leave A Reply