ಮಂಗಳೂರು ಮೇಯರ್ ಕವಿತಾ ಸನಿಲ್ ಅವರಿಂದ ಮುಂದುವರೆದ ದಾಳಿ!
ನಿನ್ನೆ ನಾನು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆದಷ್ಟು ಶೀಘ್ರದಲ್ಲಿ ನಮ್ಮ ದೇಶದ ಕಾನೂನಿನಲ್ಲಿ ದೊಡ್ಡ ಬದಲಾವಣೆ ತರಬೇಕೆಂದು ಬರೆದಿದ್ದೆ. ಒಂದು ಪ್ರಕರಣ ಇಷ್ಟೇ ದಿನಗಳ ಒಳಗೆ ಮುಗಿಯದೇ ಹೋದರೆ ಏನಾಗುತ್ತದೆ ಎನ್ನುವುದು ಅದು ಅನುಭವಿಸಿದವರಿಗೆನೆ ಗೊತ್ತು. ಅದಕ್ಕೆ ಮುಂದುವರೆದ ಭಾಗವಾಗಿ ನಮ್ಮ ಮಂಗಳೂರಿನ ಪ್ರಥಮ ಪ್ರಜೆ ಕವಿತಾ ಸನಿಲ್ ಮಂಗಳೂರಿನ ಕಡೆಯ ಪ್ರಜೆಗಳ ಸಾಲಲ್ಲಿ ಬರುವ ನಾಗರಿಕರೊಬ್ಬರ ಮಗುವನ್ನು ಎತ್ತಿ ಬಿಸಾಡಿದ ಪ್ರಕರಣದಲ್ಲಿ ನಮ್ಮ ಕಾನೂನು, ಪೊಲೀಸ್ ಇಲಾಖೆ, ಅಧಿಕಾರಿಗಳು ಹೇಗೆ ವರ್ತಿಸಿದ್ದಾರೆ ಎನ್ನುವುದನ್ನು ಬರೆಯಲೇಬೇಕು.
ನಿಮ್ಮ ಕೈಯಲ್ಲಿ ಪವರ್ ಇದ್ರೆ ನೀವು ಹೇಳಿದ ಸೆಕ್ಷನ್ ಪೊಲೀಸರು ಹಾಕುತ್ತಾರೆ. ಪವರ್ ಇಲ್ಲದಿದ್ದರೆ ನಿಮ್ಮನ್ನು ಓಕ್ಷನ್ ಮಾಡಿಬಿಡುತ್ತಾರೆ. ಮೇಯರ್ “ಕೈ”ಯಲ್ಲಿ ಅಧಿಕಾರ ಇದೆ. ರಾಜ್ಯದಲ್ಲಿ ಅವರ ಸರಕಾರ ಇದೆ. ಸಹಜವಾಗಿ ಅವರದ್ದೇ ಉಸ್ತುವಾರಿ ಸಚಿವರಿದ್ದಾರೆ. ಶಾಸಕರು ಅವರದ್ದೇ ಪಕ್ಷದವರು. ಇಷ್ಟಾಗಿಯೂ ಅವರು ಐಪಿಸಿ 307 ಎಂದರೆ
ಕೊಲೆಯತ್ನ ಸೆಕ್ಷನ್ ಬಳಸದಿದ್ರೆ ಅವರ ಲೆವೆಲ್ಲಿಗೆ ಕಡಿಮೆಯಾಗಲ್ವಾ? ಇದ್ದದ್ದರಲ್ಲಿ ಸ್ಟ್ರಾಂಗ್ ಸೆಕ್ಷನ್ ಯಾವುದು ಎಂದು ನೋಡಿ ಅದಕ್ಕೆ ಸರಿಯಾಗಿ ಆ ಸೆಕ್ಷನ್ ಹಾಕಿ ಬಡಪಾಯಿ ಸೆಕ್ಯೂರಿಟಿ ಗಾರ್ಡ್ ಮತ್ತು ಹೆಂಡತಿ ಹಾಗೂ ಮಕ್ಕಳು ಜೀವಮಾನವೀಡಿ ಜೈಲಿನಲ್ಲಿ ಕೊಳೆಯುವಂತಾಗಲಿ ಎಂದು ಹೊರಡುವುದಿದೆಯಲ್ಲ, ಅದನ್ನು ಈಗ ಜನ ಪ್ರಶ್ನಿಸುತ್ತಿರುವುದು.
ಆದದ್ದೇನೆಂದರೆ ಆವತ್ತು ದೀಪಾವಳಿ. ದೀಪಾವಳಿ ಎಂದ ಮೇಲೆ ಪಟಾಕಿ ಹೊಡೆಯುವುದು ಮಕ್ಕಳು ಸಾಮಾನ್ಯ. ಪಟಾಕಿಯ ರೇಟ್ ಎಷ್ಟೇ ಜಾಸ್ತಿಯಾಗಿದ್ದರೂ ಮಕ್ಕಳ ಆಸೆಗೆ ಪೋಷಕರು ತೆಗೆಸಿಕೊಡುವುದು ಮಾಮೂಲು. ಆದರೆ ಪಾಪದವರ ಮಕ್ಕಳಿಗೆ ಬೇರೆಯವರು ಪಟಾಕಿ ಹೊಡೆಯುವುದನ್ನು ನೋಡುವುದಷ್ಟೇ ಖುಷಿ ಮತ್ತು ಅದರಲ್ಲಿಯೇ ಅವರ ದೀಪಾವಳಿ ಕಳೆದುಹೋಗುತ್ತದೆ. ಕವಿತಾ ಸನಿಲ್ ಅವರ ಮಗಳು ಆವತ್ತು ಪಟಾಕಿ ಹೊಡೆಯಲು ತಮ್ಮ ಫ್ಲಾಟಿನ ವಾಹನ ಪಾರ್ಕಿಂಗ್ ಮಾಡುವ ಕಡೆ ಬಂದಿದ್ದಾಳೆ. ಅಲ್ಲಿಯೇ ಸೆಕ್ಯೂರಿಟಿ ಗಾರ್ಡ್ ನ ಕುಟುಂಬ ಒಂದು ಕೋಣೆಯಲ್ಲಿ ವಾಸಿಸುತ್ತದೆ. ಮೇಯರ್ ಮಗಳು ಪಟಾಕಿ ಹೊಡೆಯುವುದನ್ನು ಸೆಕ್ಯೂರಿಟಿಯವನ ಮಗಳೋ, ಮಗನೋ ಆಸೆಯಿಂದ ನೋಡಿದ್ದಾರೆ. ಪಟಾಕಿಗೆ ಹಣ ಕೊಟ್ಟು ಖರೀದಿಸುವಷ್ಟು ತಾಕತ್ತು ಅವರಿಗೆ ಇಲ್ಲವಾಗಿರುವುದರಿಂದ ಫ್ಲಾಟಿನ ಯಾರಾದರೂ ಶ್ರೀಮಂತರ ಮಕ್ಕಳು ಕೆಳಗೆ ಬಂದು ಹೊಡೆದಾಗ ಕೊಟ್ಟರೆ ಹೊಡೆಯೋಣ ಎಂದು ಕಾಯುವುದು ವಿಶೇಷವಲ್ಲ. ಅದೊಂದು ರೀತಿಯಲ್ಲಿ ಆಸೆ ಮತ್ತು ನಿರೀಕ್ಷೆ.
ಹಾಗೆ ಮೇಯರ್ ಮಗಳು ಮತ್ತು ಸೆಕ್ಯೂರಿಟಿಯವನ ಮಕ್ಕಳು ಪಟಾಕಿ ಹೊಡೆಯುವಾಗ ಮಕ್ಕಳಾಟಿಕೆ ಮಾಡಿಕೊಂಡಿದ್ದಾರೆ. ಕವಿತಾ ಸನಿಲ್ ಮಗಳು, ಸೆಕ್ಯೂರಿಟಿ ಪುಂಡಲೀಕನ ಮಗನ ಕಾಲಿಗೆ ಸುರುಸುರು ಕಡ್ಡಿ ತಾಗಿಸಿದ್ದಾಳೆ. ಅಲ್ಲಿ ಮಕ್ಕಳ ನಡುವೆ ಗಲಾಟೆಯಾಗಿದೆ. ತನ್ನ ಮಗನೊಂದಿಗೆ ಕವಿತಾ ಸನಿಲ್ ಮಗಳು ಗಲಾಟೆ ಮಾಡುತ್ತಿರುವುದು ನೋಡಿ ಪುಂಡಲೀಕರ ಹೆಂಡತಿ ಕಮಲಾ ಏನಾಯ್ತು ಎಂದು ವಿಚಾರಿಸಲು ಓಡಿ ಬಂದಿದ್ದಾರೆ. ಇನ್ನು ತಾನು ಅವರ ಮಗನ ಕಾಲಿಗೆ ಪಟಾಕಿ ತಾಗಿಸಿದ್ದು ನೋಡಿ ಕಮಲಾ ತನಗೆ ಹೊಡೆಯಬಹುದು ಎಂದು ಹೆದರಿ ಮೇಯರ್ ಮಗಳು ಹೊರಗೆ ಓಡಿದ್ದಾಳೆ. ಅವಳ ಹಿಂದೆ ಕಮಲಾ ಕೂಡ ಬಿರುಬಿರನೆ ಹೆಜ್ಜೆ ಹಾಕಿದ್ದಾರೆ. ಕವಿತಾ ಮಗಳು ಈ ಫ್ಲಾಟಿನ ಕಂಪೌಂಡಿಗೆ ತಾಗಿ ಇರುವ ಮತ್ತೊಂದು ಕಂಪೌಂಡಿಗೆ ಹೋಗಿದ್ದಾರೆ. ಆ ಹುಡುಗಿ ಅಲ್ಲಿ ಹೋದದ್ದನ್ನು ನೋಡಿ ಕಮಲಾ ಹಿಂತಿರುಗಿ ಬಂದಿದ್ದಾರೆ. ಇದು ಕೊಲೆಯತ್ನ ಆಗುತ್ತಾ? ಮೇಯರ್ ಅವರೇ, ಹೇಳಿ ಇದು ಕೊಲೆಯತ್ನ ಆಗುತ್ತಾ? ಯಾರೋ ಮಾತನಾಡುವ ಧ್ವನಿ ಇಲ್ಲದವರು ಎನ್ನುವ ಕಾರಣಕ್ಕೆ ಅವರ ಮೇಲೆ ಕಠಿಣ ಸೆಕ್ಷನ್ ಹಾಕಿ ಒಳಗೆ ಕುಳ್ಳಿರಿಸಲು ನಿಮಗೆ ಸಾಧ್ಯವಾಗುವುದನ್ನೇ ನಾವು ನಮ್ಮ ಕಾನೂನಿನಲ್ಲಿರುವ ಲೋಪ ಅಥವಾ ದೋಷ ಎಂದು ಹೇಳುವುದು.
ಇಷ್ಟು ಸೀನ್ ಆಗುವಾಗ ಬೆಂಗಳೂರಿನಲ್ಲಿದ್ದ ಮೇಯರ್ ಕವಿತಾ ಮನೆಗೆ ಬಂದ ಬಳಿಕ ಮರುದಿನ ಬೆಳಿಗ್ಗೆ ಸೀದಾ ವಾಚ್ ಮೆನ್ ಕುಟುಂಬ ವಾಸಿಸುವ ಕೋಣೆಗೆ ಹೋಗಿ ಅವರನ್ನು ಹಿಗ್ಗಾಮುಗ್ಗಾ ಬೈದು ರಂಪಾಟ ಮಾಡುವ ಅಗತ್ಯ ಇದೆಯಾ? ನಂತರ ಸೆಕ್ಯೂರಿಟಿ ಗಾರ್ಡ್ ಕುಟುಂಬದವರು ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟ ಬಳಿಕ ಮೇಯರ್ ಕವಿತಾ ಸನಿಲ್ ಅವರಿಗೆ ತನ್ನ ಮಗಳ ಮೇಲೆ ಆದ ಕೊಲೆಯತ್ನ ನೆನಪಾಯಿತಾ? ಹಾಗಾದರೆ ಅವರು ಮೊದಲು ದೂರು ಕೊಟ್ಟರು ಎನ್ನುವ ಕಾರಣಕ್ಕೆ ಅವರಿಗಿಂತ ಸ್ಟ್ರಾಂಗ್ ಸೆಕ್ಷನ್ ಹಾಕಿ ತಾನು ದೂರು ಕೊಡಬೇಕು ಎನ್ನುವುದು ಮೇಯರ್ ಅವರ ಉದ್ದೇಶವಾಗಿತ್ತು ಎನ್ನುವುದು ಸ್ಪಷ್ಟವಲ್ಲವೇ?
ಮೇಯರ್ ಅವರು ಕರಾಟೆ ಚಾಂಪಿಯನ್ ಆಗಿರಬಹುದು. ಆದರೆ ಒಂದು ಪುಟ್ಟ ಮಗುವಿನ ಮೇಲೆ ತಮ್ಮ ಸಾಮರ್ಥ್ಯ ತೋರಿಸಬಾರದಿತ್ತು. ಅವರ ಕರಾಟೆ ಚಾಂಪಿಯನ್ ಕಾರ್ಯಕ್ರಮ ಇನ್ನೇನೂ ಶುರುವಾಗಲಿದೆ. ಅಲ್ಲಿ ಅವರಿಗೆ ಬಲಶಾಲಿಗಳ ಮೇಲೆ ಅದನ್ನು ತೋರಿಸಲು ಅವಕಾಶವಿದೆ. ಇನ್ನು ಆ ಪುಂಡಲೀಕ ಹಾಗೂ ಕಮಲಾ ದಂಪತಿಗೆ ಭಾರತೀಯ ಜನತಾ ಪಾರ್ಟಿಯವರು ಬೆಂಬಲ ಕೊಟ್ಟು ಕೇಸ್ ಮಾಡಿಸಿದ್ದಾರೆ ಎನ್ನುವುದು ಕವಿತಾ ಸನಿಲ್ ಆರೋಪ. ಆ ಬಗ್ಗೆ ನಾಳೆ ಹೇಳ್ತೆನೆ. ಮೇಯರ್ ತುಂಬಾ ಸ್ಟ್ರಾಂಗ್ ಗುರೂ ಎಂದು ಎಲ್ಲಾ ಕಡೆ ವಾತಾವರಣ ಇತ್ತು. ಆದರೆ ಪಾಲಿಕೆಯಲ್ಲಿ ಅವರು ಅತ್ತು ಏನೂ ನಿರೂಪಿಸಿದ್ದಾರೆ. ಕಟೀಲಿನಲ್ಲಿ ಆಣೆ ಮಾಡುತ್ತೇನೆ ಎಂದು ಮೇಯರ್ ಹೇಳಿದ್ದಾರೆ. ಅದಕ್ಕೆ ತಾವು ಕೂಡ ತಯಾರಿದ್ದೇವೆ ಎಂದು ಪಾಲಿಕೆ ಸದಸ್ಯೆ ರೂಪಾ ಡಿ ಬಂಗೇರಾ ಉತ್ತರ ಕೊಟ್ಟಿದ್ದಾರೆ.
ಮೇಯರ್ ಗೆ ಪ್ರಚಾರದ ಹುಚ್ಚು ಸ್ವಲ್ಪ ಜಾಸ್ತಿ. ನವರಾತ್ರಿಗೆ ನಾವು ಕೂಡ ಒಂಭತ್ತು ದಿನ ಉಪವಾಸ ಮಾಡುತ್ತೇವೆ, ನಾವು ಕೂಡ ಕಟೀಲಿಗೆ ನಡೆದುಕೊಂಡೇ ಹೋಗುವುದು. ಆದರೆ ಎಲ್ಲಿ ಕೂಡ ಪೇಪರ್, ಟಿವಿಯಲ್ಲಿ ಪ್ರಚಾರ ಪಡೆದುಕೊಂಡಿಲ್ಲ. ನಮ್ಮ ಸೇವೆ ಕಟೀಲಪ್ಪೆಗೆ ಗೊತ್ತು. ಆದರೆ ಕವಿತಾ ಅದರಲ್ಲಿಯೂ ಪಬ್ಲಿಸಿಟಿ ಪಡೆದುಕೊಂಡ್ಲು. ದೇವರಿಗೆ ಅಸಹ್ಯ ಎನಿಸಲ್ವಾ ಎಂದು ಮೊನ್ನೆ ಕಾಂಗ್ರೆಸ್ ಆಫೀಸಿನಲ್ಲಿ ಯುವನಾಯಕರೊಬ್ಬರು ಮಾತನಾಡಿಕೊಳ್ಳುತ್ತಿದ್ದರು ಎಂದು ಗೊತ್ತಾಗಿದೆ!
Leave A Reply