9480802312ಈ ಸಂಖ್ಯೆಗಳಿಗೆ ವಾಟ್ಸಪ್ ಮಾಡಿ, ಉಳಿದದ್ದನ್ನು ಟ್ರಾಫಿಕ್ ಪೊಲೀಸರು ನೋಡಿಕೊಳ್ಳುತ್ತಾರೆ!
Mangaluru:
ಟಿಕೆಟ್ ಕೇಳಿ ಪಡೆಯಿರಿ ಎನ್ನುವ ವಾಕ್ಯವನ್ನು ಅನೇಕ ಬಸ್ಸುಗಳ ಒಳಗೆ ಬರೆದಿರುವುದನ್ನು ನೀವು ಓದಿರಬಹುದು. ಕೆಲವು ಕಡೆ ಡಿಮಾಂಡ್ ಟಿಕೇಟ್ ಎಂದು ಕನ್ನಡ ಗೊತ್ತಿಲ್ಲದವರಿಗೆ ಗೊತ್ತಾಗಲಿ ಎಂದು ಇಂಗ್ಲೀಷ್ ನಲ್ಲಿ ಬರೆದಿರುತ್ತಾರೆ. ಆದರೆ ಯಾವುದೇ ಬಸ್ಸುಗಳಲ್ಲಿಯೂ ಟಿಕೆಟ್ ಕೇಳಿ ಪಡೆಯಿರಿ ಎಂದು ವಾಕ್ಯ ಇರುವ ಕಡೆ ಟಿಕೆಟ್ ಕೊಡದಿದ್ದರೆ ಅಥವಾ ಸಿಗದಿದ್ದರೆ ಏನು ಮಾಡಬೇಕು ಎಂದು ಬರೆದಿರುವುದಿಲ್ಲ. “ಟಿಕೆಟ್ ಕೇಳಿ ಪಡೆಯಿರಿ ಕೊಡದಿದ್ದರೆ ನಾಲ್ಕು ಬಾರಿಸಿ” ಎಂದು ಬರೆದಿರಬೇಕು ಎಂದು ನಾನು ಹೇಳುವುದಿಲ್ಲ. ಟಿಕೆಟ್ ಕೇಳಿ ಪಡೆಯಿರಿ, ಕೊಡದಿದ್ದರೆ ಗಲಾಟೆ ಮಾಡಿ ಎಂದು ಕೂಡ ನಾನು ಹೇಳುವುದಿಲ್ಲ. ಆದರೆ ಕನಿಷ್ಟ ಏನು ಮಾಡಬೇಕು ಟಿಕೆಟ್ ಸಿಗದಿದ್ದರೆ ಎಂದು ಅಲ್ಲಿಯೇ ವಾಕ್ಯ ಮುಂದುವರೆಸಿ ಬರೆದಿದ್ದರೆ ಒಳ್ಳೆಯದಿತ್ತು ಎನ್ನುವುದು ನನ್ನ ಅಭಿಪ್ರಾಯ.
“ಸರ್, ನೀವು ಖಾಸಗಿ ಸಿಟಿ ಬಸ್ಸುಗಳಲ್ಲಿಯೂ ಕಡ್ಡಾಯವಾಗಿ ಟಿಕೆಟ್ ವೆಂಡಿಂಗ್ ಮೆಶಿನ್ ಮೂಲಕ ಟಿಕೆಟ್ ಕೊಡಲೇಬೇಕು ಎಂದು ಹೇಳಿದ್ದಿರಿ. ಆದರೆ ಹೆಚ್ಚಿನ ಬಸ್ಸುಗಳಲ್ಲಿ ಟಿಕೆಟ್ ಕೊಡುವುದಿಲ್ಲ, ಏನು ಮಾಡುವುದು” ಎಂದು ಪೊಲೀಸ್ ಕಮೀಷನರ್ ಅವರ ವಾರದ ಫೋನ್ ಇನ್ ಕಾರ್ಯಕ್ರಮದಲ್ಲಿ ನಾಗರಿಕರು ಒಬ್ಬರು ಕೇಳಿದ್ದಕ್ಕೆ ” ಅವರು ಟಿಕೆಟ್ ಕೊಟ್ಟರೆ ಮಾತ್ರ ನೀವು ಹಣ ಕೊಡಿ” ಎಂದು ಕಮೀಷನರ್ ಉತ್ತರಿಸಿದ್ದಾರೆ. ಇದು ಯಾಕೋ ಅಷ್ಟು ಸಮಂಜಸವಾದ ಉತ್ತರ ಎಂದು ಅನಿಸುವುದಿಲ್ಲ. ಮಂಗಳೂರಿನ ಸಿಟಿ ಬಸ್ಸುಗಳಲ್ಲಿ ಪ್ರಯಾಣಿಕರು ಮೊದಲು ಹಣ ಕೊಡುತ್ತಾರೆ, ನಂತರ ತಾವು ಎಲ್ಲಿ ಇಳಿಯುತ್ತೇವೆ ಎಂದು ಹೇಳುತ್ತಾರೆ. ಕಂಡಕ್ಟರ್ ಒಮ್ಮೆ ಹೊರಗೆ ನೋಡಿ ನಂತರ ಮನಸ್ಸಿನಲ್ಲಿಯೇ ಅಲ್ಲಿಂದ ಎಷ್ಟನೇ ಸ್ಟಾಪ್ ಅಥವಾ ಸ್ಟೇಜ್ ಎಂದು ಲೆಕ್ಕ ಹಾಕಿ ಅದಕ್ಕೆ ಒಂದು ರೂಪಾಯಿ ಹೆಚ್ಚಿಗೆ ಹಾಕಿ ನೀವು ಕೊಟ್ಟ ಹಣ ಸರಿ ಆದರೆ ನಿಮ್ಮ ಮುಖ ಕೂಡ ನೋಡದೆ ಮುಂದೆ ಹೋಗುತ್ತಾನೆ. ಅದೇ ಒಂದು ರೂಪಾಯಿ ಕೊಡಲು ಇದ್ದರೆ ಹಣ ನಿಮ್ಮ ಕೈಗೆ ಇಟ್ಟು ಮುಂದಿನ ವ್ಯಕ್ತಿಯತ್ತ ಕೈ ಚಾಚುತ್ತಾನೆ. ನೀವು ಪಿವಿಎಸ್ ನಿಂದ ಲೇಡಿಹಿಲ್ ಗೆ ಹೋಗಲು ಬಸ್ ಹತ್ತಿ ಕಂಡಕ್ಟರ್ ಎದುರು ಹತ್ತು ರೂಪಾಯಿ ಚಾಚಿದರೆ ಎರಡು ರೂಪಾಯಿ ಇದೆಯಾ ಎಂದು ಮೊದಲು ಕೇಳಲಾಗುತ್ತದೆ. ನೀವು ಕೊಟ್ಟರೆ ಐದು ರೂಪಾಯಿ ಕಾಯಿನ್ ಹಿಂತಿರುಗಿಸಿದರೆ ನಿಮ್ಮ ಮತ್ತು ಅವನ ಸಂಬಂಧ ಮುಗಿಯಿತು. ಅವನ ಕುತ್ತಿಗೆಗೆ ವೆಂಡಿಂಗ್ ಮಿಶಿನ್ ಇದೆಯಾ, ಅವನು ಅದರಲ್ಲಿ ಯಾವುದ್ಯಾವುದೋ ನಂಬರ್ ಒತ್ತಿ ಟಿಕೆಟ್ ಹರಿದು ನಿಮಗೆ ಕೊಡುತ್ತಾನಾ ಎಂದು ನಿಮಗೆ ಬೇಕಿರುವುದಿಲ್ಲ. ನೀವು ಡಿಮಾಂಡ್ ಮಾಡದೇ ಅವನು ಟಿಕೆಟ್ ಕೊಡುವುದಿಲ್ಲ. ನೀವು ಕೇಳಿದರೂ ಕೊಡುವ ಚಾನ್ಸ್ ಕಡಿಮೆ. ಒಂದು ವೇಳೆ ನೀವು ಕೊಡಲೇಬೇಕು ಎಂದು ಒತ್ತಾಯ ಮಾಡಿದರೆ ನೀವು ಅವನ ಬಸ್ಸಿನ ದಾಖಲೆಗಳನ್ನು ಕೇಳುತ್ತಿದ್ದಿರೇನೋ ಎನ್ನುವಂತೆ ನಿಮಗೊಂದು ಲುಕ್ ಕೊಡಬಹುದು. ಕೆಲವು ಕಂಡಕ್ಟರ್ ಗಳು ಗಾಂಜಾ ಗಿರಾಕಿಗಳಾಗಿರುವುದರಿಂದ ಟಿಕೆಟ್ ನೀವು ಅಪ್ಪಿತಪ್ಪಿ ಕೇಳಿಬಿಟ್ಟರೆ ನಿಮ್ಮ ಹಿಂದೆ ನಿಂತು ಅಸಭ್ಯವಾಗಿ ಪಿರಿಪಿರಿ ಮಾಡುತ್ತಾರೆ. ಆದ್ದರಿಂದ ಬಸ್ಸಿನ ಒಳಗೆ ಆಗುವ ಏನೇ ತೊಂದರೆ ಇರಲಿ ನೀವು ಅದನ್ನು ಯಾರಿಗೆ ಹೇಳಬೇಕು ಎಂದು ನಿಮಗೆ ಗೊತ್ತಿರುವುದಿಲ್ಲ. ಅದಕ್ಕೆ ನಾನು ಹೇಳುವುದು ” ಪ್ರತಿ ಬಸ್ಸಿನಲ್ಲಿ ಪ್ರತಿಯೊಬ್ಬ ಪ್ರಯಾಣಿಕನಿಗೆ ಸರಿಯಾಗಿ ಕಾಣುವಂತೆ ಮಂಗಳೂರು ಟ್ರಾಫಿಕ್ ಪೊಲೀಸ್ ವಾಟ್ಸಪ್ ನಂಬ್ರ ನಮೂದಿಸಬೇಕು” ಒಂದು ವೇಳೆ ನಿಮಗೆ ಟಿಕೆಟ್ ಕೊಡಲಿಲ್ಲ ಎನ್ನುವುದನ್ನು ಸೇರಿ ಯಾವುದೇ ಕಿರಿಕಿರಿ ಆದರೆ ಜಸ್ಟ್ ಆ ವಾಟ್ಸಪ್ ನಂಬ್ರಗಳಿಗೆ ಬಸ್ಸಿನ ಹೆಸರು, ನಂಬ್ರ, ಕೆಎ-19 …………” ಬರೆದು ಆದ ತೊಂದರೆ ಟೈಪ್ ಮಾಡಿ ಈ 9480802312 ಸಂಖ್ಯೆಗಳಿಗೆ ಸೆಂಡ್ ಮಾಡಿ ಅಥವಾ ಕುಡ್ಲ ಟ್ರಾಫಿಕ್ ಎನ್ನುವ ಫೇಸ್ ಬುಕ್ ಪೇಜ್ ನಲ್ಲಿ ಸಂದೇಶ ಹಾಕಿ. ನೀವು ಅಷ್ಟು ಮಾಡಿ, ಉಳಿದದ್ದು ಪೊಲೀಸರು ನೋಡಿಕೊಳ್ಳುತ್ತಾರೆ. ನಿಮ್ಮ ಹತ್ತಿರ ಆಗ ಮೊಬೈಲ್ ಅಥವಾ ಇಂಟರ್ ನೆಟ್ ಇಲ್ವಾ? ಮನೆಗೆ ಅಥವಾ ಆಫೀಸಿಗೆ ಹೋಗಿ ಮಾಡಿ. ಸುಮ್ಮನೆ ನೀವು ಬಾಯಿ ತೆರೆದು ಎಲ್ಲರ ಎದುರು ಮುಜುಗರಕ್ಕೆ ಒಳಗಾಗುವುದಕ್ಕಿಂತ ಇಷ್ಟು ಮಾಡಿ ವ್ಯವಸ್ಥೆ ಸರಿಯಾಗಬಹುದು. ಎಲ್ಲಿಯ ತನಕ ಎಂದರೆ ತನ್ನ ವಿರುದ್ಧ ಬಸ್ಸಿನಲ್ಲಿದ್ದ ಯಾರೂ ಯಾವಾಗ ದೂರು ಕೊಟ್ಟರೂ ಎನ್ನುವುದು ಕೂಡ ಕಂಡಕ್ಟರಿಗೆ ಗೊತ್ತಾಗುವುದಿಲ್ಲ. ಇನ್ನು ನೀವು ಬಸ್ಟ್ ಸ್ಟಾಪಿನಲ್ಲಿ ನಿಂತು ಬಸ್ ಬೇಯ ಒಳಗೆ ಬರದಿದ್ದರೆ ಆಗಲೂ ಹೀಗೆ ಮಾಡಬಹುದು. ಒಟ್ಟಿನಲ್ಲಿ ವ್ಯವಸ್ಥೆ ಸರಿಯಾಗಬೇಕು. ಕೊನೆಯದಾಗಿ ಯಾವ ಬಿಲ್ಡಿಂಗ್ ಅಥವಾ ಮಾಲ್ ನಲ್ಲಿ ಪಾರ್ಕಿಂಗ್ ಗೆ ಜಾಗ ಇಲ್ಲದೆ ಹೊರಗೆ ಗ್ರಾಹಕರು ಪಾರ್ಕಿಂಗ್ ಮಾಡಿ ಅದರಿಂದ ರೋಡ್ ಬ್ಲಾಕ್ ಆಗುತ್ತಿದೆ ಎಂದರೆ ಮೊದಲು ಅಲ್ಲೊಂದು ನೋ ಪಾರ್ಕಿಂಗ್ ಬೋರ್ಡ್ ಪೊಲೀಸರು ನಿಲ್ಲಿಸಬೇಕು. ಅದರ ನಂತರ ಅಲ್ಲಿ ವಾಹನ ಪಾರ್ಕ್ ಮಾಡಲು ಜಾಗ ಇಲ್ಲದೆ ಜನ ಅಲ್ಲಿ ಬರುವುದು ಕ್ರಮೇಣ ಕಡಿಮೆ ಮಾಡುತ್ತಾರೆ. ಪ್ರಾಬ್ಲಂ ಫಿನಿಶ್!
Leave A Reply