ಜಾಹೀರಾತು ತಪ್ಪಲು ಕಳೆದುಕೊಂಡ ಜನಪ್ರಿಯತೆ ಸಾಕು ಪ್ರಕಾಶ್ ರಾಜ್
ಎಲ್ಲದಕ್ಕೂ ಶನೇಶ್ವರನೇ ಕಾರಣ ಅಂತಾರಲ್ಲ ಹಾಗೆ, ಪ್ರಕಾಶ್ ರಾಜ್ ಮಾಡೋದೆಲ್ಲ ಮಾಡಿ, ಈಗ ಬಲಪಂಥೀಯರನ್ನು ದೂರುತ್ತಿದ್ದಾರೆ. ಮಾಡುವುದೆಲ್ಲ ಮಾಡಿ, ಈಗ ತನಗೆ ಅನ್ಯಾಯವಾಗುತ್ತಿದೆ ಎಂಬ ರೀತಿ ಮಾತನಾಡುತ್ತಿದ್ದಾರೆ. ದೊಡ್ಡ ದೊಡ್ಡ ಕಂಪೆನಿಗಳಿಗೆ ತನಗೆ ಜಾಹೀರಾತು ನೀಡದಂತೆ ಅಥವಾ ಜಾಹೀರಾತಿನಿಂದ ಕೈಬಿಡುವಂತೆ ಬಲಪಂಥೀಯರು ಒತ್ತಡ ಹೇರುತ್ತಿದ್ದಾರೆ ಎಂದು ಹೊಸ ಆರೋಪ ಮಾಡಿದ್ದಾರೆ.
ಹೀಗೇ ಮುಂದುವರಿದರೆ ಮುಂದೊಂದು ಸಿನೆಮಾ ಸಿಗದಿರುವುದಕ್ಕೂ ಬಲಪಂಥೀಯರೇ ಕಾರಣ ಎಂದು ಅವರು ಆರೋಪಿಸಿದರೂ ಅಚ್ಚರಿಯಿಲ್ಲ.
ಸಿನೆಮಾ ಮತ್ತು ಜಾಹೀರಾತು ಅಥವಾ ಜನಪ್ರಿಯತೆ ಮತ್ತು ಜಾಹೀರಾತು ಎರಡೂ ಒಂದಕ್ಕೊಂದು ಸಂಬಂಧ ಹೊಂದಿವೆ. ಜನಪ್ರಿಯತೆ ಕಳೆದುಕೊಂಡ ವ್ಯಕ್ತಿ ಸಹಜವಾಗಿ ಜಾಹೀರಾತಿನಿಂದಲೂ ಮರೆಯಾಗುತ್ತಾರೆ. ಒಬ್ಬ ವ್ಯಕ್ತಿ ಜನಪ್ರಿಯತೆ ಉತ್ತುಂಗದಲ್ಲಿರುವಷ್ಟು ದಿನವೂ ಕಂಪೆನಿಗಳು ಅವರನ್ನು ಜಾಹೀರಾತಿಗೆ ಬಳಸಿಕೊಳ್ಳಲು ಉತ್ಸುಕವಾಗಿರುತ್ತವೆ.
ಈಗ ಒಂದು ವೇಳೆ ಯಾವುದಾದರೂ ಕಂಪೆನಿ ಪ್ರಕಾಶ್ ರಾಜ್‍ರನ್ನು ಜಾಹೀರಾತಿನಿಂದ ಕೈಬಿಡಲು ನಿರ್ಧರಿಸಿದ್ದರೆ ಅಥವಾ ಅವರನ್ನು ಜಾಹೀರಾತಿಗೆ ತೆಗೆದುಕೊಳ್ಳದಿರಲು ನಿರ್ಧರಿಸಿದರೆ ಅದಕ್ಕೆ ಅವರೇ ನೇರ ಹೊಣೆ. ಕಂಪೆನಿ ಅವರನ್ನು ನೋಡುವ ದೃಷ್ಟಿಕೋನ ಬದಲಾಗಿದ್ದೂ ಕಾರಣವಾಗಿರಬಹುದು. ಅದಕ್ಕೂ ಪ್ರಕಾಶ್ ರಾಜ್ ಅವರೇ ನೇರ ಕಾರಣ. ಸದ್ಯದ ಪರಿಸ್ಥಿತಿಯಲ್ಲಿ ಪ್ರಕಾಶ್ ರಾಜ್ ಸ್ಥಿತಿ ಹಾಗಿದೆ. ಬಾಯಿಗೆ ಬಂದಂತೆ ಮಾತನಾಡಿದ್ದರ ಪರಿಣಾಮ ಎದುರಿಸುತ್ತಿದ್ದಾರೆ.
ಅವರ ಈಗಿನ ಸ್ಥಿತಿ ನೋಡಿದರೆ, ನನಗೆ ಅಮೀರ್ ಖಾನ್ ನೆನಪಾಗುತ್ತಿದ್ದಾರೆ. ಅವರು ಹಿಂದೊಮ್ಮೆ ‘ದೇಶಬಿಟ್ಟು ಹೋಗಬೇಕು ಅನ್ನಿಸುತ್ತಿದೆ ಎಂದು ಹೆಂಡತಿ ಹೇಳಿದ್ದಳು’ ಎಂದೆಲ್ಲ ಮಾತಾಡಿ ಜನರಿಂದ ಉಗಿಸಿಕೊಂಡಿದ್ದರು. ಆಗ ಅಮೀರ್ ಖಾನ್ ಸ್ನ್ಯಾಪ್ ಡೀಲ್ ಜಾಹೀರಾತು ಪ್ರತಿನಿಧಿಸುತ್ತಿದ್ದರು. ಆಗ ಸ್ನ್ಯಾಪ್ ಡೀಲ್ ಗೆ ದೊಡ್ಡ ಪ್ರಮಾಣದ ಹಾನಿಯಾಗಿತ್ತು. ಸಾಕಷ್ಟು ಜನ ಸ್ನ್ಯಾಪ್ ಡೀಲ್‍ನಲ್ಲಿ ವಸ್ತುಗಳನ್ನು ಖರೀದಿಸಿ, ಅವುಗಳನ್ನು ಸ್ವೀಕರಿಸದೇ ಮರಳಿ ಕಳುಹಿಸಿದ್ದರು. ಇದೆಲ್ಲದರಿಂದ ಬೇಸರಗೊಂಡ ಸ್ನ್ಯಾಪ್‍ಡೀಲ್ ಅಮೀರ್ ಖಾನ್ ಅವರನ್ನು ಜಾಹೀರಾತಿನಿಂದ ಕೈಬಿಟ್ಟಿತ್ತು.
ಬಹುಶಃ ಇಂದು ಅದೇ ಸ್ಥಿತಿಯಲ್ಲಿ ಪ್ರಕಾಶ್ ರಾಜ್ ಇದ್ದಾರೆ. ಒಂದು ಕಂಪೆನಿ ಅಥವಾ ವಸ್ತುವಿನ ಮಾರಾಟದ ಸಾಧ್ಯತೆ ಅದರ ಜಾಹೀರಾತಿಗೆ ಬರುವ ವ್ಯಕ್ತಿಯ ಜನಪ್ರಿಯತೆ ಹಾಗೂ ಅವನ ವ್ಯಕ್ತಿತ್ವವನ್ನು ಅವಲಂಬಿಸಿರುತ್ತದೆ. ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿ ಹೆಚ್ಚು ಜನಪ್ರಿಯನಾದಷ್ಟೂ ವಸ್ತು ಅಥವಾ ಕಂಪೆನಿಗೆ ಹೆಚ್ಚು ಲಾಭವಾಗುತ್ತದೆ. ಆದರೆ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿ ಹಗರಣ, ವಿವಾದಲ್ಲಿ ಸಿಲುಕಿದಾಗ ಅದರ ಪರಿಣಾಮವನ್ನೂ ಆ ಕಂಪೆನಿ ಅನುಭವಿಸಬೇಕಾಗುತ್ತದೆ.
ಅವರೇ ಆಡಿದ ಮಾತಿನಿಂದಾಗಿ ಪ್ರಕಾಶ್ ರಾಜ್ ಅವರಿಗೆ ಈಗ ಸಾಕಷ್ಟು ಕೆಟ್ಟ ಹೆಸರು ಬಂದಿದೆ. ಮೊದಲಾದರೆ ಪ್ರಕಾಶ್ ರಾಜ್ ಒಳ್ಳೆ ನಟ ಎಂದಷ್ಟೇ ನೋಡುತ್ತಿದ್ದರು. ಅವರು ಖಳನಾಯಕನ ಪಾತ್ರವನ್ನೇ ಹೆಚ್ಚು ಮಾಡಿದರೂ, ಯಾರೂ ಅವರನ್ನು ಖಳನಾಯಕನಂತೆ ನೋಡುತ್ತಿರಲಿಲ್ಲ. ಆದರೆ ಬಾಯಿಗೆ ಬಂದಂತೆ ಮಾತನಾಡಿದ್ದರ ಪರಿಣಾಮವಾಗಿ ಈಗ ಅವರ ಖಳನಾಯಕನ ಪಾತ್ರಕ್ಕೂ ನಿಜ ಜೀವನದ ವ್ಯಕ್ತಿತ್ವಕ್ಕೂ ಥಳಕು ಹಾಕಲಾಗುತ್ತಿದೆ. ಅದಕ್ಕೆ ಸರಿಯಾಗಿ ಪ್ರಕಾಶ್ ರಾಜ್ ಕೂಡ ವರ್ತಿಸುತ್ತಿದ್ದಾರೆ ಕೂಡ.
ಗೌರಿ ಲಂಕೇಶ್ ಅವರಿಗೆ ಪರಮ ಆಪ್ತೆಯೇ ಆಗಿರಬಹುದು. ಹಾಗಂದ ಮಾತ್ರಕ್ಕೆ ಅವರ ಕೊಲೆಯಿಂದ ಆಘಾತಕ್ಕೊಳಗಾಗಿ ಇನ್ಯಾರ ಮೇಲೊ ಆರೋಪ ಹೊರಿಸಬೇಕೆಂದಿಲ್ಲ. ಗೌರಿ ಕೊಲೆಯ ಆರೋಪಿಗಳನ್ನು ಶೀಘ್ರ ಪತ್ತೆಮಾಡುವಂತೆ ಹೋರಾಟ ನಡೆಸಬಹುದಿತ್ತು. ಅದಕ್ಕೆ ಯಾರ ತಕರಾರೂ ಇರುತ್ತಿರಲಿಲ್ಲ. ಆದರೆ ಗೌರಿ ಕೊಲೆಯಾದ ಆಘಾತದಲ್ಲಿ ಅವರು ಇಸಂಗಳ ಬಲೆಗೆ ಸಿಲುಕಿದರು. ಆ ಬಲೆಯೊಳಗೆ ಇನ್ನಷ್ಟು ಸಿಲುಕಿಕೊಳ್ಳುತ್ತ ಸಾಗಿದ್ದಾರೆ. ಅದರ ಪರಿಣಾಮವಾಗಿಯೇ ಈಗ ಜಾಹೀರಾತು ವಲಯದಲ್ಲೂ ಪರಿಣಾಮಗಳು ಆಗುತ್ತಿರಬಹುದು. ಅವರು ಇದೇ ರೀತಿಯ ವರ್ತನೆ ಮುಂದುವರಿಸಿದರೆ, ಖಂಡಿತ ಇನ್ನಷ್ಟು ಪರಿಣಾಮವಾಗುವುದು ಪಕ್ಕಾ.
ತನ್ನನ್ನು ತಾನು ಸರಿಪಡಿಸಿಕೊಳ್ಳುವುದು ಬಿಟ್ಟು, ಜಾಹೀರಾತು ತಪ್ಪಿಸಲು ಬಲಪಂಥೀಯರು ಯತ್ನಿಸುತ್ತಿದ್ದಾರೆ ಎಂದು ಆಲೋಚಿಸಿದರೆ ನಷ್ಟವಾಗುವುದು ಪ್ರಕಾಶ್ ರಾಜ್‍ಗೆ ಹೊರತು ಬಲಪಂಥೀಯರಿಗಲ್ಲ. ಈಗಿನ ಸ್ಥಿತಿಯಲ್ಲಿ ಯಾರೂ ಪ್ರಕಾಶ್ ರಾಜ್‍ಗೆ ಜಾಹೀರಾತು ತಪ್ಪಿಸಲು ಹರಸಾಹಸ ಪಡಬೇಕಿಲ್ಲ. ಅವರ ವ್ಯಕ್ತಿತ್ವಕ್ಕೆ ತಕ್ಕಂತೆ ಕಂಪೆನಿಗಳು ನಿರ್ಧಾರ ಕೈಗೊಳ್ಳುತ್ತವೆ.
ಇಷ್ಟಕ್ಕೂ ಪ್ರಕಾಶ್ ರಾಜ್ ಮಾತನಾಡುವುದೇ ಬೇಡ ಎಂದು ಯಾರೂ ಹೇಳುತ್ತಿಲ್ಲ. ಮೋದಿ ವಿರುದ್ಧ ಯಾರೂ ಮಾಯನಾಡಬಾರದು ಎಂಬುದೂ ವಾದವಲ್ಲ. ಆದರೆ ಪ್ರಕಾಶ್ ರಾಜ್ ಅವರಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರ ಮಾತುಗಳು ಕೂಡ ಅಷ್ಟೇ ಜವಾಬ್ದಾರಿಯುತವಾಗಿರಬೇಕು ಎಂದು ಸಮಾಜ ಬಯಸುತ್ತದೆ. ದೊಡ್ಡವರು, ಜವಾಬ್ದಾರಿಯು ಸ್ಥಾನದಲ್ಲಿರುವವರು ಏನು ಮಾತನಾಡಿದರೂ ಕೇಳಿಸಿಕೊಳ್ಳುವ ಕಾಲ ಈಗಿಲ್ಲ. ಇಷ್ಟು ಟೀಕೆಗೇ ಪ್ರಕಾಶ್ ರಾಜ್ ಗೆ ಹೀಗೆ ಅನ್ನಿಸಿದ್ದರೆ ಮೋದಿಗೆ ಹೇಗನ್ನಿಸಿರಬೇಕು. ತನಗಾಗಿರುವ ಸ್ಥಿತಿ ಬಗ್ಗೆ ಮಾತನಾಡುವ ಪ್ರಕಾಶ್ ರಾಜ್ ಗೆ ಅದನ್ನೂ ಸ್ವಲ್ಪ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಲಿ.
Leave A Reply