ಹಿಂಬಾಲಕರ ಮಾತಿಗೆಲ್ಲ ಪ್ರಕಾಶ್ ರೈ ಹೊಣೆಯಾಗುವರೇ?
ಪ್ರಕಾಶ್ ರೈ ಖ್ಯಾತ ಖಳ ನಾಯಕರು. ನಿಜ ಜೀವನದಲ್ಲಾದರೂ ಅವರು ಹೀರೊ ಆಗಬಹುದಿತ್ತೇನೋ. ಆದರೆ ಖಳ ನಾಯಕನ ಪಾತ್ರ ನಿರ್ವಹಿಸಿ, ಅವರಲ್ಲಿ ಅಂತಹ ಗುಣಗಳೇ ಹೆಚ್ಚು ವಿಜೃಂಭಿಸುತ್ತಿವೆ.
ಬುದ್ಧಿಜೀವಿಗಳಿಗೆ ಅಂಟಿಕೊಂಡಿರುವ ವ್ಯಾಧಿಯೇ ಪ್ರಕಾಶ್ ರೈಗೂ ಅಂಟಿಕೊಂಡಿದೆ. ಅಥವಾ ಅಂತಹ ರೋಗ ಅಂಟಿಸಿಕೊಳ್ಳುವ ಮೂಲಕ ಅವರೂ ಬುದ್ಧಿಜೀವಿ ಪಟ್ಟ ಅಲಂಕರಿಸಲು ಹವಣಿಸುತ್ತಿದ್ದಾರೆ. ಬುದ್ಧಿಜೀವಿಗಳಿಗೊಂದು ರೋಗವಿದೆ. ಅದೇನೆಂದರೆ ದೇಶದಲ್ಲಿ ಏನೇ ಆಗಲಿ ಅದಕ್ಕೆ ಮೋದಿಯೇ ಕಾರಣ, ಮೋದಿ ಏನೂ ಮಾಡಲಿಲ್ಲ, ಮೋದಿ ಮೌನಿಯಾಗಿದ್ದು ಯಾಕೆ? ಎಂದು ಹಲುಬುವುದು. ಗೌರಿ ಲಂಕೇಶ್ ಕೊಲೆಯಾದಾಗ “ಮೋದಿ ಆಡಳಿತದಲ್ಲಿ ವಿರುದ್ಧ ಮಾತನಾಡುವವರಿಗೆ ರಕ್ಷಣೆಯಿಲ್ಲ. ಬುದ್ಧಿಜೀವಿಗಳನ್ನು ಕೊಲ್ಲಲಾಗುತ್ತಿದೆ’ ಎಂದು ಆರೋಪಿಸಿದರು. ಅಂದರೆ ಮೋದಿಯೇ ಹಿಂದೆ ನಿಂತು ಇದನ್ನೆಲ್ಲ ಮಾಡಿಸುತ್ತಿದ್ದಾರೆ ಎಂಬಂತಿತ್ತು ಅವರ ಮಾತಿನ ಧಾಟಿ. ಅದಕ್ಕೆ ಜನರಿಂದ ಮನ್ನಣೆ ಸಿಗಲಿಲ್ಲ. ದೇಶದಲ್ಲಾಗುವ ಕೊಲೆಗಳಿಗೆಲ್ಲ ಪ್ರಧಾನಿ ಹೊಣೆಯಾಗಲು ಸಾಧ್ಯವಿಲ್ಲ ಎಂಬುದು ಪ್ರಾಥಮಿಕ ಶಾಲೆಗೆ ಹೋಗುವ ಮಕ್ಕಳಿಗೂ ಗೊತ್ತು. ಆದರೆ ಬುದ್ಧಿಜೀವಿಗಳು ಮಾತ್ರ ಅಷ್ಟೂ ಅರಿವಿಲ್ಲದಂತೆ ಮಾತನಾಡುತ್ತಾರೆ.
ಪ್ರಕಾಶ್ ರೈ ಈಗ ಹೊಸ ವರಸೆ ಶುರುವಿಟ್ಟುಕೊಂಡಿದ್ದಾರೆ. “ಗೌರಿ ಹತ್ಯೆಯನ್ನು ಕೆಲವರು ಟ್ವಿಟರ್‌ನಲ್ಲಿ ಸಂಭ್ರಮಿಸಿದ್ದಾರೆ. ಮೋದಿಯನ್ನು ಫಾಲೋ ಮಾಡುವವರು ಹೀಗೆ ಮಾಡಿದರೂ ಮೋದಿ ಸುಮ್ಮನಿದ್ದಾರೆ’ ಎಂದಿದ್ದಾರೆ. ಪ್ರಕಾಶ್ ರೈಗೂ ಟ್ವಿಟರ್ ಹಾಗೂ ಫೇಸ್‌ಬುಕ್‌ನಲ್ಲಿ ಫಾಲೋವರ್‌ಗಳಿದ್ದಾರೆ. ನಿಜ ಜೀವನದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಟ್ವಿಟರ್‌ನಲ್ಲಿ ಪ್ರಕಾಶ್ ರೈಗೆ ೧.೫ ಮಿಲಿಯನ್ ಫಾಲೋವರ್‌ಗಳಿದ್ದಾರೆ. ಅವರಲ್ಲಿ ಎಲ್ಲರೂ ಏನೇನು ಬರೆಯುತ್ತಿದ್ದಾರೆ ಎಂದು ಪ್ರಕಾಶ್ ರೈ ನೋಡುತ್ತಿರುತ್ತಾರಾ? ಅಷ್ಟನ್ನೂ ನೋಡಲು ಸಾಧ್ಯವಾ? ಅವರ ಬಿಡುವಿಲ್ಲದ ಕೆಲಸದ ನಡುವೆಯೂ ಅಷ್ಟೆಲ್ಲ ಜನ ಏನೇನು ಬರೆಯುತ್ತಿದ್ದಾರೆ ಎಂಬುದನ್ನು ನೋಡಿದರು ಅಂದುಕೊಳ್ಳಿ, ಅವರನ್ನೆಲ್ಲ ನಿಯಂತ್ರಿಸಲು ಸಾಧ್ಯವೇ? ಅವರೆಲ್ಲ ಪ್ರಕಾಶ್ ರೈನನ್ನು ಫಾಲೋ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅಡವಿಡುತ್ತಾರೆಯೇ? ಫಾಲೋ ಮಾಡುತ್ತಿದ್ದಾರೆ ಎಂಬ ಒಂದೇ ಕಾರಣಕ್ಕೆ ಅವರೆಲ್ಲ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಕಳೆದುಕೊಳ್ಳಬೇಕೆ?
೧.೫ ಮಿಲಿಯನ್ ಫಾಲೋವರ್‌ಗಳಲ್ಲಿ ಮುಂದೊಂದು ದಿನ ಒಬ್ಬ ಕೊಲೆ ಮಾಡುತ್ತಾನೆ ಅಂದುಕೊಳ್ಳಿ. ಅದರ ಹೊಣೆಯನ್ನು ಪ್ರಕಾಶ್ ರೈ ಹೊರುತ್ತಾರಾ? ಫಾಲೋವರ್ ಒಬ್ಬ ಕೊಲೆ ಮಾಡುವುದನ್ನು ತಪ್ಪಿಸದೇ ಪ್ರಕಾಶ್ ರೈ ಹೊಣೆಗೇಡಿತನ ಮೆರೆದಿದ್ದಾರೆ ಎಂದು ಯಾರಾದರೂ ಟೀಕಿಸಿದರೆ ಹೇಗಿರುತ್ತದೆ? ಅದನ್ನು ಪ್ರಕಾಶ್ ರೈ ಹೇಗೆ ಪರಿಗಣಿಸುತ್ತಾರೆ?
ಪ್ರಕಾಶ್ ರೈ ಸಿನೆಮಾಗಳಲ್ಲಿ ಖಳನಾಯಕನ ಪಾತ್ರ ನಿರ್ವಹಿಸುತ್ತಾರೆ. ಅವರು ಮಾಡಿದ ಕೊಲೆ ಅಥವಾ ಇನ್ಯಾವುದೋ ಕಾನೂನುಬಾಹಿರ ಕೃತ್ಯ ನೋಡಿ, ಇನ್ಯಾವನೊ ಒಬ್ಬ ಕೊಲೆ ಮಾಡುತ್ತಾನೆ. ಪ್ರಕಾಶ್ ರೈ ನನಗೆ ಸ್ಫೂರ್ತಿ ಅನ್ನುತ್ತಾನೆ. ಆಗ ಆ ಕೊಲೆಯ ಹೊಣೆಯನ್ನು ಪ್ರಕಾಶ್ ರೈ ಹೊರಲು ಸಾಧ್ಯವೇ? ಹಾಗೆ ನಾವು ಅಪೇಕ್ಷೆ ಪಡಲಾದರೂ ಸಾಧ್ಯವೇ? ಪ್ರಕಾಶ್ ರೈ ಒಬ್ಬ ನಟರಾಗಿ ಖಳ ನಾಯಕನ ಪಾತ್ರ ನಿರ್ವಹಿಸಿರುತ್ತಾರೆ. ಅದರಿಂದ ಪ್ರೇರಣೆ ಪಡೆದ ವ್ಯಕ್ತಿಗಳೆಲ್ಲ ಏನು ಮಾಡುತ್ತಾರೊ ಅದಕ್ಕೆಲ್ಲ ಅವರು ಹೊಣೆಯಾಗಲು ಸಾಧ್ಯವೂ ಇಲ್ಲ.
ಇದೇ ಮಾತು ಪ್ರಧಾನಿ ಮೋದಿಗೂ ಅನ್ವಯವಾಗಬೇಕಲ್ಲವೇ?
ನರೇಂದ್ರ ಮೋದಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಟ್ವಿಟರ್‌ನಲ್ಲಿ ೩೪.೮ ಮಿಲಿಯನ್ ಫಾಲೋವರ್‌ಗಳಿದ್ದಾರೆ. ಟ್ವಿಟರ್‌ನಲ್ಲಿ ಅತಿಹೆಚ್ಚು ಫಾಲೋವರ್‌ಗಳ್ನು ಹೊಂದಿದ ವಿಶ್ವನಾಯಕರಲ್ಲಿ ಮೋದಿ ಮೊದಲಿಗರು. ಹೀಗಿರುವಾಗ ಅವರ ಫಾಲೋವರ್‌ಗಳೆಲ್ಲ ಏನು ಬರೆಯುತ್ತಾರೆ? ಯಾರನ್ನು ಟೀಕಿಸುತ್ತಾರೆ ಎಂದು ನೋಡುತ್ತಿರಲು ಸಾಧ್ಯವೇ? ಇಷ್ಟಕ್ಕೂ ಟ್ವಿಟರ್‌ನಲ್ಲಿ ಯಾರು ಬೇಕಾದರೂ ಅವರನ್ನು ಫಾಲೋ ಮಾಡಬಹುದು. ಹೀಗಿರುವಾಗ ಫಾಲೋವರ್‌ಗಳು ಹಾಕಿದ ಯಾವುದೋ ಕಾಮೆಂಟ್‌ಗೆ, ಫಾಲೋವರ್‌ಗಳ ವರ್ತನೆಗೆ ಮೋದಿಯನ್ನು ಟೀಕಿಸುವುದು ಬಾಲಿಶ ವರ್ತನೆಯಲ್ಲವೇ?
ಒಟ್ಟಾರೆ ಮೋದಿಯನ್ನು ಟೀಕಿಸಬೇಕು. ಏನೂ ಸಿಗಲಿಲ್ಲವೇ? ಸರಿ. ಅವರ ಹಿಂಬಾಲಕರ, ಕಾರ್ಯಕರ್ತರ, ಫಾಲೋವರ್‌ಗಳ ವರ್ತನೆ ಮೂಲಕವಾದರೂ ಸರಿ ಮೋದಿಯನ್ನು ಟೀಕಿಸಬೇಕು. ಅದೊಂದೇ ಅವರ ಪರಮ ಉದ್ದೇಶ.
ಇಷ್ಟಕ್ಕೂ ಇವರೆಲ್ಲ ಮೋದಿಯ ಫಾಲೋವರ್‌ಗಳು ಮಾಡಿದ ಒಳ್ಳೆ ಕೆಲಸಕ್ಕೆ ಮೋದಿಯನ್ನು ಎಷ್ಟು ಸಾರಿ ಹೊಗಳಿದ್ದಾರೆ? ಮೋದಿ ಫಾಲೋವರ್‌ಗಳು ಮಾಡಿದ ಒಳ್ಳೆ ಕೆಲಸವನ್ನು ಎಷ್ಟು ಗುರುತಿಸಿದ್ದಾರೆ?
ಅದೂ ಬೇಡ. ಮೋದಿಯ ಫಾಲೋವರ್‌ಗಳು ಗೌರಿಯ ಸಾವನ್ನು ಸಂಭ್ರಮಿಸಿದ್ದರ ಬಗ್ಗೆ ಪ್ರಕಾಶ್ ರೈ ಪ್ರಶ್ನಿಸುತ್ತಾರಲ್ಲ. ಗೌರಿ ಲಂಕೇಶ್ ಎಷ್ಟು ಜನರ ಸಾವನ್ನು ಸಂಭ್ರಮಿಸಿಲ್ಲ? ಪ್ರಕಾಶ್ ರೈ ಮತ್ತು ಗೌರಿ ಲಂಕೇಶ್ ತುಂಬ ಆಪ್ತರು. ಒಂದೇ ಹಾಸಿಗೆಯಲ್ಲಿ ನಿದ್ರಿಸುವಷ್ಟು ಆಪ್ತರಾಗಿದ್ದರು ಎಂದು ಅವರ ಗೆಳೆಯರೇ ಹೇಳುತ್ತಾರೆ. ಹೀಗಿರುವಾಗ, ಬೇರೆಯವರ ಸಾವನ್ನು ಗೌರಿ ಸಂಭ್ರಮಿಸುವಾಗ ಪ್ರಕಾಶ್ ರೈ ಏನು ಮಾಡುತ್ತಿದ್ದರು? ಅವರು ಚಿತ್ರ ನಟನೆಯಲ್ಲಿ ಬ್ಯೂಸಿಯಾಗಿದ್ದರೇನೊ. ಯಾಕೆ ಟ್ವಿಟರ್‌ನಲ್ಲಿ ಗೌರಿ ಲಂಕೇಶ್ ಅವರು ಪ್ರಕಾಶ್ ರೈ ಫಾಲೋವರ್ ಆಗಿರಲಿಲ್ಲವೇ? ನಿಜ ಜೀವನದಲ್ಲಿ ಅವರಿಬ್ಬರೂ ಪರಿಚಿತರಲ್ಲವೇ? ಹಾಗಾದರೆ ಸಾವನ್ನು ಸಂಭ್ರಮಿಸಬಾರದು ಎಂದು ಗೌರಿಗೆ ಅವರು ಹೇಳಲಿಲ್ಲವೇ? ಗೌರಿ ಹೇಳದವರು ಮೋದಿಯಿಂದ ಅದನ್ನು ಹೇಗೆ ಅಪೇಕ್ಷಿಸುತ್ತಾರೆ? ಗೌರಿಗೆ ಹೇಳಲಾರರು, ಆದರೆ ಮೋದಿಗೆ ಅದನ್ನೇ ದೊಡ್ಡ ನೀತಿ ಪಾಠದಂತೆ ಹೇಳಲು ಇವರು ಹೇಸುವುದಿಲ್ಲ.
ಇದು ಯಾವ ನ್ಯಾಯ ಪ್ರಕಾಶ್ ರೈ?
ಟ್ವಿಟರ್‌ನಲ್ಲಿ ಪ್ರಕಾಶ್ ರೈ ಹಿಂಬಾಲಕರು ಯಾರೂ ಕೇರಳದಲ್ಲಿ, ಪಶ್ಚಿಮ ಬಂಗಾಲದಲ್ಲಿ ನಡೆಯುತ್ತಿರುವ ಆರೆಸ್ಸೆಸ್ ಕಾರ್ಯಕರ್ತರ ಹತ್ಯೆ ಬಗ್ಗೆ ಯಾಕೆ ಖಂಡನೆ ವ್ಯಕ್ತಪಡಿಸಿಲ್ಲ? ಗೌರಿಯದ್ದು ಮಾತ್ರ ಜೀವ, ಆರೆಸ್ಸೆಸ್ ಕಾರ್ಯಕರ್ತರದ್ದು ಜೀವವಲ್ಲವೇ? ಖಳ ನಾಯಕನ ಪಾತ್ರ ಮಾಡುವ ಪ್ರಕಾಶ್ ರೈ ನಿಜ ಜೀವನದಲ್ಲೂ ಖಳ ನಾಯಕನಂತೆ ಮಾತನಾಡುವುದು ಸರಿಯಲ್ಲ. ನಟನೆ ಬೇರೆ. ನಿಜ ಜೀವನ ಬೇರೆ. ಪ್ರಕಾಶ್ ರೈ ಒಂದಷ್ಟು ಒಳ್ಳೆಯ ಹೆಸರು, ಮೌಲ್ಯಗಳನ್ನು ಉಳಿಸಿಕೊಂಡವರು ಎಂದು ಭಾವಿಸಿದ್ದೆ. ಆದರೆ ಈಗ ಅವರ ಮಾತುಗಳು ಬಾಲಿಶ ಬುದ್ಧಿಜೀವಿಗಳ ಮಾತಿನಂತೆ ಧ್ವನಿಸುತ್ತಿವೆ. ಬುದ್ಧಿಜೀವಿಗಳ ಪಟ್ಟಿಗೆ ಹೊಸ ಸೇರ್ಪಡೆಯಾದಂತಿದೆ.
Leave A Reply