ಸಿಎಂ ಸಿದ್ದರಾಮಯ್ಯನವರೇ, ಖಾಸಗಿ ವೈದ್ಯರೇ, ನೀವು ರಾಜಿಯಾಗಲು 80 ಜನರ ಬಲಿ ಬೇಕಾಯಿತೆ?
ಬೀದರಿನ ಹುಮನಾಬಾದ್ ನಲ್ಲಿ ಹೃದಯಾಘಾತ ಬಳಿಕ ಚಿಕಿತ್ಸೆ ದೊರಕದೆ ಅನಿವಾಶ್ (35) ಸಾವು…
ಖಾಸಗಿ ವೈದ್ಯರ ಮುಷ್ಕರಕ್ಕೆ ಪುತ್ತೂರಿನಲ್ಲಿ ಬಾಲಕಿ ಬಲಿ…
ಚಿಂತಾಮಣಿಯಲ್ಲಿ ಶಿಡ್ಲಘಟ್ಟ, ಚಿಂತಾಮಣಿ, ಕೋಲಾರ ಸುತ್ತಿದರೂ ವೈದ್ಯರು ಸಿಗದೆ 5 ತಿಂಗಳ ಮಗು ಸಾವು…
ಹಲವು ದಿನಗಳಿಂದ ರಾಜ್ಯದಲ್ಲಿ ಖಾಸಗಿ ವೈದ್ಯರ ಮುಷ್ಕರ, 80ಕ್ಕೂ ಅಧಿಕ ಜನ ಸಾವು…
ಅಷ್ಟಾದರೂ ಕಡೆದು ಕಟ್ಟೆ ಹಾಕಿದ್ದೇನು?
ಚಿಕಿತ್ಸೆ ನೀಡುವಾಗ ತಪ್ಪೆಸಗಿದ ವೈದ್ಯರಿಗೆ ಜೈಲು ಶಿಕ್ಷೆ ಬದಲಿಗೆ ದಂಡ…
ಶವ ಇಟ್ಟುಕೊಂಡು ಹಣಕ್ಕಾಗಿ ಪೀಡನೆ ಮಾಡುವಂತಿಲ್ಲ…
ಕುಂದು ಕೊರತೆ ಸಮಿತಿ ದೋಷ ಕೈ ಬಿಡುವುದು…
ಹೀಗೆ, ಇಂಥ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳಲು ಒಪ್ಪಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಸೂದೆ ಅಂಗೀಕರಿಸಲು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಖಾಸಗಿ ವೈದ್ಯರು ಸಹ ತಮಗೆ ಅನುಕೂಲವಾಯಿತು ಎಂದು ಸರ್ಕಾರದ ಜತೆ ರಾಜಿ ಮಾಡಿಕೊಂಡಿದ್ದಾರೆ. ಖಂಡಿತವಾಗಿಯೂ ವೈದ್ಯರು ಮುಷ್ಕರ ಕೈ ಬಿಟ್ಟಿದ್ದು ಸ್ವಾಗತಾರ್ಹವೇ ಆಗಿದೆ.
ಆದರೆ, ಐದು ದಿನಗಳಲ್ಲಿ ಮೃತಪಟ್ಟ 80 ಜೀವಗಳನ್ನು ಬದುಕಿಸಬಲ್ಲಿರೇ ಮುಖ್ಯಮಂತ್ರಿಯವರೇ? 80 ಜೀವಗಳ ಕುಟುಂಬಸ್ಥರನ್ನು ಯಾವ ಇಂಜೆಕ್ಷನ್ ಮೂಲಕ ಗುಣಪಡಿಸಬಲ್ಲಿರಿ ಖಾಸಗಿ ವೈದ್ಯರೇ?
ಇಂಥಾದ್ದೊಂದು ಮಸೂದೆ ಅಂಗೀಕರಿಸುವ ಮುನ್ನ ರಾಜ್ಯ ಸರ್ಕಾರ ಖಾಸಗಿ ವೈದ್ಯರ ಜತೆ ಚರ್ಚಿಸಬೇಕಿತ್ತು. ಖಾಸಗಿ ವೈದ್ಯರು ಸಹ ಆಸ್ಪತ್ರೆಗೆ ಬೀಗ ಜಡಿಯದೆಯೇ ಪ್ರತಿಭಟನೆ ಮಾಡಬಹುದಿತ್ತು. ಆದಾವುದೂ ಆಗಲಿಲ್ಲ. ರಾಜ್ಯ ಸರ್ಕಾರವೇನೋ ಮೊಂಡು ವಾದ ಹಿಡಿಯಿತು. ಇತ್ತ ವೈದ್ಯರೂ ಭಂಡತನಕ್ಕೆ ಬಿದ್ದರು, ಹಾಗಾಗಿ ಐದು ದಿನ ಖಾಸಗಿ ಆಸ್ಪತ್ರೆಗಳು ಬಂದ್ ಆದವು. ದಿನಕ್ಕಿಷ್ಟು ಜೀವಗಳು ತರೆಗೆಲೆಗಳಂತೆ ಉದುರಿದವು. ಅನಾರೋಗ್ಯಕ್ಕೀಡಾದ ಜನ ಬೀದಿ ಬೀದಿ, ಆಸ್ಪತ್ರೆ, ಆಸ್ಪತ್ರೆ ಅಲೆದಾಡಿದರು, ಬಸವಳಿದರು.
ಜನ ಹಿತಕ್ಕಾಗಿ ಜಾರಿ ಮಾಡಲು ಹೊರಟಿದ್ದೇವೆ ಎಂದ ಮುಖ್ಯಮಂತ್ರಿಯವರು ಖಾಸಗಿ ವೈದ್ಯರು ಪ್ರತಿಭಟನೆ ಮಾಡಲು ಶುರುಮಾಡಿದಾಗಲೇ ಅವರ ಜತೆ ರಾಜೀಮಾಡಿಕೊಳ್ಳಬಹುದಿತ್ತು. ಆದರೆ, ಕೇವಲ ಅರ್ಧತಾಸಿನ ಸಭೆ ಸೇರಲು, ಸಂಧಾನ ಮಾಡಿಕೊಳ್ಳಲು ಸಿದ್ದರಾಮಯ್ಯ ಅವರು 80 ಜೀವ ಹೋಗುವ ತನಕ ಕಾಯ್ದರು. ಅತ್ತ ವೈದ್ಯೋ ನಾರಾಯಣ ಹರಿ ಎಂಬ ಹಣೆಪಟ್ಟಿ ತೊಟ್ಟ ವೈದ್ಯರು, ಅಕ್ಷರಶಃ 80 ಜನರ ಪಾಲಿಗೆ ಯಮಧೂತರಾದರು. ಹೀಗೆ ಇವರಿಬ್ಬರು ಮಾಡಿದ ತಪ್ಪಿಗೆ ರಾಜ್ಯದ ಜನ ತೊಂದರೆ ಅನುಭವಿಸುವಂತಾಯಿತು. ಪ್ರಾಣ ಕಳೆದುಕೊಳ್ಳಬಹುದಾಯಿತು. ಒಟ್ಟಿನಲ್ಲಿ ಕರ್ನಾಟಕ ಖಾಸಗಿ ವೈದ್ಯ ಸಂಸ್ಥೆಗಳ ಮಸೂದೆ 80 ಜೀವಗಳನ್ನು ಪಡೆಯಿತು. ಈ 80 ಜನರ ಹಾಗೂ ಅವರ ಕುಟುಂಬದವರ ಶಾಪ ತಟ್ಟದೆ ಇರುತ್ತದೆಯೇ ಮುಖ್ಯಮಂತ್ರಿ ಹಾಗೂ ಖಾಸಗಿ ವೈದ್ಯರೇ? ನಿಮ್ಮ ಕುಟುಂಬಸ್ಥರಿಗೇ (ಹಾಗೆ ಆಗದಿರಲಿ) ಇಂಥ ಪರಿಸ್ಥಿತಿ ಬಂದಿದ್ದರೆ ಸುಮ್ಮನಿರುತ್ತಿದ್ರಾ? ಮನುಷ್ಯತ್ವ ಮರೆಯುವ ಮುನ್ನ ಒಮ್ಮೆಯಾದರೂ ಯೋಚಿಸಿ.
Leave A Reply