ಹಫೀಜ್ ಸಯೀದ್ ಬಿಡುಗಡೆಗೆ ಅಮೆರಿಕ ತಪರಾಕಿ, ಮರು ಬಂಧನಕ್ಕೆ ತಾಕೀತು!
ವಾಷಿಂಗ್ಟನ್: ಜಮಾತ್ ಉದ್ ದವಾ ಉಗ್ರ ಸಂಘಟನೆ ಮುಖ್ಯಸ್ಥ, 26/11ರ ದಾಳಿಯ ರೂವಾರಿ ಹಫೀಜ್ ಸಯೀದ್ ನನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಿರುವ ಪಾಕಸ್ತಾನದ ಕ್ರಮಕ್ಕೆ ಅಮೆರಿಕ ಆಕ್ರೋಶ ವ್ಯಕ್ತಪಡಿಸಿದ್ದು, ಆತನನ್ನು ಮರು ಬಂಧಿಸುವಂತೆ ಆದೇಶಿಸಿದೆ.
ಲಷ್ಕರೆ ತಯ್ಬಾ ಮುಖಂಡನೂ ಆಗಿರುವ ಹಫೀಜ್ ಸಯೀದ್ ಅಮೆರಿಕದವರನ್ನೂ ಸೇರಿ ಹಲವು ಮುಗ್ಧ ಜೀವಗಳ ಬಲಿ ಪಡೆದ ಪಾಪಿ. ಹಾಗಾಗಿ ಇಂಥ ಉಗ್ರನನ್ನು ಬಿಡುಗಡೆಗೊಳಿಸಿರುವುದು ಆತಂಕಕಾರಿ ಬೆಳವಣಿಗೆ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯದ ವಕ್ತಾರ ಹೀದರ್ ನಾರ್ಟ್ ಹೇಳಿದ್ದಾರೆ.
ಪಾಕಿಸ್ತಾನದ ಈ ಕ್ರಮ ಸರಿಯಲ್ಲ. ಅಂತಾರಾಷ್ಟ್ರೀಯ ಮಟ್ಟದ ಭಯೋತ್ಪಾದಕನಾಗಿರುವ ಹಫೀಜ್ ಸಯೀದ್ ಬಂಧನ ಹಾಗೂ ಆತನ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವತ್ತ ಪಾಕಿಸ್ತಾನ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ಕಳೆದ ಹತ್ತು ತಿಂಗಳಿನಿಂದ ಗೃಹಬಂಧನದಲ್ಲಿರುವ ಹಫೀಜ್ ಸಯೀದ್ ನನ್ನು ಪಾಕಿಸ್ತಾನದ ಲಾಹೋರ್ ಹೈಕೋರ್ಟ್ ಗೃಹಬಂಧನದಿಂದ ಬಿಡುಗಡೆಗೊಳಿಸಿತ್ತು. ಪಾಕಿಸ್ತಾನದ ಈ ಕ್ರಮವನ್ನು ಭಾರತ ಸಹ ತೀವ್ರವಾಗಿ ಖಂಡಿಸಿತ್ತು. ಈಗ ಅಮೆರಿಕ ಸಹ ಖಂಡಿಸಿದ್ದು, ಮುಂದೆ ಪಾಕಿಸ್ತಾನ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದು ಕುತೂಹಲ ಕೆರಳಿಸಿದೆ.
Leave A Reply