ಡಿ.1ರಿಂದ ಆಳ್ವಾಸ್ ನುಡಿಸಿರಿ, ಮೊಳಗಲಿದೆ ನಾಡು, ನುಡಿಯ ಐಸಿರಿ
ಮಂಗಳೂರು: ಮೂಡಬಿದ್ರೆಯ ಸುಂದರಿ ಆನಂದ ಆಳ್ವಾ ಆವರಣದ ರತ್ನಾಕರ ವರ್ಣಿ ವೇದಿಕೆಯಲ್ಲಿ ಡಿಸೆಂಬರ್ 1ರಿಂದ 3ರವರೆಗೆ ಆಳ್ವಾಸ್ ನುಡಿಸಿರಿ ಸಮ್ಮೇಳನ ನಡೆಯಲಿದ್ದು, ಕನ್ನಡ ನಾಡು, ನುಡಿ, ಸಂಸ್ಕೃತಿ, ಹಿರಿಮೆ, ಗರಿಮೆಗಳೆಲ್ಲವೂ ಒಂದೇ ವೇದಿಕೆಯಲ್ಲಿ ಮೊಳಗಲಿವೆ.
ಆಳ್ವಾಸ್ ನುಡಿಸಿರಿ ಕಾರ್ಯಾಧ್ಯಕ್ಷ ಮೋಹನ್ ಆಳ್ವ ನೇತೃತ್ವದಲ್ಲಿ ಸಮ್ಮೇಳನ ನಡೆಯಲಿದ್ದು, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ವಿಮರ್ಶಕ ಡಾ.ಸಿ.ಎನ್.ರಾಮಚಂದ್ರನ್ ಸಮ್ಮೇಳನ ಉದ್ಘಾಟಿಸಲಿದ್ದು, ಕ್ರೈಸ್ತ ಪಾದ್ರಿ ಗೋಮ್ಸ್ ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ, ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಡಾ.ಎನ್.ವಿನಯ್ ಹೆಗ್ಡೆ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಕರ್ನಾಟಕದ ಬಹತ್ವದ ನೆಲೆಗಳು ಎಂಬ ಪ್ರಧಾನ ಪರಿಕಲ್ಪನೆಯಲ್ಲಿ ಮೂರು ಪ್ರಧಾನ ಗೋಷ್ಠಿ ನಡೆಯಲಿವೆ ಎಂದು ಮೋಹನ್ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಮ್ಮೇಳನದಲ್ಲಿ 7 ವಿಶೇಷ ಉಪನ್ಯಾಸ ನಡೆಯಲಿದ್ದು, ಡಾ. ಜಿ.ಬಿ. ಹರೀಶ್, ಪ್ರೊ. ನಿರಂಜನಾರಾಧ್ಯ , ಡಾ.ಡಿ.ಎಸ್. ಚೌಗಲೆ, ಎ. ಈಶ್ವರಯ್ಯ, ಮುರಳೀಧರ ಬಳ್ಳುಕ್ಕುರಾಯ, ಡಾ. ರಂಜಾನ್ ದರ್ಗ, ಪ್ರೊ. ರವೀಂದ್ರ ರೇಷ್ಮೆ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಸೇರಿ ಹಲವು ಗಣ್ಯರನ್ನು ಸನ್ಮಾನಿಸಲಾಗುತ್ತದೆ.
ಅಲ್ಲದೆ ಆಳ್ವಾಸಿ ಕೃಷಿ ಸಿರಿಯನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಉದ್ಘಾಟಿಸಲಿದ್ದು, ಸಂಸ್ಕೃತಿಯ ಪ್ರತೀಕವಾದ ಓಟದ ಕೋಣಗಳ ಸೌಂದರ್ಯ ಸ್ಪರ್ಧೆ, ಜಾನುವಾರು ಪ್ರದರ್ಶನ, ಕೋಣಗಳ ಓಟದ ಸ್ಪರ್ಧೆ ನಡೆಯಲಿದೆ. ಆನ್ ಲೈನ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸುವವರು ನೋಂದಣಿ ಮಾಡಿಕೊಳ್ಳಬಹುದು.
ಒಟ್ಟಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದಂತೆ ರಾಜಕೀಯ ಬೆರೆಸದೆ, ಬರೀ ನಾಡು, ನುಡಿಯ ವೈಚಾರಿಕ ನೆಲೆಗಟ್ಟಿನಲ್ಲಿ ನಡೆಯುವ ಆಳ್ವಾಸ್ ನುಡಿಸಿರಿಗೆ ನೀವೂ ಬನ್ನಿ.
Leave A Reply