ಹೆಣ್ಣು ಕೊಟ್ಟ ಮಾವನನ್ನೇ ಕೊಂದ ಅಲ್ಲಾವುದ್ದೀನ್ ಖಿಲ್ಜಿ ಕುರಿತು ಸಿನಿಮಾ ಮಾಡುವ ದರ್ದೇನಿತ್ತು ಬನ್ಸಾಲಿ?
ಎಲ್ಲರೂ ಪದ್ಮಾವತಿ ಚಿತ್ರದ ರಾಣಿ ಪದ್ಮಾವತಿ ಬಗ್ಗೆಯೇ ಮಾತನಾಡುತ್ತಿದ್ದಾರೆ. ಒಂದು ಸಮುದಾಯ ಭಾವನೆಗಳಿಗೆ ಧಕ್ಕೆ ತರುತ್ತಿದೆ ಎಂದು ಹೋರಾಟ ಮಾಡುತ್ತಿದ್ದರೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಾವು ಸಿನಿಮಾ ಬಿಡುಗಡೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಇನ್ನೂ ಕೆಲವರಂತೂ ಪದ್ಮಾವತಿ ಪಾತ್ರ ಮಾಡಿದ ದೀಪಿಕಾ ಪಡುಕೋಣೆ, ಸಿನಿಮಾ ನಿರ್ದೇಶಿಸಿದ ಸಂಜಯ್ ಲೀಲಾ ಬನ್ಸಾಲಿ ತಲೆ ಕಡಿದರೆ 10 ಕೋಟಿ ರುಪಾಯಿ ಇನಾಮು ಘೋಷಿಸಿದ್ದಾರೆ.
ಆದರೆ ಬಹುಚರ್ಚಿತ, ವಿವಾದಾತ್ಮಕ, ಕ್ರೂರ ರಾಜ ಅಲ್ಲಾವುದ್ದೀನ್ ಖಿಲ್ಜಿ ಬಗ್ಗೆ ಬನ್ಸಾಲಿ ಚಿತ್ರದಲ್ಲಿ ಚಿತ್ರೀಕರಿಸಿದ್ದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಒಬ್ಬ ನರಹಂತಕ, ಅಸಹಿಷ್ಣು ಬಗ್ಗೆ ಚಿತ್ರ ನಿರ್ದೇಶಿಸುವ ದರ್ದು ಬನ್ಸಾಲಿಗೇನು ಬಂತೋ ಗೊತ್ತಿಲ್ಲ. ಪ್ರಾಯಶಃ, ಬನ್ಸಾಲಿ ಇತಿಹಾಸ ಓದದೆಯೇ ಸಿನಿಮಾ ಮಾಡಿದ್ದಾರೇನೋ?
ಅಷ್ಟಕ್ಕೂ ಅಲ್ಲಾವುದ್ದೀನ್ ಖಿಲ್ಜಿ ಯಾರು? ಆತನ ಬಗ್ಗೆ ಸಿನಿಮಾ ಮಾಡುವಷ್ಟು ಅವನು ಮಾಡಿದ ಘನಕಾರ್ಯವೇನು? ಆತನ ಕ್ರೌರ್ಯದ ಪರಾಕಾಷ್ಠೆ ಹೇಗಿತ್ತು? ಹಾಗಾದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನರಹಂತಕನ ಬಗ್ಗೆಯೂ ಸಿನಿಮಾ ಮಾಡಬಹುದಾ? ಗೊತ್ತಾ?
ನೀವು ಅಲ್ಲಾವುದ್ದೀನ್ ಖಿಲ್ಜಿ ಎಂಬ ಮುಸ್ಲಿಂ ದೊರೆಯ ನಿಜಬಣ್ಣದ ಬಗ್ಗೆ ತಿಳಿದುಕೊಳ್ಳಬೇಕು ಎಂದರೆ ಜಗತ್ಪ್ರಸಿದ್ಧ ಇತಿಹಾಸಕಾರ ಸೈಯಿದ್ ಅಥಾರ್ ಅಬ್ಬಾಸ್ ರಿಜ್ವಿ ಬರೆದ “ಖಿಲ್ಜಿ ಕಾಲೀನ ಭಾರತ” ಪುಸ್ತಕ ಓದಬೇಕು. 1290ರಿಂದ 1320ರವರೆಗೆ ಖಿಲ್ಜಿ ನಡೆಸಿದ ಆಳ್ವಿಕೆ ಕುರಿತು ಪುಸ್ತಕದಲ್ಲಿ ಉಲ್ಲೇಖಿಸಿದ್ದು, ಇತಿಹಾಸಕಾರರಾದ ಜಿಯಾವುದ್ದೀನ್ ಬರ್ನಿ, ಆಮೀರ್ ಖುಸ್ರೋ, ಅಬ್ದುಲ್ಲಾ ಸೇರಿ ಹಲವರು ಆ ಪುಸ್ತಕವನ್ನು ಭಾಷಾಂತರ ಮಾಡಿದ್ದಾರೆ.
ಇವರೆಲ್ಲರ ಅಧ್ಯಯನ, ಪುಸ್ತಕ, ಖಿಲ್ಜಿ ಕಾಲೀನ ಭಾರತ ಪುಸ್ತಕವನ್ನೆಲ್ಲ ಅಧ್ಯಯನ ಮಾಡಿ ನೋಡಿದರೆ ಅಲ್ಲಾವುದ್ದೀನ್ ಖಿಲ್ಜಿ ಒಬ್ಬ ಕ್ರೂರಿ, ಆಕ್ರಮಣಕಾರ ಹಾಗೂ ಅಪಾರ ಭೂಮಿ ಅತಿಕ್ರಮಿಸಿಕೊಂಡ ಕರುಣೆಯಿಲ್ಲದ ರಾಜ ಎಂದು ಚಿತ್ರಿಸಲಾಗಿದೆ. ಪುಸ್ತಕ ಓದಿದ ಬಳಿಕ ಐಸಿಸ್ ಉಗ್ರರಿಗಿಂತ ಖಿಲ್ಜಿಯೇ ಭಯಂಕರ ಎನಿಸದೇ ಇರದು!
ಅಲ್ಲಾವುದ್ದೀನ್ ಗೆ ತನ್ನ ಪ್ರದೇಶ ವಿಸ್ತರಣೆ ಹುಚ್ಚು ಎಷ್ಟಿತ್ತೆಂದರೆ, ಆತ ದೆಹಲಿ ಸ್ವಾಧೀನಪಡಿಸಿಕೊಳ್ಳಲು ಹವಣಿಸಿದ್ದ. ತನ್ನ ಸ್ವಂತ ಮಾವ ಜಲಾಲುದ್ದೀನನಿಗೇ ಹೇಳದೇ ದೇವಗಿರಿ ವಶಪಡಿಸಿಕೊಂಡ. ಭೂಮಿಗಾಗಿ ಹೆಣ್ಣುಕೊಟ್ಟ ಮಾವ, ಆತನ ಇಬ್ಬರು ಮಕ್ಕಳನ್ನು ಕ್ರೂರವಾಗಿ ಖಿಲ್ಜಿ ಕೊಂದ ಎಂದು ಪುಸ್ತಕದ 46ನೇ ಪುಟದಲ್ಲಿ ಕ್ರೂರಿಯ ಕತೆ ವಿವರಿಸಲಾಗಿದೆ.
ಅಷ್ಟೇ ಅಲ್ಲ, ಪುಸ್ತಕದ 29ನೇ ಪುಟದ ಪ್ರಕಾರ ಖಿಲ್ಜಿ ಒಬ್ಬ ಧರ್ಮ ಅಸಹಿಷ್ಣು ಆಗಿದ್ದ. ಹಾಗಾಗಿಯೇ ಆತ ಮಧ್ಯಪ್ರದೇಶದ ದೇವಾಲಯವೊಂದರಲ್ಲಿ ಪ್ರತಿಷ್ಠಾಪಿಸಲಾಗಿದ್ದ ದೇವತೆಯ ಹಿತ್ತಾಳೆ ಮೂರ್ತಿ ಹಾನಿಗೊಳಿಸಿದ್ದ. ಅಲ್ಲದೆ ಆತ ಹಿಂದೂಗಳನ್ನು ನಿಗ್ರಹಿಸಲು ಹಲವು ನೀತಿ-ನಿಯಮ ಜಾರಿಗೊಳಿಸಿದ್ದ ಎಂದು 69ನೇ ಪುಟ ತಿಳಿಸುತ್ತದೆ.
ಹೀಗೆ ಬರೀ ಅಧಿಕಾರ, ಭೂಮಿ, ಸಾಮ್ರಾಜ್ಯ ರಕ್ಷಣೆಗೆ ಹಿಂದೂಗಳನ್ನು ಹಿಂಸಿಸಿದ, ಸ್ವಂತ ಮಾವನನ್ನೇ ಕೊಂದ ಕ್ರೂರಿ ಅಲ್ಲಾವುದ್ದೀನ್ ಖಿಲ್ಜಿ ಬಗ್ಗೆ ಸಂಜಯ್ ಲೀಲಾ ಬನ್ಸಾಲಿ ಹಣ ಮಾಡುವ ದೃಷ್ಟಿಯಿಂದ ಒಂದಕ್ಕೇ ಸಿನಿಮಾ ಮಾಡಿದ್ದಾರೆ. ಅಲ್ಲದೆ, ಸಿನಿಮಾ ಬೆಂಬಲಿಸುವವರೆಲ್ಲರೂ ಸಂವಿಧಾನದ 19 (1) ನೇ ಕಲಂ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ ಎನ್ನುತ್ತಾರೆ. ಆದರೆ ಅದೇ ಸಂವಿಧಾನದ 19 (2) ಕಲಂ ಅಭಿವ್ಯಕ್ತಿ ಸ್ವಾತಂತ್ರ್ಯ ಬಳಸುವಾಗ ದೇಶದ ಭದ್ರತೆ ಹಾಗೂ ಸಮಗ್ರತೆ ಎನ್ನುತ್ತದೆ. ಪ್ರಾಯಶಃ ಇದು ಸಂಜಯ್ ಲೀಲಾ ಬನ್ಸಾಲಿಗೂ ಗೊತ್ತಿಲ್ಲವೇನೋ?
Leave A Reply