ತವರು ರಾಜ್ಯದಲ್ಲಿ ಮೋದಿ ಪ್ರಚಾರ, ಜನಬೆಂಬಲದ ಅಬ್ಬರ
ಗಾಂಧಿನಗರ: 2019ರ ಲೋಕಸಭೆ ಚುನಾವಣೆಯ ಮುನ್ನುಡಿ ಎಂದೇ ಬಿಂಬಿಸಲಾಗಿರುವ ಗುಜರಾತ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಗುಜರಾತ್ ತಲುಪಿದ್ದು, ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.
ಕಾಂಗ್ರೆಸ್ ಉಪಾಧ್ಯಕ್ಷ ರಾಹಲ್ ಗಾಂಧಿ ಈಗಾಗಲೇ ಗುಜರಾತಿನಲ್ಲಿ ಸಭೆ ನಡೆಸಿದ್ದರೂ, ಹಿಮಾಚಲ ಪ್ರದೇಶ ಚುನಾವಣೆ, ಫಿಲಿಪ್ಪೈನ್ಸ್ ನಲ್ಲಿ ನಡೆದ ಆಸಿಯಾನ್ ರಾಷ್ಟ್ರಗಳ ಶೃಂಗಸಭೆಯಲ್ಲಿ ಭಾಗಿ ಸೇರಿ ಬಿಡುವಿಲ್ಲದ ವೇಳಾಪಟ್ಟಿ ಹಿನ್ನೆಲೆ ತವರು ರಾಜ್ಯಕ್ಕೇ ತೆರಳಿರಲಿಲ್ಲ.
ಈಗ ಗುಜರಾತ್ ತಲುಪಿರುವ ಪ್ರಧಾನಿ ಮೋದಿ ಸೋಮವಾರ ಒಂದೇ ದಿನ ಭುಜ್, ಕಚ್, ಜಸ್ಡನ್, ಕಮ್ರೇಜ್ ಹಾಗೂ ಧಾರಿ ಪ್ರದೇಶಳಲ್ಲಿ ನಡೆಯುವ ಸಾಲು ಸಾಲು ಸಭೆಗಳಲ್ಲಿ ಭಾಷಣ ಮಾಡಲಿದ್ದು, ಅಪಾರ ಜನ ಸೇರಲಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ಮೋದಿ ಕಚ್ ನ ಆಶಾಪುರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ದೇವಾಲಯದ ಆವರಣದಲ್ಲಿ ಪ್ರಚಾರದ ಭಾಗವಾಗಿ ಸ್ಥಳೀಯರ ಜತೆ ಮಾತುಕತೆ ನಡೆಸಿದ್ದಾರೆ.
ಮುಂದಿನ 15 ದಿನಗಳಲ್ಲಿ ಮೋದಿ ಅವರು ಸುಮಾರು 20 ಸಮಾವೇಶಗಳಲ್ಲಿ ಭಾಗವಹಿಸಲಿದ್ದು, ಕಳೆದ 22 ವರ್ಷಗಳಲ್ಲಿ ಗುಜರಾತಿನಲ್ಲಿ ಕೈಗೊಂಡ ಅಭಿವೃದ್ಧಿ, ಕೇಂದ್ರ ಸರ್ಕಾರದ ಯೋಜನೆ, ಕಾಂಗ್ರೆಸ್ ವೈಫಲ್ಯವನ್ನು ಚುನಾವಣೆ ಅಸ್ತ್ರವನ್ನಾಗಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
Leave A Reply