ಪೇಜಾವರ ಶ್ರೀಗಳನ್ನು ವಿರೋಧಿಸುವ ಮೂಲಕ ದಲಿತರನ್ನು ಸೆಳೆಯುವ ಯತ್ನ ಯಶಸ್ವಿಯಾಯಿತಾ!
ಒಂದಿಷ್ಟು ಜನ ಕಾಯುತ್ತಿದ್ದರು. ಧರ್ಮ ಸಂಸದ್ ನಿಂದ ಯಾವ ವಿಷಯ ತೆಗೆದು ಅದನ್ನು ವಿರೋಧಿಸಬಹುದು ಎಂದು ಕಾಯುತ್ತಿದ್ದ ಗುಂಪೇ ಇತ್ತು. ಅವರಿಗೆ ಕೊನೆಗೂ ಒಂದು ವಿಷಯ ಸಿಕ್ಕಿತ್ತು. ಅದನ್ನು ಹಿಡಿದುಕೊಂಡು ಪೇಜಾವರ ಹಿರಿಯ ಶ್ರೀಗಳಾದ ಶ್ರೀವಿಶ್ವೇಶತೀರ್ಥ ಸ್ವಾಮೀಜಿಯವರು ಹಾಗೆ ಹೇಳಿದ್ದಾರೆ, ಹೀಗೆ ಹೇಳಿದ್ದಾರೆ, ಅವರಿಗೆ ಅಂಬೇಡ್ಕರ್ ಮೇಲೆ ಗೌರವವಿಲ್ಲ, ಸಂವಿಧಾನದ ಮೇಲೆ ಗೌರವವಿಲ್ಲ ಹೀಗೆ ಸುಳ್ಳು ಸುದ್ದಿ ಹಬ್ಬಿಸಿ ಪೇಜಾವರ ಶ್ರೀಗಳನ್ನು ಹಣಿಯುತ್ತಾ ಇಡೀ ಸಂತ ಕುಲವನ್ನು ತೆಗಳುವ ಕೆಲಸ ನಡೆಯುತ್ತಿದೆ.
ಉಡುಪಿಯಲ್ಲಿ ಮೂರು ದಿನ ನಡೆದ ಧರ್ಮ ಸಂಸದ್ ನಿಜಕ್ಕೂ ಐತಿಹಾಸಿಕವಾಗಿ ದೊಡ್ಡ ಕಾರ್ಯಕ್ರಮ. ಅನೇಕ ಸಾಧು, ಸಂತರು, ಯೋಗಿಗಳು, ಸ್ವಾಮೀಜಿಗಳು ಒಂದೇ ವೇದಿಕೆಯ ಮೇಲೆ ಮತ್ತು ಕೆಳಗೆ ಕುಳಿತು ನಿರ್ಣಯಗಳನ್ನು ಪಾಸು ಮಾಡಿದ್ದು ಒಂದು ಕ್ರಾಂತಿಕಾರಿ ಹೆಜ್ಜೆ. ಅದರಲ್ಲಿಯೂ ವಿಶ್ವ ಹಿಂದೂ ಪರಿಷತ್ ನ ಅಂತರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರು ಸ್ಪಷ್ಟವಾಗಿ ಹೇಳಿದ್ದಾರೆ-” ನಾವು ಚುನಾವಣೆಗೆ ಟಿಕೆಟ್ ಕೇಳುತ್ತಿಲ್ಲ. ಇಡೀ ಪ್ರಪಂಚವನ್ನು ಕಾಯುವ ಶ್ರೀರಾಮ ಗುಡಿಸಲಲ್ಲಿ ಇದ್ದಾನೆ. ಅವನಿಗೊಂದು ಭವ್ಯ ದೇಗುಲ ಆಗಬೇಕೆನ್ನುವುದು ನಮ್ಮ ಒತ್ತಾಯ” ಇದು ನಿಜ ಕೂಡ. ರಾಮ ಜನ್ಮಭೂಮಿಯಲ್ಲಿ ಭವ್ಯ ರಾಮನ ದೇವಸ್ಥಾನ ಆಗಬೇಕೆನ್ನುವುದು ನೂರು ಕೋಟಿ ಭಾರತೀಯರ ಕನಸು. ಇದರಲ್ಲಿ ಕಾಂಗ್ರೆಸ್ಸಿನಲ್ಲಿರುವ ಹಿಂದೂಗಳು, ಬಿಜೆಪಿಯಲ್ಲಿರುವ ಹಿಂದೂಗಳು, ಜೆಡಿಎಸ್, ಕಮ್ಯೂನಿಸ್ಟ್ ನಲ್ಲಿರುವ ಹಿಂದೂಗಳು ಎಂದು ಬೇರೆ ಬೇರೆ ಇಲ್ಲ. ಒಂದು ವೇಳೆ ಬಿಜೆಪಿ ಬಿಟ್ಟು ಬೇರೆ ಪಕ್ಷದಲ್ಲಿರುವ ಹಿಂದೂಗಳು ಒಪನ್ನಾಗಿ ರಾಮ ಮಂದಿರ ಆಗಲೇಬೇಕು ಎಂದು ಹೇಳುತ್ತಿಲ್ಲವೆಂದರೆ ಅದು ಅವರು ಇರುವ ಪಕ್ಷದ ಸಿದ್ಧಾಂತ ವಿನ: ವೈಯಕ್ತಿಕ ಅಭಿಪ್ರಾಯದಲ್ಲಿ ದೇವಸ್ಥಾನ ಆಗಬೇಕಾಗಿಲ್ಲ ಎಂದು ಯಾವ ಹಿಂದೂ ಕೂಡ ಅಂದುಕೊಳ್ಳುವುದಿಲ್ಲ. ಆದ್ದರಿಂದ ದೇಶದ ಬಹುಸಂಖ್ಯಾತ ಜನರು ಈ ರಾಷ್ಟ್ರದಲ್ಲಿ ಒಂದು ಆಗಬೇಕು ಎಂದ ಮೇಲೆ ಅದು ಆಗಲೇಬೇಕು. ಅದಕ್ಕೆ ಧರ್ಮ ಸಂಸದ್ ನಲ್ಲಿ ವಿದ್ಯುಕ್ತವಾಗಿ ಮುನ್ನುಡಿ ಬರೆಯಲಾಗಿದೆ.
ಅದರೊಂದಿಗೆ ರಾಷ್ಟ್ರದಲ್ಲಿ ಎಲ್ಲಿಯಾದರೂ ಅಸ್ಪಶ್ಯತೆ ಉಳಿದಿದೆ ಎಂದಾದರೆ ಅದು ಕೂಡ ಸಂಪೂರ್ಣವಾಗಿ ನಿವಾರಣೆಯಾಗಬೇಕು ಎನ್ನುವ ನಿರ್ಣಯ ಕೂಡ ಹೊರಡಿಸಲಾಗಿದೆ. ಕರಾವಳಿಯ ಮಟ್ಟಿಗೆ ಅಸ್ಪಶ್ಯತೆ ಎನ್ನುವುದು ಇಲ್ಲವೇ ಇಲ್ಲ ಎನ್ನಬಹುದು. ಎಲ್ಲೋ ಕೆಲವೊಮ್ಮೆ ತಪ್ಪು ಅಭಿಪ್ರಾಯದಲ್ಲಿ ಏನೋ ಆದರೆ ಅದನ್ನು ಮಾಧ್ಯಮಗಳ ಒಂದು ವರ್ಗ ಇಡೀ ಸಮಾಜವೇ ಹೀಗೆ ಎಂದು ಬಿಂಬಿಸಿ ಅದನ್ನು ಜನರ ಮನಸ್ಸಿನಲ್ಲಿ ತುಂಬಿದಾಗ ಅಸ್ಪಶ್ಯತೆ ಇದೆ ಎಂದು ಅನಿಸುತ್ತದೆ ಬಿಟ್ಟರೆ ನಿಜಕ್ಕೂ ಇಡೀ ಮೈದಾನದಲ್ಲಿ ಒಂದು ಧೂಳಿನ ಕಣದಷ್ಟು ಇದ್ದ ಮಾತ್ರಕ್ಕೆ ಇಡೀ ಸಮುದಾಯವನ್ನೇ ದೂರುವುದು ಒಳ್ಳೆಯದಲ್ಲ. ಎಲ್ಲಿಯಾದರೂ ನಮ್ಮ ದೇಶದ ಗ್ರಾಮೀಣ ಭಾಗದಲ್ಲಿ ಅಸ್ಪಶ್ಯತೆ ಎನ್ನುವ ಪಿಡುಗು ಉಳಿದಿದ್ದರೆ ಅದನ್ನು ಧರ್ಮ ಸಂಸದ್ ಗೆ ರಾಷ್ಟ್ರದ ಮೂಲೆ ಮೂಲೆಗಳಿಂದ ಬಂದ ಸಂತರು ತೊಡೆದು ಹಾಕಬೇಕು. ಹಿಂದೂ ಒಳಗಿನ ಜಾತಿ ವೈಷಮ್ಯವನ್ನು ಅಳಿಸಿ ಹಾಕಿ ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎನ್ನುವ ಘೋಷಣೆ ಮೊಳಗಬೇಕು ಎನ್ನುವುದು ಸಂತರ ಒಕ್ಕೂರಲಿನ ಧ್ವನಿ ಇಡೀ ಉಡುಪಿಯಲ್ಲಿ ರಿಂಗಣಿಸುತ್ತಿತ್ತು. ಇನ್ನೂ ಸಂಪೂರ್ಣ ಗೋಹತ್ಯಾ ನಿಷೇಧ ಜಾರಿಗೆ ಬರಬೇಕು ಎನ್ನುವುದು ಮತ್ತೊಂದು ನಿರ್ಣಯ. ಇದು ಬರುವ ದಿನಗಳಲ್ಲಿ ದೇವರು ಮನಸ್ಸು ಮಾಡಿದರೆ ಖಂಡಿತ ಜಾರಿಗೆ ಬರಲಿದೆ.
ಆದರೆ ಇಷ್ಟೆಲ್ಲ ಯಶಸ್ವಿಯಾಗಿ ನಡೆಯುತ್ತಾ ಇದ್ದಾಗ ಯಾವ ವಿಷಯ ಹಿಡಿದುಕೊಂಡು ನಾವು ವಿರೋಧಿಸುವುದು ಎಂದು ಒಂದು ಗುಂಪು ಕಾಯುತ್ತಾ ಇತ್ತು. ಹಿಂದೂಗಳ ಸಂಖ್ಯೆ ಹೆಚ್ಚಿಸಲು ನಾಲ್ಕು ಮಕ್ಕಳನ್ನು ಹೇರಬೇಕು ಎಂದು ಸ್ವಾಮೀಜಿಯೊಬ್ಬರ ಹೇಳಿಕೆ ವಿರೋಧಿಸಿದರೆ ಅದು ಅಲ್ಪಸಂಖ್ಯಾತರ ಪರ ಎನ್ನುವ ಹಣೆಪಟ್ಟಿ ಸಿಗುತ್ತದೆ ಮತ್ತು ಯಾವುದೋ ಉತ್ತರ ಪ್ರದೇಶದ ಸಂತರ ಆ ಹಳೆ ಬೇಡಿಕೆಯನ್ನು ವಿರೋಧಿಸಿದರೆ ಏನೂ ಪ್ರಚಾರ ಸಿಗುವುದಿಲ್ಲ ಎಂದು ಅನಿಸಿದ್ದ ಕಾರಣ ಅದಕ್ಕೆ ಆಕ್ಷೇಪ ಬಂದಿರಲಿಲ್ಲ. ಇನ್ನು ಹಿಂದೂಗಳು ಆತ್ಮರಕ್ಷಣೆಗೋಸ್ಕರ ದೊಣ್ಣೆಯನ್ನು ಮನೆಯಲ್ಲಿ ತೆಗೆದಿಟ್ಟುಕೊಳ್ಳಬೇಕು ಎನ್ನುವ ಹೇಳಿಕೆಯನ್ನು ಕೂಡ ವಿರೋಧಿಸಿದರೆ ಅದು ಕೂಡ ಹಳೆಯ ಸ್ಟೇಟ್ ಮೆಂಟ್ ಮತ್ತು ಹೇಳಿದ್ದರಲ್ಲಿ ಸತ್ಯ ಇದ್ದ ಕಾರಣ ವಿರೋಧಿಸಿದರೆ ಯಥಾಪ್ರಕಾರ ಹಿಂದೂಗಳ ವಿರೋಧ ಕಟ್ಟಿಕೊಂಡಂತೆ ಆಗುತ್ತದೆ. ಆದ್ದರಿಂದ ಏನು ಮಾಡುವುದು ಎಂದು ಕಾಯುತ್ತಿದ್ದವರಿಗೆ ಪೇಜಾವರ ಶ್ರೀಗಳು ಅಂಬೇಡ್ಕರ್ ಅವರ ಬಗ್ಗೆ ಆಡಿದ ಮಾತುಗಳೇ ಅಸ್ತ್ರಗಳಾದವು. ಅವರ ಮಾತಿನಲ್ಲಿದ್ದ ಅಷ್ಟು ಶಬ್ದಗಳನ್ನು ಪಕ್ಕಕ್ಕೆ ಇಟ್ಟು ಕೇವಲ ತಮಗೆ ಬೇಕಾದ ಶಬ್ದಗಳನ್ನು ಮಾತ್ರ ಆಯ್ಕೆ ಮಾಡಿ ಶ್ರೀವಿಶ್ವೇಶ ತೀರ್ಥ ಸ್ವಾಮಿಗಳು ಅಂಬೇಡ್ಕರ್ ವಿರೋಧಿ, ಸಂವಿಧಾನ ವಿರೋಧಿ, ದಲಿತರ ವಿರೋಧಿ ಎಂದು ಬಿಂಬಿಸಿದ್ದೇ ಬಿಂಬಿಸಿದ್ದು. ಅದು ಸಾಲದೆಂಬಂತೆ ಮೈಸೂರಿನಲ್ಲಿ ನಡೆಯುತ್ತಿದ್ದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಈ ಮಟ್ಟಿಗಾದರೂ ಬೇರೆಯದೆ ಪ್ರಚಾರ ಸಿಗಲಿ ಎನ್ನುವ ಕಾರಣಕ್ಕೆ ಅಲ್ಲಿಯೂ ಪ್ರತಿಭಟನೆ ನಡೆಸಲಾಯಿತು. ಅದರೊಂದಿಗೆ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಕೂಡ ದೂರು ದಾಖಲಿಸಲಾಯಿತು.
ಒಟ್ಟಿನಲ್ಲಿ ಹಿಂದೂಗಳು ದಲಿತರ ವಿರೋಧಿ ಎಂದು ಸುಳ್ಳು ಸುದ್ದಿ ಹರಡಿಸುವಲ್ಲಿ ಕೆಲವರಿಗೆ ಸಂತೋಷ ಸಿಕ್ಕಿತು. ದಲಿತರ ಉದ್ಧಾರಕ್ಕಾಗಿ ದುಡಿದ ರಾಷ್ಟ್ರ ಕಂಡ ಸಂತಶ್ರೇಷ್ಟ ಪೇಜಾವರ ಶ್ರೀಗಳನ್ನು ವಿರೋಧಿಸಿದರೆ ದೊಡ್ಡ ಪಬ್ಲಿಸಿಟಿ ಸಿಗುತ್ತದೆ ಎನ್ನುವುದು ಸಂಚಿನ ಒಂದು ಭಾಗ.
ಅಷ್ಟಕ್ಕೂ ಪೇಜಾವರ ಶ್ರೀಗಳು ಹೇಳಿದ್ದೇನು? ಅವರ ಮಾತಿನಲ್ಲಿದ್ದ ಲಾಜಿಕ್ ಯಾರಿಗಾದರೂ ಅರ್ಥವಾಗಬೇಕಿತ್ತು. ಆದರೆ ವಿರೋಧಿಸಲೇಬೇಕು ಎಂದು ನಿರ್ಣಯಿಸಿದರೆ ಸತ್ಯ ಅರಿವಾಗುವುದು ಕಷ್ಟ. ಅದನ್ನು ನಾಳೆ ಚರ್ಚಿಸೋಣ.!
Leave A Reply