ರೋಹಿಂಗ್ಯಾಗಳಿಗೆ ಉಗ್ರರ ಬೆಂಬಲ, ಭಾರತಕ್ಕೆ ಕಾದಿದೆ ಆಪತ್ತು
ದೆಹಲಿ: ದುಬೈ ಮತ್ತು ಪಾಕಿಸ್ತಾನದಲ್ಲಿರುವ ರೋಹಿಂಗ್ಯಾ ಮುಸ್ಲಿಮರ ಮುಖಂಡರು ವಿಶ್ವಾದ್ಯಂತ ಇರುವ ರೋಹಿಂಗ್ಯಾಗಳಿಗೆ ಸಹಾಯ ಮಾಡಲು ಲಷ್ಕರ್ ಈ ತಯ್ಯಬಾ, ಜಮಾತ್ ಉದ್ ದಾವಾ ಸಂಘಟನೆಗಳೊಂದಿಗೆ ಕೈ ಜೋಡಿಸಿದ್ದಾರೆ. ಈ ಸಂಘಟನೆಗಳ ಮೂಲಕ ಪಾಕಿಸ್ತಾನ ಮತ್ತು ದುಬೈನಲ್ಲಿ ಹಣ ಸಂಗ್ರಹಿಸಿ ಸಹಾಯ ಮಾಡಲು ಉದ್ದೇಶಿಸಿದ್ದಾರೆ. ಆದರೆ ಈ ನಿರ್ಧಾರದಿಂದ ಭಾರತಕ್ಕೆ ಆಪತ್ತು ಎದುರಾಗುವ ಸಂಭವವಿದೆ. ಭಯೋತ್ಪಾದಕ ಸಂಘಟನೆಗಳೊಂದಿಗೆ ಕೈ ಜೋಡಿಸಿರುವ ರೋಹಿಂಗ್ಯಾಗಳು ಭಾರತದಲ್ಲಿ ವಿಶೇಷವಾಗಿ ಕಣಿವೆ ರಾಜ್ಯ ಕಾಶ್ಮೀರದಲ್ಲಿ ವಿದ್ವಂಸಕ ಕೃತ್ಯ ನಡೆಸುವ ಆತಂಕ ಎದುರಾಗಿದೆ.
ಇತ್ತೀಚೆಗೆ ಪಾಕಿಸ್ತಾನದಲ್ಲಿ ನಡೆದ ಸೆಮಿನಾರ್ ನಲ್ಲಿ ಭಾಗವಹಿಸಿದ್ದ ದುಬೈನ್ ರೋಹಿಂಗ್ಯಾ ಸಂಘದ ಮುಖ್ಯಸ್ಥ ಫರ್ದೂಸ್ ಶೇಕ್ ಭಯೋತ್ಪಾದಕ ಸಂಘಟನೆ ಜಮಾತ್ ಉದ್ ದಾವಾದ ಮುಖಂಡನನ್ನು ಭೇಟಿ ಮಾಡಿ, ರೋಹಿಂಗ್ಯಾ ಟಾಸ್ಕ್ ಫೋರ್ಸ್ ರಚಿಸುವ ಕುರಿತು ಚರ್ಚೆ ನಡೆಸಿದ್ದಾರೆ. ಅಲ್ಲದೆ ರೋಹಿಂಗ್ಯಾ ಮುಸ್ಲಿಮರಿಗಾಗಿ ವೈದ್ಯಕೀಯ, ಆಹಾರ ಸೇವೆ ಒದಗಿಸಲು ಹಣ ಸಂಗ್ರಹಿಸುವುದು ಮತ್ತು ರೋಹಿಂಗ್ಯಾಗಳನ್ನು ಅವರ ಮೂಲ ನೆಲೆಗಳಿಗೆ ಕಳುಹಿಸಲು ಚಿಂತನೆ ನಡೆಸಲಾಗಿದೆ.
ಆದರೆ ಉಗ್ರ ಸಂಘಟನೆಗಳೊಂದಿಗೆ ಕೈ ಜೋಡಿಸಿರುವ ರೋಹಿಂಗ್ಯಾ ಮುಸ್ಲಿಂ ಮುಖಂಡರ ಈ ನಿರ್ಧಾರದಿಂದ ಭಾರತದ ಕಾಶ್ಮೀರ ಸೇರಿ ಹಲವು ಕಡೆ ಆಂತರಿಕ ಭದ್ರತೆ ಸಮಸ್ಯೆ ಎದುರಾಗಿದೆ ಎಂದು ಕೇಂದ್ರ ತನಿಖಾ ಸಂಸ್ಥೆಗಳು ಆತಂಕ ವ್ಯಕ್ತಪಡಿಸಿವೆ. ಇತ್ತೀಚೆಗೆ ಕಲ್ಕತ್ತಾದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ‘ರೋಹಿಂಗ್ಯಾಗಳು ದೇಶದ ಆಂತರಿಕ ಭದ್ರತೆಗೆ ಅಪಾಯ ಉಂಟು ಮಾಡುವ ಸಂಭವಿದೆ. ಅಕ್ರಮ ನುಸುಳುಕೋರರನ್ನು ತಡೆಯಬೇಕು ಎಂದು ಹೇಳಿದ್ದರು.
Leave A Reply