ಪಾಲಿಕೆಗೆ ಹಾಕಿದ ಬೇಲಿಗೆ ಮುಂಚೆನೆ ಮೇಯ್ದ ಅನುಭವ ಸಾಕಷ್ಟು ಇದೆ!
ನಿಮ್ಮ ಬ್ಯಾಂಕ್ ಅಕೌಂಟಿನಲ್ಲಿ ಎರಡು ಕೋಟಿ ರೂಪಾಯಿ ಇದೆ ಎಂದು ಇಟ್ಟುಕೊಳ್ಳಿ. ನೀವು ಏನು ಮಾಡುತ್ತಿರಿ. ಒಂದು ಒಳ್ಳೆಯ ಕಾರು ತೆಗೆದುಕೊಳ್ಳೋಣ ಎಂದು ಅಂದುಕೊಳ್ಳುತ್ತೀರಿ. ಕಾರು ಖರೀದಿಸುವ ಮುನ್ನ ಯಾವ ಕಾರು, ಅದರಲ್ಲಿರುವ ಸೌಲಭ್ಯ ಎಲ್ಲಾ ನೋಡಿ ತೆಗೆದುಕೊಳ್ಳಲು ಹೊರಡುತ್ತೀರಿ. ಅದೇ ನಿಮ್ಮಲ್ಲಿ ಮೊದಲೇ ಎರಡು ಕಾರುಗಳಿದ್ದು ಇನ್ನೊಂದು ಅವಶ್ಯಕತೆ ಇಲ್ಲ ಎಂದಾದರೆ ನೀವು ಏನು ಮಾಡಬಹುದು. ಒಂದಿಷ್ಟು ಬಂಗಾರದ ಆಭರಣಗಳನ್ನು ತೆಗೆದುಕೊಳ್ಳಬಹುದು. ಒಂದು ವೇಳೆ ಬಂಗಾರ ಕೂಡ ಸಾಕಷ್ಟಿದ್ದರೆ ಏನು ಮಾಡಬಹುದು. ಇನ್ನೊಂದು ಮನೆ ಕಟ್ಟಿಕೊಳ್ಳಬಹುದು. ಅದು ಬೇಡವೆನಿಸಿದರೆ ಎಲ್ಲಿಯಾದರೂ ವಿದೇಶ ಟೂರ್ ಮಾಡಿ ಒಂದಿಷ್ಟು ಲಕ್ಷ ಪುಡಿ ಮಾಡಿ ಬರಬಹುದು. ಒಟ್ಟಿನಲ್ಲಿ ನಿಮಗೆ ಹಣ ಖಾಲಿಯಾಗುವ ತನಕ ನೆಮ್ಮದಿಯಿರುವುದಿಲ್ಲವಾದರೆ ದುಂದುವೆಚ್ಚಕ್ಕೆ ಸಾಕಷ್ಟು ದಾರಿಗಳಿವೆ. ನಮ್ಮ ಮಂಗಳೂರು ಮಹಾನಗರ ಪಾಲಿಕೆ ಮತ್ತು ಶಾಸಕ ಜೆ ಆರ್ ಲೋಬೋ ಅವರಿಗೂ ಪ್ರೀಮಿಯಮ್ ಎಫ್ ಎ ಆರ್ ನಲ್ಲಿ ಸಂಗ್ರಹವಾಗಿರುವ ಕೋಟ್ಯಾಂತರ ರೂಪಾಯಿ ಹಣವನ್ನು ಖಾಲಿ ಮಾಡದೇ ನಿದ್ರೆ ಬರುವುದಿಲ್ಲವೇನೋ ಎಂದು ಅನಿಸುತ್ತದೆ. ಅದಕ್ಕಾಗಿ ಅದನ್ನು ಹೇಗೆ ಖಾಲಿ ಮಾಡಿ ತಮ್ಮ “ಅಭಿವೃದ್ಧಿ” ಮಾಡುವುದು ಎಂದು ಲೆಕ್ಕ ಹಾಕಲಾಗುತ್ತಿದೆ.
ನಿಮ್ಮ ಅಕೌಂಟಿನಲ್ಲಿ ಇರುವ ಹಣವನ್ನು ನೀವು ಹೇಗೆ ಬೇಕಾದರೂ ಉಡಾಯಿಸಿಬಿಡಬಹುದು. ನೀವು ಕಾರು ತಗೊಳ್ಳಿ, ಬಂಗಾರ ತಗೊಳ್ಳಿ, ಮನೆ ಕಟ್ಟಿಕೊಳ್ಳಿ, ವಿದೇಶಿ ಟೂರ್ ಮಾಡಿ, ಅದು ನಿಮ್ಮ ಇಷ್ಟ. ಆದರೆ ಪಾಲಿಕೆಯಲ್ಲಿರುವ ಎಫ್ ಎಎಆರ್ ಹಣ ಇದೆಯಲ್ಲ, ಅದು ಜನರ ತೆರಿಗೆಯ ಹಣ. ಅದನ್ನು ತಮಗೆ ಬೇಕಾದ ಹಾಗೆ ಬಳಸಲು ಆಗುವುದಿಲ್ಲ. ಆದರೂ ಲೋಬೋ ಅವರು ಬೆಂಗಳೂರಿಗೆ ಹೋಗಿ ಯಾವ ರಸ್ತೆಯ ಅಭಿವೃದ್ಧಿ ಆಗಬೇಕಾಗಿರುವ ಹಣವನ್ನು ಯಾವ ರಸ್ತೆಗೆ ಬೇಕಾದರೂ ಬಳಸಿಕೊಳ್ಳುವ ಬಗ್ಗೆ ಆದೇಶ ತೆಗೆದುಕೊಂಡು ಬಂದ ನಂತರ ಪಾಲಿಕೆಯ ಮಟ್ಟಿಗೆ ಅದು ಅಖಂಡ ಭೂರಿ ಭೋಜನ ಮಾಸಾಚರಣೆಯಾಗಿ ಬಿಟ್ಟಿದೆ.
ಇಲ್ಲದಿದ್ದರೆ ಯಾರಾದರೂ ಕದ್ರಿ ದೇವಸ್ಥಾನದ ರಸ್ತೆಯನ್ನು ಅಗಲ ಮಾಡುವ ಬಗ್ಗೆ ಎಸ್ಟಿಮೆಶನ್ ಹಾಕಿ ಅಭಿವೃದ್ಧಿ ಮಾಡಲು ಹೊರಡುತ್ತಾರಾ? ಯಾಕೆಂದರೆ ಆ ರಸ್ತೆ ಈಗಾಗಲೇ ಅಗಲವಾಗಿದೆ. ಎಲ್ಲಿಯ ತನಕ ಅಂದರೆ ಫುಟ್ ಪಾತ್ ಗಳ ಕೆಲಸ ಕೂಡ ಅರ್ಧ ಮುಗಿದಿದೆ. ಫುಟ್ ಪಾತ್ ಕೆಲಸ ಮುಗಿದ ನಂತರ ಇವರು ಅಗಲ ಮಾಡುವುದಾದರೂ ಯಾವುದನ್ನು. ಅದರೆ ಪಾಲಿಕೆ ಮತ್ತು ಶಾಸಕರಿಗೆ ಅದ್ಯಾವುದೂ ಮುಖ್ಯವಲ್ಲ. ಅವರಿಗೆ ಹಣ ಖಾಲಿಯಾಗಬೇಕು. ಅದಕ್ಕಾಗಿ ಅವರು ಮಣ್ಣಗುಡ್ಡೆ-ಬಳ್ಳಾಲ್ ಭಾಗ್, ಮಣ್ಣಗುಡ್ಡೆ-ಕುದ್ರೋಳಿಯಂತಹ ಇತ್ತೀಚೆಗೆ ಅಭಿವೃದ್ಧಿ ಆಗಿರುವ ಒಳ್ಳೆಯ ರಸ್ತೆಗಳನ್ನು ಕೂಡ ಅಭಿವೃದ್ಧಿ ಮಾಡಲು ಹೊರಡುತ್ತಾರೆ.
ಅಲ್ಲಿ ನೋಡಿದರೆ ಟೆಂಪಲ್ ಸ್ಕೇರ್ ಸಮೀಪದ ಶ್ರೀರಾಮ ಮಂದಿರದಿಂದ ಲೇಡಿಗೋಶನ್ ತನಕದ ಭವಂತಿ ಸ್ಟ್ರೀಟ್ ರಸ್ತೆಯನ್ನು ಅಭಿವೃದ್ಧಿ ಮಾಡಲು ಹಣ ಬಂದರೆ ಇವರು ನಾಲ್ಕು ವರ್ಷದಿಂದ ಆ ಹಣವನ್ನು ಹಾಗೆ ಇಟ್ಟು ಅದು ಮೊಟ್ಟೆ ಹಾಕುತ್ತಾ ಎಂದು ಕಾಯುತ್ತಿದ್ದರು. ರಸ್ತೆ ರಾಮಕಾಂತಿ ಥಿಯೇಟರ್ ನಿಂದ ಸ್ವಲ್ಪ ಮುಂದೆ ತನಕ ಅಗಲವಾದರೂ ನಂತರ ಕೆಲಸ ಮುಂದೆ ಹೋಗಲಿಲ್ಲ. ಪರಿಣಾಮವಾಗಿ ಆ ರಸ್ತೆ ಅಗಲಕ್ಕೆಂದು ಬಂದ ಹಣ ಖರ್ಚಾಗದೇ ಹಾಗೆ ಹೋಯಿತು. ಇವರು ನೋಡಿದರೆ ಅಗಲವಾಗಿರುವ ರಸ್ತೆಗೆ ಸ್ಕೇಲ್ ಹಿಡಿದು ಹೋಗುತ್ತಾರೆ. ರೂಪವಾಣಿ ಥಿಯೇಟರ್ ನಿಂದ ಲೇಡಿಗೋಶನ್ ತನಕದ ರಸ್ತೆ ಅಲ್ಲಲ್ಲಿ ಬಾಯಿ ತೆರೆದು ಕಾಯುತ್ತಾ ಇದೆ. ಸೆಂಟ್ರಲ್ ಮಾರುಕಟ್ಟೆಯ ಸುತ್ತಮುತ್ತಲ ಜಾಗವನ್ನು ಇವರು ಅಗಲ ಮಾಡಿ ಕಾಂಕ್ರೀಟ್ ಹಾಕಬಹುದಿತ್ತು. ಕೆಲವು ವ್ಯಾಪಾರಿಗಳು ತಮ್ಮ ಅಂಗಡಿಯ ಎದುರು ನಾಲ್ಕು ಮಿನಿ ಲಾರಿಗಳನ್ನು ನಿಲ್ಲಿಸಿ ಅದನ್ನೇ ಗೋಡೌನ್ ತರಹ ಮಾಡಿಕೊಂಡಿದ್ದಾರೆ. ಅಂತಹ ಮಿನಿ ಲಾರಿಗಳು ಶಾಶ್ವತವಾಗಿ ಅಲ್ಲಲ್ಲಿಯೇ ನಿಂತು ಸೆಂಟ್ರಲ್ ಮಾರುಕಟ್ಟೆಯ ಸುತ್ತಲೂ ಜಾಗವನ್ನು ಮತ್ತಷ್ಟು ಅಗಲಕಿರಿದು ಮಾಡಿಬಿಟ್ಟಿವೆ. ಸೆಂಟ್ರಲ್ ಮಾರುಕಟ್ಟೆಯ ಸುತ್ತಮುತ್ತಲೂ ರಸ್ತೆ ಅಗಲ ಮಡಿ ಕಾಂಕ್ರೀಟ್ ಹಾಕಿದ್ದರೆ ನಂತರ ಯಾವುದೇ ಅನಧಿಕೃತ ಪಾರ್ಕಿಂಗ್ ಗೆ ಅವಕಾಶ ಕೊಡದೆ ಇದ್ದರೆ ಮಂಗಳೂರಿನ ಲುಕ್ ಬೇರೆಯದ್ದೇ ಆಗುತ್ತಿತ್ತು. ಆದರೆ ಅದು ನಮ್ಮ ಜನಪ್ರತಿನಿಧಿಗಳಿಗೆ ಬೇಕಿಲ್ಲ.
ಇನ್ನು ಪಂಪ್ ವೆಲ್ ರಸ್ತೆಯ ಕೆಲಸ ಹತ್ತು ಶೇಕಡಾ ಮಾತ್ರ ಆಗಿ ಹಾಗೆ ನಿಂತಿದೆ. ಜನಪ್ರತಿನಿಧಿಗಳು ಮನಸ್ಸು ಮಾಡಿದರೆ ಪಡೀಲ್-ಪಂಪ್ ವೆಲ್ ರಸ್ತೆಗೆ ಡ್ರೈನೇಜ್ ವ್ಯವಸ್ಥೆ ಮಾಡಿ ಎರಡು ಹೊಸ ನೀರಿನ ಪೈಪುಗಳನ್ನು ರಸ್ತೆಯ ಎರಡು ಕಡೆ ಹಾಕಿ ಇಡೀ ರಸ್ತೆಯನ್ನೇ ಮಾದರಿ ರಸ್ತೆಯನ್ನಾಗಿ ಮಾಡಬಹುದಿತ್ತು. ಆದರೆ ಹಾಗೆ ಇವರ್ಯಾರು ಮಾಡುತ್ತಿಲ್ಲ.
ಇನ್ನು ಸರ್ಕಲ್ ಅಭಿವೃದ್ಧಿ. ಜಾಗ ಇಲ್ಲದಿದ್ದರೂ ಸರ್ಕಲ್ ಅಭಿವೃದ್ಧಿ ಎಂದು ಲೇಡಿಹಿಲ್ ಸರ್ಕಲ್ ಅನ್ನು ಏನೋ ಮಾಡಲು ಹೊರಟಿದ್ದಾರೆ. ಸರಿಯಾಗಿ ನೋಡಿದರೆ ಮಂಗಳೂರು ಮಹಾನಗರ ಪಾಲಿಕೆಯ ಎದುರಿಗಿರುವ ಸರ್ಕಲ್ ಅನ್ನು ಅಭಿವೃದ್ಧಿ ಮಾಡಬಹುದು. ಇಲ್ಲಿಯಾದರೆ ಸಾಕಷ್ಟು ಜಾಗ ಇದೆ. ಎಲ್ಲಿಯಂದರೆ ಲೇಡಿಹಿಲ್ ನಿಂದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ ಹೋಗುವಾಗ ರಾಮಕೃಷ್ಣ ವಿದ್ಯಾರ್ಥಿನಿ ನಿಲಯದ ಗೋಡೆಗೆ ತಾಗಿ ಸರ್ಕಲ್ ಬಳಿಯೇ ಒಂದು ಬಸ್ ಸ್ಟಾಪ್ ಇದೆ. ಅಲ್ಲಿ ಬಸ್ ನಿಲ್ಲಲ್ಲ, ಅದು ಬೇರೆ ವಿಷಯ. ಅದರ ಬದಲು ಆ ಫುಟ್ ಪಾತ್ ಅನ್ನು ತೆಗೆದು ರಸ್ತೆಯನ್ನು ಹಿಂದೆ ಮಾಡಿ, ಎಡಕ್ಕೆ ಬಿಗ್ ಬಜಾರ್ ಕಡೆ ಹೋಗುವ ವಾಹನಗಳನ್ನು ಫ್ರೀ ಸಿಗ್ನಲ್ ಕೊಟ್ಟರೆ ಅಲ್ಲಿ ವಾಹನ ಸವಾರರಿಗೂ ಅನುಕೂಲವಾಯಿತು. ಸರ್ಕಲ್ ಅಗಲ ಮಾಡುವುದಕ್ಕೂ ಸ್ಥಳಾವಕಾಶ ಸಿಕ್ಕಂತೆ ಆಯಿತು. ಯಾವುದು ಆಗಬೇಕೋ ಅದು ಆಗಲ್ಲ, ಯಾವುದರಲ್ಲಿ ಕಮೀಷನ್ ಹೆಚ್ಚು ಹೊಡೆಯಬಹುದೋ ಅದು ಬೇಗ ಆಗುತ್ತದೆ, ಬೇಲಿಯಂತೆ ಕಾದು ಕುಳಿತು ತೆರಿಗೆಯ ಹಣವನ್ನು ರಕ್ಷಿಸಬೇಕಾದವರು ಹೊಲ ಮೇಯ್ದ ಅನುಭವ ಮುಂಚೆಯೇ ಇರುವಾಗ ನಮ್ಮ ಹಣವನ್ನು ರಕ್ಷಿಸುವವರ್ಯಾರು!
Leave A Reply