ಸೈನಿಕರು ಗುಂಡಿಟ್ಟು ಕೊಂದ, ಸಾವಿನ ವ್ಯಾಪಾರಿ, ನಾಲ್ಕೇ ಅಡಿ ಎತ್ತರದ ಆ ಉಗ್ರ ಎಂಥ ಅಪಾಯಕಾರಿಯಾಗಿದ್ದ ಗೊತ್ತಾ?
ಶ್ರೀನಗರ: ಇಷ್ಟುದ್ದ ಗಡ್ಡ ಬಿಟ್ಟಿದ್ದ, 47 ವಯಸ್ಸಿನ ಹಾಗೂ ನಾಲ್ಕೆಂದರೆ ನಾಲ್ಕೇ ಅಡಿ ಉದ್ದ ಇದ್ದ ಆ ಉಗ್ರ ಜಮ್ಮು-ಕಾಶ್ಮೀರದ ಜನರಿಗೇ ತಲೆನೋವಾಗಿದ್ದ. ಅವನನ್ನು ಹಿಡಿಯಲು ಹೊರಟ ಸೈನಿಕರಿಗೆ ಒಂಥರಾ ಮಾಯಾವಿಯಾಗಿದ್ದ. ಆತ ಸಾವಿನ ವ್ಯಾಪಾರಿಯೆಂದೇ ಖ್ಯಾತಿಯಾಗಿದ್ದ.
ಆದರೇನಂತೆ, ಕೊನೆಗೂ ಜೈಷೆ ಮೊಹಮ್ಮದ್ ಸಂಘಟನೆಯ ನೂರ್ ಮೊಹಮ್ಮದ್ ತಾಂಟ್ರೆಯನ್ನು ಕೊನೆಗೂ ಭಾರತೀಯ ಸೈನಿಕರು ಹೊಡೆದುರುಳಿಸಿದ್ದಾರೆ. ಆದರೆ ಅಷ್ಟಕ್ಕೂ ಅವನಿಗೇಕೆ ಸಾವಿನ ವ್ಯಾಪಾರಿ ಎಂದು ಏಕೆ ಗೊತ್ತಾ? ಆತ ಕಾಶ್ಮೀರದಲ್ಲಿ ಮಾಡಿದ ಉಪಟಳ, ದಾಳಿ ಎಂಥಾದ್ದು?
ಹೌದು, ನಾಲ್ಕು ಅಡಿ ಉದ್ದವಿದ್ದರೂ ತಾಂಟ್ರೆ ಭಯಾನಕ ಉಗ್ರನಾಗಿದ್ದ. ಕಳೆದ ಅಕ್ಟೋಬರ್ 3ರಂದು ಶ್ರೀನಗರದ ಬಿಎಸ್ಎಫ್ ಶಿಬಿರದ ಮೇಲೆ, ಸೆಪ್ಟೆಂಬರ್ ನಲ್ಲಿ ರಾಜ್ಯ ಸಚಿವ ನಯೀಮ್ ಅಖ್ತರ್ ಶ್ರೀನಗರಕ್ಕೆ ಬಂದಾಗ ಅವರಿಗಿಂತ ಸ್ವಲ್ಪ ದೂರದಲ್ಲೇ ದಾಳಿ ಮಾಡಿದ್ದ ಈ ನೂರ್ ಮೊಹಮ್ಮದ್.
ಅಷ್ಟೇ ಅಲ್ಲ, ಕಳೆದ ಡಿ.25 ಮತ್ತು 26ರಂದು ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆ ಸಂಬೂರಾ ಪ್ರದೇಶದಲ್ಲಿ ನಡೆಸಿದ ದಾಳಿಯ ಹಿಂದೆಯೂ ಈತನ ಕೈವಾಡವಿತ್ತು. ಈತ ಉಗ್ರ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದಲ್ಲಿ 8 ವರ್ಷ ಸೆರೆವಾಸ ಅನುಭವಿಸಿ 2015ರಲ್ಲಿ ಬಿಡುಗಡೆಯಾಗಿದ್ದ.
2001ರಲ್ಲಿ ಸಂಸತ್ ಮೇಲೆ ನಡೆಸಿದ ದಾಳಿಯ ರೂವಾರಿ ಜೈಷೆ ಮೊಹಮ್ಮದ್ ಸಂಘಟನೆಯ ಕಮಾಂಡರ್ ಘಾಜಿ ಬಾಬಾನ ಸಹಚರ ಸಹ ಆಗಿದ್ದ ಈ ತಾಂಟ್ರಿ. ಅದಕ್ಕಾಗಿಯೇ ಆತನನ್ನು 2003ರಲ್ಲಿ ಬಂಧಿಸಲಾಗಿತ್ತು.
ಇವುಗಳ ಜತೆಗೆ ನೂರ್ ಮೊಹಮ್ಮದ್ ಜಮ್ಮು-ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳಿಗೆ ಹಣ ಸಹ ನೀಡುತ್ತಿದ್ದ ಆರೋಪ ಸಹ ಕೇಳಿಬಂದಿದೆ. ಅಷ್ಟಕ್ಕೂ ಅವನನ್ನು ಮಂಗಳವಾರ ಭಾರತೀಯ ಸೇನೆ ಹತ್ಯೆ ಮಾಡಿದ ಬಳಿಕ ಅವನಿಂದ 19ಕ್ಕೂ ಅಧಿಕ ಲಕ್ಷ ರುಪಾಯಿಯನ್ನು ವಶಪಡಿಸಿಕೊಂಡಿದ್ದೇ ಅವನ ಹಣ ಸರಬರಾಜಿಗೆ ಹಿಡಿದ ಕನ್ನಡಿಯಾಗಿದೆ. ಈ ಎಲ್ಲ ಕಾರಣಗಳಿಂದ ಆತ ಸಾವಿನ ವ್ಯಾಪಾರಿ ಎಂದು ಖ್ಯಾತಿಯಾಗಿದ್ದ ಹಾಗೂ ಆತನನ್ನು ಬಂಧಿಸಿದ್ದ ಮಹತ್ತರ ಮುನ್ನಡೆ ಎಂದು ಸೇನೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟಿನಲ್ಲಿ ಜಮ್ಮು ಕಾಶ್ಮೀರದಲ್ಲಿ ಕಳೆದ ಮೇ ತಿಂಗಳಿಂದ ಭಾರತೀಯ ಸೇನೆ ಕೈಗೊಂಡ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಇದುವರೆಗೆ 203 ಉಗ್ರರನ್ನು ಹತ್ಯೆ ಮಾಡಿದ್ದು, ಪಾಕಿಸ್ತಾನದ ಗಡಿ ರೇಖೆ ದಾಟಿ ಮೂವರು ಪಾಕಿಸ್ತಾನಿ ಸೈನಿಕರನ್ನು ಹತ್ಯೆ ಮಾಡಿದೆ. ಇದರ ಬೆನ್ನಲ್ಲೇ ನೂರ್ ಮೊಹಮ್ಮದ್ ತಾಂಟ್ರಿಯನ್ನೂ ಹತ್ಯೆ ಮಾಡಿದ್ದು, ಉಗ್ರರ ದಮನಕ್ಕೆ ಸಾಕ್ಷಿಯಾಗಿದೆ.
Leave A Reply