ಹೃದಯದಲ್ಲಿ ಹಿಂದುತ್ವವಿರಲಿ! ಚುನಾವಣೆಯ ಅಜೆಂಡಾ ಅಭಿವೃದ್ಧಿಯಾಗಿರಲಿ!
ಕೆಲವು ಜನಕ್ಕೆ ಹಾಗೇ! ಇಬ್ಬರು ಜೊತೆಗಿದ್ದಾರೆಂದರೆ ಆಗಿ ಬರುವುದಿಲ್ಲ. ಹೇಗಾದರೂ ಅವರನ್ನು ವಿರುದ್ಧ ದಿಕ್ಕಿನ ಕಟಕಟೆಯಲ್ಲಿ ನಿಲ್ಲಿಸಿ ಬಯ್ದಾಡುವಂತೆ ಮಾಡಿ ಮಜಾ ತೆಗೆದುಕೊಳ್ಳೋ ಆತುರದ ಸ್ವಭಾವದವರು! ಕಡ್ಡಿಯನ್ನು ಗುಡ್ಡ ಮಾಡಿ, ಇಲ್ಲದಿದ್ದಕ್ಕೆ ಸ್ವಲ್ಪ ಮಸಾಲೆ ಸೇರಿಸಿ, ಇಲಿ ಹೋಯ್ತೆಂದರೆ ಹುಲಿ ಹೋಯ್ತು ಎನ್ನುವ ಮಂದಿ! ಕಳೆದ 8-10 ಗಂಟೆಗಳಿಂದ ಈ ಕೆಲಸಕ್ಕೆ ಟೊಂಕಕಟ್ಟಿನಿಂತಿರುವ ಅನೇಕ ಮಂದಿಯನ್ನು ನೋಡಿ ಅಚ್ಚರಿಪಡುತ್ತಿದ್ದೇನೆ. ಚಕ್ರವರ್ತಿ ಸೂಲಿಬೆಲೆ ಮತ್ತು ಅನಂತ ಕುಮಾರ ಹೆಗಡೆಯವರನ್ನು ಪರಸ್ಪರ ಶತ್ರುಗಳನ್ನಾಗಿ ಡಿಕ್ಲೇರ್ ಮಾಡಲು ಸಿದ್ಧವಾಗಿರುವ ಪ್ರಯತ್ನ ತೀವ್ರವಾಗಿದೆ. ಈ ಕುರಿತಂತೆ ನನ್ನ ವಯಕ್ತಿಕ ಅಭಿಪ್ರಾಯ ಹೀಗಿದೆ. (ಇದು ಕೇವಲ ವಯಕ್ತಿಕವಾದ ಅಭಿಪ್ರಾಯವಷ್ಟೇ! ಇದಕ್ಕೆ ಯಾರ ಸಮ್ಮತಿ ಅನುಮತಿಯೂ ಇರುವುದಿಲ್ಲ. ಹೀಗಾಗಿ ನಾನು ಹೇಳುವುದೇ ಸತ್ಯಸ್ಯ ಸತ್ಯವೆಂದು ನಾನು ಪ್ರಮಾಣೀಕರಿಸುವುದಿಲ್ಲ. ನನ್ನ ಮತಿಗೆ ಬಂದ ಹೃದಯಕ್ಕೆ ಅನ್ನಿಸಿದ ಪ್ರಾಮಾಣಿಕ ಭಾವನೆಗಳಷ್ಟೇ! ಓದಿ. ಅದಕ್ಕೆ ಪೂರಕವಾಗಿಯೇ ಪ್ರತಿಕ್ರಿಯಿಸಿ.)
ಸೂಲಿಬೆಲೆ v/s ಫೈರ್ ಬ್ರಾಂಡ್
ಸತ್ಯ ಹೇಳುವ ತಾಕತ್ತು ಇರೋ ಅಪರೂಪದ ರಾಜಕಾರಣಿ ಅನಂತ್ ಕುಮಾರ್ ಹೆಗಡೆ. ನನಗೆ ಅವರ ಬಗ್ಗೆ ಗೌರವ ಮತ್ತು ಹೆಮ್ಮೆ ಎರಡೂ ಇದೆ. ಹಿಂದುತ್ವವಾದಿ ನಾಯಕ ಎಂದರೆ ಹೀಗಿರಬೇಕು ಎನ್ನುವಷ್ಟರ ಮಟ್ಟಿಗೆ ನಾನು ಅವರ ಅಭಿಮಾನಿ. ಈ ಭಾವನೆ ಎಷ್ಟು ಸತ್ಯವೋ ಅದೇ ರೀತಿ ನನ್ನ ಕನಸಿನ ಕರ್ನಾಟಕದ ಕಲ್ಪನೆ ಹೆಣೆದಿರುವ ಚಕ್ರವರ್ತಿ ಸೂಲಿಬೆಲೆಯವರ ಚಿಂತನೆಯ ಮೂಸೆಯಿಂದ ಹೊರಟಿರುವ ಮೊನ್ನೆಯ ಲೇಖನದ ಪ್ರತಿಯೊಂದು ಅಕ್ಷರವೂ ಅಷ್ಟೇ ಮಹತ್ವಪೂರ್ಣದ್ದಾಗಿದೆ. ಅಷ್ಟಕ್ಕೂ ಅವರು ಬರೆದಿದ್ದರಲ್ಲಿ ತಪ್ಪೇನಿದೆ?
ಅಭಿವೃದ್ಧಿ ಬೇರೆ. ಹಿಂದುತ್ವ ಬೇರೆ. ಹಿಂದುತ್ವ ಹೃದಯದಲ್ಲಿರಬೇಕು. ರಕ್ತದ ಕಣ ಕಣದಲ್ಲಿ ಬೆರೆತಿರಬೇಕು. ಅದು ಧಮನಿ ಧಮನಿಯಲ್ಲಿ ಹರಿಯುತ್ತಿರಬೇಕು. ಆದರೆ ರಾಜಕೀಯಕ್ಕೆ ಬಂದ ಮೇಲೆ ಆತ ಜನರ ಸೇವಕನಾಗಿ ಅಭಿವೃದ್ಧಿಯ ಹರಿಕಾರನಾಗಲೇಬೇಕು. ಹಾಗಂತ ಅನಂತ ಕುಮಾರ್ ಹೆಗಡೆಯವರು ಅಭಿವೃದ್ಧಿ ಮಾಡೇ ಇಲ್ವಾ? ಅಂತ ಕೇಳಿದ್ರೆ ಇಲ್ಲ ಅಂತ ಹೇಳುವುದಿಲ್ಲ. ಆದರೆ ಜನರ ನಿರೀಕ್ಷೆ ಸಾಕಷ್ಟಿರುವಾಗ ಹೇಳಿಕೆಗಳಲ್ಲಿ ವಾಗ್ಯುದ್ಧಗಳಲ್ಲಿ ಸಮಯ ಕಳೆಯಬಾರದು ಎಂಬ ಚಕ್ರವರ್ತಿ ಸೂಲಿಬೆಲೆಯವರ ಬುದ್ಧಿವಾದದಲ್ಲಿ ತಪ್ಪೇನೂ ಇಲ್ಲ. ಹಾಗೆ ಹೇಳುವ ಅಧಿಕಾರ ಅವರಿಗಿದ್ದೇ ಇದೆ. ರಾಜಕಾರಣಿಗಳು ಯಾವತ್ತೂ ರಾಜಕೀಯದ ಅಧಿಕಾರದಿಂದ ದೂರ ಇರುವ, ಸಮಾಜಕ್ಕಾಗಿ ನಿಸ್ವಾರ್ಥವಾಗಿ ದುಡಿಯುವ ತ್ಯಾಗಿಗಳ ಮಾತು ಕೇಳಿಸಿಕೊಳ್ಳಬೇಕು. ಅದರಿಂದ ಅವರಿಗೇ ಶ್ರೇಯಸ್ಸು. ಬಿಜೆಪಿ ಜನಪ್ರತಿನಿಧಿಗಳು ಆರ್ ಎಸ್ ಎಸ್ ಹಿರಿಯರ ಮಾತಿಗೆ ಬುದ್ಧಿವಾದಗಳಿಗೆ ಬೆಲೆ ಕೊಡುವುದಿಲ್ಲವೇ ಹಾಗೆ. ಅದರಿಂದ ಅವರಿಗೇ ಬೆಲೆ.
ಇಷ್ಟಕ್ಕೂ ಚಕ್ರವರ್ತಿ ಸೂಲಿಬೆಲೆಯವರ ಲೇಖನದಲ್ಲಿ ತಪ್ಪೇನಿದೆ? ಅದರಲ್ಲಿ ಅನಂತ್ ಕುಮಾರ್ ಹೆಗಡೆಯವರಿಗೆ ಪರೋಕ್ಷವಾಗಿ ಕೆಲವು ಸಲಹೆಗಳನ್ನು ನೀಡಲಾಗಿದೆಯೇ ಹೊರತು ಎಲ್ಲೂ ಅವರ ತೇಜೋವಧೆಯ ಪ್ರಯತ್ನ ನಡೆದಿಲ್ಲ. ಅದರ ಅವಶ್ಯಕತೆಯೂ ಚಕ್ರವರ್ತಿ ಸೂಲಿಬೆಲೆಯವರಿಗೆ ಇರುವ ಸಾಧ್ಯತೆಯಿಲ್ಲ. ಕರ್ನಾಟಕದ ಯೋಗಿ, ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಲ್ಪಡುವಷ್ಟು ಆಶಾವಾದ ಹುಟ್ಟಿಸಿರುವ ಭರವಸೆಯ ನಾಯಕನಿಗೆ ಈ ಕಿವಿಮಾತು ಹೇಳುವುದು ಅದು ಹೇಗೆ ತಪ್ಪಾಗುತ್ತದೆ? ಇರುವ ಬರುವ ಎಲ್ಲರೂ ಜೈಕಾರ ಹಾಕಿಬಿಟ್ಟರೆ ಅನಂತ್ ಕುಮಾರ್ ಹೆಗಡೆಯವರು ಬೆಳೆಯುವುದಿಲ್ಲ ಬದಲಿಗೆ ಕೊಳೆಯುತ್ತಾರೆ. ಬಹಳ ಜನ ಉದಯೋನ್ಮುಖ ನಾಯಕರನ್ನು ಇಂಥಾ ಹೊಗಳುಭಟರ ಚೇಲಾಪಡೆಗಳು ಬೆಳೆಯದಂತೆ ಮುಗಿಸಿಹಾಕಿಬಿಟ್ಟಿದೆ. ಹೀಗಾಗಿ ಚಕ್ರವರ್ತಿ ಸೂಲಿಬೆಲೆಯವರಂಥರಾಗಲೀ ಸಂಘದ ಬಿಜೆಪಿಯ ಹಿರಿಯರು ಆಗಾಗ ಸ್ವಲ್ಪ ಬುದ್ಧಿ ಮಾತು ಹೇಳುವುದು ಬಿಜೆಪಿಯ ಅಯೋಗ್ಯ ನಾಯಕರ ನಡುವೆ ಭರವಸೆ ಮೂಡಿಸುವ ನಾಯಕನಾಗಿ ಬೆಳೆಯುತ್ತಿರುವ ಅನಂತ ಕುಮಾರ್ ಹೆಗಡೆಯವರಿಗೆ ಲಾಭದಾಯಕವೇ!
ಚಕ್ರವರ್ತಿ ಸೂಲಿಬೆಲೆಯವರ ಚಿಂತನೆಯನ್ನು ನಾವು ಈ ದೃಷ್ಟಿಯಿಂದ ಏಕೆ ನೋಡಬಾರದು?
1. ಚುನಾವಣೆ ಹತ್ತಿರ ಬರುತ್ತಿರುವಾಗ ಇಡೀ ದೇಶದಲ್ಲಿ ಮುಳುಗುತ್ತಿರುವ ಕಾಂಗ್ರೆಸ್ ಗೆ ಪಂಜಾಬ್ ಬಿಟ್ಟರೆ ಕರ್ನಾಟಕ ಒಂದೇ ಉಳಿದಿರುವ ರಾಜ್ಯ. ಇತ್ತ ಕಾಂಗ್ರೆಸ್ ಮುಕ್ತ ಭಾರತವನ್ನು ನಿರ್ಮಿಸಿಯೇ ಸಿದ್ಧ ಎಂದು ಅಶ್ವಮೇಧದ ಕುದುರೆಗಳಂತೆ ಬರುತ್ತಿರುವ ಮೋದಿ – ಷಾ ಜೋಡಿ ಬಿಜೆಪಿಗೆ ಅಧಿಕಾರ ಕೊಡಿಸಿಯೇ ಸಿದ್ಧ ಎಂದು ತೀರ್ಮಾನಿಸಿಯಾಗಿದೆ. ಇನ್ನು ಜೆಡಿಎಸ್ ಗೆ ಇದು ಮಾಡು ಇಲ್ಲವೇ ಮಡಿ ಚುನಾವಣೆ. ಗೆದ್ದರೆ ಬದುಕು ಇಲ್ಲದಿದ್ದರೆ ಸಾವೇ ಗತಿ. ಈ ಕಾರಣದಿಂದ ತ್ರಿಪಕ್ಷಗಳ ಘನಘೋರ ಯುದ್ಧಕ್ಕೆ ಕರ್ನಾಟಕ ಇನ್ನು ಆರು ತಿಂಗಳು ರಣರಂಗವಾಗಲಿದೆ. ಏನು ಬೇಕಾದರೂ ಸಂಭವಿಸಬಹುದು. ಅಧಿಕಾರಕ್ಕೇರಲು ಎಂಥಾ ಅವಘಡಗಳು ಬೇಕಾದರೂ ಘಟಿಸಬಹುದು. ಪರಿಸ್ಥಿತಿ ಹೀಗಿರುವಾಗ ಎಲ್ಲೋ ಒಂದು ಕಡೆ ಸತ್ಯ ಹೇಳುವ ಭರದಲ್ಲಿ ವಾತಾವರಣವನ್ನು ಕಾವೇರಿಸುತ್ತಿರುವ ಫೈರ್ ಬ್ರಾಂಡ್ ಅನಂತ ಕುಮಾರ್ ಹೆಗಡೆಯವರಿಗೆ ಒಂದು ಕಡಿವಾಣದ ಅವಶ್ಯಕತೆ ಇತ್ತು. ಅದು ಇನ್ಯಾರಿಂದಲೋ ಆಗುವ ಬದಲು ರಾಷ್ಟ್ರವಾದಿಯಾದ ಚಕ್ರವರ್ತಿ ಚಕ್ರವರ್ತಿ ಸೂಲಿಬೆಲೆಯವರಿಂದಲೇ ಆಯ್ತು. ಇದರಿಂದ ಚಕ್ರವರ್ತಿ ಸೂಲಿಬೆಲೆಯವರಿಗೆ ವಯಕ್ತಿಕವಾಗಿ ನಷ್ಟವೇ. ಆದರೆ ಅವರು ಅದಕ್ಕೆ ಸಿದ್ಧರಿದ್ದಾರೆ. ಏಕೆಂದರೆ ಇದರಿಂದ ರಾಜ್ಯಕ್ಕೆ ಲಾಭವಾಗಲಿದೆ.
2. ಚುನಾವಣೆಯ ಸಂದರ್ಭದಲ್ಲಿ “ಅಭಿವೃದ್ಧಿ” ಅಜೆಂಡಾ ಆಗಿಬಿಟ್ಟರೆ ಚುನಾವಣಾ ಕಣ ಹಿಂದೆಂದಿಗಿಂತಲೂ ಶಾಂತವಾಗಿರುತ್ತದೆ ಮತ್ತು ಅಭ್ಯರ್ಥಿಗಳು ಗೆಲ್ಲಲು ತಮ್ಮ ರಿಪೋರ್ಟ್ ಕಾರ್ಡ್ ಬರೆಯುತ್ತಾ ತಿಣುಕಾಡಬೇಕಾಗುತ್ತದೆ. ಸತ್ಯ ಹೇಳೋಕೆ ನಾಚಿಕೆಯಾಗುತ್ತದೆ. ಸುಳ್ಳು ಹೇಳಿದರೆ ಸಿಕ್ಕಿ ಬೀಳುತ್ತಾರೆ. ಜನರೆದುರು ಬೆತ್ತಲಾಗಿ ನಗೆಪಾಟಲಿಗೀಡಾಗುತ್ತಾರೆ. ಆಗ ಜನರಿಗೆ ಹೊಸ ನಾಯಕರ ಅವಶ್ಯಕತೆ ಮನದಟ್ಟಾಗುತ್ತದೆ. ರಾಜಕೀಯದ ಸಮೀಕರಣಗಳು ದಿಕ್ಕುದೆಸೆಗಳೇ ಬದಲಾಗಲಿದೆ! ಇಲ್ಲೂ ಬಿಜೆಪಿಗೇ ಲಾಭ. ಚುನಾವಣೆಗೆ ಅಭಿವೃದ್ಧಿಯೇ ಅಜೆಂಡಾ ಆದರೆ ಮೋದಿ ಗೆಲ್ಲೋದು ಪಕ್ಕಾ! ಸಿದ್ದು ಸೋಲೋದೂ ಪಕ್ಕಾ! ಏಕೆಂದರೆ ಮೋದಿ ಅಭಿವೃದ್ಧಿಗೆ ಮತ್ತೊಂದು ಹೆಸರು ಅಂತ ಅದಾಗಲೇ ಬ್ರಾಂಡ್ ಆಗಿದ್ದಾರೆ. ಇತ್ತ ಸಿದ್ಧರಾಮಯ್ಯ ಕಸಾಯಿ ಖಾನೆ ಭಾಗ್ಯಗಳಂಥಾ ಚೀಪ್ ಯೋಜನೆಗಳನ್ನು ಘೋಷಿಸಿ ಅಭಿವೃದ್ಧಿಯ ಓಟದಲ್ಲಿ ಕುಸಿದು ಬಿದ್ದಿದ್ದಾರೆ. ಸ್ವಲ್ಪ ಲೋಕಲ್ ಬಿಜೆಪಿ ಲೀಡರ್ಸ್ ಗಳ ವೈಫಲ್ಯವನ್ನು ಮೋದಿಯ ಅಭಿವೃದ್ಧಿಯ ಕರಿಷ್ಮಾ ಮ್ಯಾನೇಜ್ ಮಾಡಲು ಸಫಲವಾಗಿಬಿಟ್ಟರೆ 113 ರ ಮ್ಯಾಜಿಕ್ ನಂಬರ್ ತಲುಪೋದು ಕಷ್ಟ ಆಗಲಾರದು. ಆದರೆ ವಾಗ್ಯುದ್ಧಗಳು ಚುನಾವಣಾ ದಿಕ್ಕನ್ನು ಜಾತಿ ಮತ ಧರ್ಮಗಳೆಡೆಗೆ ಹೊರಳಿಕೊಂಡರೆ ಕ್ಲೀನ್ ಸ್ವೀಪ್ ಮಾಡಲು ಕರ್ನಾಟಕ ಉತ್ತರಪ್ರದೇಶ ಅಲ್ಲ. ಇನ್ನು ದೇವೇಗೌಡ ಮತ್ತು ಸಿದ್ಧರಾಮಯ್ಯನವರು ವೋಟು ಧ್ರುವೀಕರಣ ರಾಜಕೀಯದಲ್ಲಿ ಕರ್ನಾಟಕದ ಬಿಜೆಪಿ ನಾಯಕರಿಗಿಂತಾ ಸಾಕಷ್ಟು ಬುದ್ಧಿವಂತರಿದ್ದಾರೆ. ಇವರಿಗಿಂತಾ ಎಷ್ಟೋ ದೂರದಲ್ಲಿದ್ದಾರೆ. ಹೀಗಾಗಿ ಬಿಜೆಪಿ ಗೆಲ್ಲಬೇಕೆಂದರೆ ಅಭಿವೃದ್ಧಿಯೇ ಚುನಾವಣಾ ಅಜೆಂಡಾ ಆಗಬೇಕು. ಚಕ್ರವರ್ತಿ ಸೂಲಿಬೆಲೆಯವರು ಅದಕ್ಕಾಗಿ ಸ್ವಲ್ಪ ನಿಷ್ಠುರ ಮಾರ್ಗ ಅನುಸರಿಸಿದ್ದಾರೆ. ಖಂಡಿತವಾದಿ ಲೋಕವಿರೋಧಿ ಅನ್ನಿಸಿಕೊಂಡರೂ ಪರವಾಗಿಲ್ಲ ಕರ್ನಾಟಕದಲ್ಲಿ ಮೋದಿ ಓಟಕ್ಕೆ ತಡೆಯಾಗಬಾರದೆಂದು ತಮ್ಮ ಇಮೇಜನ್ನೇ ಅವರು ಒತ್ತೆ ಇಟ್ಟಿದ್ದಾರೆ. ಮತ್ತೆ ಇದರಿಂದ ಚಕ್ರವರ್ತಿ ಚಕ್ರವರ್ತಿ ಸೂಲಿಬೆಲೆಯವರಿಗೆ ನಷ್ಟವಾಗಲಿದೆ. ಆದರೆ ಮೋದಿಗಾಗಿ ಅವರು ಈ ನಷ್ಟ ಭರಿಸಲು ಸಿದ್ಧರಿದ್ದಾರೆ.
3. ಚಕ್ರವರ್ತಿ ಸೂಲಿಬೆಲೆಯವರ ನನ್ನ ಕನಸಿನ ಕರ್ನಾಟಕದ ಲೇಖನ ಸರಣಿ ಇದೇ ಮೊದಲಲ್ಲ. ಇದೇ ಕೊನೆಯದೂ ಅಲ್ಲ. ಇದು ಜಸ್ಟ್ ಟ್ರೈಲರ್ ಅಷ್ಟೇ ಅನ್ನೋದು ಅವರು ತಮ್ಮ ಯುವಾ ಬ್ರಿಗೇಡ್ ಸಂಘಟನೆಯ ಮೂಲಕ ಮಾಡುತ್ತಿರುವ ವ್ಯಾಪಕ ಗ್ರೌಂಡ್ ವರ್ಕ್ ನೋಡಿದರೇ ಗೊತ್ತಾಗುತ್ತದೆ. ಪಿಕ್ಚರ್ ಇನ್ನೂ ಬಾಕಿ ಇದೆ. ಇಂದು ಅನಂತ್ ಕುಮಾರ್ ಹೆಗಡೆಯಂಥಾ ಪ್ರಸ್ತುತ ಜನಪ್ರಿಯತೆಯ ಶಿಖರದಲ್ಲಿರುವ ಭ್ರಷ್ಟಾಚಾರ ಮತ್ತು ಕಳಂಕರಹಿತ ನಾಯಕನನ್ನೇ ಟಾರ್ಗೆಟ್ ಮಾಡಿರೋ ಚಕ್ರವರ್ತಿ ಚಕ್ರವರ್ತಿ ಸೂಲಿಬೆಲೆಯವರ ಲೇಖನಿ ಖರ್ಗೆ, ದೇಶಪಾಂಡೆ, ಸಿದ್ಧರಾಮಯ್ಯ, ಡಿಕೆಶಿ, ದೇವೇಗೌಡರಂಥವರನ್ನು ಸುಮ್ಮನೆ ಬಿಡುವುದೇ? ಅವರೂ ಅವರ ಕ್ಷೇತ್ರಗಳೂ ಬರುವ ದಿನಗಳಲ್ಲಿ ಸ್ಕ್ಯಾನ್ ಗೆ ಒಳಗಾಗಲಿವೆ. ಜನರ ಮುಂದೆ ಸತ್ಯವನ್ನು ತೆರೆದಿಡಲಿದೆ. ಆಗ ಇದೇ ಜನರಿಗೆ ಅಯ್ಯೋ ಅನಂತ್ ಕುಮಾರ್ ಹೆಗಡೆಯವರೇ ವಾಸಿ ಮಾರಾಯ ಅನ್ನಿಸಬಹುದೇನೋ. ಆರಂಭದಲ್ಲೇ ಬಿಜೆಪಿಯ ಅನಂತ್ ಕುಮಾರ್ ಹೆಗಡೆಯವರನ್ನೇ ಟಾರ್ಗೆಟ್ ಮಾಡಿಬಿಟ್ಟರೆ ‘ನೋಡಿ ಚಕ್ರವರ್ತಿ ಕೇವಲ ಕಾಂಗ್ರೆಸ್ ಮತ್ತು ಜೆಡಿಎಸ್ ನವರನ್ನು ಮಾತ್ರ ಟಾರ್ಗೆಟ್ ಮಾಡುತ್ತಿದ್ದಾರೆ. ಅವರು ಬಿಜೆಪಿ ಪರ’ ಎನ್ನುವ ಆರೋಪವನ್ನೂ ಮಾಡಲು ಯಾವನಿಗೂ ಧೈರ್ಯ ಬರದು ಮತ್ತು ಹಾಗೆ ಹೇಳಿದರೆ ಜನರೂ ನಂಬರು. ಇದರಿಂದ ಮತ್ತೆ ಲಾಭ ಬಿಜೆಪಿಗೆ. ಆದರೆ ಇದರಿಂದ ಚಕ್ರವರ್ತಿ ಸೂಲಿಬೆಲೆಯವರಿಗೇ ಸಮಸ್ಯೆ. ಹೊಸ ಹೊಸ ಶತ್ರುಗಳು ಹುಟ್ಟುತ್ತಾರೆ. ಆದರೆ ಅದಕ್ಕೆ ಅವರು ಸಿದ್ಧವಿದ್ದಾರೆ.
4. ಅಷ್ಟಕ್ಕೂ ಅನಂತ್ ಕುಮಾರ್ ಹೆಗಡೆಯವರನ್ನು ಟಾರ್ಗೆಟ್ ಮಾಡುವುದರಿಂದ ಚಕ್ರವರ್ತಿ ಸೂಲಿಬೆಲೆಯವರ ಇರುವ ಲಾಭವಾದರೂ ಏನು? ರಾಜಕೀಯ ಲಾಭವೇ? ರಾಜಕೀಯಕ್ಕೆ ಬರೋದಿಲ್ಲ ಅಂತ ಕೇಳೋರ ಕಿವಿ ಕಿತ್ತೋಗುವಷ್ಟು ಸಲ ಅದಾಗಲೇ ಅವರು ಹೇಳಿಯಾಗಿದೆ. ಇನ್ನು ಆರ್ಥಿಕ ಲಾಭವೇ? ಪ್ರಾಪಂಚಿಕ ಭೋಗಗಳನ್ನ ಕಾಲ ಕಸವಾಗಿ ಕಂಡು ಬದುಕುತ್ತಿರುವ ಸಂತನಂಥಾ ಜೀವಿಗೆ ಅದು ಒಂದು ಆಮಿಷವೊಡ್ಡುವ ವಸ್ತುವೇ? ಇನ್ನು ಪ್ರಚಾರದ ಹುಚ್ಚೇ? ಜನಪ್ರಿಯತೆಯ ಶಿಖರಾಗ್ರದಲ್ಲಿ ಕುಳಿತು ಇನ್ನು ಸಾಕಪ್ಪಾ ಎನ್ನುವಷ್ಟು ಜನರ ಪ್ರೀತಿ ಅದಾಗಲೇ ಅನುಭವಿಸಿರುವವನಿಗೆ ಇನ್ನೇನು ತಾನೇ ಬೇಕು ಹೇಳಿ? ಈ ಮನುಷ್ಯ ಇಂದು ಹೇಳುವ ಮಾತುಗಳನ್ನು ನೀವು ಒಪ್ಪಿಕೊಳ್ಳದಿರಬಹುದು. ಆದರೆ ತಿರಸ್ಕರಿಸಲಾರಿರಿ! ಏಕೆಂದರೆ ಅದರಲ್ಲಿ ಸತ್ಯವಿದೆ ಮತ್ತು ನಿಸ್ವಾರ್ಥ ಸದುದ್ದೇಶವಿದೆ. ಅದಕ್ಕೇ ಅನಂತ ಕುಮಾರ ಹೆಗಡೆಯವರು (ವಯಕ್ತಿಕವಾಗಿ ನನ್ನ ಮೆಚ್ಚಿನ ಸಂಸದ) ಇಷ್ಟಾದರೂ ಚಕ್ರವರ್ತಿ ಸೂಲಿಬೆಲೆಯವರ ವಿರುದ್ಧ ಒಂದು ಮಾತನ್ನೂ ಆಡಿಲ್ಲ. ಏಕೆಂದರೆ ಅವರಿಗೆ ಗೊತ್ತು ಈ ಮನುಷ್ಯ ಏನೆಂದು. ವಜ್ರದ ಬೆಲೆ ವಜ್ರದ ವ್ಯಾಪಾರಿಗೆ ಮಾತ್ರ ಗೊತ್ತಾಗುತ್ತದೆ. ಸುಮ್ಮನೆ ಬಾಯಿಗೆ ಬಂದಂತೆ ಚಕ್ರವರ್ತಿ ಚಕ್ರವರ್ತಿ ಸೂಲಿಬೆಲೆಯವರ ವಿರುದ್ಧ ಮಾತನಾಡುವ ಬದಲು ಒಮ್ಮೆ ಅವರ ನನ್ನ ಕನಸಿನ ಕರ್ನಾಟಕ ಯೋಜನೆಯ ಕುರಿತು ಕಣ್ಣಾಡಿಸಿದರೆ ರಾಜ್ಯದ ಭವಿಷ್ಯ ಉಜ್ವಲವಾದೀತು! ಕಾಂಗ್ರೆಸ್ ಮುಕ್ತ ಕರ್ನಾಟಕದ ಕನಸೂ ತನ್ಮೂಲಕ ಕಾಂಗ್ರೆಸ್ ಮುಕ್ತ ಭಾರತದ ಕನಸೂ ನನಸಾದೀತು. ಅಭಿವೃದ್ಧಿಯ ಶಿಖರಕ್ಕೇರಿದರೆ ಮುಸ್ಲಿಂ ಮೂಲಭೂತವಾದವನ್ನು ಬಡಿದುಹಾಕುವುದು ಕಷ್ಟವೇನಲ್ಲ. ಮೋದಿ ಮಾಡುತ್ತಿರುವುದೂ ಅದನ್ನೇ. ಕರ್ನಾಟಕದ ಜನಪ್ರತಿನಿಧಿಗಳು ಮಾಡಬೇಕೆಂದು ಚಕ್ರವರ್ತಿ ಸೂಲಿಬೆಲೆಯವರು ಹೇಳುತ್ತಿರುವುದೂ ಅದನ್ನೇ! ಅರ್ಥ ಮಾಡಿಕೊಳ್ಳುವ ಬುದ್ಧಿವಂತರು ನಾವಾಗಬೇಕಷ್ಟೇ!
Leave A Reply