ಮುಸ್ಲಿಂ ಮಹಿಳೆಗೂ ಭಾವನೆಗಳಿವೆ ಎಂದು ಸಾಬೀತಾದ ದಿನವಿದು!
ಇವತ್ತಿನ ದಿನ ಈದ್ ಹಬ್ಬಕ್ಕಿಂತಲೂ ದೊಡ್ಡದು ಎಂದು ಸಂಭ್ರಮಿಸಿದ್ದಾರೆ ಮುಸ್ಲಿಮ್ ಮಹಿಳೆಯರು. ಅಷ್ಟು ಸಂತೋಷ ಅವರಲ್ಲಿದೆ. ಅವರ ಶತಮಾನದ ನೋವಿಗೆ ಈಗ ಪರಿಹಾರ ಸಿಗುತ್ತಿದೆ. ಸರಿಯಾಗಿ ನೋಡಿದರೆ ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸುವ ” ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣಾ ಮಸೂದೆ-2017″ ಕ್ಕೆ ಲೋಕಸಭೆಯಲ್ಲಿ ಒಬ್ಬನೇ ಒಬ್ಬ ಸದಸ್ಯ ಕೂಡ ವಿರೋಧಿಸಬಾರದಿತ್ತು. ಯಾಕೆಂದರೆ ಹೆಸರಲ್ಲಿಯೇ ಇರುವಂತೆ ಇದು ವೈವಾಹಿಕ ಹಕ್ಕುಗಳ ರಕ್ಷಣೆಗೆ ಸಂಬಂಧಪಟ್ಟ ಮಸೂದೆ. ನಮ್ಮ ದೇಶ ಹೆಣ್ಣುಮಗಳೊಬ್ಬಳನ್ನು ಹಿಂದೂ ಅಥವಾ ಮುಸ್ಲಿಂ ಅಥವಾ ಬೇರೆ ಧರ್ಮಕ್ಕೆ ಒಳಪಟ್ಟ ಮಹಿಳೆ ಎಂದು ಪರಿಗಣಿಸುವ ಮೊದಲು ಆಕೆಯನ್ನು ಮಾತೆ ಎಂದು ಗೌರವಿಸುವ ನಾಡು. ಹಾಗಿರುವಾಗ ಒರ್ವ ಮಹಿಳೆ ಇಸ್ಲಾಂ ಧರ್ಮದಲ್ಲಿ ಹುಟ್ಟಿದ್ದಾಳೆ ಎನ್ನುವ ಕಾರಣಕ್ಕೆ ಅವಳಿಗೆ ವಿವಾಹದ ನಂತರ ಭದ್ರತೆ ಎನ್ನುವುದು ಅವಳ ಅದೃಷ್ಟದ ಮೇಲೆ ನಿಂತಿದೆ ಎಂದರೆ ಅದಕ್ಕಿಂತ ಬೇಸರ ಬೇರೆ ಇರುತ್ತಾ. ವಿಶ್ವಗುರು ಎಂದರೆ ನಾವು ಬೇರೆ ರಾಷ್ಟ್ರಗಳಿಗೆ ಮಾದರಿಯಾಗಬೇಕು. ಹೆಣ್ಣು ಯಾವುದೇ ಧರ್ಮದಲ್ಲಿ ಹುಟ್ಟಿರಲಿ, ಅವಳಿಗೆ ಮೋಸ ಆಗಬಾರದು. ಮದುವೆಯ ನಂತರ ಅವಳಿಗೆ ತನ್ನ ಜೀವನ ಎಂದರೆ ಕೂಲಿ ಮಾಡಿ ಆವತ್ತಿನದ್ದು ಆವತ್ತು, ನಾಳೆ ಗಂಡ ಸಾಕುತ್ತಾನೋ, ಹೋಗು ಎಂದರೆ ಹೊರಗೆ ಹಾಕುತ್ತಾನೋ ಗೊತ್ತಿಲ್ಲ ಎನ್ನುವ ಪರಿಸ್ಥಿತಿ ಬರಬಾರದು ಎನ್ನುವುದು ಈ ದೇಶದ ಪ್ರತಿಯೊಬ್ಬ ಚಿಂತಕನ ಮನಸ್ಸಿನಲ್ಲಿ ಯಾವತ್ತೋ ಇತ್ತು. ಆದರೆ ಯಾವ ಪಕ್ಷವೂ ಅದನ್ನು ಮಾಡುವ ಧೈರ್ಯ ಮಾಡಿರಲಿಲ್ಲ. ಕಾರಣ ವೋಟ್ ಬ್ಯಾಂಕ್ ಭಯ.
ಪ್ರಪಂಚದ 21 ರಾಷ್ಟ್ರಗಳಲ್ಲಿ ತ್ವರಿತ ತ್ರಿವಳಿ ತಲಾಖ್ ನಿಷೇಧಿಸಿ, ಅದನ್ನು ಮಾಡಿದ ಆರೋಪಿಗೆ ಶಿಕ್ಷೆ ವಿಧಿಸಿರುವುದು ನಮಗೆ ಗೊತ್ತಿದೆ. ಹೀಗಿರುವಾಗ ಪರಮ ಕರ್ಮಟ ಇಸ್ಲಾಂ ಮೂಲಭೂತ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾ, ಇಂಡೋನೇಶಿಯಾ ರಾಷ್ಟ್ರಗಳಲ್ಲಿ ತ್ರಿವಳಿ ತಲಾಖ್ ಇಲ್ಲದೆ ಇರುವಾಗ ನಾವು ಹೆಣ್ಣನ್ನು ಆರಾಧಿಸುವ ರಾಷ್ಟ್ರದಲ್ಲಿ ಹುಟ್ಟಿ ಇಷ್ಟು ವರ್ಷ ತ್ರಿವಳಿ ತಲಾಖ್ ಉಳಿಸಿಕೊಂಡು ಬಂದಿದ್ದೆವಲ್ಲ, ನಮಗೆ ಏನು ಹೇಳಬೇಕು. ಮೂರುವರೆ ವರ್ಷದ ಹಿಂದಿನ ತನಕ ನಮ್ಮನ್ನು ಆಳುತ್ತಿದ್ದ ಕಾಂಗ್ರೆಸ್ ಈ ಎನ್ ಡಿಎ ಸರಕಾರದ ಧೈರ್ಯ ನೋಡಿ ಬೆಚ್ಚಿದೆ. ಕೊನೆಗೂ ಒಲ್ಲದ ಮನಸ್ಸಿನಿಂದ ಕಟಿಪಿಟಿ ಮಾಡಿ ತನ್ನ ಸಮ್ಮತಿ ತೋರಿಸಿದೆ. ಉಳಿದಂತೆ ರಾಷ್ಟ್ರೀಯ ಜನತಾದಳ, ಎಐಎಂಐಎಂ, ಆಲ್ ಇಂಡಿಯಾ ಮುಸ್ಲಿಂ ಲೀಗ್, ಬಿಜು ಜನತಾದಳ ಹಾಗೂ ಎಐಎಡಿಎಂಕೆ ಪಕ್ಷ ತನ್ನ ವಿರೋಧ ವ್ಯಕ್ತಪಡಿಸಿವೆ. ವಿರೋಧಿಸುವ ಮೂಲಕ ಅವು ಏನು ಸಾಧಿಸಲು ಹೊರಟಿವೆ ಎನ್ನುವುದು ಮುಖ್ಯ ಪ್ರಶ್ನೆ. ಮುಸ್ಲಿಂ ಗಂಡಸರು ಯಾವಾಗ ಬೇಕಾದರೂ, ಹೇಗೆ ಬೇಕಾದರೂ ತನ್ನ ಪತ್ನಿ ಎನಿಸಿಕೊಂಡವಳಿಗೆ ತ್ವರಿತ ತ್ರಿವಳಿ ತಲಾಖ್ ಕೊಡುವ ಮೂಲಕ ವಿಚ್ಚೇದನ ಕೊಡಬಹುದು ಎಂದು ಆ ಪಕ್ಷಗಳು ಒಪ್ಪಿಕೊಂಡಂತೆ ಆಯಿತಲ್ವಾ. ಅಸಾದುದ್ದೀನ್ ಒವೈಸಿ ಬಿಡಿ, ಅಂತವರಿಗೆ ಮುಸ್ಲಿಂ ಪುರುಷ ಮತಗಳೇ ಆಸ್ತಿ. ಮುಸ್ಲಿಂ ಪುರುಷರು ಹೇಳಿದ ಕಡೆ ಅವರ ಪತ್ನಿಯರು ಓಟು ಹಾಕುತ್ತಾರೆ ಎಂದು ಅಂದುಕೊಂಡಿರುವ ಒವೈಸಿ ಅದಕ್ಕಾಗಿ ಮುಸ್ಲಿಂ ಗಂಡಸರ ಪರವಾಗಿ ನಿಂತಿದ್ದಾರೆ. ಅದನ್ನು ಮುಸಲ್ಮಾನ ಮಹಿಳೆಯರು ಅರ್ಥ ಮಾಡಿಕೊಂಡಿದ್ದಾರೆ. ಮಹಿಳೆ ಎಂದರೆ ಮಕ್ಕಳನ್ನು ಹೆರುವ ಯಂತ್ರ, ಯಾವುದೋ ಬಡ ಮುಸ್ಲಿಂ ಮಹಿಳೆಯನ್ನು ಮದುವೆಯಾಗುವುದು, ಅವಳಿಗೆ ಮಕ್ಕಳನ್ನು ಕರುಣಿಸುವುದು ನಂತರ ಬೇಡ ಎನಿಸಿತಾ, ಏನೋ ಚಿಲ್ಲರೆ ಬಿಸಾಡಿ ಮೂರು ಬಾರಿ ತಲಾಖ್ ಹೇಳಿ ನಂತರ ಮುಂದಿನ ಸಂಬಂಧಕ್ಕೆ ಹೋಗುವುದು, ಎಷ್ಟೋ ಸಲ ಅದು ಎಸ್ ಎಂಎಸ್, ಫೋನ್ ಮೂಲಕ ತಲಾಖ್ ಎಂದು ಮೂರು ಬಾರಿ ಟೈಪ್ ಮಾಡಿ ಕಳುಹಿಸಿಬಿಟ್ಟರೆ ಮುಗಿಯಿತಾ?
ಅದಕ್ಕಾಗಿ ಮುಸ್ಲಿಂ ಮಹಿಳೆಯರು ಇವತ್ತು ಸಂಭ್ರಮಿಸಿದ್ದಾರೆ. ಎಲ್ಲೋ ನಿನ್ನೆಯ ದಿನ ಇದಕ್ಕೆ ವಿರೋಧ ಕಂಡು ಬಂದು ಈ ಮಸೂದೆ ಪಾಸಾಗದೇ ಹೋಗುತ್ತಾ ಎನ್ನುವ ಅಳುಕು ಭಾರತೀಯ ಜನತಾ ಪಾರ್ಟಿಗಿಂತ ಮುಸ್ಲಿಂ ಮಹಿಳೆಯರಲ್ಲಿ ಜಾಸ್ತಿ ಇತ್ತು. ಆದರೆ ಹಾಗೆ ಆಗಲಿಲ್ಲ. ಅದರ ನಡುವೆಯೂ ಓವೈಸಿ, ಗುಜರಾತಿನಲ್ಲಿ ಗಂಡನಿಂದ ಪರಿತ್ಯಕ್ತರಾದ 20 ಲಕ್ಷ ಹಿಂದೂ ಮಹಿಳೆಯರು ಇದ್ದಾರೆ, ಅವರನ್ನು ಮೊದಲು ನೋಡಿ ಎಂದು ಹಾಲಿನಲ್ಲಿ ಲಿಂಬೆ ಹಣ್ಣು ಹಿಂಡುವ ಕೆಲಸ ಮಾಡಿದ. ಆದರೆ ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯ ಅವನಾಗಿರುವುದರಿಂದ ಮತ್ತು ಸಂಸತ್ತಿನಲ್ಲಿ ಅವನ ಕಸಿನ್ ಗಳ ಸಂಖ್ಯೆ ಕಡಿಮೆ ಇರುವುದರಿಂದ ಅವನ ವಾದ ನಿಲ್ಲಲ್ಲಿಲ್ಲ. ಆದರೂ ಅವನ ವಿಷಯ ನೋಡುವುದೇ ಆದರೆ ವಿಚ್ಚೇದನ ಎನ್ನುವ ಶಬ್ದವೇ ಇನ್ನು ಭಾರತದಲ್ಲಿ ಇರುವುದಿಲ್ಲ ಎನ್ನುವ ವಾತಾವರಣ ನಿರ್ಮಾಣ ಆಗಿಲ್ಲ. ತ್ವರಿತ ತ್ರಿವಳಿ ತಲಾಖ್ ನಿಷೇಧವಾಗಿದೆ ಮತ್ತು ಅದನ್ನು ಇನ್ನು ಮುಂದೆಯೂ ಯಾರಾದರೂ ಮುಸಲ್ಮಾನ ಗಂಡಸು ಅನುಸರಿಸಿದರೆ ಅವನಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎನ್ನುವುದು ಬಿಟ್ಟರೆ ಇನ್ನು ಮುಸಲ್ಮಾನ ಧರ್ಮದಲ್ಲಿ ವಿಚ್ಚೇದನವೇ ಆಗಬಾರದು ಅಥವಾ ಆಗುವುದಿಲ್ಲ ಎನ್ನುವ ಅರ್ಥವಲ್ಲ.
ಒಬ್ಬ ಗಂಡ ತನ್ನ ಹೆಂಡತಿಗೆ ವಿಚ್ಚೇದನ ಕೊಡುವುದು ಕಾನೂನುಬದ್ಧ ಮತ್ತು ಕ್ರಮಬದ್ಧವಾಗಬೇಕು ಎನ್ನುವುದು ಈ ದೇಶದ, ಈ ಮಣ್ಣಿನ ಆಶಯ. ಇದನ್ನು ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ವಿರೋಧಿಸುತ್ತದೆ ಯಾಕೆಂದರೆ ಅದು ತನ್ನ ಧರ್ಮದ ಮಹಿಳೆಗೂ ಒಂದು ಅಸ್ತಿತ್ವ ಇದೆ. ಆಕೆ ಕೂಡ ಮನುಷ್ಯಳು, ಅವಳಿಗೂ ಮನಸ್ಸಿದೆ, ಅವಳಿಗೂ ಭಾವನೆ ಇದೆ, ಅವಳು ಕೂಡ ಒಂದು ಜೀವ. ಅವಳು ಕೂಡ ಇಲ್ಲಿ ಬಾಳಿ ಬದುಕಬೇಕಾದವಳು ಮತ್ತು ಅವಳನ್ನು ಕೇವಲ ಪುರುಷರ ದೈಹಿಕ ಸುಖಕ್ಕಾಗಿ ಭೂಮಿಗೆ ಕಳುಹಿಸಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಂಡಿಲ್ಲ.
Leave A Reply