ಪಾಲಿಕೆಯವರೇ, ಎಷ್ಟು ಬಲಿ ಸಿಕ್ಕಿದ ನಂತರ ರೂಫ್ ಟಾಪ್ ಮುಚ್ಚುತ್ತಿರಿ?
ನಮ್ಮಲ್ಲಿ ಏನಾಗುತ್ತದೆ ಎಂದರೆ ನಮ್ಮ ಸರಕಾರಗಳು ಅಂದರೆ ಸ್ಥಳೀಯ ಸಂಸ್ಥೆಯಾಗಿರುವ ಮಂಗಳೂರು ಮಹಾನಗರ ಪಾಲಿಕೆಯನ್ನು ಸೇರಿಸಿಕೊಂಡು ಏನಾದರೂ ಅಥವಾ ಯಾರದ್ದಾದರೂ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾದರೆ ನಾಲ್ಕು ಹೆಣ ಬೀಳಬೇಕು. ಈಗ ಮುಂಬೈಯ ಅನಧಿಕೃತ ಪಬ್ ವಿಷಯವನ್ನೆ ತೆಗೆದುಕೊಳ್ಳಿ. ಅವರು ಅದನ್ನು ಮೊದಲೇ ಕಿತ್ತು ಬಿಸಾಡಿದ್ದರೆ ಹದಿನಾಲ್ಕು ಜನರ ಜೀವ, 21 ಜನರ ನೋವು ಉಳಿಯುತ್ತಿತ್ತು. ಹಾಗೆ ಮಂಗಳೂರಿನಲ್ಲಿ ಕೂಡ. ಈಗಲೇ ಅನೇಕ ಕಟ್ಟಡಗಳ ಟೇರೆಸ್ ಮೇಲೆ ಹರಡಿರುವ ರೂಫ್ ಟಾಪ್ ಬಾರ್ ಅಂಡ್ ರೆಸ್ಟೋರೆಂಟ್ ಗಳನ್ನು ತೆಗೆಯಲು ಪಾಲಿಕೆ ಹೋದರೆ ಅವರಿಗೆ ಸಮ್ ಥಿಂಗ್ ಕೊಟ್ಟು ಬಾರ್ ಅಂಡ್ ರೆಸ್ಟೋರೆಂಟ್ ಗಳ ಮಾಲೀಕರು ಕಳುಹಿಸುತ್ತಾರೆ. ರೇಡ್ ಮಾಡಲು ಹೋಗಲೇ ಬೇಕೆಂದಿಲ್ಲ. ಪಾಲಿಕೆಯಲ್ಲಿ ಸಂಬಂಧಪಟ್ಟವರಿಗೆ ಆಗಾಗಾ ಇಂತಿಂಷ್ಟು ಎಂದು ಕೊಡುತ್ತಾ ಹೋದರೆ ಅವರು ರೂಫ್ ಟಾಪ್ ಕಡೆ ತಿರುಗಿಯೂ ನೋಡುವುದಿಲ್ಲ. ಒಂದು ವೇಳೆ ತುಂಬಾ ಪ್ರಾಮಾಣಿಕ, ದಕ್ಷ ಕಮೀಷನರ್ ಪಾಲಿಕೆಗೆ ಬಂದರು ಎಂದೇ ಇಟ್ಟುಕೊಳ್ಳಿ, ಅವರು ತೆಗೆಯಲು ಹೋದರೆ ಅವರಿಗೆ ಮೇಲಿನಿಂದ ಫೋನ್ ಬಂದು ಹಿಂದಕ್ಕೆ ಕಳುಹಿಸಲೂಬಹುದು. ನಮ್ಮ ಪಾಲಿಕೆಯವರಿಗೆ ಚಿಲಿಂಬಿಯಲ್ಲಿರುವ “ಮೋರ್” ಎದುರು ಇರುವ ಅನಧಿಕೃತ ಮಾಡನ್ನೇ ತೆಗೆಯಲು ಇಲ್ಲಿಯ ತನಕ ಆಗಿಲ್ಲ. ಹಾಗಿರುವಾಗ ಇವರು ಬಾರ್ ಅಂಡ್ ರೆಸ್ಟೋರೆಂಟ್ ಗಳನ್ನು ತೆಗೆಯುತ್ತಾರೆ ಎಂದರೆ ನಂಬಲು ಆಗುತ್ತದೆಯಾ?
ಪಾಲಿಕೆ ಹೋಗಲಿ, ಅವರ ಕೆಲಸ ನೆಕ್ಟ್. ಅದಕ್ಕಿಂತ ಮೊದಲು ಅಬಕಾರಿ ಇಲಾಖೆ ಬಂದು ನೀವು ಗ್ರಾಹಕರನ್ನು ಎಲ್ಲೆಲ್ಲಿ ಕುಳ್ಳಿರಿಸಿ ಲಿಕ್ಕರ್ ಪೂರೈಸುತ್ತೀರಿ ಎಂದು ಕೇಳಿದರೆ ಅರ್ಧಕರ್ಧ ರೂಫ್ ಟಾಪ್ ಗಳು ಗಟಾರದಲ್ಲಿ ಇಳಿದು ಹೋಗುತ್ತವೆ. ಯಾಕೆಂದರೆ ಅಬಕಾರಿ ಇಲಾಖೆ ಇವರಿಗೆ ಲೈಸೆನ್ಸ್ ಕೊಡುವಾಗ ರೆಸ್ಟೊರೆಂಟ್ ನವರು ತಾವು ಮದ್ಯ ಪೂರೈಸುವ ಸ್ಥಳದ ಒಂದು ನಕಾಶೆ (ಪ್ಲಾನ್) ಅಬಕಾರಿ ಇಲಾಖೆಯ ಡಿಸಿಯವರಿಗೆ ತೋರಿಸಿ ಅವರು ತೃಪ್ತರಾದ ನಂತರ ಲೈಸೆನ್ಸ್ ಸಿಗುವಂತ ಸಂಪ್ರದಾಯ ಇರುವುದು. ಹಾಗಿರುವಾಗ ಅಕಸ್ಮಾತ್ ಆಗಿ ಬೆಂಕಿ ತಗುಲಿದರೆ ಜನರು ಸುರಕ್ಷಿತವಾಗಿ ಹೋಗಲು ವ್ಯವಸ್ಥೆ, ಬೆಂಕಿ ಅವಘಡ ಸಂಭವಿಸಿದರೆ ಮುಂಜಾಗ್ರತಾ ಕ್ರಮ ಎಲ್ಲವನ್ನು ನಕ್ಷೆಯಲ್ಲಿ ತೋರಿಸಿ ನಂತರ ಲೈಸೆನ್ಸ್ ಕೊಡಲಾಗುವುದು. ಆದ್ದರಿಂದ ನೀವು ಬೃಹತ್ ಕಟ್ಟಡದ ಒಂದು ಫ್ಲೋರ್ ನಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಪ್ರಾರಂಭಿಸಿ ಕ್ರಮೇಣ ಅದರ ಟೇರೆಸ್ ಮೇಲೆ ರೂಫ್ ಟಾಪ್ ಶುರು ಮಾಡಿದರೆ ಅದು ಅಕ್ರಮ. ಅಬಕಾರಿ ಇಲಾಖೆ ಯಾವಾಗ ಬೇಕಾದರೂ ಆಗ ದಾಳಿ ಮಾಡಿ ಟೇರೆಸ್ ಬಂದ್ ಮಾಡಬಹುದು. ಆದರೆ ಬಂದ್ ಮಾಡುವುದಿಲ್ಲ. ಕಾರಣ “ದಾಲಾ ಆಪ್ಪುಜ್ಜಿ” ಎನ್ನುವ ಧೈರ್ಯ. ಒಂಜಿ ವೇಳೆ ಆಂಡಾ ಬೊಕ್ಕ ತೂಕಾ ಎನ್ನುವ ಅನಿಸಿಕೆ. ಒಂದು ವೇಳೆ ಏನೋ ಅವಘಡ ಆಗಿ ಹದಿನೈದು ಜನ ಸತ್ತರು ಎಂದೇ ಇಟ್ಟುಕೊಳ್ಳಿ. ಉನ್ನತ ಅಧಿಕಾರಿಗಳದ್ದು ಏನೂ ಹೋಗುವುದಿಲ್ಲ. ಕೆಳ ಹಂತದ ಸಿಬ್ಬಂದಿಗಳನ್ನು ಮುಂಬೈಯಲ್ಲಿ ಮಾಡಿದ ಹಾಗೆ ಇಲ್ಲೂ ಕೂಡ ಒಂದಿಷ್ಟು ದಿನಗಳ ಮಟ್ಟಿಗೆ ಅಮಾನತು ಮಾಡಬಹುದು. ಅದು ಬಿಟ್ಟರೆ ಏನೂ ಆಗುವುದಿಲ್ಲ. ಅದೇ ಆ ಹೋಟೇಲಿನವರು ತಮ್ಮ ಅಕ್ರಮ ಮುಚ್ಚಿ ಹಾಕಲು ಪ್ರತಿ ತಿಂಗಳು ಕೊಡುವ ಹಣದ ಎದುರು ಅಮಾನತು ಎನ್ನುವುದು ಏನೂ ಅಲ್ಲ. ಅವಘಡ ಆದ ನಂತರ ಹೇಗೂ ಅಕ್ರಮ ರೂಫ್ ಟಾಪ್ ಅನ್ನು ತೆಗೆಯಲು ಇದೆಯಲ್ಲ, ಈಗಲೇ ಯಾಕೆ ತೆಗೆಯುವುದು ಎನ್ನುವ ಆಲಸ್ಯ ಬೇರೆ. ಅದಕ್ಕೆ ಪ್ರಾರಂಭದಲ್ಲಿಯೇ ಹೇಳಿದ್ದು ಎಷ್ಟು ಬಲಿ ಸಿಕ್ಕಿದ ನಂತರ ರೂಫ್ ಟಾಪ್ ಮುಚ್ಚುತ್ತಿರಿ.
ಇದು ಜೀವದ ಪ್ರಶ್ನೆಯಾದರೆ ಈ ರೂಫ್ ಟಾಪ್ ನಲ್ಲಿ ಅನಧಿಕೃತವಾಗಿ ಬಾರ್ ಅಂಡ್ ರೆಸ್ಟೋರೆಂಟ್ ಮಾಡುವವರಿಂದ ಸ್ಥಳೀಯ ಸಂಸ್ಥೆಗಳಿಗೆ ಯಾವುದೇ ತೆರಿಗೆ ಕೂಡ ಸಿಗುವುದಿಲ್ಲ. ಹೋಟೇಲಿನವರು ಕಟ್ಟಡದಲ್ಲಿ ತಾವು ತೆಗೆದುಕೊಂಡಿರುವ ಮಹಡಿಯ ಡೋರ್ ನಂಬ್ರಕ್ಕೆ ಸರಿಯಾಗಿ ತೆರಿಗೆ ಕಟ್ಟುತ್ತಾರೆ ವಿನ: ಅದರ ಮೇಲೆ ತಾವು ನಡೆಸುತ್ತಿರುವ ರೂಫ್ ಟಾಪ್ ಗೆ ಯಾವುದೇ ರೀತಿಯ ತೆರಿಗೆ ಕಟ್ಟುವುದಿಲ್ಲ. ಆದ್ದರಿಂದ ಪಾಲಿಕೆಯವರು ನಿಯಮಾನುಸಾರವಾಗಿಯೇ ಹೋಗಿ ಅನಧಿಕೃತ ಸೆಟ್ ಅಪ್ ಅನ್ನು ಮುಚ್ಚಬಹುದು. ಯಾವುದೇ ಉದ್ಯಮ ಮಾಡುವಾಗ ಉದ್ಯಮ ಪರವಾನಿಗೆ ಎಂದು ಇಂತಿಷ್ಟು ಹಣ ಕಟ್ಟಬೇಕಾಗುತ್ತದೆ. ಅಂದರೆ ಇಷ್ಟು ಜಾಗದಲ್ಲಿ ವ್ಯಾಪಾರ ಮಾಡುವುದಾದರೆ ಇಷ್ಟು ಎಂದು ತೆರಿಗೆ ಇರುತ್ತದೆ. ಆದರೆ ರೂಫ್ ಟಾಪ್ ನಲ್ಲಿ ತಿಂಗಳಿಗೆ ಲಕ್ಷಗಟ್ಟಲೆ ದುಡಿಯುವ ಮಾಲೀಕರು ಅದಕ್ಕೆ ಪ್ರತಿಯಾಗಿ ಪಾಲಿಕೆಗೆ ಎಷ್ಟು ತೆರಿಗೆ ಕಟ್ಟುತ್ತಾರೆ, ನೋಡಿ. ಒಂದು ರೂಪಾಯಿ ಕೂಡ ಕಟ್ಟುವುದಿಲ್ಲ. ಅಸಲಿಗೆ ಅವರು ಹೇಳುವುದೇ ಇಲ್ಲ. ಹಾಗಂತ ಅವರು ಹೇಳದಿದ್ದರೆ ಪಾಲಿಕೆಯ ಕಮೀಷನರ್ ಅವರಿಗಾಗಲಿ, ಮೇಯರ್ ಅವರಿಗಾಗಲಿ, ಸ್ಥಾಯಿ ಸಮಿತಿಯವರಿಗಾಗಲಿ ಗೊತ್ತಿಲ್ಲ ಎಂದಲ್ಲ. ಪಾಲಿಕೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಬೇಕಾದರೆ ಅಲ್ಲಿಯೇ ಹೋಗಿ ಪಾರ್ಸೆಲ್ ತೆಗೆದುಕೊಂಡು ಬರುತ್ತಾರೆ ವಿನ: ಹೀಗೆ ಟೇರೆಸ್ ಮೇಲೆ ವ್ಯಾಪಾರ ಮಾಡುತ್ತಿರುವುದು ಅಕ್ರಮ ಕಾನೂನು ಬಾಹಿರ ಎಂದು ಗೊತ್ತಿದೆಯಾ ಎಂದು ಹೋಟೇಲ್ ಮಾಲೀಕರಿಗೆ ಅಪ್ಪಿತಪ್ಪಿ ಕೂಡ ಕೇಳುವುದಿಲ್ಲ. ಇಂತವ ವ್ಯವಸ್ಥೆ ಮಂಗಳೂರು ಮಾತ್ರವಲ್ಲ ಎಲ್ಲಾ ಕಡೆ ಇರುವುದರಿಂದ ಅಮಾಯಕ ಜನರು ಅಲ್ಲಿಗೆ ಹೋಗಿ ಗಮ್ಮತ್ ಮಾಡುವ ನೆಪದಲ್ಲಿ ಸ್ಮಶಾನ ಸೇರುತ್ತಿದ್ದಾರೆ.
ಮಂಗಳೂರಿನಲ್ಲಿ ಇಂತಹ ಎಷ್ಟು ಅಕ್ರಮ , ಅನಧಿಕೃತ ರೂಫ್ ಟಾಪ್ ಬಾರ್ ಅಂಡ್ ರೆಸ್ಟೋರೆಂಟ್ ಗಳು ಇವೆ ಎನ್ನುವ ಪಟ್ಟಿಯೇ ನನ್ನ ಹತ್ತಿರ ಇದೆ. ಹಾಗಂತ ನಾನು ಅದನ್ನು ಇಲ್ಲಿ ಬರೆದು ನಿಮ್ಮ ನೆಮ್ಮದಿ ಹಾಳು ಮಾಡುವುದಿಲ್ಲ. ನೀವು ಮುಂದಿನ ಬಾರಿ ಅಲ್ಲಿಗೆ ಹೋಗುವಾಗ ಹೆದರಿಕೆಯಿಂದಲೇ ಪಾರ್ಟಿ ಮಾಡುವಂತೆ ಆಗಬಾರದು. ಹನುಮಂತ ಕಾಮತ್ ಇದೇ ಹೋಟೇಲಿನ ಹೆಸರನ್ನು ಬರೆದಿದ್ದರು, ಡ್ಯಾಡಿ ಇಲ್ಲಿ ಪಾರ್ಟಿ ಮಾಡಲು ಹೆದರಿಕೆ ಆಗುತ್ತದೆ ಎಂದು ನೀವು ಹೇಳಿ ನಿಮ್ಮ ಉತ್ಸಾಹಕ್ಕೆ ತಣ್ಣೀರೆರೆಚುವ ಕೆಲಸ ನಾನು ಮಾಡುವುದಿಲ್ಲ. ಯಾಕೆಂದರೆ ಗಮ್ಮತ್ ಮಾಡುವುದಕ್ಕೆ ಹೋಗುವುದು ನಿಮ್ಮ ಇಷ್ಟ, ಆದರೆ ನಿಮ್ಮ ಪ್ರಾಣ ಉಳಿಸುವುದು ಪಾಲಿಕೆಯ ಜವಾಬ್ದಾರಿ. ಪಾಲಿಕೆಯವರು ಬಾಯಲ್ಲಿ ಬೆರಳಿಟ್ಟರೆ ಕಚ್ಚಲು ಗೊತ್ತಿಲ್ಲದ ಹಸುಳೆಗಳಾಗಿದ್ದರೆ ನಾನೇ ಅವರ ಕೈಗೆ ಅನಧಿಕೃತ ರೂಫ್ ಟಾಪ್ ಲಿಸ್ಟ್ ಕೊಡುತ್ತಿದ್ದೆ. ಆದರೆ ಪಾಲಿಕೆಯವರಿಗೆ ಎಲ್ಲಿ ಕಚ್ಚಬೇಕೋ ಅಲ್ಲಿ ಕಚ್ಚಲು ಗೊತ್ತಿದೆ ಮತ್ತು ಎಲ್ಲಿ ಚೀಪಲು ಮನಸ್ಸಿದೆಯೋ ಅಲ್ಲಿ ಚೀಪುತ್ತಾರೆ, ಅದಕ್ಕಾಗಿ ಮಂಗಳೂರಿನಲ್ಲಿ ಅನಧಿಕೃತ ರೂಫ್ ಟಾಪ್ ಗಳು ಆರಾಮವಾಗಿ ವ್ಯವಹಾರ ಮಾಡುತ್ತಿವೆ.
Leave A Reply