ಮೋದಿ ನೀಡಿದ ಏಟಿಗೆ ನಾಲ್ಕು ವರ್ಷದಲ್ಲಿ ಉಗ್ರರ ಶಕ್ತಿ ಉಡುಗಿ ಹೋಗಿದೆ..!

ದೆಹಲಿ: ದೇಶದ ಮುಕುಟ ಕಾಶ್ಮೀರ ಕಣಿವೆ ಸೇರಿ ದೇಶಾದ್ಯಂತ ಉಗ್ರ ಉಪಟಳವನ್ನು ನಿಯಂತ್ರಣ ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ. ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ನಡೆದ ಉಗ್ರ ದಾಳಿಗಳಿಗಿಂತ ಪ್ರಸ್ತುತ ಕೇಂದ್ರ ಸರ್ಕಾರದ ಆಡಳಿತದಲ್ಲಿ ಉಗ್ರ ದಾಳಿಯಲ್ಲಿ ಭಾರಿ ಪ್ರಮಾಣದ ಇಳಿಕೆ ಕಂಡು ಬಂದಿದೆ.
2010ರಿಂದ 2013ರವರೆಗೆ ಯುಪಿಎ ಆಡಳಿದಲ್ಲಿ ದೇಶದಲ್ಲಿ 1218 ವಿಧ್ವಂಸಕ ಕೃತ್ಯಗಳು, ಭಯೋತ್ಪಾದನೆ ಸಂಬಂಧಿ ದುರ್ಘಟನೆಗಳು ನಡೆದಿದ್ದವು, ಯಾವುದೇ ಉಗ್ರರನ್ನು ಮರಳಿ ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯವಾಗಿರಲಿಲ್ಲ. ಅಲ್ಲದೇ ಭಯೋತ್ಪಾದಕ ಅಟ್ಟಹಾಸ ಮಟ್ಟಹಾಕಲು ಕಠಿಣ ಕ್ರಮಗಳನ್ನು ಡಾ.ಮನಮೋಹನ್ ಸಿಂಗ್ ಪ್ರಧಾನಿ ನೇತೃತ್ವದ ಅಂದಿನ ಕೇಂದ್ರ ಸರ್ಕಾರ ಕೈಗೊಂಡಿರಲಿಲ್ಲ.
ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸರ್ಕಾರದ ಸಾರಥ್ಯ ವಹಿಸಿಕೊಂಡಾಗಿನಿಂದ ಇದುವರೆಗೆ ಕೇವಲ 1094 ಘಟನೆಗಳು ನಡೆದಿದ್ದು, ನೂರಾರು ಭಯೋತ್ಪಾದಕರು ಗನ್ ಕೆಳಗಿಟ್ಟು, ಮುಖ್ಯವಾಹಿನಿಗೆ ಬಂದಿದ್ದಾರೆ. ಅಲ್ಲದೇ ನಾಲ್ಕು ವರ್ಷದಲ್ಲಿ 580 ಉಗ್ರರನ್ನು ಭಾರತೀಯ ಸೈನಿಕರು ಹೊಡೆದುರುಳಿಸಿದ್ದಾರೆ. ಅದರಲ್ಲಿ ಉಗ್ರ ಸಂಘಟನೆಯ ಮುಖಂಡರು ಹಲವು ಎಂಬುದು ಗಮನಾರ್ಹ.
ನಾಲ್ಕು ವರ್ಷದಲ್ಲಿ ಉಗ್ರರ ದಾಳಿಯಲ್ಲಿ ಮೃತಪಡುವ ನಾಗರಿಕರ ಸಂಖ್ಯೆಯಲ್ಲೂ ಇಳಿಕೆಯಾಗಿದ್ದು, ನಾಲ್ಕು ವರ್ಷದಲ್ಲಿ ಕೇವಲ 100 ಸಾರ್ವಜನಿಕರು ಮೃತಪಟ್ಟಿದ್ದಾರೆ. ಕೇಂದ್ರ ಸರ್ಕಾರದ ಭಯೋತ್ಪಾದನೆ ವಿರುದ್ಧ ಕೈಗೊಂಡಿರುವ ಕಠಿಣ ಕ್ರಮಗಳಿಂದ ನಿಯಂತ್ರಣಕ್ಕೆ ಬಂದಿದ್ದು, ವಿಶೇಷವಾಗಿ ಕಾಶ್ಮೀರ ಕಣಿವೆಯಲ್ಲಿ ಪ್ರತ್ಯೇಕವಾದಿಗಳ ಉಪಟಳ ಕಡಿಮೆಯಾಗಿದ್ದು, ಕಲ್ಲೆಸೆಯುವವರ ಸಂಖ್ಯೆ ನಿಯಂತ್ರಣಕ್ಕೆ ಬಂದಿದೆ ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಸಂಖ್ಯೆಗಳಿಂದ ಸಾಬೀತಾಗಿದೆ.
ಕಳೆದ ತಿಂಗಳು ಕೇಂದ್ರ ಗೃಹ ಇಲಾಖೆ ಭಯೋತ್ಪಾದನೆ ನಿಯಂತ್ರಣಕ್ಕೆ ನೋಟು ನಿಷೇಧ, ಪ್ರತ್ಯೇಕವಾದಿಗಳ ವಿರುದ್ಧ ಎನ್ಐಎ ತನಿಖೆ, ಭಯೋತ್ಪಾದಕ ಮುಖಂಡರ ಹತ್ಯೆ ಮತ್ತು ಕಾಶ್ಮೀರ ಕಣಿವೆಯ ಸಂವಹನಕಾರ ದಿನೇಶ್ವರ ಶರ್ಮಾ ಅವರ ಕಾರ್ಯ ವೈಖರಿ ಎಂಬ ನಾಲ್ಕು ಕಾರಣಗಳನ್ನು ನೀಡಿತ್ತು.
ಕೇಂದ್ರ ಸರ್ಕಾರ ಭಯೋತ್ಪಾದನೆಗೆ ಶಾಶ್ವತ ಕಡಿವಾಣ ಹಾಕಬೇಕು. ಆ ನಿಟ್ಟಿನಲ್ಲಿ ಭಾರತೀಯ ಸೈನಿಕರು ಕಾರ್ಯನಿರ್ವಹಿಸಬೇಕು. ದಾಳಿಯಾದರೆ ಯಾವುದೇ ಕಾರಣಕ್ಕೂ ಕೈಕಟ್ಟಿ ಕುಳಿತುಕೊಳದೇ ಪ್ರತಿ ದಾಳಿ ನಡೆಸಬೇಕು. ಭಾರತ ಅಶಕ್ತ ರಾಷ್ಟ್ರವಲ್ಲ, ಬಲಿಷ್ಠ ರಾಷ್ಟ್ರ ಎಂಬ ಸಂದೇಶವನ್ನು ತಕ್ಕ ಪ್ರತ್ಯುತ್ತರ ನೀಡುತ್ತಲೇ ಕಳುಹಿಸಬೇಕು ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿರುವುದು ಭಾರತೀಯ ಸೈನ್ಯಕ್ಕೆ ಮತ್ತಷ್ಟು ಸ್ಫೂರ್ತಿ ತುಂಬಿದೆ.