ಕಸದ ತೊಟ್ಟಿಯಾಗಿದ್ದ ಕಲ್ಯಾಣಿಯನ್ನು ತೀರ್ಥ ಸ್ಥಾನ ಮಾಡಿದ ಯುವ ಬ್ರಿಗೇಡ್
ಗದಗ: ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಯುವ ಬ್ರಿಗೇಡ್ ಯಾವುದೇ ಅಧಿಕಾರದ ಹಂಗಿಲ್ಲದೇ, ಹಣದಾಸೆಯಿಲ್ಲದೇ ನಿಸ್ವಾರ್ಥ ಯುವ ಪಡೆಯೊಂದಿಗೆ ನಡೆಸುತ್ತಿರುವ ಸಾಮಾಜಿಕ ಕಾರ್ಯಕ್ಕೆ ಭಾರಿ ಯಶಸ್ವಿ ದೊರೆಯುತ್ತಿದೆ. ಸ್ವಾರ್ಥವಿಲ್ಲದ ಕಾರ್ಯಗಳಿಗೆ ಯಶಸ್ಸು ನಿಶ್ಚಿತ ಮತ್ತು ಪರಿಣಾಮ ಖಚಿತ ಎಂಬುದಕ್ಕೆ ಯುವ ಬ್ರಿಗೇಡ್ ಕಾರ್ಯಗಳು ಸಾಕ್ಷಿಯಾಗಿ ನಿಂತಿದ್ದು, ಗದಗನಲ್ಲಿ ಯುವ ಬ್ರಿಗೇಡ್ ಕಾರ್ಯದಿಂದ ಕಸದ ತೊಟ್ಟಿಯಂತಾಗಿದ್ದ ಕಲ್ಯಾಣಿಯೊಂದು ತೀರ್ಥ ಕ್ಷೇತ್ರವಾಗಿ ಮಾರ್ಪಟ್ಟಿದೆ.
ಜೀವ ಜಲ ಬತ್ತಿ, ಸಮೀಪಕ್ಕೂ ಹೋಗಲಾರದಂತೆ ಬೆಳೆದಿದ್ದ ಮುಳ್ಳು ಕಂಟಿ, ಕಸದ ರಾಶಿಯಲ್ಲಿ ಮರೆಯಾಗಿದ್ದ ಗದುಗಿನ ಗಂಗಾಪುರ ಪೇಟೆಯ ವೀರನಾರಾಯಣ ದೇವಸ್ಥಾನದ ಎದುರಿಗಿರುವ ಕೋನೇರಿ ಹೊಂಡ ಇಂದು ಜೀವ ಜಲದಿಂದ ಭರ್ತಿಯಾಗಿದೆ. ಯುವ ಬ್ರಿಗೇಡ್ ನ ಉತ್ಸಾಹಿ ನಿಸ್ವಾರ್ಥಿ ತರುಣರ 270 ದಿನಗಳ ಶ್ರಮ ಸಾರ್ಥಕವಾಗಿದೆ.
ಸಂಘಟಿತ, ನಿಸ್ವಾರ್ಥ, ಶ್ರಮಜೀವಿ, ಅಭಿವೃದ್ಧಿಗೆ ತುಡಿಯುವ ಯುವಕರ ತಂಡ ಚಕ್ರವರ್ತಿ ಸೂಲಿಬೆಲೆಯುವ ಮಾರ್ಗದರ್ಶನದಲ್ಲಿ ಗದಗನಲ್ಲಿ ಕೈಗೊಂಡ ಕಲ್ಯಾಣಿ ಸ್ವಚ್ಛತಾ ಕಾರ್ಯದಿಂದ ಇದೀಗ ಕಲ್ಯಾಣಿಯಲ್ಲಿ ಜೀವ ಜಲ ಬಂದಿದೆ.
ಕಸದ ತೊಟ್ಟಿಯಾಗಿದ್ದ ಕಲ್ಯಾಣಿ ಸ್ವಚ್ಛತೆ ಮಾಡಿದ ಯುವಪಡೆಗೆ ಕಲ್ಯಾಣಿಯಲ್ಲಿ ಜಲ ನಳ ನಳಿಸುತ್ತಿದ್ದಾಗ ಅದೇನೋ ಸಾರ್ಥಕ ಭಾವ, ನಮ್ಮ ಹುಡುಗರು ಎಂಥಾ ಕಾರ್ಯ ಮಾಡಿದರು ಎಂಬ ಹಿರಿಯರ ಆಶೀರ್ವಾದ. ಇಷ್ಟು ಸಾಕಲ್ಲವೇ ನವ ಕರ್ನಾಟಕ ನಿರ್ಮಾಣಕ್ಕೆ ಹೊಸ ಮುನ್ನುಡಿ ಬರೆದಂತೆ. ಯುವ ಪಡೆ ಎದ್ದು ನಿಂತರೆ ಎಂತಹ ಕಾರ್ಯವೂ ಸರಳಿತ, ಸರಕಾರದ ಮುಂದೆ ಕೈ ಚಾಚುವ ಅಗತ್ಯವಿಲ್ಲ ಎಂಬುದನ್ನು ಸಾರಿ ಹೇಳಿದ್ದಾರೆ.
ದೀಪೋತ್ಸವದ ಸಂಭ್ರಮ
ಶತಮಾನಗಳ ಐತಿಹಾಸಿಕ ಕಲ್ಯಾಣಿಯನ್ನು ಸ್ವಚ್ಛಗೊಳಿಸಿ, ಹೂಳೆತ್ತಿ ನೀರು ಚಿಮ್ಮಿಸಿದ ಗದಗ ಯುವ ಬ್ರಿಗೇಡ್ . ಕಲ್ಯಾಣಿಯಲ್ಲಿ ಗಂಗಾ ಮಾತೆಗೆ ಪೂಜೆ ಸಲ್ಲಿಸಿ ಅದ್ಧೂರಿಯಾಗಿ ದೀಪೋತ್ಸವ ನಡೆಸಿದರು. ಸುಮಾರು 270 ದಿನಗಳ ಕಾಲ ನಿತ್ಯ ಯುವಕರ ನಿಸ್ವಾರ್ಥ ಶ್ರಮದಿಂದ ಕಲ್ಯಾಣಿ ಹೊಸ ರೂಪ ಪಡೆದುಕೊಂಡಿದ್ದು, ದೀಪೋತ್ಸವದಲ್ಲಿ ಭಾಗಿಯಾದ ಯುವಕರಲ್ಲಿ ಸಾರ್ಥಕ ಭಾವ ಮೂಡಿಸಿತ್ತು. ಯುವಕರ ಈ ಕಾರ್ಯವನ್ನು ಮೆಚ್ಚಿ ನೂರಾರು ಜನರು ಕೊನೇರಿ ಹೊಂಡಕ್ಕೆ ಬಂದು ನೋಡಿ, ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಯುವ ಬ್ರಿಗೇಡ್ ಕಾರ್ಯವನ್ನು ಮೆಚ್ಚಿ, ಕಲ್ಯಾಣಿಯ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಜಾಗೃತರಾಗಿದ್ದಾರೆ.
Leave A Reply