ತೊಗಾಡಿಯಾ ಹಾರ್ದೀಕ್ ಪಟೇಲ್ ನನ್ನು ಭೇಟಿ ಮಾಡಲು ಸಮ್ಮತಿಸಿದ್ದು ಯಾಕೆ?
ವಿಶ್ವ ಹಿಂದೂ ಪರಿಷತ್ ನ ಅಂತರಾಷ್ಟ್ರೀಯ ಅಧ್ಯಕ್ಷ ಪ್ರವೀಣ್ ಬಾಯ್ ತೊಗಾಡಿಯಾ ಅವರು ಸಂಘ ಪರಿವಾರದ ಪಾಲಿಗೆ ಬೆಂಕಿಚೆಂಡು ಎಂದೇ ಪರಿಗಣಿಸಲ್ಪಟ್ಟವರು. ಅವರು ಮಾತನಾಡಲು ನಿಂತರೆ ಹಿಂದೂ ಯುವಕರ ಮೈಮನ ರೋಮಾಂಚನಗೊಳ್ಳುತ್ತಿತ್ತು. ಅವರ ಭಾಷಣದಲ್ಲಿ ಉಗ್ರ ಹಿಂದೂತ್ವ ಎದ್ದು ಕಾಣುತ್ತಿತ್ತು. ಇತ್ತೀಚೆಗೆ ಉಡುಪಿಯಲ್ಲಿ ನಡೆದ ಧರ್ಮ ಸಂಸದ್ ನಲ್ಲಿ ದಿಕ್ಸೂಚಿ ಭಾಷಣ ಮಾಡಿದ ಪ್ರವೀಣ್ ಬಾಯ್ ತೊಗಾಡಿಯಾ ಅಯೋಧ್ಯೆಯಲ್ಲಿ ರಾಮ ಮಂದಿರ ಆದಷ್ಟು ಬೇಗ ಆಗುವ ಘೋಷಣೆ ಮಾಡಿದ್ದರು. ಅವರು ಅಖಂಡ ಭಾರತದ ಜಪವನ್ನು ಮಾಡುತ್ತಲೇ ಬಂದವರು.
ಅವರ ಭಾಷಣಗಳ ಪ್ರಖರತೆ ಎಷ್ಟಿತ್ತು ಎಂದರೆ ಅವರಿಗೆ ಇಸ್ಲಾಂ ಮೂಲಭೂತವಾದಿಗಳಿಂದ ಬೆದರಿಕೆ ಇತ್ತು. ಅವರ ಹೆಸರು ದೇಶವಿದ್ರೋಹಿ ಸಂಘಟನೆಗಳ ಟಾಪ್ ಲಿಸ್ಟ್ ನಲ್ಲಿದೆ. ಅವರಿಗೆ ಇರುವ ಶತ್ರುಗಳು ಕೂಡ ಕಡಿಮೆ ಅಲ್ಲ. ಅವರು ತಮ್ಮ ಮೂಲರಾಜ್ಯ ಗುಜರಾತ್ ನಿಂದ ಬೇರೆ ಯಾವುದಾದರೂ ರಾಜ್ಯಕ್ಕೆ ಕಾರ್ಯಕ್ರಮದ ನಿಮಿತ್ತ ಹೋದರೆ ಅಲ್ಲಿನ ಸರಕಾರ ತೊಗಾಡಿಯಾ ಬಂದು ಹೋಗುವ ತನಕ ಕಣ್ಣು, ಕಿವಿ, ಬಾಯಿ ಎಲ್ಲವನ್ನು ತೆರೆದಿಟ್ಟು ತನ್ನ ಗುಪ್ತಚರ ಇಲಾಖೆ, ಪೊಲೀಸ್ ಇಲಾಖೆಗೆ ಕಟ್ಟೆಚ್ಚರದಲ್ಲಿ ಇರುವಂತೆ ಸೂಚಿಸುತ್ತಿತ್ತು. ಕೆಲವು ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳು ತೊಗಾಡಿಯಾ ತಮ್ಮ ರಾಜ್ಯಕ್ಕೆ ಬರುವುದನ್ನು ಪ್ರತಿಬಂಧಿಸಿದ್ದು ಕೂಡ ಇದೆ. ಹೀಗಿರುವಾಗ ಪ್ರವೀಣ್ ತೊಗಾಡಿಯಾ ಎನ್ನುವ ಪ್ರಸಿದ್ಧ ಕ್ಯಾನ್ಸರ್ ವೈದ್ಯರೊಬ್ಬರ ಲೆವೆಲ್ ಯಾವ ಮಟ್ಟಕ್ಕೆ ಇದೆ ಎಂದು ನೀವು ಅರ್ಥ ಮಾಡಿಕೊಳ್ಳಬಹುದು. ತೊಗಾಡಿಯಾ ಮಾತನಾಡುತ್ತಾರೆ ಎಂದರೆ ಕಾಂಗ್ರೆಸ್ ಮುಖಂಡರು ಕೂಡ ಕಿವಿಯರಳಿಸಿ ಕೇಳುತ್ತಾರೆ. ಯಾಕೆಂದರೆ ತಮಗೆ ಅದರಲ್ಲಿ ಏನಾದರೂ ಅಂಶ ಸಿಕ್ಕಿ ಭಾರತೀಯ ಜನತಾ ಪಾರ್ಟಿಯ ವಿರುದ್ಧ ಅದನ್ನು ಬಳಸಲು ಅಸ್ತ್ರ ಸಿಗಬಹುದಾ ಎನ್ನುವ ಆಸೆ. ಹಾಗೆ ಕಟ್ಟಾ ಮುಸಲ್ಮಾನರು ಕೂಡ ತೊಗಾಡಿಯಾ ಭಾಷಣವನ್ನು ಕದ್ದು ಮುಚ್ಚಿ ಕೇಳುತ್ತಾರೆ, ಯಾಕೆಂದರೆ ಭಾಷಣದಲ್ಲಿ ಏನು ಹೊಸ ಘೋಷಣೆ ಮಾಡುತ್ತಾರೆ ಎನ್ನುವ ಕುತೂಹಲ. ಒಟ್ಟಿನಲ್ಲಿ ತೊಗಾಡಿಯಾ ಮಾತನಾಡಲು ಎದ್ದು ನಿಂತರೆ, ಸಂತರೊಂದಿಗೆ ಸಭೆ ನಡೆಸಿದರೆ, ಸಂಘ ಪರಿವಾರದ ಪ್ರಮುಖರೊಂದಿಗೆ ರಹಸ್ಯ ಬೈಠಕ್ ಮಾಡಿದರೆ ಮಾಧ್ಯಮಕ್ಕೂ ಅದೊಂದು ಕುತೂಹಲ. ಏನಿರಬಹುದು ವಿಷಯ ಅಂತ?
ಅಂತವರು ಕಣ್ಮರೆಯಾಗುತ್ತಾರಾ?
ಹೀಗಿರುವಾಗ ತೊಗಾಡಿಯಾ ಒಂದು ದಿನ ಕಣ್ಮರೆಯಾಗುತ್ತಾರೆ. ಮರುದಿನ ಪತ್ತೆಯಾಗುತ್ತಾರೆ, ಅದು ಕೂಡ ಮೂರ್ಚೆ ತಪ್ಪಿದ ಸ್ಥಿತಿಯಲ್ಲಿ. ಮೊದಲನೆಯದಾಗಿ ಪ್ರವೀಣ್ ತೊಗಾಡಿಯಾ ಕಣ್ಮರೆಯಾಗುತ್ತಾರೆ ಎನ್ನುವುದೇ ಹಾಸ್ಯಾಸ್ಪದ ವಿಷಯ. ಯಾಕೆಂದರೆ ತೊಗಾಡಿಯಾ ಅವರಿಗೆ ಝಡ್ ಸೆಕ್ಯೂರಿಟಿ ಸುರಕ್ಷಾ ವ್ಯವಸ್ಥೆ ಇದೆ. ಅವರು ಕಣ್ಮರೆಯಾಗಿ ಅವರ ಜೀವಕ್ಕೆ ಯಾವುದಾದರೂ ಮೂಲಭೂತವಾದಿಗಳಿಂದ ಹೆಚ್ಚು ಕಡಿಮೆಯಾದರೆ ಅದರ ಪರಿಣಾಮ ಏನಾಗಬಹುದು ಎನ್ನುವುದು ಇಡೀ ದೇಶಕ್ಕೆ ಗೊತ್ತು. ಅವರ ಮೈಮೇಲೆ ಒಂದು ಸಣ್ಣ ಗೀರಿದ ಗಾಯ ಆದರೂ ಅದು ದೇಶದ ಆಂತರಿಕ ಭದ್ರತೆಗೆ ಅಪಾಯ. ಇನ್ನು ತೊಗಾಡಿಯಾ ಅವರನ್ನು ಕಿಡ್ನಾಪ್ ಮಾಡಲಾಗಿದೆ ಎನ್ನುವ ಸುದ್ದಿ ಹರಡಿಸಲಾಗಿತ್ತು. ಕಿಡ್ನಾಪ್ ಆಗಲು ತೊಗಾಡಿಯಾ ಯಾವುದೋ ಜೋಪಡಿಯಲ್ಲಿ ವಾಸಿಸುವ ವ್ಯಕ್ತಿ ಅಲ್ಲ. ಇನ್ನು ತೊಗಾಡಿಯಾ ಅವರಿಗೆ ಇರುವುದು ಝಡ್ ಸೆಕ್ಯೂರಿಟಿ. ಝಡ್ ಸೆಕ್ಯೂರಿಟಿ ಇದ್ದವರಿಗೆ ಎಷ್ಟು ಗನ್ ಮ್ಯಾನ್ ಇರುತ್ತಾರೆ, ಎಷ್ಟು ಶಸ್ತ್ರಸಜ್ಜಿತ ಕಮಾಂಡೊಗಳಿರುತ್ತಾರೆ, ಎಷ್ಟು ಪೊಲೀಸ್ ಭದ್ರತೆ ಇರುತ್ತದೆ ಎನ್ನುವುದನ್ನು ನೀವು ಗೂಗಲ್ ನಲ್ಲಿ ಹೋಗಿ ಶೋಧಿಸಿದರೆ ಗೊತ್ತಾಗುತ್ತದೆ. ಅಂತಹ ಭದ್ರತೆ ಇರುವ ವ್ಯಕ್ತಿಯನ್ನು ಕೂಡ ಕಿಡ್ನಾಪ್ ಮಾಡಲಾಗಿದೆ ಎನ್ನುವುದು ಹೊರಪ್ರಪಂಚಕ್ಕೆ ಗೊತ್ತಾದರೆ ಅದು ನಮ್ಮ ದೇಶದ ಮರ್ಯಾದೆಗೆ ದಕ್ಕೆ. ಆದ್ದರಿಂದ ಹಾಗೆ ಯೋಚಿಸುವುದು ಕೂಡ ಒಂದು ರೀತಿಯಲ್ಲಿ ಹಾಸ್ಯಾಸ್ಪದ. ಅವರು ಮರುದಿನ ಒಂದು ಪಾರ್ಕಿನಲ್ಲಿ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಪತ್ತೆಯಾದರು ಎನ್ನುವುದೇ ಒಂದು ನಿಗೂಢತೆಯೊಂದಿಗೆ ಭಾರತೀಯರ ಮುಂದೆ ಅನಾವರಣಗೊಂಡಿದೆ. ಅವರಿಗೆ ಲೋಶುಗರ್ ಇದ್ದ ಕಾರಣ ಹೀಗೆ ಆಗಿದೆ ಎಂದು ಹೇಳಲಾಗುತ್ತದೆ. ಆದರೂ ಒಬ್ಬ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರಿರುವ ವ್ಯಕ್ತಿ, ಝಡ್ ಸೆಕ್ಯೂರಿಟಿ ಹೊಂದಿರುವ ವ್ಯಕ್ತಿ ಈ ಸ್ವರೂಪದಲ್ಲಿ ಮರುದಿನ ಪತ್ತೆಯಾದರು ಎಂದ ಕೂಡಲೇ ಮೊದಲ ಖುಷಿಗೊಂಡದ್ದೇ ಕಾಂಗ್ರೆಸ್.
ತೊಗಾಡಿಯಾ ಹೇಳಿಕೆ ಕಾಂಗ್ರೆಸ್ಸಿಗೆ ವರವಾಯಿತು!
ಅದರಲ್ಲಿಯೂ ತನ್ನ ಹತ್ಯೆಗೆ ರಾಜಸ್ಥಾನದ ಪೊಲೀಸರು ಸಂಚು ಹೂಡಿದ್ದರು ಎಂದು ತೊಗಾಡಿಯಾ ಹೇಳಿದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಇವು ಇನ್ನೊಂದು ಅಪಸ್ವರಕ್ಕೆ ಕಾರಣವಾಗಿದೆ. ಈ ಅವಕಾಶವನ್ನು ಸುಮ್ಮನೆ ಬಿಡಬಾರದು ಎಂದು ಅದರಲ್ಲಿ ಕೈ ಆಡಿಸಿದ್ದೇ ಹಾರ್ದೀಕ್ ಪಟೇಲ್. ಹಾರ್ದೀಕ್ ಪಟೇಲ್ ಕಾಂಗ್ರೆಸ್ಸಿನ ಮಾನಸ ಪುತ್ರ. ಮುಳುಗಲಿದ್ದ ಕಾಂಗ್ರೆಸ್ ಹಡಗನ್ನು ಬಾಹುಬಲಿಯ ತಾಯಿ ಶಿವಗಾಮಿನಿ ಬಾಹುಬಲಿ ಸಿನೆಮಾದಲ್ಲಿ ಎತ್ತಿಹಿಡಿದಂತೆ ಹಿಡಿದದ್ದು ಇದೇ ಹಾರ್ದೀಕ್ ಪಟೇಲ್. ಆತ ಇಂತಹ ಅವಕಾಶವನ್ನು ಬಿಡಲು ತಯಾರಿರಲೇ ಇಲ್ಲ. ಪ್ರವೀಣ್ ಬಾಯ್ ತೊಗಾಡಿಯಾ ಅವರನ್ನು ಹತ್ಯೆ ಮಾಡಲು ಸಂಚು ಮಾಡಿದ್ದು ನರೇಂದ್ರ ಮೋದಿ ಎನ್ನುವ ಸುಳ್ಳುಸುದ್ದಿಯನ್ನು ಆತ ಹರಡಲು ಶುರು ಮಾಡಿದ. ಅದಕ್ಕೆ ಸರಿಯಾಗಿ ಕೆಲವು ಕಾಂಗ್ರೆಸ್ ಮುಖಂಡರು ಹಾರ್ದೀಕ್ ಪಟೇಲ್ ಗೆ ಜೈ ಎಂದರು.
ಹಾರ್ದೀಕ್ ಪಟೇಲ್ ನ ನಸೀಬು ತುಂಬಾ ಚೆನ್ನಾಗಿತ್ತೋ ಅಥವಾ ಅವನು ನಿರೀಕ್ಷೆ ಮಾಡಿದರ ದುಪ್ಪಟ್ಟು ಯಶಸ್ಸು ಅವನಿಗೆ ಸಿಕ್ಕಿತೋ ಗೊತ್ತಿಲ್ಲ. ಆತನನ್ನು ಭೇಟಿಯಾಗಲು ಪ್ರವೀಣ್ ಬಾಯ್ ತೊಗಾಡಿಯಾ ಸಮ್ಮತಿಸಿದರು. ಅವರ ಪಕ್ಕದಲ್ಲಿ ಕೂತು ಹಾರ್ದೀಕ್ ಪಟೇಲ್ ಫೋಟೋ ತೆಗೆದ. ಅದನ್ನು ಹಿಡಿದು ತೊಗಾಡಿಯಾ ಪರಿಸ್ಥಿತಿ ನೋಡಿ ಎಂದು ಪರೋಕ್ಷವಾಗಿ ವ್ಯಂಗ್ಯ ಮಾಡಿದ. ಈಗ ಸಂಘಟನೆಯ ಯುವಕರು ಕೇಳುತ್ತಿರುವುದು ಒಂದೇ ಪ್ರಶ್ನೆ, ಇದೆಲ್ಲಾ ತೊಗಾಡಿಯಾ ಅವರಿಗೆ ಬೇಕಿತ್ತಾ? ತೊಗಾಡಿಯಾ ಅವರಿಗೂ ಮೋದಿಯವರಿಗೂ ಒಳಗಿಂದೊಳಗೆ ಸರಿಯಿಲ್ಲ ಎನ್ನುವುದು ಸಂಘಿಗಳಿಗೆ ಗೊತ್ತಿದೆ. ಆದರೆ ಇದು ಯಾಕೋ ಹಲವರಲ್ಲಿ ಅನುಮಾನ ಹುಟ್ಟಿಸಿದೆ. ತೊಗಾಡಿಯಾ ಅವರನ್ನು ಎದುರಿಗೆ ಇಟ್ಟು ಹಾರ್ದೀಕ್ ಪಟೇಲ್ ಆಡುತ್ತಿರುವ ಡ್ರಾಮ ಹಲವರನ್ನು ಗೊಂದಲಕ್ಕೆ ದೂಡಿದೆ. ಹಾರ್ದೀಕ್ ಪಟೇಲ್ ಎಂತಹ ಜನ ಎಂದು ಗೊತ್ತಿದ್ದು ಆತನೊಂದಿಗೆ ಭೇಟಿಗೆ ಒಪ್ಪಿದ ತೊಗಾಡಿಯಾ ಅವರ ಮೇಲೆ ಅದೇ ಪ್ರೀತಿ, ವಿಶ್ವಾಸ ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಉಳಿದಿರುವುದು ಡೌಟು.
Leave A Reply