ಅಲ್ಪಸಂಖ್ಯಾತ ಮುಗ್ಧರನ್ನು ನೆನೆದು ವಿಲವಿಲನೆ ಒದ್ದಾಡುತ್ತಿರುವ ಸಿದ್ಧರಾಮಯ್ಯ!
ಭಾರತೀಯ ಜನತಾ ಪಾರ್ಟಿಯವರು ಸಂವಿಧಾನವನ್ನು ಬದಲಾಯಿಸುತ್ತಾರೆ, ಅವರು ಸಂವಿಧಾನಕ್ಕೆ ಮರ್ಯಾದೆ ಕೊಡುವುದಿಲ್ಲ, ಅವರು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಗೌರವ ಕೊಡುವುದಿಲ್ಲ ಎಂದು ಸಿಕ್ಕಿದ, ಸಿಕ್ಕದ ಎಲ್ಲಾ ವೇದಿಕೆಗಳಲ್ಲಿ ಕಾಂಗ್ರೆಸ್ಸಿಗರು ಹೇಳುತ್ತಾ ಬಂದ್ರು. ಆ ಮೂಲಕ ಜನರ ಮನಸ್ಸಿನಲ್ಲಿ ಅದರಲ್ಲಿಯೂ ಮುಖ್ಯವಾಗಿ ಹಿಂದುಳಿದ ಜಾತಿಯವರ ಮನಸ್ಸಿನಲ್ಲಿ ಬಿಜೆಪಿ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಲು ಪ್ರಯತ್ನಪಟ್ಟರು. ಆದರೆ ಸರಿಯಾಗಿ ನೋಡಿದ್ರೆ ಯಾರಿಗೂ ಗೊತ್ತಾಗದ ರೀತಿಯಲ್ಲಿ ಸಂವಿಧಾನವನ್ನು ಬದಲಾಯಿಸಲು ಹೊರಟಿರುವುದು ನಮ್ಮ ರಾಜ್ಯದ ಕಾಂಗ್ರೆಸ್. ಅಂಬೇಡ್ಕರ್ ಅವರು ಈಗಲೂ ಇದ್ದಿದ್ರೆ ಎಷ್ಟು ನೊಂದುಕೊಳ್ಳುತ್ತಿದ್ದರೋ, ಏನೋ?
ಪೊಲೀಸರ ನೈತಿಕತೆ ಕುಸಿಯಲು ಸಿದ್ಧರಾಮಯ್ಯ ಕಾರಣ..
ನಿನ್ನೆ ಸಿದ್ಧರಾಮಯ್ಯನವರ ರಾಜ್ಯ ಸರಕಾರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಮತ್ತು ಪೊಲೀಸ್ ಕಮೀಷನರ್ ಗಳಿಗೆ ಕಳುಹಿಸಿರುವ ಸುತ್ತೋಲೆ ಸ್ಪಷ್ಟವಾಗಿ “ಸಂವಿಧಾನವನ್ನು ಬದಲಾಯಿಸಲು ನಾವು ಸಿದ್ಧರಾಗಿದ್ದೇವೆ, ನೀವು ಸಹಕಾರ ಕೊಟ್ಟರೆ ಸರಿ, ಇಲ್ಲದಿದ್ದರೆ ಏನು ಮಾಡಬೇಕು ಎಂದು ನಮಗೆ ಗೊತ್ತಿದೆ” ಎಂದು ಹೇಳಿದಂತಿದೆ. ಅದು ಹೇಗೆ? ಪ್ರತಿಯೊಂದು ರಾಜ್ಯದಲ್ಲಿ ಗೃಹ ಇಲಾಖೆ ಎನ್ನುವುದು ಒಂದಿರುತ್ತದೆ. ಯಾವುದೇ ಕಾನೂನುಬಾಹಿರ ಚಟುವಟಿಕೆ, ಕೋಮು ಗಲಭೆ ಆದ ಕೂಡಲೇ ಪೊಲೀಸರು ಅದರಲ್ಲಿ ಭಾಗಿಯಾಗಿರುವ ಒಂದಿಷ್ಟು ಜನರನ್ನು ಬಂಧಿಸುತ್ತಾರೆ. ಅವರು ಯಾವುದೋ ಎಕ್ಸ್, ವೈ, ಝಡ್ ಗಳನ್ನು ಬಂಧಿಸುವುದಿಲ್ಲ. ಅವರು ಬಂಧಿಸುವ ಮೊದಲು ತಮ್ಮದೇ ಮಟ್ಟದಲ್ಲಿ ಒಂದು ಆಂತರಿಕ ಪೂರ್ವ ತನಿಖೆ ನಡೆಸಿ ನಂತರ ಅಂತವರನ್ನು ಬಂಧಿಸುತ್ತಾರೆ. ಅದು 99% ಸರಿಯಾಗಿರುತ್ತದೆ. ಕೊಲೆ ಪ್ರಕರಣಗಳಾದರೆ ಅದು ಬೇರೆ ವಿಷಯ, ಅಲ್ಲಿ ಕೆಲವು ಬಾರಿ ಯಾರ್ಯಾರೋ ಸರೆಂಡರ್ ಆಗುತ್ತಾರೆ, ಅಂತಹ ಪ್ರಕರಣಗಳು ಇರಬಹುದು. ಆದರೆ ಕೋಮುಗಲಭೆ, ಅಹಿತಕರ ಘಟನೆಗಳ ವಿಷಯದಲ್ಲಿ ಪೊಲೀಸರು ಮುಗ್ಧರನ್ನು ಬಂಧಿಸುತ್ತಾರೆ ಎಂದಾದರೆ ಒಂದೋ ಗೃಹ ಇಲಾಖೆ ತನ್ನ ಪೊಲೀಸ್ ಅಧಿಕಾರಿಗಳ ಮೇಲೆನೆ ನಂಬಿಕೆ ಕಳೆದುಕೊಂಡಿದೆ ಅಥವಾ ಪೊಲೀಸ್ ಅಧಿಕಾರಿಗಳು ಶ್ರಮ ವಹಿಸಿ ಹಿಡಿದ ಆರೋಪಿಗಳನ್ನು ಬಿಡಿಸುವ ಮೂಲಕ ಪೊಲೀಸ್ ಇಲಾಖೆಯ ನೈತಿಕತೆಯನ್ನೇ ಕುಸಿಯುವ ಹಾಗೆ ಮಾಡುತ್ತಿದೆ. ಅಷ್ಟಕ್ಕೂ ಅಂಬೇಡ್ಕರ್ ನೇತೃತ್ವದಲ್ಲಿ ಆವತ್ತಿನ ಪ್ರಾಜ್ಞರು ಬರೆದಿರುವ ಸಂವಿಧಾನದಲ್ಲಿ ಏನಿದೆ ಎಂದರೆ ಒಬ್ಬ ಆರೋಪಿಯನ್ನು ಬಂಧಿಸಿದರೆ ಆತನ ಮೇಲಿರುವ ಆರೋಪ ಸಾಬೀತಾಗುವ ತನಕ ಆತ ಆರೋಪಿಯೇ ಆಗಿರುತ್ತಾನೆ. ಅವನು ಅಪರಾಧಿ ಆಗಬೇಕಾದರೆ ಆತನ ಮೇಲಿರುವ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಬೇಕು. ಒಂದು ವೇಳೆ ಕೇಸ್ ಬಿದ್ದು ಹೋದರೆ ಆತ ನಿರಪರಾಧಿ. ಆದ್ದರಿಂದ ಅದನ್ನು ಸಾಬೀತುಪಡಿಸುವುದು ಪೊಲೀಸ್ ಇಲಾಖೆಯ ಕರ್ತವ್ಯ. ಪ್ರತಿಯೊಬ್ಬ ಪೊಲೀಸ್ ಅಧಿಕಾರಿಯೂ ಒಬ್ಬ ವ್ಯಕ್ತಿಯನ್ನು ಒಂದು ಪ್ರಕರಣದಲ್ಲಿ ಬಂಧಿಸುವಾಗ ಆ ಪ್ರಕರಣ ದಡ ಸೇರಲಿ ಎಂದೇ ಬಯಸುತ್ತಾನೆ. ಅದು ಅವನ ಕರ್ತವ್ಯ ನಿಷ್ಟೆ. ಯಾವ ಪೊಲೀಸ್ ಅಧಿಕಾರಿ ಮತ್ತು ಅವರ ಕೈಕೆಳಗಿನ ಸಿಬ್ಬಂದಿಗಳು ಕೆಲಸ ಇಲ್ಲ ಎಂದು ಯಾರನ್ನೂ ಕೂಡ ಬಂಧಿಸುವುದಿಲ್ಲ. ಒಂದು ಪ್ರಕರಣ ದಡ ಸೇರದಿದ್ದರೆ ಅಂರೆ ಆರೋಪಿಗೆ ಶಿಕ್ಷೆ ಆಗದೇ ಕೇಸ್ ಬಿದ್ದು ಹೋದರೆ ಹೆಚ್ಚು ನೊಂದುಕೊಳ್ಳುವುದು ಆ ಪ್ರಕರಣದ ತನಿಖೆ ನಡೆಸುವ ಅಧಿಕಾರಿ. ಆದರೆ ಇಲ್ಲಿ ರಾಜ್ಯ ಸರಕಾರ ಏನು ಮಾಡಲು ಹೊರಟಿದೆ ಎಂದರೆ ” ಪೊಲೀಸ್ ಅಧಿಕಾರಿಗಳೇ, ನೀವು ಕೋಮುಗಲಭೆಯಲ್ಲಿ ಬಂಧಿಸಿರುವ ಹಿಂದೂಗಳು ನಿಜವಾದ ತಪ್ಪನ್ನೇ ಮಾಡಿದ್ದಾರೆ, ಆದರೆ ನೀವು ಕೇಸ್ ಹಾಕಿರುವ ಅಲ್ಪಸಂಖ್ಯಾತರು ಮಾತ್ರ ಬರಿ ಮುಗ್ಧರು”
“ಮುಗ್ಧ” ಸರ್ಟಿಫಿಕೇಟ್ ಮಾರಾಟಕ್ಕಿದೆ…
ಪ್ರತಿಯೊಂದು ಅಹಿತಕರ ಘಟನೆ ಅಥವಾ ಕೋಮು ಸಂಘರ್ಷ ಆದರೆ ಪೊಲೀಸರು ಬಂಧಿಸುವ ಪ್ರತಿಯೊಬ್ಬ ವ್ಯಕ್ತಿಯ ಮನೆಯವರು ಹೇಳುವುದು ಒಂದೇ ಮಾತು. ನನ್ನ ಮಗ ಮುಗ್ಧ, ನನ್ನ ಗಂಡ ಅಮಾಯಕ, ನನ್ನ ತಂದೆ ಪ್ರಾಮಾಣಿಕ, ನನ್ನ ಅಣ್ಣ ಯಾವುದರಲ್ಲಿಯೂ ಇಲ್ಲ ಹೀಗೆನೆ ಹೇಳುವುದು. ಇಲ್ಲಿಯ ತನಕ ಎಷ್ಟೋ ಅಲ್ಪಸಂಖ್ಯಾತ “ಮುಗ್ಧರ” ಕುಟುಂಬದವರು ತಮ್ಮ ಮನೆ ಬಾಗಿಲಿಗೆ ಬಂದಾಗ ನಮ್ಮ ಕಾಂಗ್ರೆಸ್ ಪಕ್ಷದ ಶಾಸಕರು ಎಷ್ಟು ಆಗುತ್ತೋ ಅಷ್ಟು ಶಕ್ತಿ ಮೀರಿ ಮುಗ್ಧರನ್ನು ಹೊರಗೆ ತರಲು ಪೊಲೀಸರ ಮೇಲೆ ಒತ್ತಡ ಹಾಕಿದ್ದಾರೆ. ಈಗ ಕೊನೆಯ ಅಸ್ತ್ರವಾಗಿ ಚುನಾವಣೆಯ ಮೊದಲು ಯಾವ “ಮುಗ್ಧ” ಕೂಡ ಉಳಿಯಬಾರದು ಎಂದು ಅವರು ತೀರ್ಮಾನಿಸಿದ್ದಾರೆ.
ಇದು ಇನ್ನೊಂದು ಅಕ್ರಮಕ್ಕೆ ಕಾರಣವಾಗಲಿದೆ. ಪೊಲೀಸ್ ಇಲಾಖೆಯಲ್ಲಿ ಎಲ್ಲರೂ ಪ್ರಾಮಾಣಿಕರು ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ “ಮುಗ್ಧ” ಅಲ್ಪಸಂಖ್ಯಾತರ ಮನೆ ಅಥವಾ ಸಮುದಾಯದವರಿಂದ ಹಣ ಪಡೆದುಕೊಂಡು ನಿಜಕ್ಕೂ ಅಪರಾಧ ಎಸಗಿದವರನ್ನು ಕೂಡ ಕೇಸಿನಿಂದ ಬಿಡುಗಡೆಗೊಳಿಸುವ ಚಾನ್ಸಿದೆ. ಇದರಿಂದ ಎಲ್ಲಾ ಮುಗ್ಧರು ಹೊರಗೆ ಬಂದು ಮತ್ತೆ ಗಲಾಟೆ ಮಾಡಲು ಶಕ್ತಿ ಪಡೆದುಕೊಳ್ಳಬಹುದು. ಸಿದ್ಧರಾಮಯ್ಯನವರ ಹೊಸ ಸುತ್ತೋಲೆ ಹಲವರಿಗೆ ಸಂಭ್ರಮ ತರುವುದರಲ್ಲಿ ಸಂಶಯವಿಲ್ಲ. ಇದು ಕೆಲವು ಭ್ರಷ್ಟ ಪೊಲೀಸ್ ಅಧಿಕಾರಿಗಳಿಗೆ ಹಣ ಮಾಡುವ ದಂಧೆಯೂ ಆಗಬಹುದು. ಕಾಂಗ್ರೆಸ್ ನಾಯಕರಿಗೆ ವೋಟ್ ಬ್ಯಾಂಕ್ ಭದ್ರ ಪಡಿಸಲು ಸಿದ್ಧರಾಮಯ್ಯ ನೀಡಿರುವ ಅವಕಾಶವೂ ಆಗಿರಬಹುದು. ಕೇಸ್ ನಿಂದ ಫ್ರೀಯಾಗಿ ಹೊಸ ಅಪರಾಧ ಮಾಡಲು ಮುಗ್ಧರಿಗೆ ಚಾನ್ಸ್ ಕೊಡುವುದು ಆಗಿರಬಹುದು. ಒಟ್ಟಿನಲ್ಲಿ ಬಿಡುಗಡೆ ಭಾಗ್ಯದ ಮೂಲಕ ಸಿದ್ಧರಾಮಯ್ಯ ಹೊಸದಾಳ ಉರುಳಿಸಲು ತಯಾರಾಗಿದ್ದಾರೆ.
ಕೊನೆಗೆ ಒಂದು ಪ್ರಶ್ನೆ ಹಾಗೆ ಉಳಿಯಲಿದೆ. ಒಬ್ಬ ಆರೋಪಿಯನ್ನು ಮುಗ್ಧ ಎಂದು ನಿರ್ಧರಿಸುವುದು ಯಾರು? ಆಯಾ ಠಾಣೆಯ ಪೊಲೀಸ್ ಸಬ್ ಇನ್ಸಪೆಕ್ಟರೋ, ಆ ವ್ಯಾಪ್ತಿಯ ಶಾಸಕರೋ, ಗೃಹ ಸಚಿವ ರಾಮಲಿಂಗಾರೆಡ್ಡಿಯವರೋ ಅಥವಾ ಸಿದ್ಧರಾಮಯ್ಯನವರೋ!
Leave A Reply