ಪ್ರಾಮಾಣಿಕ ಅಧಿಕಾರಿಗಳೇ ಸದ್ಯ ಮಂಗಳೂರಿಗೆ ಬರಬೇಡಿ!!

ನೀವು ಮಂಗಳೂರಿನಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಯಾವುದೇ ಸರಕಾರಿ ಅಧಿಕಾರಿಯ ದಾಖಲೆ ತೆಗೆಯಿರಿ ಅಥವಾ ಅವರನ್ನು ಮುಖತ: ಭೇಟಿಯಾಗಿ ಕೇಳಿನೋಡಿ. ಅವರಿಗೆ ಇಲ್ಲಿ ಎಷ್ಟು ದಿನ ಕೆಲಸ ಮಾಡಲು ನಮ್ಮ ರಾಜಕಾರಣಿಗಳು ಬಿಟ್ಟಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಇಲ್ಲಿಂದ ಅಚಾನಕ್ ಆಗಿ ವರ್ಗಾವಣೆಗೊಂಡು ಬೇರೆ ಕಡೆ ಹೋಗಿರುವ ಕೆಲವು ನಿಷ್ಟಾವಂತ ಅಧಿಕಾರಿಗಳೊಡನೆ ನಾನು ಇವತ್ತಿಗೂ ಮಾತನಾಡುತ್ತೇನೆ. ಅವರಿಗೆ ಮಂಗಳೂರಿನ ಮೇಲೆ ತುಂಬಾ ಕಾಳಜಿ ಇವತ್ತಿಗೂ ಇದೆ. ಹಾಗೆ ಅವರಿಗೆ ಕೆಲಸ ಮಾಡಲು ಬಿಡಲಿಲ್ಲ ಎನ್ನುವ ಬೇಸರವೂ ಇದೆ.
ನಮ್ಮಲ್ಲಿ ಟ್ರಾನ್ಸಫರ್ ಮಾಡುವ ಕ್ರಮ ಹೇಗಿದೆ ಎಂದರೆ ಅಧಿಕಾರಿ ಸ್ಟಿಕ್ಟ್ ಇದ್ದರೆ ಒಂದು ವರ್ಷ, ತುಂಬಾ ಸ್ಟಿಕ್ಟ್ ಇದ್ದರೆ ಎಂಟು ತಿಂಗಳು, ತುಂಬಾ ತುಂಬಾ ಸ್ಟಿಕ್ಟ್ ಇದ್ದರೆ ಅರು ತಿಂಗಳು ಹೀಗೆ ಸಾಗುತ್ತದೆ. ಇನ್ನು ಕೆಲವು ಪ್ರಾಮಾಣಿಕರಲ್ಲಿ ಪ್ರಾಮಾಣಿಕರು ಬಂದು ಬಿಟ್ಟರೆ ಅವರನ್ನು ಮೂರು ತಿಂಗಳೊಳಗೆ ಹೇಗೆ ಓಡಿಸುವುದು ಎನ್ನುವುದರ ಬಗ್ಗೆನೆ ಇಲ್ಲಿ ಚರ್ಚೆಯಾಗುತ್ತದೆ. ಬೇರೆ ಜಿಲ್ಲೆಯವರು ಕೇಳಿದ್ರೆ ನಿಮ್ಮದು ಬುದ್ಧಿವಂತರ ಜಿಲ್ಲೆ ಅಲ್ವಾ ಎನ್ನುತ್ತಾರೆ. ನಮ್ಮೆಲ್ಲರ ಬುದ್ಧಿವಂತಿಕೆಯನ್ನು ನಮ್ಮ ಜನಪ್ರತಿನಿಧಿಗಳಿಗೆ ಧಾರೆ ಎರೆದಿದ್ದೇವೆ. ಹಾಗೆ ತಮಗೆ ತೊಂದರೆಯಾಗುವ ಅಧಿಕಾರಿಗಳನ್ನು ಇಲ್ಲಿಂದ ಓಡಿಸಲು ಆ ರಾಜಕಾರಣಿಗಳು ತಮ್ಮ ಚಾಣಾಕ್ಷತನವನ್ನು ಪ್ರದರ್ಶಿಸುವಾಗ ನಾವು ಮೌನವಾಗಿರುತ್ತೇವೆ. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸುಧೀರ್ ಕುಮಾರ್ ರೆಡ್ಡಿಯವರು ಅಚಾನಕ್ ಆಗಿ ಇಲ್ಲಿಂದ ವರ್ಗಾವಣೆ ಮಾಡಿದಾಗ ಸಾಮಾಜಿಕ ತಾಣಗಳಲ್ಲಿ ಈ ಬಾರಿ ಒಂದಿಷ್ಟು ಕೂಗು ವಿವಿಧ ಕಡೆಗಳಿಂದ ಕೇಳಿ ಬಂದರೂ ನಮ್ಮ ಸಚಿವರು, ಶಾಸಕರು ಅದಕ್ಕೆ ಕ್ಯಾರೇ ಹೇಳಲಿಲ್ಲ. ಒಬ್ಬ ಖಡಕ್ ಎಸ್ಪಿಯವರನ್ನು ನಮ್ಮ ಜಿಲ್ಲೆಯಲ್ಲಿ ಕನಿಷ್ಟ ಎರಡು ವರ್ಷ ಉಳಿಸುವ ಯಾವ ನಾಗರಿಕನ ಪ್ರಯತ್ನವೂ ಈಡೇರಲಿಲ್ಲ. ಸುಧೀರ್ ಕುಮಾರ್ ರೆಡ್ಡಿ ಅಕ್ರಮ ಮರಳು ಮಾಫಿಯಾದ ವಿರುದ್ಧ ಇದ್ದದ್ದೇ ಅವರ ತಕ್ಷಣದ ವರ್ಗಾವಣೆಗೆ ಕಾರಣ ಎಂದೇ ಹೇಳಲಾಗುತ್ತದೆ. ಅವರೇನೋ ಇಲ್ಲಿಂದ ಎದ್ದು ಬೇರೆ ಜಿಲ್ಲೆಗೆ ಹೋದರು. ಹೊಸ ಎಸ್ಪಿ ಬಂದು ಅಧಿಕಾರ ಸ್ವೀಕರಿಸಿದರು. ಈಗಿನ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರವಿಕಾಂತೇ ಗೌಡ ಅವರು ಹೆಚ್ಚು ಸ್ಟಿಕ್ಟ್ ಆದರೆ ಅವರನ್ನು ಕೂಡ ಕೆಲವು ದಿನಗಳ ಬಳಿಕ ಬಲಾತ್ಕಾರವಾಗಿ ಇಲ್ಲಿಂದ ಕಳುಹಿಸುವ ವ್ಯವಸ್ಥೆಗೆ ನಮ್ಮ ರಾಜಕಾರಣಿಗಳು ಒಂದಿಷ್ಟು ನಾಚಿಕೆ ಇಲ್ಲದೆ ಮುಂದಾಗುತ್ತಾರೆ. ಇದು ಬುದ್ಧಿವಂತರ ನಾಡಿನಲ್ಲಿ ಅನಾದಿ ಕಾಲದಿಂದಲೂ ನಡೆದು ಬಂದಂತಹ ಪರಿಸ್ಥಿತಿ. ಒಬ್ಬ ಅಧಿಕಾರಿ ನಮ್ಮ ಜಿಲ್ಲೆಯಲ್ಲಿಯೇ ದಶಕಗಳ ತನಕ ಇದ್ದರು ಎಂದಾದರೆ ಅವರು ಎಂತವರು ಎನ್ನುವ ಅಂದಾಜು ನಿಮಗೆ ಆಗಬಹುದು. ಅಂತಹ ಅಧಿಕಾರಿ ಯಾರು ಎಂದು ಹೇಳಿ ನಾನು ವಿಷಯಾಂತರ ಮಾಡುವುದಕ್ಕೆ ಹೋಗಲ್ಲ. ನಿಮಗೆ ಅದು ಗೊತ್ತಿದೆ ಎಂದು ನನ್ನ ಅನಿಸಿಕೆ.
ಅಧಿಕಾರಿಗಳು ಕೆಎಟಿ ಮೊರೆ ಹೋಗದ್ದೇ ಭ್ರಷ್ಟರಿಗೆ ವರದಾನ…
ಸಾಮಾನ್ಯವಾಗಿ ಹೀಗೆ ಒಬ್ಬ ಅಧಿಕಾರಿ ತನ್ನ ಕರ್ತವ್ಯನಿಷ್ಟೆಯ ಕಾರಣದಿಂದ ಮತ್ತು ಭ್ರಷ್ಟ ರಾಜಕಾರಣಿಗಳಿಗೆ ಬೇಕಾದ ಹಾಗೆ ನಡೆದುಕೊಳ್ಳಲಿಲ್ಲ ಎಂದಾದಾಗ ರಾಜಕಾರಣಿಗಳು ಬಳಸುವ ಬ್ರಹ್ಮಾಸ್ತ್ರವೇ ವರ್ಗಾವಣೆ. ಹಾಗಂತ ಯಾವುದೇ ಅಧಿಕಾರಿ ಒಂದು ಪೋಸ್ಟಿನಲ್ಲಿ ಗರಿಷ್ಟ ಎರಡು ವರ್ಷ ಇರುವ ಅವಕಾಶ ಇದೆ. ಒಂದು ವೇಳೆ ಆತ ತನ್ನ ಎರಡು ವರ್ಷಗಳ ಮೊದಲೇ ಅವಧಿಪೂರ್ಣ ವರ್ಗಾವಣೆಗೆ ಗುರಿಯಾದರೆ ಮತ್ತು ಆ ಅಧಿಕಾರಿಗೆ ಅದರಿಂದ ಅಸಮಾಧಾನವಾದರೆ ಆ ಅಧಿಕಾರಿ ಕರ್ನಾಟಕ ಆಡಳಿತ ಟ್ರಿಬ್ಯುನಲ್ (ಕೆಎಟಿ) ಗೆ ದೂರು ನೀಡಬಹುದು. ಆ ಸಂಸ್ಥೆ ಆ ಬಗ್ಗೆ ವಿಚಾರಣೆ ನಡೆಸಿ ಅಧಿಕಾರಿಯನ್ನು ವರ್ಗಾವಣೆ ಮಾಡುವುದಕ್ಕೆ ತಡೆಯಾಜ್ಞೆ ನೀಡುವ ಅಧಿಕಾರಿಯನ್ನು ಹೊಂದಿದೆ. ಈ ಅವಕಾಶ ಪ್ರತಿಯೊಬ್ಬ ಅಧಿಕಾರಿಗೂ ಇದೆ. ತಾವು ಸರಿ ಇದ್ದೇವೆ, ಈ ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ತಾವು ಕುಣಿಯುವುದಿಲ್ಲ, ತಮ್ಮನ್ನು ಈ ಜನಪ್ರತಿನಿಧಿಗಳು ಅವರಿಗೆ ಬೇಕಾದ ಹಾಗೆ ಬಗ್ಗಿಸಲು ಸಾಧ್ಯವಿಲ್ಲ ಎಂದು ತೊಡೆ ತಟ್ಟುವ ಅಧಿಕಾರಿಗಳು ಕೆಎಟಿ ಮೊರೆ ಹೋಗುತ್ತಾರೆ. ಆದರೆ ಹೆಚ್ಚಿನ ಸಂದರ್ಭದಲ್ಲಿ ಅಧಿಕಾರಿಗಳು ಕೆಎಟಿ ಉಸಾಬರಿಗೆ ಹೋಗುವುದಿಲ್ಲ. ತಮಗೆ ಎಲ್ಲಿಯಾದರೆ ಏನು? ಕೆಲಸ ಮಾಡುವವರಿಗೆ ಮಂಗಳೂರು ಒಂದೇ, ರಾಯಚೂರು ಒಂದೇ, ಬೆಳಗಾಂ ಕೂಡ ಒಂದೇ ಎಂದು ಅಂದುಕೊಳ್ಳವ ಆಫೀಸರ್ಸ್ ವರ್ಗಾವಣೆಯ ಆದೇಶ ಬಂದ ತಕ್ಷಣ ಸೀದಾ ತಮ್ಮ ಸೂಟ್ ಕೇಸ್ ರೆಡಿ ಮಾಡಿ ಕೆಳಗಿನ ಅಧಿಕಾರಿಗೆ ಅಧಿಕಾರ ಹಸ್ತಾಂತರಿಸಿ ಹೊರಟು ಹೋಗುತ್ತಾರೆ. ಇದು ಎಲ್ಲಾ ರಾಜಕಾರಣಿಗಳಿಗೆ ಗೊತ್ತಿದೆ. ಅದು ಅವರಿಗೆ ವರದಾನವೂ ಹೌದು. ಆದ್ದರಿಂದ ಪ್ರತಿ ಬಾರಿ ತಮ್ಮ ಕೆಲಸ ಮಾಡಿ ಎಂದು ಒತ್ತಡ ಹಾಕುವುದು, ಮಾಡಿಲ್ಲ ಎಂದರೆ ಕರೆದು ಜೋರು ಮಾಡುವುದು, ಎತ್ತಂಗಡಿ ಮಾಡುತ್ತೇನೆ ಎಂದು ಎಚ್ಚರಿಕೆ ಮಾಡುವುದು, ನಂತರವೂ ಕೇಳಿಲ್ಲ ಎಂದರೆ ತಮ್ಮ ಜಿಲ್ಲೆಯಿಂದ ಓಡಿಸಲು ತಮ್ಮ ತನು, ಮನ, ಧನವನ್ನು ಸುರಿದು ವರ್ಗಾವಣೆ ಮಾಡಿಸಿ ಕುಹಕ ನಗೆ ಬೀರುವುದು. ಇದು ಪ್ರತಿಯೊಬ್ಬ ಪ್ರಾಮಾಣಿಕ ಮಂಗಳೂರಿನಲ್ಲಿ ಸೇವೆ ಸಲ್ಲಿಸಲು ಇಚ್ಚೆಯಿಂದಲೇ ಬಂದ ಅಧಿಕಾರಿಗಳ ಜೀವನದಲ್ಲಿಯೂ ನಡೆದಿದೆ.
ಭ್ರಷ್ಟರಿಗೆ ಸಡ್ಡು ಹೊಡೆದ ಅಧಿಕಾರಿ…..
ಆದರೆ ಅಪರೂಪಕ್ಕೊಮ್ಮೆ ಈ ಬಾರಿ ತುಂಬಾ ಸಮಯದ ನಂತರ ಒಬ್ಬ ಅಧಿಕಾರಿ ನಮ್ಮ ಎತ್ತಂಗಡಿ ರಾಜಕಾರಣದ ವ್ಯವಸ್ಥೆಗೆ ಸಡ್ಡು ಹೊಡೆದು ನಿಂತಿದ್ದಾರೆ. ಕೆಎಟಿ ಮೊರೆ ಹೋಗಿ ತಮ್ಮ ವರ್ಗಾವಣೆಯನ್ನು ನಿಲ್ಲಿಸಿದ್ದಾರೆ. ಭ್ರಷ್ಟ ರಾಜಕಾರಣದ ವಿರುದ್ಧ ಅಧಿಕಾರಿಯೊಬ್ಬರ ವಾಸ್ತವ ಶಕ್ತಿಯನ್ನು ತೋರಿಸಿದ್ದಾರೆ. ಅವರ ಹೆಸರು ಶ್ರೀಕಾಂತ್ ರಾವ್. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಕಮೀಷನರ್. ಮೂಡಾ ಎಂದು ಶಾರ್ಟ್ ಫಾರಂ ನಲ್ಲಿ ಕರೆಸಿಕೊಳ್ಳುವ ಸಂಸ್ಥೆಯಲ್ಲಿ ಕಮೀಷನರ್ ಆಗಿ ಅವರು ಬಂದು ಒಂದು ವರ್ಷ ಆಗಿದೆಯಷ್ಟೆ. ಅಷ್ಟು ಬೇಗ ಇಲ್ಲಿಂದ ಹೋಗಿ ಎನ್ನುವ ಸೂಚನೆ ಬಂತು. ಅವರೇನೂ ಮಾಡಿದ್ರು? ಅವರನ್ನು ವರ್ಗಾವಣೆ ಮಾಡಲು ಅವಸರ ನಮ್ಮ ಮಂಗಳೂರಿನ ಜನಪ್ರತಿನಿಧಿಗಳಿಗೆ ಯಾಕೆ? ಯಾವ ಕೆಲಸ ಮಾಡಿಕೊಡಲಿಲ್ಲ ಎಂದು ಅವರ ಮೇಲೆ ಕೋಪ? ಇದೆಲ್ಲವನ್ನು ನಿಮಗೆ ನಾಳೆ ಹೇಳುತ್ತೇನೆ. ಇವತ್ತು ಚಂದ್ರಗ್ರಹಣ. ಅದು ರಾತ್ರಿ ಬಿಡುತ್ತದೆ. ಆದರೆ ನಮ್ಮ ಊರಿನ ಜನಪ್ರತಿನಿಧಿಗಳಿಗೆ ಹಿಡಿದಿರುವ ಗ್ರಹಣ ಬಿಡಬೇಕಾದರೆ ಇನ್ನೊಂದಿಷ್ಟು ದಿನ ಕಾಯಬೇಕು!
Leave A Reply