ಗಂಡ ಹುತಾತ್ಮನಾದ ಎಂದು ಸೈನ್ಯವನ್ನು ಶಪಿಸದ ಆ ದಿಟ್ಟ ಮಹಿಳೆಯೂ ಸೇನೆಯ ಭಾಗವಾಗುತ್ತಾಳೆಂದರೆ…
ದೆಹಲಿ: ಅದು ಯಾವುದೇ ಯುದ್ಧವಿರಲಿ, ಉಗ್ರರ ದಾಳಿಯಿರಲಿ ಸೈನಿಕನೊಬ್ಬ ಹುತಾತ್ಮನಾದರೆ ಇಡೀ ದೇಶವ ಆತನಿಗೆ ಗೌರವ ನೀಡುತ್ತದೆ. ಸತ್ತರೆ ಹೀಗೆ ಸಾಯಬೇಕು ಎನ್ನುತ್ತೇವೆ. ದೇಶಕ್ಕಾಗಿ ಸಾಯೋದು ಸಹ ಪುಣ್ಯ ಎನ್ನುತ್ತೇವೆ. ಆದರೆ ಆತನ ಕುಟುಂಬಸ್ಥರು ಮಾತ್ರ ದುಃಖದ ಮಡುವಿನಲ್ಲಿ ಮುಳುಗಿರುತ್ತಾರೆ. ಸೈನ್ಯ ಸೇರದಿದ್ದರೆ ನನ್ನ ಮಗ, ಗಂಡ ಉಳಿಯುತ್ತಿದ್ದನಲ್ಲ ಎಂದು ಒಮ್ಮೆಯಾದರೂ ಯೋಚಿಸುತ್ತಾರೆ.
ಹೀಗೆ ಯೋಚಿಸುವವರ ಮಧ್ಯೆಯೂ ಡೆಹ್ರಾಡೂನ್ ನ ಸಂಗೀತಾ ಎಂಬ ದಿಟ್ಟ ಮಹಿಳೆ ಸೈನ್ಯ ಸೇರಿ ಗಂಡ ಸತ್ತರೂ, ಸೈನ್ಯದ ಬಗ್ಗೆ ಒಂದು ಚೂರು ಸಹ ಅಸಮಾಧಾನವಿರದೆ, ಈಗ ಸೈನ್ಯದ ಒಂದು ಭಾಗವಾಗಿ ಕಾರ್ಯನಿರ್ವಹಿಸಲು ಅಣಿಯಾಗಿದ್ದಾರೆ.
ಹೌದು, 2015ರ ಸೆಪ್ಟೆಂಬರ್ 2ರಂದು ಸಂಗೀತಾ ಗಂಡ ಶಿಶಿರ್ ಮಲ್ ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಹುತಾತ್ಮನಾಗಿದ್ದ. ಸಾಯುವ ಮುನ್ನ ಒಬ್ಬ ಯೋಧನನ್ನು ಕೊಂದು, ಮತ್ತೊಬ್ಬನನ್ನು ಗಾಯಗೊಳಿಸಿದ್ದ. ಆತನ ಶೂರತನ ನೆನೆಯಬೇಕು, ಪತಿಯೇ ಸತ್ತನಲ್ಲ ಎಂದು ಕಣ್ಣೀರಿಡಬೇಕೋ ಎಂದು ತಿಳಿಯದಾದ ಸಂಗೀತಾ ಡಿಪ್ರೆಶನ್ ಗೆ ಒಳಗಾಗಿ ಹೋದರು.
ಆದರೆ, ಜೀವನದ ಬಂಡಿ ಸಾಗಬೇಕಲ್ಲ? ಅದಕ್ಕಾಗಿ ಪತಿ ತೀರಿದ ಬಳಿಕ ಸ್ಪರ್ಧಾತ್ಮಕ ಪರೀಕ್ಷೆಯೊಂದನ್ನು ಬರೆದು, ಉತ್ತೀರ್ಣರೂ ಆಗಿ ಬ್ಯಾಂಕೊಂದರಲ್ಲಿ ದುಡಿದು ಅತ್ತೆ, ಮಾವರನ್ನು ಸಾಕುತ್ತಿದ್ದರು.
ಆದರೆ, ಅದೊಂದು ದಿನ ಕಾರ್ಯಕ್ರಮವೊಂದರಲ್ಲಿ ಶಿಶಿರ್ ಮಲ್ ಅವರ ಗೆಳೆಯರು, “ನೀವ್ಯಾಕೆ ಸೈನ್ಯದ ಭಾಗವೇ ಆದ ಅಧಿಕಾರಿಗಳ ತರಬೇತಿ ಅಕಾಡೆಮಿಗೆ ಸೇರಬಾರದು” ಎಂದಿದ್ದಾರೆ.
ಮೊದಲೇ ಸೈನಿಕನ ಪತ್ನಿಯಾಗಿ ಸೈನ್ಯದ ಬಗ್ಗೆ ಅಪಾರ ಭಕ್ತಿ, ಗೌರವ ಹೊಂದಿದ್ದ ಸಂಗೀತಾ ಕೊನೆಗೂ ಶಾರ್ಟ್ ಸರ್ವೀಸ್ ಕಮಿಷನ್ (ಎಸ್ಎಸ್ಸಿ) ಪರೀಕ್ಷೆ ಬರೆದು ಈಗ ಅಕಾಡೆಮಿ ಸೇರುವ ಮೂಲಕ ಗಂಡನಿಗೆ ತಕ್ಕ ಪತ್ನಿ ಎನಿಸಿದ್ದಾರೆ. ಇಂತಹ ದಿಟ್ಟ ಮಹಿಳೆಗೆ ನಮ್ಮದೊಂದು ಸಲಾಂ ಇರಲಿ.
Leave A Reply