ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಉಳ್ಳಾಲ ನಗರಸಭೆ!
ವಿವಾದಿತ ಇಂದಿರಾ ಕ್ಯಾಂಟೀನ್ ತೊಕ್ಕೊಟ್ಟು ಬಸ್ಸು ನಿಲ್ದಾಣಕ್ಕೆ ಶಿಪ್ಟ್.
ಉಳ್ಳಾಲ: ತೊಕ್ಕೊಟ್ಟು ಹಳೇ ಚೆಕ್ ಪೋಸ್ಟ್ ನ ಕೊರಗಜ್ಜ ದೈವದ ಕಟ್ಟೆಯಿರುವ ಸರಕಾರಿ ಜಾಗದಲ್ಲಿ ಹಿಂದೂ ಸಂಘಟನೆಗಳ ವಿರೋಧದ ನಡುವೆಯೂ ನಿರ್ಮಿಸಲು ಅಂದಾಜಿಸಿದ್ದ ಇಂದಿರಾ ಕ್ಯಾಂಟೀನನ್ನು ತೊಕ್ಕೊಟ್ಟಿನ ಕೇಂದ್ರ ಬಸ್ಸು ನಿಲ್ದಾಣದಲ್ಲಿ ನಿರ್ಮಿಸಲು ಉಳ್ಳಾಲ ನಗರಸಭೆಯು ನಿರ್ಧಾರ ಕೈಗೊಂಡಿದ್ದು,ಕ್ಯಾಂಟೀನ್ ನಿರ್ಮಾಣ ಕಾಮಗಾರಿಯು ಅದಾಗಲೇ ತರಾತುರಿಯಲ್ಲಿ ಆರಂಭಗೊಂಡಿದೆ.
ಉಳ್ಳಾಲ ನಗರಸಭೆಯ ಸದಸ್ಯನೋರ್ವನು ತೊಕ್ಕೊಟ್ಟು ಹಳೇ ಚೆಕ್ ಪೋಸ್ಟ್ನ 22 ಸೆಂಟ್ಸ್ ಸರಕಾರಿ ಜಾಗದಲ್ಲಿ ಖಾಸಗಿ ಕಟ್ಟಡದವರಿಗೆ ರಸ್ತೆ ಮಾಡಿಕೊಡಲು 10 ಲಕ್ಷದ ಡೀಲ್ ಕುದುರಿಸಿಕೊಂಡಿದ್ದನೆನ್ನಲಾಗಿದೆ. 22 ಸೆಂಟ್ಸ್ ಸರಕಾರಿ ಜಾಗದಲ್ಲಿದ್ದ ಹಳೆಯ ಕೊರಗಜ್ಜನ ಕಟ್ಟೆಯನ್ನು ತೆರವುಗೊಳಿಸುವುದು ಹೇಗೆನ್ನುವ ಸಮಸ್ಯೆ ನಗರ ಸದಸ್ಯನಿಗೆ ಎದುರಾದಾಗ ಹೊಳೆದದ್ದೇ ಇಂದಿರಾ ಕ್ಯಾಂಟೀನ್ ಯೋಜನೆ. ನಗರ ಸದಸ್ಯನ ಅನತಿಯಂತೆ ತೊಕ್ಕೊಟ್ಟಿನ ಹಳೇ ಚೆಕ್ ಪೋಸ್ಟ್ ನ ಕೊರಗಜ್ಜನ ಕಟ್ಟೆಯಿರುವ ಸರಕಾರಿ ಖಾಲಿ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಲು ನಗರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ನಗರಸಭೆಯ ನಿರ್ಣಯದಂತೆ ಅಧಿಕಾರಿಗಳು ಹಳೇ ಚೆಕ್ ಪೋಸ್ಟ್ ನ ಕೊರಗಜ್ಜನ ಕಟ್ಟೆಯನ್ನು ಏಕಾಏಕಿ ತೆರವುಗೊಳಿಸಲು ಮುಂದಾದಾಗ ಭಜರಂಗದಳ,ತುಳುನಾಡ ಜವನೆರ್ ಸೇರಿದಂತೆ ಅನೇಕ ಹಿಂದೂ ಪರ ಸಂಘಟನೆಗಳ ಯುವಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ತೊಕ್ಕೊಟ್ಟು ಕೇಂದ್ರ ಬಸ್ಸು ನಿಲ್ದಾಣದಲ್ಲಿ ಸಾಕಷ್ಟು ಸರಕಾರಿ ನಿವೇಶನ ಇರುವಾಗ ಹಳೇ ಚೆಕ್ ಪೋಸ್ಟ್ ನ ಜನಸಂದಣಿ ಇಲ್ಲದ ಪ್ರದೇಶದಲ್ಲಿ ಅವೈಜ್ನಾನಿಕವಾಗಿ ಕ್ಯಾಂಟೀನ್ ನಿರ್ಮಾಣದ ಔಚಿತ್ಯವೇನೆಂದು ಕಾರ್ಯಕರ್ತರು ಅಧಿಕಾರಿಗಳಲ್ಲಿ ಪ್ರಶ್ನಿಸಿದಾಗ ನಗರಸಭೆಯ ಪೌರಾಯುಕ್ತೆ ಹಿಂದೂ ಕಾರ್ಯಕರ್ತರಲ್ಲಿ ಉಡಾಫೆಯ ಮಾತುಗಳನ್ನಾಡಿದ್ದರು.
ಕೊರಗಜ್ಜ ದೈವದ ಮಹಿಮೆಯೋ ,ಹಿಂದೂ ಸಂಘಟನೆ ಶಕ್ತಿಗೆ ಹೆದರಿಯೋ ಇದೀಗ ನಗರಸಭೆಯು ಬೀಸೋ ದೊಣ್ಣೆಯ ಏಟಿನಿಂದ ತಪ್ಪಿಸಿಕೊಂಡಿದ್ದು, ಇಂದಿರಾ ಕ್ಯಾಂಟೀನ್ ಲೊಕೇಶನನ್ನು ಹಿಂದೂ ಸಂಘಟನೆ ಸದಸ್ಯರ ಸೂಚನೆಯಂತೆಯೇ ತೊಕ್ಕೊಟ್ಟು ಕೇಂದ್ರ ಬಸ್ಸು ನಿಲ್ದಾಣಕ್ಕೆ ಶಿಪ್ಟ್ ಮಾಡಿದೆ. ಬಸ್ಸು ನಿಲ್ದಾಣದ ಸರಕಾರಿ ಖಾಲಿ ನಿವೇಶನದಲ್ಲಿರುವ ತುಂಬಾ ಹಳೆಯ ಮರಗಳನ್ನು ಕಡಿದು ಇಂದಿರಾ ಕ್ಯಾಂಟೀನ್ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲಾಗಿದೆ.
ತೊಕ್ಕೊಟ್ಟು ಹಳೇ ಚೆಕ್ ಪೋಸ್ಟ್ ನ ಕೊರಗಜ್ಜನ ಕಟ್ಟೆಯಿರುವ ಸರಕಾರಿ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಲು ನಗರಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.ಆದರೆ ಕ್ಯಾಂಟೀನ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಜಾಗವನ್ನು ಸರ್ವೇ ನಡೆಸಿದಾಗ ಕ್ಯಾಂಟೀನ್ ನಿರ್ಮಿಸಲು ಯೋಗ್ಯವಲ್ಲದ ಸ್ಥಳವೆಂದು ಪರಿಗಣಿಸಿದ ಪರಿಣಾಮ ಕೇಂದ್ರ ಬಸ್ಸು ನಿಲ್ದಾಣದಲ್ಲಿ ಕ್ಯಾಂಟೀನ್ ನಿರ್ಮಿಸಲು ನಿರ್ಧರಿಸಿದ್ದೇವೆ.(ಹುಸೇನ್ ಕುಂಞಮೋನು, ಉಳ್ಳಾಲ ನಗರಸಭಾಧ್ಯಕ್ಷರು.)
ನಗರಸಭೆಯ ಏಕಪಕ್ಷೀಯ ನಿರ್ಧಾರದಿಂದ ವಿನಾಕಾರಣ ಎಡವಟ್ಟು ನಡೆದಿದೆ.ಹಳೆಯದಾದ ಆರಾಧ್ಯ ಕೊರಗಜ್ಜನ ಕಟ್ಟೆಯನ್ನು ಸ್ಥಳಾಂತರಿಸಿ ಕ್ಯಾಂಟೀನ್ ನಿರ್ಮಿಸುವ ತರಾತುರಿಯೇಕೆಂದು ಪ್ರಶ್ನಿಸಿ ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿದ್ದೇವೆ. ಸಾಂಘಿಕ ಹೋರಾಟಕ್ಕೆ ದೈವದ ಕೃಪೆಯಿಂದ ಜಯ ದೊರೆತಿದೆ.
Leave A Reply