ಸ್ವಚ್ಛ ಭಾರತ ಅಭಿಯಾನದ ಯಶಸ್ಸಿಗಾಗಿ ಶೌಚಾಲಯ ಶುದ್ಧಗೊಳಿಸಿ ಜಾಗೃತಿ ಮೂಡಿಸಿದ ಬಿಜೆಪಿ ಸಂಸದ!
ಭೋಪಾಲ್: ರಾಜಕಾರಣಿಗಳು ಎಂದರೆ ಯಾವುದೇ ಕಾಮಗಾಗಿಗೆ ಗುದ್ದಲಿಪೂಜೆ, ಕಟ್ಟಡ ಉದ್ಘಾಟನೆಯ ಟೇಪ್ ಕತ್ತರಿಸುವ ಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತವೆ. ಅದರಲ್ಲಿ ಅವರು ಸಹ ಪ್ರಚಾರಕ್ಕಾಗಿ ಚೆನ್ನಾಗಿಯೇ ಪೋಸ್ ಕೊಡುತ್ತಾರೆ. ಅಥವಾ ಸಸಿ ನೆಟ್ಟು ತಾವು ಪರಿಸರ ಪ್ರೇಮಿಗಳು ಎಂದೋ, ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿಯೋ ಜನಪ್ರಿಯತೆ ಗಳಿಸಲು ನಾಟಕವಾಡುತ್ತಾರೆ.
ಆದರೆ ಮಧ್ಯಪ್ರದೇಶದಲ್ಲಿ ಬಿಜೆಪಿ ಸಂಸದರೊಬ್ಬರು ಸ್ವಚ್ಛ ಭಾರತ ಅಭಿಯಾನದ ಯಶಸ್ಸು ಹಾಗೂ ಜಾಗೃತಿ ಮೂಡಿಸಲು ತಾವೇ ಶೌಚಾಲಯ ಸ್ವಚ್ಛಗೊಳಿಸುವ ಮೂಲಕ ಬೇರೆ ರಾಜಕಾರಣಿಗಳಿಗೆ ಮಾದರಿಯಾಗುವ ಕೆಲಸ ಮಾಡಿದ್ದಾರೆ.
ರೇವಾ ಕ್ಷೇತ್ರದ ಸಂಸದ ಜನಾರ್ದನ್ ಮಿಶ್ರಾ ಶೌಚಾಲಯ ಸ್ವಚ್ಛಗೊಳಿಸಿದ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮಿಶ್ರಾ ಅವರಿಗೆ ಮೆಚ್ಚುಗೆಯ ಮಾತುಗಳು ಸಹ ವ್ಯಕ್ತವಾಗಿವೆ.
ರೇವಾದ ಖಾಜುಹಾ ಎಂಬ ಶಾಲೆಗೆ ಜನಾರ್ದನ್ ಮಿಶ್ರಾ ಭೇಟಿ ನೀಡಿದ್ದು, ಅಲ್ಲಿ ಶೌಚಾಲಯ ಸ್ವಚ್ಛವಿರದ ಕಾರಣ ವಿದ್ಯಾರ್ಥಿಗಳು ಒಳಗೆ ಹೋಗಿ ಬರಲು ಮುಜುಗಪಟ್ಟುಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಮಿಶ್ರಾ ತಕ್ಷಣ ಶೌಚಾಲಯ ಸ್ವಚ್ಛಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಅಷ್ಟೇ ಶಾಲೆಯ ಶೌಚಾಲಯ ಯಾವಾಗಲೂ ನೈರ್ಮಲ್ಯದಿಂದ ಇರುವಂತೆ ನೋಡಿಕೊಳ್ಳಿ ಎಂದು ಸೂಚನೆ ನೀಡುವ ಜತೆಗೆ ಸ್ವಚ್ಛ ಭಾರತ ಯೋಜನೆಯ ಯಶಸ್ಸಿಗಾಗಿ ಮಕ್ಕಳಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಸಹ ಮೂಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಿಂದೊಮ್ಮೆ ಶಾಲೆಯೊಂದಕ್ಕೆ ಭೇಟಿ ನೀಡಿದ್ದಾಗ, ವಿದ್ಯಾರ್ಥಿಗಳು ಸರಿಯಾಗಿ ಸ್ನಾನ ಮಾಡದೆ ಶಾಲೆಗೆ ಬಂದಿದ್ದನ್ನು ಕಂಡಿದ್ದ ಮಿಶ್ರಾ ಅವರು ಒಬ್ಬ ವಿದ್ಯಾರ್ಥಿಗೆ ಸ್ನಾನವನ್ನೇ ಮಾಡಿಸಿದ್ದರು. ಕಳೆದ ವಾರ ಬಡಾವಣೆಯೊಂದರಲ್ಲಿ ಕಸಗುಡಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಒಟ್ಟಿನಲ್ಲಿ ಬಿಳಿ ಬಟ್ಟೆ ತೊಟ್ಟು ಶೋಕಿ ಮಾಡುವ ರಾಜಕಾರಣಿಗಳಿಗಿಂತ ಬಿಜೆಪಿಯ ಜನಾರ್ದನ್ ಮಿಶ್ರ ವಿಭಿನ್ನವಾಗಿ ಕಾಣುತ್ತಾರೆ. ಇಂತಹವರ ಸಂತತಿ ಜಾಸ್ತಿಯಾಗಲಿ.
Leave A Reply