ಕಾಂಗ್ರೆಸ್ ಶಾಸಕ ಕೊಟ್ಟ ಸೀರೆಗಳನ್ನು ಮತದಾರ ಸುಟ್ಟುಹಾಕುತ್ತಾನೆಂದರೆ ಇವರ ವಿರುದ್ಧ ಎಷ್ಟು ಆಕ್ರೋಶವಿರಬೇಕು?
ಚಿಕ್ಕಬಳ್ಳಾಪುರ: ಒಂದೆಡೆ ಕಾಂಗ್ರೆಸ್ಸಿಗರ ಗೂಂಡಾ ವರ್ತನೆಯಿಂದ ಇಡೀ ರಾಜ್ಯ ಕಾಂಗ್ರೆಸ್ಸಿಗೆ ಶಾಪ ಹಾಕುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಶಾಸಕರ ವಿರುದ್ಧವೂ ಜನ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಇದಕ್ಕೆ ಸಾಕ್ಷಿಯಾಗಿ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಅವರು ಮಹಿಳಾ ಮತದಾರರನ್ನು ಸೆಳೆಯಲು ಹಂಚಿಕೆ ಮಾಡಿದ್ದ ಸೀರೆಗೆ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದು, ಈ ಕುರಿತ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು, ಸಂಕ್ರಾಂತಿ ಸುಗ್ಗಿ ಕಾರ್ಯಕ್ರಮದ ನೆಪದಲ್ಲಿ ಶಾಸಕ ಡಾ.ಕೆ.ಸುಧಾಕರ್ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಸೀರೆಗಳನ್ನು ಹಂಚುತ್ತಿದ್ದು, ಕಾಂಗ್ರೆಸ್ಸಿನ ಈ ಮನವೊಲಿಕೆಯ ರಾಜಕಾರಣಕ್ಕೆ ಬೇಸತ್ತ ವ್ಯಕ್ತಿಯೊಬ್ಬ ನಡುರಸ್ತೆಯಲ್ಲೇ ಸೀರೆ ಸುಟ್ಟು ಹಾಕಿದ್ದಾನೆ.
ಅಧಿಕಾರಕ್ಕೆ ಬಂದು ಐದು ವರ್ಷವಾಗುತ್ತ ಬಂತು, ಇಷ್ಟು ದಿನ ಸೀರೆ ಹಂಚದ ನೀವು, ಈಗ ಸುಗ್ಗಿ ಹಬ್ಬದ ನೆಪವೊಡ್ಡಿ ಸೀರೆ ಹಂಚುತ್ತಿದ್ದೀರಿ. ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ನಿಮಗೆ ಸುಗ್ಗಿ ಹಬ್ಬ, ಸೀರೆ ಹಂಚುವುದು ನೆನಪಾಯಿತೇ ಎಂದು ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಶಾಸಕ ಸುಧಾಕರ್ ಒಡೆತನದ ಸಾಯಿಕೃಷ್ಣ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಕ್ಷೇತ್ರದೆಲ್ಲೆಡೆ ರಂಗೋಲಿ ಸ್ಪರ್ಧೆ ಸಹ ಆಯೋಜಿಸಿದ್ದು, ಫೆ.24ರಂದು ಸುಗ್ಗಿ ಹಬ್ಬ ಕಾರ್ಯಕ್ರಮದಲ್ಲಿ ರಂಗೋಲಿ ಸ್ಪರ್ಧೆ ವಿಜೇತರಿಗೆ ಬಹುಮಾನ ಸಹ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಅತ್ತ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ತುಮಕೂರಿನಲ್ಲಿ ವಾಸ್ತವ್ಯ ಮಾಡುತ್ತಿದ್ದರೆ, ಇತ್ತ ಚಿಕ್ಕಬಳ್ಳಾಪುರ ಶಾಸಕ ಸೀರೆ ಹಂಚಿ, ಹಲವು ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಆದರೆ ಜನ ಮಾತ್ರ ಎಚ್ಚೆತ್ತುಕೊಂಡು ಇಂತಹ ಚುನಾವಣೆ ಗಿಮಿಕ್ ಗಳಿಗೆ ಕಿವಿಗೊಡುತ್ತಿಲ್ಲ ಎಂಬುದಕ್ಕೆ ಸೀರೆ ಸುಟ್ಟಿದ್ದೇ ಸಾಕ್ಷಿಯಾಗಿದೆ.
Leave A Reply