ಬಿಜೆಪಿ ವಾರ್ಡಿನ ಫಲಾನುಭವಿಗಳನ್ನು ಕೈ ಬಿಟ್ಟಿದ್ದು ಯಾಕೆ ಲೋಬೋ ಅವರೇ?
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಹಣದ ಕೊರತೆ ಇದೆ. ಯಾವುದಕ್ಕೆ ಅಂದರೆ ಶಕ್ತಿನಗರದಲ್ಲಿ ನಿರ್ಮಾಣಗೊಳ್ಳಲಿರುವ ಆಶ್ರಯ ಯೋಜನೆಯ ಫ್ಲಾಟ್ ನಿರ್ಮಾಣ ಮಾಡುವ ಸಲುವಾಗಿ ಅಲ್ಲಿ ಭೂಮಿ ಸಮತಟ್ಟು ಮಾಡಬೇಕಲ್ಲ ಅದಕ್ಕೆ. ಅಷ್ಟೇ ಅಲ್ಲ ನೆಲ ಸಮತಟ್ಟು ಮಾಡಿ ನಂತರ ಅದಕ್ಕೆ ಕಂಪೌಂಟ್ ವಾಲ್ ಕಟ್ಟಿ ಬಳಿಕ ಅದಕ್ಕೆ ಸಂಪರ್ಕ ರಸ್ತೆ ಮಾಡಿ ಕೊಡಬೇಕು. ಅದಕ್ಕಾಗಿ ಪಾಲಿಕೆ ತನ್ನ ಪಾಲಿನ 15 ಕೋಟಿ ವಿನಿಯೋಗಿಸಬೇಕು. ಆದರೆ ಪಾಲಿಕೆ ಬಳಿ ಹಣವಿಲ್ಲ. ಅದು ಕೊಡದೇ ಅಲ್ಲಿ ಸಮತಟ್ಟು ಆಗುವುದು ಬಿಡಿ, ಒಂದು ಹಾರೆ ಕೂಡ ಬೀಳುವ ಸಾಧ್ಯತೆ ಇಲ್ಲ. ಯಾಕೆಂದರೆ ಪಾಲಿಕೆ “ಕೈ”ಯಲ್ಲಿ ಏನೂ ಇಲ್ಲ. ಅದಕ್ಕೆ ನಮ್ಮ ಶಾಸಕರು ಏನು ಮಾಡಿದ್ರು ಎಂದರೆ ರಾಜ್ಯ ಸರಕಾರಕ್ಕೆ ಕೇಳಿದ್ರು. ನೀವು ಹಣ ಕೊಟ್ಟರೆ ಒಳ್ಳೆಯದಿತ್ತು ಎಂದರು. ಆದರೆ ರಾಜ್ಯ ಸರಕಾರ ಇಲ್ಲಾರಿ, ಹಣ ಕೊಡೋಕೆ ಆಗಲ್ಲ ಎಂದಿದೆ. ಆದರೆ ಜೆ ಆರ್ ಲೋಬೋ ಅವರು ಅದನ್ನು ಯಾರಿಗೂ ಹೇಳಿಲ್ಲ. ಪಾಲಿಕೆಯಲ್ಲಿ ಹಣ ಇಲ್ಲ ಮತ್ತು ರಾಜ್ಯ ಸರಕರ ಕೊಡುವುದಿಲ್ಲ ಎಂದು ಹೇಳಿದ್ದು ಯಾರಿಗೂ ಗೊತ್ತಾಗದಂತೆ ನೋಡಿಕೊಂಡಿದ್ದಾರೆ. ಪಾಲಿಕೆಯಿಂದ ಹಣ ಬರುವ ತನಕ ಕಾದರೆ ಚುನಾವಣೆ ಮುಗಿಯುತ್ತದೆ. ನಂತರ ತಾನು ಮನೆಯಲ್ಲಿ ಉಳಿದ ನಂತರ ಏನು ಮಾಡುವುದು ಎಂದು ಅಂದುಕೊಂಡ ಲೋಬೋ ಅವರು ಒಂದು ಪ್ಲಾನ್ ಮಾಡಿದ್ದಾರೆ. ಒಂದು ಅರ್ಜೆಂಟ್ ನಲ್ಲಿ ಶಿಲಾನ್ಯಾಸ ಮುಗಿಸಿಬಿಡೋಣ. ಒಮ್ಮೆ ಜನರಿಗೆ ಈ ಯೋಜನೆ ತನ್ನಿಂದ ಆದದ್ದು ಎಂದು ಪ್ರಚಾರ ಮಾಡಿಬಿಡೋಣ, ಅದರ ನಂತರ ಚುನಾವಣೆ ಬರುತ್ತೆ. ಶಕ್ತಿನಗರದ ಫೋಟೋ ತೋರಿಸಿ ಅವರಿಗೆ ಮಂಗ ಮಾಡೋಣ. ಜನ ನಂಬುತ್ತಾರೆ. ಮತ್ತೆ ಐದು ವರ್ಷದ ನಂತರ ಅಲ್ವಾ? ಅದು ಮತ್ತೆ ನೋಡೋಣ. ಈಗ ನಮ್ಮದೇ ರಾಜ್ಯ ಸರಕಾರ ಹಣ ಕೊಡುತ್ತಿಲ್ಲ ಎಂದು ಜನರಿಗೆ ಗೊತ್ತಾದರೆ ಸಮಸ್ಯೆ ಆಗುತ್ತದೆ ಎಂದು ಗಡಿಬಿಡಿಯಲ್ಲಿ ಶಿಲಾನ್ಯಾಸ ಎಲ್ಲಾ ಮುಗಿಸಿದ್ದಾರೆ. ಮುಖ್ಯಮಂತ್ರಿಗಳನ್ನು ಕರೆಸಿ ಶಿಲಾನ್ಯಾಸ ಮಾಡಿಸುತ್ತೇನೆ ಎಂದು ಹೇಳಿದ್ದ ಲೋಬೋ ಅವರಿಗೆ ಮುಖ್ಯಮಂತ್ರಿ ಸಿಗಲಿಲ್ಲ. ಕೊನೆಗೆ ಆಸ್ಕರ್ ಫೆರ್ನಾಡಿಂಸ್ ಸಿಕ್ಕಿದ್ದಾರೆ. ಆಸ್ಕರ್, ಬ್ಲೋಸಂ ಇನ್ನಿತರರು ಸೇರಿ ಶಿಲಾನ್ಯಾಸ ಮುಗಿಸಿದ್ದಾರೆ.
ಮೂಲಭೂತ ಇಲ್ಲದೆ ಕೆಲಸ ಪ್ರಾರಂಭ ಆಗಲ್ಲ..
ಹಾಗಂತ ಕಟ್ಟಡ ನಿರ್ಮಾಣವಾಗುವ ಪ್ರದೇಶದಲ್ಲಿ ಮೂಲಭೂತ ಸೌಲಭ್ಯ ಇಲ್ಲದಿದ್ದರೆ ವಸತಿ ಸಮುಚ್ಚಯ ಹೇಗೆ ಕಟ್ಟುವುದು ಎನ್ನುವುದು ಲೋಬೋ ಅವರಿಗೆ ಗೊತ್ತಿಲ್ಲ ಎಂದಲ್ಲ. ಈ ಕುರಿತು ಅವರು ಕಳೆದ ವರ್ಷವೇ ಆಶ್ರಯ ಸಮಿತಿ ಸಭೆಯೊಂದನ್ನು ಕರೆದಿದ್ದರು. ಕಳೆದ ಜುಲೈ 15 ರಂದು ಒಂದು ಸಭೆ ಮಾಡಿ ಪ್ರಥಮ ಹಂತವಾಗಿ ಅಲ್ಲಿ ಏನೆಲ್ಲಾ ಆಗಬೇಕು ಎಂದು ಹೇಳಿದ್ದರು. ಆದರೆ ಇವತ್ತಿಗೆ ಏಳೂವರೆ ತಿಂಗಳಾಗಿದೆ. ಲೋಬೊ ಅವರು ಹೇಳಿದ್ದು ಮೀಟಿಂಗ್ ನಡೆದ ನಾಲ್ಕು ಗೋಡೆಯ ನಡುವೆ ಆವತ್ತೇ ಹೂತು ಹೋಗಿದೆ.
ಇನ್ನು ಈ ಆಶ್ರಯ ಯೋಜನೆಯ ಮನೆಗಳನ್ನು ನಿರ್ಮಾಣ ಮಾಡಲು ಮೊದಲು ನಿಯಮ ಪ್ರಕಾರ ಒಂದು ಸಮಿತಿಯ ನಿರ್ಮಾಣ ಮಾಡಬೇಕು. ಅದರಲ್ಲಿ ಜಿಲ್ಲಾಧಿಕಾರಿ, ಸಂಸದ, ಶಾಸಕ, ವಿಧಾನ ಪರಿಷತ್ ಸದಸ್ಯ, ಪಾಲಿಕೆ ಕಮೀಷನರ್, ಮೇಯರ್, ಸಹಾಯಕ ಕಮೀಷನರ್ (ಕಂದಾಯ), ಸಮಾಜ ಕಲ್ಯಾಣ ಅಧಿಕಾರಿ ಇರಬೇಕು. ಲೋಬೋ ಅವರು ಅಂತಹ ಒಂದು ಕಮಿಟಿಯನ್ನು ಮಾಡಿಯೇ ಇಲ್ಲ. ಆದ್ದರಿಂದ ಅವರು ಈಗ ಏನು ಮಾಡಿದರೂ ಅದು ಕಾನೂನುಬದ್ಧವಾಗಿ ಆಗುವುದೇ ಇಲ್ಲ. ಅವರು ತಮ್ಮದೇ ಜನರನ್ನು ಸೇರಿಸಿ ಒಂದು ಹಳೆ ಆಶ್ರಯ ಸಮಿತಿಯ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಿದ್ದಾರೆ. ಆದ್ದರಿಂದಲೇ ಅರ್ಹರು ಇವತ್ತಿಗೂ ಆಶ್ರಯ ಮನೆಗಳಿಂದ ಹೊರಗಿದ್ದಾರೆ. ಮೊನ್ನೆ ಲಕ್ಕಿಡ್ರಾ ಮಾಡಿ ಚೀಟಿ ತೆಗೆದ ಬಳಿಕ ಯಾರೋ ಅದರಲ್ಲಿ ಅದೃಷ್ಟಶಾಲಿಗಳಾಗಿರುವ ಹಲವರಿಗೆ ಈಗಾಗಲೇ ಮನೆಗಳು ಇವೆ. ನೀವು ಮಾಡಿದ್ದು ಸರಿಯಿಲ್ಲ ಎಂದು ಆಕ್ಷೇಪ ಎತ್ತಿದ ಬಳಿಕ ಲೋಬೋ ಅವರು ಸುಮಾರು 170 ಜನರನ್ನು ಕೈಬಿಟ್ಟಿದ್ದಾರೆ. ಅದು ಕೂಡ ಕೈಬಿಟ್ಟಿರುವುದು ಯಾರನ್ನು. ಭಾರತೀಯ ಜನತಾ ಪಾರ್ಟಿಯ ಕಾರ್ಪೋರೇಟರ್ ಇರುವ ವಾರ್ಡಿನ ಫಲಾನುಭವಿಗಳನ್ನು ಕೈ ಬಿಟ್ಟಿದ್ದಾರೆ. ಇದು ಅನ್ಯಾಯ. ಬಿಜೆಪಿಯ ವಾರ್ಡಿನವರಿಗೆ ಮನೆ ಕೊಡುವುದಿಲ್ಲ ಎಂದು ಲೋಬೋ ಬಹಿರಂಗವಾಗಿ ಹೇಳಲಿ.
ಅದು ಬಿಟ್ಟು ಬೇಕಾದಾಗ ಲಕ್ಕಿ ಡ್ರಾ ಮಾಡುವುದು. ಚೀಟಿ ತೆಗೆಯುವುದು. ನಂತರ ಕೊಡಲು ಆಗುವುದಿಲ್ಲ ಎನ್ನುವುದು. ಲಕ್ಕಿ ಡ್ರಾ ಮಾಡುವುದೇ ಅಕ್ರಮ. ಬಿಡುವುದು ಮೋಸ. ಎಲ್ಲವೂ ಕೂಡ ಕಾನೂನು ಪ್ರಕಾರ ತಪ್ಪು. ಲೋಬೋ ಅವರಿಗೆ ಮನೆ ಕೊಡುವುದಕ್ಕೂ ರೈಟ್ ಇಲ್ಲ. ಹಾಗೆ ತೆಗೆಯಲಿಕ್ಕೂ ರೈಟ್ ಇಲ್ಲ. ಇದು ಏನಾಗಿದೆ ಎಂದರೆ ತಮಗೆ ಬೇಕಾದವರಿಗೆ ಕೊಡುವುದು, ಯಾರಾದರೂ ಆಕ್ಷೇಪ ಎತ್ತಿದರೆ ಒಂದಿಷ್ಟು ಜನರನ್ನು ಕೈ ಬಿಡುವುದು. ಹೀಗೆ ನಡೆಯುತ್ತಿದೆ. ಅಷ್ಟಕ್ಕೂ ಲೋಬೋ ಅವರು ಶಕ್ತಿನಗರದಲ್ಲಿ ಕಟ್ಟುತ್ತೇನೆ ಎಂದು ಹೊರಟಿರುವ ಆಶ್ರಯ ಮನೆಗಳಿಗೆ ತಮ್ಮ ಮನೆಯಿಂದ ಹಣವೇನೂ ತರುತ್ತಿಲ್ಲ. ಅವರು ಏನು ಮಾಡಿದರೂ ಜನರ ತೆರಿಗೆಯ ಹಣದಿಂದಲೇ ಮಾಡುವುದು. ಆದ್ದರಿಂದ ಕಾನೂನುಬದ್ಧವಾಗಿ ಸಮಿತಿ ರಚನೆ ಮಾಡಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡಬೇಕಿತ್ತು. ಮಾಡಿಲ್ಲ.
ಜಾಸ್ತಿ ಹಣ ಕೇಂದ್ರದ್ದು…
ಇನ್ನು ಈ ಯೋಜನೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಬರುವುದರಿಂದ ಇಲ್ಲಿ ಯಾರಿಗೂ ಒಂದು ವಿಷಯ ಗೊತ್ತಿರಲಿಕ್ಕಿಲ್ಲ. ಏನೆಂದರೆ ಕೇಂದ್ರ ರಾಜ್ಯಕ್ಕಿಂತ ಹೆಚ್ಚು ಪಾಲು ನೀಡುತ್ತದೆ. ಇದಕ್ಕೆ ತಗಲುವ ಒಟ್ಟು ಖರ್ಚಿನಲ್ಲಿ 13.75 ಕೋಟಿ ಕೊಡುವುದು ಕೇಂದ್ರ. 11.75 ಕೋಟಿ ಕೊಡುವುದು ರಾಜ್ಯ. ಇನ್ನು ಸುಮಾರು 20 ಕೋಟಿಗಳನ್ನು ಜನರೇ ಅಂದರೆ ಫಲಾನುಭವಿಗಳೇ ಭರಿಸಬೇಕು. ಇನ್ನು ಮಂಜೂರಾತಿ ಸಿಕ್ಕಿದ ಬಳಿಕ ಸ್ಥಳೀಯಾಡಳಿತ 15 ಕೋಟಿ ಅನುದಾನದಲ್ಲಿ ಮೂಲಭೂತ ಸೌಲಭ್ಯ ಮಾಡಿದ ಬಳಿಕವೇ ಕೆಲಸ ಆರಂಭಿಸಬೇಕು. ಆದರೆ ಪ್ರಾರಂಭದಲ್ಲಿಯೇ ವಿಷ್ನ ಇದೆ. ಅದನ್ನು ಮುಚ್ಚಿಟ್ಟು ಲೋಬೋ ಅವರು ಈಗ ಚುನಾವಣೆಗೆ ಕೆಲವೇ ದಿನಗಳಿರುವಾಗ ವೋಟ್ ಗಿಟ್ಟಿಸಲು ಸಕಲ ಪ್ರಯತ್ನ ಮಾಡುತ್ತಿದ್ದಾರೆ. ಅಷ್ಟಿದ್ದರೆ ತಾವು ಕಮೀಷನರ್ ಆಗಿದ್ದಾಗ ಇವರು ಆಶ್ರಯ ಮನೆ ಬಡವರಿಗೆ ಹಂಚಲು ಎಷ್ಟು ಪ್ರಯತ್ನ ಮಾಡಿದ್ದಾರೆ ಎಂದು ಹೇಳಲಿ. ಆಗ ಚುನಾವಣೆಯ ಹಂಗು ಇರಲಿಲ್ಲ. ಈಗ ಕಾನೂನುಗಳನ್ನು ನೆಚ್ಚಿ ಕುಳಿತರೆ ಸೋಲು ಗ್ಯಾರಂಟಿ ಎಂದು ಗೊತ್ತಾಗಿದೆ. ಇವರ ವೋಟಿನ ಗಡಿಬಿಡಿಯಲ್ಲಿ ಅರ್ಹರು ಅದೇ ಗುಡಿಸಲು, ಶೆಡ್ಡಿನಲ್ಲಿ ದಿನ ಕಳೆಯಬೇಕಾಗಿದೆ!
Leave A Reply