ಮೊಯ್ಲಿ,ಆಸ್ಕರ್,ರೈ ಯಾರ ಆಪ್ತ ಈ ಬಾರಿಯ ಮೇಯರ್!!
2006 ರಲ್ಲಿ ಅಶ್ರಫ್ ಮೇಯರ್ ಆದದ್ದೇ ಕೊನೆ. ಅದರ ನಂತರ ಕಳೆದ 12 ವರ್ಷಗಳಲ್ಲಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ಸಿನಿಂದ ಯಾವ ಮುಸ್ಲಿಂ ಸದಸ್ಯ ಕೂಡ ಮೇಯರ್ ಸ್ಥಾನವನ್ನು ಗಿಟ್ಟಿಸಿಕೊಂಡಿಲ್ಲ. ಕಳೆದ ಬಾರಿ ಭಾರತೀಯ ಜನತಾ ಪಾರ್ಟಿಯ ಆಡಳಿತವಿದ್ದಾಗ ಕೊನೆಯ ಒಂದು ವರ್ಷ ಗುಲ್ಜಾರ್ ಬಾನು ಮೇಯರ್ ಆಗಿ ಅಧಿಕಾರ ನಡೆಸಿದ್ದು ನಿಜ. ಆದರೆ ಅದು ಕಾಂಗ್ರೆಸ್ಸಿನ ಕೃಪೆಯಿಂದ ಅಲ್ಲವೇ ಅಲ್ಲ. ಅವರ ಅದೃಷ್ಟ ಚೆನ್ನಾಗಿತ್ತು. ಆವತ್ತು ಬಿಜೆಪಿಯ ರೂಪಾ ಡಿ ಬಂಗೇರ ಫಾರಂ ಸರಿಯಾಗಿ ತುಂಬಿದ್ದರೆ ಮತ್ತು ಮೇಡಂ ಫಾರಂ ಸರಿಯಾಗಿ ಭರ್ತಿ ಮಾಡಿದಂತೆ ಕಾಣುವುದಿಲ್ಲ, ಬೇಕಾದರೆ ಇನ್ನೊಮ್ಮೆ ಪರಿಶೀಲಿಸಿ ಎಂದು ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿಗಳು ಹೇಳಿದ ಮೇಲೆಯೂ ಕೂಡ ರಾಜ್ಯದಲ್ಲಿಯೂ ನಮ್ಮದೇ ಸರಕಾರ, ಇಲ್ಲಿ ಕೂಡ ನಮ್ಮದೇ ಸರಕಾರ ಎಂದು ಹೇಳಿ ನಿರ್ಲಕ್ಷ್ಯ ವಹಿಸಿದ ಕಾರಣ ರೂಪಾ ಡಿ ಬಂಗೇರ ಅವರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಂದಿರಲಿಲ್ಲ. ಆದ್ದರಿಂದ ಗುಲ್ಜಾರ್ ಬಾನು ಮೇಯರ್ ಆದರು.
ಆದರೆ ಈ ಬಾರಿ ನಿಜವಾಗಿಯೂ ಕಾಂಗ್ರೆಸ್ಸಿಗರಿಗೆ ಮುಸ್ಲಿಮರ ಮೇಲೆ ಪ್ರೀತಿ ಇದ್ದರೆ, ಆ ಪ್ರೀತಿ ತೋರಿಕೆಯದ್ದು ಅಲ್ಲ ಎಂದು ಸಾಬೀತು ಪಡಿಸಬೇಕಿದ್ದರೆ ಒಬ್ಬ ಮುಸ್ಲಿಂ ಸದಸ್ಯನಿಗೆ ಅವಕಾಶ ಕೊಡಬೇಕು. ಅಷ್ಟಕ್ಕೂ ಇದು ಅನೇಕ ಮುಸ್ಲಿಮ್ ಸಂಘಟನೆಗಳ ಡಿಮ್ಯಾಂಡ್. ಮುಸ್ಲಿಂ ಸಮುದಾಯದಿಂದ ಆದ ಕೊನೆಯ ಮೇಯರ್ ಅಶ್ರಫ್ ಕಾಂಗ್ರೆಸ್ಸನಲ್ಲಿ ಮುಸ್ಲಿಮರನ್ನು ಕೇವಲ ಬಳಸಿ ಬಿಸಾಡುತ್ತಾರೆ ಎಂದು ಹೇಳಿ ಹೊರಗೆ ನಡೆದಿರುವುದರಿಂದ ಅದು ಸುಳ್ಳು ಎಂದು ಸಾಬೀತುಪಡಿಸಲಾದರೂ ಮುಸ್ಲಿಮ್ ಸದಸ್ಯರೊಬ್ಬರಿಗೆ ಅವಕಾಶ ಕೊಡಬೇಕು. ಅದಕ್ಕೆ ತಕ್ಕಂತೆ ಕೆಲವು ಅರ್ಹ ಮುಸ್ಲಿಮ್ ಸದಸ್ಯರು ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಪಾಲಿಕೆಯಲ್ಲಿ ಇದ್ದಾರೆ. ಉದಾಹರಣೆಗೆ ಅಬ್ದುಲ್ ರವೂಫ್. ಸೌಮ್ಯ ರಾಜಕಾರಣಿ. ಯಾರೊಂದಿಗೂ ಮನಸ್ತಾಪ ಹೊಂದಿದವರಲ್ಲ. ಮೇಯರ್ ಗಿರಿ ಕೊಟ್ಟರೆ ಕೊನೆಯ ವರ್ಷ ತೂಗಿಸಿಕೊಂಡು ಹೋಗುವಷ್ಟು ಸಾಮರ್ತ್ಯ ಇದೆ. ಎಲ್ಲಕ್ಕಿಂತಲೂ ಜಾಸ್ತಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಅವರ ಆಪ್ತ ವಲಯದಲ್ಲಿರುವ ವ್ಯಕ್ತಿ. ಪಾಲಿಕೆಯಲ್ಲಿ ಯಾರು ಮೇಯರ್ ಆಗಬೇಕು ಎಂದು ನಿರ್ಧರಿಸುವವರು ರಮಾನಾಥ್ ರೈ ಅವರೇ ಆಗಿರುವುದರಿಂದ ಈ ಬಾರಿ ತಮ್ಮ ಆಪ್ತನನ್ನು ಅವರು ಮೇಯರ್ ಸ್ಥಾನಕ್ಕೆ ಕುಳ್ಳಿರಿಸಿದರೆ ತಪ್ಪಿಲ್ಲ. ಹಾಗಂತ ಅಬ್ದುಲ್ ರವೂಫ್ ಅವರಿಗಿಂತ ಒಂದು ಮುಷ್ಟಿ ಹೆಚ್ಚೆ ರಾಜಕೀಯ ಪಾಂಡಿತ್ಯವನ್ನು ಹೊಂದಿರುವ ಮತ್ತೊರ್ವ ಕಾಂಗ್ರೆಸ್ ಸದಸ್ಯ ಮೊಹಮ್ಮದ್. ಪಾಲಿಕೆಯ ಅಂಕಿಸಂಖ್ಯೆಗಳ ವಿಷಯ ಬಂದಾಗ ಮೊಹಮ್ಮದ್ ಅವರಿಗೆ ಪಾಲಿಕೆಯ ಬೇರೆ ಕಾಂಗ್ರೆಸ್ ಸದಸ್ಯರಿಗಿಂತ ತುಸು ಹೆಚ್ಚೆ ಜ್ಞಾನವಿದೆ ಎಂದರೆ ತಪ್ಪಾಗಲಾರದು. ಪಾಲಿಕೆಯಲ್ಲಿ ಚರ್ಚೆಯಾಗುವಾಗ ಕಾಂಗ್ರೆಸ್ಸಿನವರ ತಪ್ಪಿದರೆ ತನ್ನದೇ ಪಕ್ಷದವರನ್ನು ಜೋರು ಮಾಡಿ ಸುಮ್ಮನಾಗಿಸುವ ಕಾರಣ ಪಕ್ಷದಲ್ಲಿ ಶತ್ರುಗಳು ಜಾಸ್ತಿ. ಕ್ಯಾಲ್ಕುಲೇಟಿವ್ ಮನುಷ್ಯನಾದ ಕಾರಣ ಕಾಂಗ್ರೆಸ್ಸನ್ನು ಕೊನೆಯ ವರ್ಷ ದಡ ಸೇರಿಸಬಲ್ಲ ವ್ಯವಧಾನವಿದೆ. ಆದರೆ ಕಾಂಗ್ರೆಸ್ ಮುಸ್ಲಿಮರಿಗೆ ಕೇವಲ ಮೊಣಕೈಗೆ ಬೆಣ್ಣೆ ಹಚ್ಚುವುದರಿಂದ ಮೇಯರ್ ಸ್ಥಾನ ಕೊಡುವ ಗ್ಯಾರಂಟಿ ಇಲ್ಲ. ಹೇಗೂ ಗೊತ್ತಿದೆ. ಮಂಗಳೂರಿನಲ್ಲಿ ಜಾತ್ಯಾತೀತ ಜನತಾದಳ ಇಲ್ಲ. ಭಾರತೀಯ ಜನತಾ ಪಾರ್ಟಿಗೆ ಮುಸ್ಲಿಮರು ಮತ ಹಾಕಲ್ಲ ಎನ್ನುವ ಧೈರ್ಯ ಇದೆ. ಆದ್ದರಿಂದ ನಾವು ಸ್ಥಾನಮಾನ ಕೊಡಲಿ, ಬಿಡಲಿ ನಮಗೆನೆ ವೋಟ್ ಹಾಕಬೇಕು ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ. ಆದ್ದರಿಂದ ಮೇಯರ್ ಸ್ಥಾನದಲ್ಲಿ ಮುಸ್ಲಿಮರು ಕುಳಿತುಕೊಳ್ಳುವ ಚಾನ್ಸ್ ಇಲ್ಲ. ಈಗಾಗಲೇ ಅಶ್ರಫ್ ಕಾಂಗ್ರೆಸ್ಸಿನಿಂದ ಹೊರಗೆ ನಡೆದಿರುವುದರಿಂದ ಇನ್ನೊಬ್ಬ ಮುಸ್ಲಿಂ ನಾಯಕನನ್ನು ಇವರು ಕ್ರಿಯೇಟ್ ಮಾಡಲು ಹೋಗಲಾರರು.
ಕ್ರೈಸ್ತರಿಗೆ ಕೊಡುವ ಸಾಧ್ಯತೆ ಎಷ್ಟಿದೆ…..
ಈ ಬಾರಿ ಸಾಮಾನ್ಯ ಮೀಸಲಾತಿ ಬಂದಿರುವುದರಿಂದ ಕಾಂಗ್ರೆಸ್ಸಿನ ಎಲ್ಲರೂ ಮೇಯರ್ ಸ್ಥಾನಕ್ಕೆ ಅರ್ಹರು. ಇವರು ಸಿನಿಯಾರಿಟಿ ಪ್ರಕಾರವೇ ಹೋಗುವುದಾದರೆ ಲ್ಯಾನ್ ಲಾಟ್ ಪಿಂಟೋ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಪಾಲಿಕೆಗೆ ಅವರು ಕಾಲಿಟ್ಟು ಎರಡು ದಶಕಗಳಾಗಿವೆ. ಒಮ್ಮೆಯೂ ಮೇಯರ್ ಆಗಿಲ್ಲ. ಸೋಲುತ್ತಾರೆ ಎಂದು ಗೊತ್ತಿದ್ದ ಕಾರಣ ಹಿಂದೊಮ್ಮೆ ಎಂಎಲ್ ಎಗೆ ಟಿಕೇಟ್ ಕೊಟ್ಟಿದ್ದರು. ಗೆದ್ದಿಲ್ಲ. ಆದರೆ ಈ ಬಾರಿ ಗೆಲ್ಲುವ ನಿಚ್ಚಳ ಸಾಧ್ಯತೆ ಇರುವುದರಿಂದ ಅವಕಾಶ ಕೊಡುತ್ತಾರಾ, ಗೊತ್ತಿಲ್ಲ. ಎರಡನೇಯದಾಗಿ ನವೀನ್ ಡಿಸೋಜಾ ಅವರು ಕೂಡ ಹಿರಿಯ ಪಾಲಿಕೆ ಸದಸ್ಯರು. ಇಲ್ಲಿ ತನಕ ಮೇಯರ್ ಆಗಿಲ್ಲ. ಸೋನಿಯಾ ಗಾಂಧಿಯವರ ಬಲಗೈ ಆಸ್ಕರ್ ಫೆರ್ನಾಂಡಿಸ್ ಅವರು ಈ ಬಾರಿ ದೆಹಲಿಯಿಂದಲೇ ಒಂದು ಫೋನ್ ಮಾಡಿ ಸೂಚನೆ ಕೊಟ್ಟರೂ ಸಾಕು. ನವೀನ್ ಡಿಸೋಜಾ ಈ ಬಾರಿಯ ಮೇಯರ್. ಆದರೆ ಆಸ್ಕರ್ ಅವರ ಮಾತು ನಡೆಯುತ್ತಾ ಅಥವಾ ತನ್ನ ಆಪ್ತನಿಗೆ ಮೇಯರ್ ಮಾಡಿ ಎಂದು ವೀರಪ್ಪ ಮೊಯಿಲಿ ಸೂಚನೆ ಕೊಡುತ್ತಾರಾ ನೋಡ್ಬೇಕು.
ಮಹಿಳೆಯರಿಗೆ ಚಾನ್ಸ್ ಈ ಬಾರಿ ಸಿಗಲಿಕ್ಕಿಲ್ಲ..
ಹಿರಿತನವನ್ನೇ ನೋಡುವುದಾದರೆ ಭಾಸ್ಕರ್ ಮೊಯಿಲಿ ಕೂಡ ಒಳ್ಳೆ ಕ್ಯಾಂಡಿಟೇಟು. ಸೌಮ್ಯವಾದಿ, ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯಿಲಿ ಕುಟುಂಬಕ್ಕೆ ಹತ್ತಿರದ ಸಂಬಂಧಿ. ಹಿಂದುಳಿದ ವರ್ಗವಾದ ದೇವಾಡಿಗ ಸಮಾಜವನ್ನು ಪ್ರತಿನಿಧಿಸುತ್ತಾರೆ. ಕಳೆದ ಬಾರಿ ದಾಖಲೆಯ ಅಂತರದಲ್ಲಿ ಗೆದ್ದು ಪಾಲಿಕೆಯ ಸದಸ್ಯರಾದವರು. ಮೊಯಿಲಿ ಮನಸ್ಸು ಮಾಡಿದರೆ ಭಾಸ್ಕರ್ ಈ ಬಾರಿಯ ಮೇಯರ್. ಇನ್ನು ದೀಪಕ್ ಪೂಜಾರಿಯವರನ್ನು ಮೇಯರ್ ಮಾಡಿದರೂ ತಪ್ಪಿಲ್ಲ. ಬಿಲ್ಲವ ಸಮುದಾಯವನ್ನು ಪ್ರತಿನಿಧಿಸುವ ದೀಪಕ್ ಪೂಜಾರಿ ಎಲ್ಲರೊಂದಿಗೂ ಬೆರೆತು ಕೆಲಸ ಮಾಡಬಲ್ಲ ಸಾಮರ್ತ್ಯ ಇರುವಂತಹ ವ್ಯಕ್ತಿ.
ಇನ್ನು ಕಳೆದ ನಾಲ್ಕು ಅವಧಿಗಳಲ್ಲಿ ಇಬ್ಬರು ಮಹಿಳೆಯರನ್ನು ಮೇಯರ್ ಮಾಡಿರುವುದರಿಂದ ಈ ಬಾರಿ ಸ್ಪರ್ಧೆಯಲ್ಲಿ ಅಪ್ಪಿ ಇದ್ದರೂ ಅವರನ್ನು ಮೇಯರ್ ಮಾಡುವ ಸಾಧ್ಯತೆ ತುಂಬಾ ಕಡಿಮೆ. ಪ್ರತಿಭಾ ಕುಳಾಯಿ ಅವರಿಗೂ ಅದೇ ಸಮಸ್ಯೆ ಅಡ್ಡಬರುತ್ತದೆ!!
Leave A Reply