ಕೇಂದ್ರ ಸರ್ಕಾರದಿಂದ ಮಹಿಳಾ ಸಬಲೀಕರಣಕ್ಕೆ ಒತ್ತು, ಶತಾಬ್ದಿ ರೈಲಿನಲ್ಲಿ ಸಂಪೂರ್ಣ ಮಹಿಳಾ ಸಿಬ್ಬಂದಿ ನೇಮಕ
ಮುಂಬೈ: ಮಹಿಳಾ ಸಬಲೀಕರಣಕ್ಕೆ ಶ್ರಮಿಸುತ್ತಿರುವ ಕೇಂದ್ರ ಸರ್ಕಾರ ಇದೀಗ ಹೊಸ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಮಹಿಳೆಯರಿಗೆ ನಾನಾ ಕ್ಷೇತ್ರದಲ್ಲಿ ನೂತನ ಅವಕಾಶವನ್ನು ನೀಡಿದೆ. ರೈಲ್ವೆ ಇಲಾಖೆ ಮಹಿಳಾ ಸಬಲೀಕರಣದತ್ತ ದಿಟ್ಟ ಹೆಜ್ಜೆ ಇಟ್ಟಿದ್ದು, ಮುಂಬೈ ಅಹಮದಾಬಾದ್ ಶತಾಬ್ದಿ ಎಕ್ಸಪ್ರೇಸ್ ರೈಲಿನಲ್ಲಿ ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯನ್ನು ನೇಮಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ.
ಅಂತಾರಾಷ್ಟ್ರೀಯ ಮಹಿಳಾ ದಿನದಂದು ಶತಾಬ್ದಿ ಎಕ್ಸಪ್ರೆಸ್ ರೈಲಿನಲ್ಲಿ ಮಹಿಳಾ ಸಿಬ್ಬಂದಿ ಕಾರ್ಯ ನಿರ್ವಹಿಸಲು ಆರಂಭಿಸಿದ್ದಾರೆ. ಭಾರತದ ರೈಲ್ವೆ ಇಲಾಖೆ ಇತಿಹಾಸದಲ್ಲಿ ಇದು ನೂತನ ಪ್ರಯೋಗವಾಗಿದೆ. ಹೆಚ್ಚಾಗಿ ಪ್ಲಾಟ್ ಫಾರ್ಮ್ ಟಿಕೆಟ್ ಪರಿಶೀಲನೆಗೆ ಸಿಮೀತವಾಗಿದ್ದ ಮಹಿಳೆ ಟಿಕೆಟ್ ಪರಿಶೀಲಕರನ್ನು ಇದೀಗ ರೈಲ್ವೆ ಟಿಕೆಟ್ ಪರಿಶೀಲಕರಾಗಿ ನೇಮಿಸಲಾಗಿದೆ ಎನ್ನುತ್ತಾರೆ ಪಶ್ಚಿಮ ವಲಯ ರೈಲ್ವೆ ಕಮಿಷನರ್ ಆರತಿ ಸಿಂಗ್ ಪರಿಹರ್.
ಈ ಕುರಿತು ಸುದ್ದಿವಾಹಿನಿಗೆ ಸಂದರ್ಶನ ನೀಡಿರುವ ರೈಲ್ವೆ ಇಲಾಖೆ ನಿರ್ದೇಶಕ ವೇದ್ ಪ್ರಕಾಶ ‘ಈ ನಿರ್ಧಾರ ಮಹಿಳಾ ಸಬಲೀಕರಣದತ್ತ ಒಂದು ದೃಢ ಹೆಜ್ಜೆ. ಇದುವರೆಗೆ ಶತಾಬ್ದಿ ಎಕ್ಸಪ್ರೆಸ್ ರೈಲಿನಲ್ಲಿ ಕೇವಲ ಇಬ್ಬರು ಮಹಿಳಾ ಟಿಕೆಟ್ ಪರಿಶೀಲಕರಿದ್ದರು. ಇದೀಗ ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಶತಾಬ್ದಿ ರೈಲು ಮುಂಬೈ ಅಹಮದಾಬಾದ್ ಮಧ್ಯೆ 492 ಕಿಮೀ ಸಂಚರಿಸುತ್ತದೆ. ಪ್ರತಿ ಮಹಿಳಾ ಸಿಬ್ಬಂದಿ 6 ಗಂಟೆ 20 ನಿಮಿಷ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಚೈಪುರ ರೈಲು ನಿಲ್ದಾಣವನ್ನು ಸಂಪೂರ್ಣ ಮಹಿಳಾ ಸಿಬ್ಬಂದಿ ನೇಮಿಸುವ ಮೂಲಕ ಮಹಿಳೆಯರಿಗೆ ಭರ್ಜರಿ ಕೊಡುಗೆ ಕೇಂದ್ರ ರೈಲ್ವೆ ಇಲಾಖೆ ನೀಡಿತ್ತು. ಅಲ್ಲದೇ ಮುಂಬೈನ ಮುತ್ತುಂಗ್ ರೈಲ್ವೆ ನಿಲ್ದಾಣದಲ್ಲೂ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿ, ಮಹಿಳಾ ಸಶಕ್ತಿಕರಣಕ್ಕೆ ರೈಲ್ವೆ ಇಲಾಖೆ ಕೊಡುಗೆ ನೀಡಿತ್ತು.
Leave A Reply