ಹೊಸ ಮೇಯರ್ ಫೋನ್ ಇನ್ ಮಾಡಲ್ವಂತೆ, ಯಾಕೆಂದರೆ…..!!
ಹೊಸದಾಗಿ ಅಧಿಕಾರ ಸ್ವೀಕರಿಸಿದ ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಭಾಸ್ಕರ್ ಮೊಯಿಲಿಯವರಿಗೆ ಪತ್ರಕರ್ತರೊಬ್ಬರು ಕೇಳಿದರಂತೆ “ನೀವು ಯಾವಾಗ ಫೋನ್ ಇನ್ ಶುರು ಮಾಡುವುದು?” ಅದಕ್ಕೆ ಭಾಸ್ಕರ್ ಮೊಯಿಲಿ ಹೇಳಿದರಂತೆ ” ನಾನು ಅದನ್ನೆಲ್ಲ ಮುಂದುವರೆಸಿಕೊಂಡು ಹೋಗುವುದಿಲ್ಲ. ಯಾಕೆಂದರೆ ಅದರಿಂದ ಆಗುವುದು ಏನೂ ಇಲ್ಲ. ಜನ ಹೊರಗೆ ಏನು ಮಾತನಾಡಿಕೊಳ್ಳುತ್ತಿದ್ದಾರೆ ಎಂದರೆ ಆ ಹೆಂಗಸು ಫೋನ್ ಇನ್ ಮಾಡಿ ಹೋದ್ರು, ಆದದ್ದು ಏನೂ ಇಲ್ಲ, ಈಗ ಈ ಗಂಡಸು ಪುನ: ಶುರು ಮಾಡಿದೆ, ಇವರಿಗೆ ಇದೆಲ್ಲ ಬೇಕಾ ಎಂದು ಎಲ್ಲರೂ ಹೇಳುತ್ತಿದ್ದಾರೆ, ಆದ್ದರಿಂದ ನಾನು ಯಾವುದೇ ಫೋನ್ ಇನ್ ಮಾಡುವುದಿಲ್ಲ” ಎಂದು ಭಾಸ್ಕರ್ ಮೊಯಿಲಿ ಹೇಳಿದರಂತೆ.
ಕಾಟಾಚಾರದ ಫೋನ್ ಇನ್ ನಿಂದ ಆಗುವುದು ಏನು.
ಅಲ್ಲಿಗೆ ಪಾಲಿಕೆ ಈ ಫೋನ್ ಇನ್ ಗಳಿಂದ ಆಗುವುದು ಏನೂ ಇಲ್ಲ ಎಂದು ಒಪ್ಪಿಕೊಂಡಂತೆ ಆಗಿದೆ. ಒಂದು ವೇಳೆ ಇದರಿಂದ ತುಂಬಾ ಒಳ್ಳೆಯದಾಗಿದ್ದರೆ ಪ್ರತಿಯೊಬ್ಬ ಮೇಯರ್ ಆದವರು ಕೂಡ ಮುಂದುವರೆಸಿಕೊಂಡು ಹೋಗುತ್ತಿದ್ದರು. ಹಿಂದೆ ನಾನೇ ಒಮ್ಮೆ ಬರೆದಿದ್ದೆ. ಮೇಯರ್ ಅಥವಾ ಪೊಲೀಸ್ ಕಮೀಷನರ್ ಗಳು ಫೋನ್ ಇನ್ ಮಾಡಿದರೆ ಜನರ ಸಮಸ್ಯೆ ಅವರಿಗೆ ಅರ್ಥವಾಗುತ್ತದೆ ಅಂತ. ಆಗ ಇವರ್ಯಾರು ಫೋನ್ ಇನ್ ಪ್ರಾರಂಭಿಸಿರಲಿಲ್ಲ. ನಂತರ ಯಾರು ಹೇಳಿದ್ರೋ ಅಥವಾ ಸ್ವಯಂಪ್ರೇರಿತವಾಗಿ ಇವರುಗಳಿಗೆ ಅನಿಸಿತೋ ಅಥವಾ ನನ್ನ ಸಲಹೆ ಅನುಷ್ಟಾನಕ್ಕೆ ತರೋಣ ಎಂದು ಅನಿಸಿತೋ ಒಟ್ಟಿನಲ್ಲಿ ಫೋನ್ ಇನ್ ಶುರುವಾಯಿತು. ಮೇಯರ್ ಆಗಿದ್ದ ಕವಿತಾ ಸನಿಲ್ ಅವರು “ಪೂರ್ಣ ತಯಾರಿ” ಯೊಂದಿಗೆ ಮಾಧ್ಯಮದವರನ್ನು ಕರೆಸಿ, ಅಕ್ಕಪಕ್ಕದಲ್ಲಿ ಅಧಿಕಾರಿಗಳನ್ನು ಕೂರಿಸಿ, ಸಚೇತಕರನ್ನು, ಉಪಮೇಯರ್ ಗಳನ್ನು ಕುಳ್ಳಿರಿಸಿ ಫೋನ್ ಇನ್ ಮಾಡುತ್ತಲೇ ಇದ್ದರು. ಅತ್ತ ಪೊಲೀಸ್ ಕಮೀಷನರ್ ಅವರು ತಮ್ಮ ಕೈಕೆಳಗಿನ ಡಿಸಿಪಿ, ಎಸಿಪಿಗಳನ್ನು ರೌಂಡ್ ಟೇಬಲ್ ನಲ್ಲಿ ಕುಳ್ಳಿರಿಸಿ ಫೋನ್ ಇನ್ ಸ್ವೀಕರಿಸುತ್ತಾ ಇದ್ದರು. ಫೋನ್ ಗಳೇನೋ ದಾಖಲೆಯಲ್ಲಿ ಬರುತ್ತಿದ್ದವು.
ಹೆಚ್ಚಿನ ಕರೆ ಮಾಡಿದವರು ಟ್ರಾಫಿಕ್ ಜಾಮ್, ಬಸ್ ಗಳು ಟ್ರಿಪ್ ಕಟ್ ಮಾಡುತ್ತಿರುವುದು, ಬಸ್ಸುಗಳು ಅಡ್ಡಾದಿಡ್ಡಿ ನಿಲ್ಲಿಸುತ್ತಿರುವುದು, ಟಿಕೆಟ್ ಕೊಡದಿರುವುದು, ಅನಧಿಕೃತ ಪಾರ್ಕಿಗ್, ಅಕ್ರಮ ಕಟ್ಟಡಗಳ ನಿರ್ಮಾಣ ಹೀಗೆ ಇಂತಹುದೇ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅತ್ತ ಪೊಲೀಸ್ ಅಧಿಕಾರಿಗಳು, ಇತ್ತ ಮೇಯರ್ ಆ ಕ್ಷಣಕ್ಕೆ ಏನು ಸಮಾಧಾನ ಹೇಳಬೇಕೋ ಅದನ್ನು ಹೇಳಿ ಕರೆ ಮಾಡಿದವರನ್ನು ಸಮಾಧಾನ ಪಡಿಸಿ ಸಾಗ ಹಾಕುತ್ತಿದ್ದರು. ಆದರೆ ಆಗಿರುವುದು ಏನೂ ಇಲ್ಲ ಎಂದು ಇಬ್ಬರಿಗೂ ಅನಿಸುತ್ತಿತ್ತು. ಎಲ್ಲಿಯ ತನಕ ಅಂದರೆ ಅತ್ತ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಫೋನ್ ರಿಂಗ್ ಆಗಿ ಮಾತನಾಡುತ್ತಿರುವ ವ್ಯಕ್ತಿ ” ಸರ್, ನಮ್ಮ ರೋಡಿನಲ್ಲಿ ಯಾವಾಗ ನೋಡಿದರೂ ಆವಾಗ ಟ್ರಾಫಿಕ್ ಜಾಮ್ ಆಗುತ್ತದೆ” ಎಂದು ಹೇಳುತ್ತಿದ್ದರೆ ಇತ್ತ ಅದೇ ಪೊಲೀಸ್ ಕಮೀಷನರ್ ಕಚೇರಿಯಿಂದ ಕೂಗಳತೆಯ ದೂರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ಹೊರಗೆ ನೋ ಪಾರ್ಕಿಂಗ್ ಬೋರ್ಡಿನ ಕೆಳಗೆ ನಾಲ್ಕು ಸ್ಕೂಟರ್ ಗಳು ನಿಂತಿರುತ್ತಿದ್ದವು. ಅಲ್ಲಿ ಎದುರಿನ ಕಟ್ಟಡದಲ್ಲಿರುವ ಜೆರಾಕ್ಸ್ ಅಂಗಡಿಗಳಿಗೆ ಬರುವ ಜನರು ತಮ್ಮ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಿ ಹೋಗುತ್ತಿದ್ದರೆ ಇತ್ತ ಪೊಲೀಸ್ ಕಮೀಷನರ್ ಅವರು ” ನೀವು ಹೇಳಿದ ಪಾಯಿಂಟ್ ಗಳನ್ನು ಬರೆದುಕೊಂಡಿದ್ದೇವೆ, ನೀವು ಟ್ರಾಫಿಕ್ ಜಾಮ್ ಆಗುತ್ತಿರುವ ರಸ್ತೆ ಯಾವುದು ಹೇಳಿ” ಎಂದು ಫೋನ್ ಮಾಡಿದ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದರು.
ಸಮಸ್ಯೆ ಹಾಗೆ ಇದೆ, ಫೋನ್ ಇನ್ ಮಾಡುತ್ತಿದ್ದಾರೆ ಪೊಲೀಸ್ ಅಧಿಕಾರಿಗಳು..
ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಪೊಲೀಸ್ ಇಲಾಖೆ ಮತ್ತು ಮಂಗಳೂರು ಮಹಾನಗರ ಪಾಲಿಕೆ ಎರಡು ಕಣ್ಣುಗಳಿದ್ದಂತೆ. ಇವು ನೋಡುತ್ತಿವೆ ಆದರೆ ಏನೂ ಮಾಡಲಾಗದೇ ಕಣ್ಣು ಮುಚ್ಚಿದಂತೆ ಕಾಣುತ್ತಿವೆ. ಉದಾಹರಣೆಗೆ ಬಸ್ಸುಗಳಲ್ಲಿ ಟಿಕೆಟ್ ಕೊಡದಿದ್ದರೆ ಅಲ್ಲಿರುವ ರಿಜಿಸ್ಟ್ರೇಶನ್ ನಂಬರ್ ಅನ್ನು ನಮಗೆ ವಾಟ್ಸಪ್ ಮಾಡಿ ಎಂದು ಪೊಲೀಸ್ ಕಮೀಷನರ್ ಹೇಳುತ್ತಾರೆ. ಆದರೆ ಎಷ್ಟು ಬಸ್ಸಿನ ಒಳಗೆ ಆ ಬಸ್ಸಿನ ರಿಜಿಸ್ಟ್ರೇಶನ್ ನಂಬ್ರ ಇದೆ. ಅಂದರೆ ಕೆಎ-19 ಬಿ…… ಅಥವಾ ಸಿ… ಹೀಗೆ ನಮೂದಿಸದೇ ಇದ್ದರೆ ನೀವು ಯಾವ ಬಸ್ಸಿನವರು ಟಿಕೆಟ್ ಕೊಡಲಿಲ್ಲ ಎಂದು ಹೇಗೆ ದೂರು ಕೊಡುತ್ತೀರಿ. ನೀವು ಬಸ್ಸಿಂದ ಇಳಿದು ಆ ನಂಬರ್ ಬರೆದುಕೊಳ್ಳುವಷ್ಟರಲ್ಲಿ ಉರ್ವಾಸ್ಟೋರಿನ ಬಸ್ಸು ಕೊಟ್ಟಾರ ಚೌಕಿಗೆ ತಲುಪಿರುತ್ತದೆ. ನೀವು ಅದನ್ನು ಹುಡುಕುತ್ತಾ ಅಲ್ಲಿಯೇ ಬಾಕಿ. ಇನ್ನು ಕೆಲವು ಕಂಡಕ್ಟರ್ ಗಳಿಗೆ ಈ ಟ್ರಾಫಿಕ್ ಪೊಲೀಸ್ ನವರು ಎಲ್ಲಿ ತಮ್ಮನ್ನು ಕಾಯುತ್ತಾ ನಿಂತಿರುತ್ತಾರೆ ಎನ್ನುವ ಐಡಿಯಾ ಸಿಕ್ಕಿದೆ. ಆದ್ದರಿಂದ ಕೂಳೂರು ಬ್ರೀಡ್ಜ್ ಬರುವ ಎರಡು ಸ್ಟಾಪಿನ ಮೊದಲು ಕುತ್ತಿಗೆಗೆ ಆ ಮಿಶಿನ್ ಹಾಕಿ ನಾಲ್ಕು ಮಂದಿಗೆ ಟಿಕೆಟ್ ಕೊಟ್ಟಂತೆ ಮಾಡಿ ಬ್ರಿಡ್ಜ್ ದಾಟಿದ ನಂತರ ಮತ್ತೆ ಆ ವೆಂಡಿಂಗ್ ಮಿಶಿನ್ ಅನ್ನು ಡ್ರೈವರ್ ಕುಳಿತುಕೊಳ್ಳುವ ಜಾಗದಲ್ಲಿ ಬಿಸಾಡಿ ಆರಾಮವಾಗಿ ಬಾಗಿಲಿಗೆ ನೇತಾಡುತ್ತಾ ಇರುತ್ತಾರೆ. ಇದು ತುಂಬಾ ಟ್ರಾಫಿಕ್ ಪೊಲೀಸ್ ಅಧಿಕಾರಿಗಳಿಗೆ ಗೊತ್ತಿಲ್ಲ ಎಂದು ಅನಿಸುತ್ತದೆ. ಅದಕ್ಕೆ ಅವರನ್ನು ಸುಲಭವಾಗಿ ಈ ಕಂಡಕ್ಟರ್ ಗಳು ಏಮಾರಿಸುತ್ತಿದ್ದಾರೆ. ಆದರೆ ಪಾಪ ಅತ್ತ ಪೊಲೀಸ್ ಕಮೀಷನರ್ ಫೋನ್ ಇನ್ ಮಾಡುತ್ತಾ ” ಹೇಳಿ ನಿಮ್ಮ ಸಮಸ್ಯೆ ……..” ಎಂದು ಯಥಾಪ್ರಕಾರ ಕಾಲ್ ರಿಸೀವ್ ಮಾಡುತ್ತಿರುತ್ತಾರೆ!
Leave A Reply