ಸಲ್ಮಾನ್ ಖಾನ್ ವಿಷಯದಲ್ಲಿ ಮೂಗು ತೂರಿಸಿದ ಪಾಕ್ ಸಚಿವನಿಗೆ ಮಣಿಪುರ ರಾಜ್ಯಪಾಲೆ ಹೇಗೆ ಟಾಂಗ್ ಕೊಟ್ಟಿದ್ದಾರೆ ಗೊತ್ತಾ?
ಇಂಫಾಲ: ಇದುವರೆಗೂ ಗಡಿಯಲ್ಲಿ ಉಪಟಳ ಮಾಡುತ್ತಿದ್ದ ಪಾಕಿಸ್ತಾನ, ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಕೃಷ್ಣಮೃಗ ಹತ್ಯೆ ಪ್ರಕರಣದಲ್ಲಿ ಜೋಧ್ ಪುರ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸುತ್ತಲೇ ಭಾರತದ ಆಂತರಿಕ ವಿಷಯದಲ್ಲೂ ಮೂಗು ತೂರಿಸಿ, “ಸಲ್ಮಾನ್ ಖಾನ್ ಅಲ್ಪಸಂಖ್ಯಾತ ಆಗಿರುವ ಕಾರಣಕ್ಕಾಗಿಯೇ ಆತನಿಗೆ ದೀರ್ಘ ಶಿಕ್ಷೆ ವಿಧಿಸಲಾಗಿದೆ” ಎಂದು ಪಾಕಿಸ್ತಾನಿ ವಿದೇಶಾಂಗ ಸಚಿವ ಖ್ವಾಜಾ ಆಸಿಫ್ ಹೇಳಿಕೆ ನೀಡಿದ್ದರು.
ಆದರೆ ಪಾಕಿಸ್ತಾನ ವಿದೇಶಾಂಗ ಸಚಿವನ ಈ ಹೇಳಿಕೆಗೆ ಮಣಿಪುರ ರಾಜ್ಯಪಾಲೆ ನಜ್ಮಾ ಹೆಪ್ಟುಲ್ಲಾ ಸರಿಯಾಗಿಯೇ ಟಾಂಗ್ ನೀಡಿದ್ದು, “ಅಪರಾಧ ಮಾಡಲು ಅಲ್ಪಸಂಖ್ಯಾತ ಹಾಗೂ ಬಹುಸಂಖ್ಯಾತ ಎಂಬ ಭೇದವಿಲ್ಲ. ಒಬ್ಬ ನಟನಾದರೇನು, ಯಾರಾದರೇನು, ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು ಎಂದು ಛಾಟಿ ಬೀಸಿದ್ದಾರೆ.
ಭಾರತ ತನ್ನದೇ ಆದ ಸಂವಿಧಾನ ಹೊಂದಿದ್ದು, ಯಾವುದೇ ಸಮಸ್ಯೆ ಇದ್ದರೂ ಕಾನೂನು ಬಗೆಹರಿಸುವ ತಾಕತ್ತು ಹೊಂದಿದೆ. ಪಾಕಿಸ್ತಾನ ಹೀಗೆ ಮೂಗು ತೂರಿಸುವ ಅವಶ್ಯವಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಭಾರತ ಇದುವರೆಗೂ ಪಾಕಿಸ್ತಾನದ ಆಂತರಿಕ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಿಲ್ಲ. ಹಾಗೆಯೇ ಪಾಕಿಸ್ತಾನ ನಮ್ಮ ಬಗ್ಗೆ ಯೋಚಿಸದೆ, ತಮ್ಮ ದೇಶದಲ್ಲಿರುವ ಸಮಸ್ಯೆಗಳತ್ತ ಗಮನಹರಿಸಿ, ಮೊದಲು ಅವುಗಳನ್ನು ಬಗೆಹರಿಸುವತ್ತ ಗಮನ ಹರಿಸಬೇಕು ಎಂದಿದ್ದಾರೆ.
ಅಷ್ಟಕ್ಕೂ ಭಾರತದ ಆಂತರಿಕ ವಿಷಯದಲ್ಲಿ ಮೂಗು ತೂರಿಸಲು ಪಾಕಿಸ್ತಾನಕ್ಕೆ ಯಾವುದೇ ಹಕ್ಕಿಲ್ಲ. ದೇಶದಲ್ಲಿರುವ ಯಾವುದೇ ಸಮಸ್ಯೆಯನ್ನು ಕಾನೂನು ಹಾಗೂ ಸಂವಿಧಾನದ ಅನ್ವಯ ಭಾರತದ ಬಗೆಹರಿಸಿಕೊಳ್ಳಲು ಶಕ್ತವಾಗಿದೆ ಎಂದು ದೇಶದ ಘನತೆಯನ್ನು ಎತ್ತಿಹಿಡಿದಿದ್ದಾರೆ ನಜ್ಮಾ.
ಸಲ್ಮಾನ್ ಖಾನ್ ಒಬ್ಬ ಅಲ್ಪಸಂಖ್ಯಾತ ಎಂಬ ಕಾರಣಕ್ಕಾಗಿಯೇ ಐದು ವರ್ಷಗಳ ದೀರ್ಘ ಶಿಕ್ಷೆಯಾಗಿದೆ. ಒಂದು ವೇಳೆ ಸಲ್ಮಾನ್ ಖಾನ್ ಆಡಳಿತ ಪಕ್ಷದ ಧರ್ಮದವರಾಗಿದ್ದರೆ ಆತನಿಗೆ ಇಂತಹ ಕಠಿಣ ಶಿಕ್ಷೆಯಾಗುತ್ತಿರಲಿಲ್ಲ ಎಂದು ಖಾಜ್ವಾ ಆಸಿಫ್ ಹೇಳಿದ್ದ.
Leave A Reply